ಚುನಾವಣೆ ಬಿಸಿಯೇರಿಕೆ, ಈರುಳ್ಳಿ ಬೆಲೆಯೇರಿಕೆ

ಚುನಾವಣೆ ಬಿಸಿಯೇರಿಕೆ, ಈರುಳ್ಳಿ ಬೆಲೆಯೇರಿಕೆ

ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆ ಬೆಲೆಯಲ್ಲಿ ಏರಿಳಿತ ತಡೆಯಲು ಟಾಪ್ (ಟೊಮೆಟೊ, ಓನಿಯನ್, ಪೊಟಾಟೊ) ಬೆಲೆ ರಕ್ಷಣಾ ನಿಧಿ ಸ್ಥಾಪಿಸುವುದಾಗಿ ರಾಜಕೀಯ ಪಕ್ಷವೊಂದು ಕರ್ನಾಟಕದ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದೆ. ಚುನಾವಣೆ ಕಾಲದಲ್ಲಿ ಇವುಗಳ ಬೆಲೆಗಳ ಏರಿಕೆ ನಮ್ಮೆಲ್ಲರ ಗಮನಕ್ಕೆ ಬಂದೇ ಬರುತ್ತದೆ. ಆದರೆ, ಈ ಏರಿಳಿತ ಯಾಕಾಯಿತು ಎಂಬುದು ನಮ್ಮ ಗಮನಕ್ಕೆ ಬರುವುದು ಅಪರೂಪ.

ಆಹಾರವಸ್ತುಗಳ, ಮುಖ್ಯವಾಗಿ, ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆ – ಈ ಮೂರು ತರಕಾರಿಗಳ ಬೆಲೆಯ ಏರಿಳಿತ ಚುನಾವಣೆ ಕಾಲದಲ್ಲಿ ವಿಪರೀತ. ಇವುಗಳ ಬೆಲೆಗಳ ಬಿರುಸಿನ ಏರಿಳಿತ ಶುರುವಾದದ್ದು ೨೦೦೯-೧೦ರಲ್ಲಿ ಎನ್ನಬಹುದು. ಅನಂತರ, ಪ್ರತಿಯೊಂದು ಚುನಾವಣೆಯ ಮುಂಚೆ, ಈರುಳ್ಳಿಯ ಬೆಲೆಯೇರಿಕೆ ಆಗುತ್ತಲೇ ಇದೆ.

ಅದಕ್ಕಾಗಿಯೇ, ೨೦೧೪ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರಕಾರ ಅಧಿಕಾರ ವಹಿಸಿಕೊಂಡಾಗ, ಮಾಡಿದ ಮೊದಲ ಕೆಲಸಗಳಲ್ಲೊಂದು: ರೂ.೫೦೦ ಕೋಟಿಗಳ “ಬೆಲೆ ಸ್ಥಿರೀಕರಣ ನಿಧಿ” ಸ್ಥಾಪಿಸಿದ್ದು. ಇದರ ಉದ್ದೇಶ ಕೃಷಿ ಉತ್ಪನ್ನಗಳ ಬೆಲೆ ಏರಿಳಿತ ಕಡಿಮೆ ಮಾಡುವುದು. ಆದರೆ, ೨೦೧೫ರ ಜೂನ್ ವರೆಗೂ, ಈ ನಿಧಿಯನ್ನು ಬಳಸುವ ವ್ಯವಸ್ಥೆ ರೂಪಿಸಲಿಲ್ಲ. ಅದಾಗಿ, ಒಂದು ವರುಷದ ತನಕ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಪಡಿತರ ಮಂತ್ರಾಲಯ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆಗ ಪುನಃ ಬೆಲೆ ಏರಿಳಿತ ದೊಡ್ಡ ಸುದ್ದಿಯಾಗುತ್ತಿದ್ದಂತೆ, ಈ ನಿಧಿಯ ಬಳಕೆಯ ಜವಾಬ್ದಾರಿಯನ್ನು ರಾಜ್ಯ ಸರಕಾರಗಳಿಗೆ ವಹಿಸಲಾಯಿತು.

ಜುಲೈ ೨೦೧೫ರಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿತು; ಬಿಹಾರ ಸಹಿತ ಕೆಲವು ರಾಜ್ಯಗಳಲ್ಲಿ ಚುನಾವಣೆಗೆ ಕೆಲವೇ ತಿಂಗಳ ಅಂತರವಿತ್ತು. ಆಗ ಕೇಂದ್ರ ಸರಕಾರ ಚುರುಕಾಯಿತು. ನಾಫೆಡ್ (ರಾಷ್ಟ್ರೀಯ ಕೃಷಿ ಸಹಕಾರ ಮಾರಾಟ ಫೆಡರೇಷನ್)ಗೆ ತೀರಾ ತಡವಾಗಿ ಈರುಳ್ಳಿ ಆಮದು ಮಾಡಲು ನಿರ್ದೇಶನ ನೀಡಲಾಯಿತು. ಜೊತೆಗೆ, ಈರುಳ್ಳಿ ಬೆಲೆಯೇರಿಕೆ ತಡೆಯಲು ಬೆಲೆ ಸ್ಥಿರೀಕರಣ ನಿಧಿ ವಿನಿಯೋಗಿಸಬೇಕೆಂದು ರಾಜ್ಯ ಸರಕಾರಗಳಿಗೆ ಆದೇಶಿಸಲಾಯಿತು. ಇವೆಲ್ಲ ಕೊನೆಗಳಿಗೆಯ ಕಸರತ್ತು ಮಾಡಿದರೂ, ಚುನಾವಣೆ ಹತ್ತಿರವಾಗುವ ತನಕ ಈರುಳ್ಳಿಯ ಬೆಲೆ ಇಳಿಯಲಿಲ್ಲ. ಚಪಾತಿಯ ಜೊತೆ ಈರುಳ್ಳಿ ತಿನ್ನುವ ಉತ್ತರಭಾರತದ ಬಡಕುಟುಂಬಗಳು ಈರುಳ್ಳಿ ಖರೀದಿಸದಂತಾಯಿತು.

ನಾಫೆಡ್ ಈರುಳ್ಳಿ ಆಮದಿಗೆ ಕ್ರಮ ಕೈಗೊಂಡಾಗಲೇ ವಿಳಂಬವಾಗಿತ್ತು. ಆಮದಾದ ಈರುಳ್ಳಿ ಭಾರತದ ಬಂದರುಗಳಿಗೆ ಬಂದದ್ದು ಸಪ್ಟಂಬರ್ ೨೦೧೫ರ ಕೊನೆಯಲ್ಲಿ. ಅದಾಗಿ ಒಂದು ತಿಂಗಳಿನಲ್ಲಿ, ಅಂದರೆ ನವಂಬರ್ ೨೦೧೫ರಲ್ಲಿ, ನಮ್ಮ ರೈತರು ಬೆಳೆಸಿದ ಈರುಳ್ಳಿ ಮಾರುಕಟ್ಟೆಗೆ ಲಗ್ಗೆಯಿಟ್ಟಿತು. ಇದರಿಂದಾಗಿ ಈರುಳ್ಳಿ ಬೆಲೆ ಕುಸಿಯಿತು. ಆಗಸ್ಟ್-ಸಪ್ಟಂಬರ್ ೨೦೧೫ರಲ್ಲಿ ಕಿಲೋಕ್ಕೆ ರೂ.೬೦ ದರದಲ್ಲಿ ಮಾರಾಟವಾಗುತ್ತಿದ್ದ ಈರುಳ್ಳಿಯ ಬೆಲೆ ಕಿಲೋಕ್ಕೆ ರೂ.೧೦ಕ್ಕೆ ಇಳಿಯಿತು. ಹಾಗಾಗಿ, ಈರುಳ್ಳಿ ಬೆಳೆಗಾರರಿಗೆ ಭಾರೀ ನಷ್ಟವಾಯಿತು.

ಇವೆಲ್ಲದರ ಒಟ್ಟು ಪರಿಣಾಮವಾಗಿ ರೈತರು ಮತ್ತು ಗ್ರಾಹಕರು ಮಾತ್ರವಲ್ಲ, ಆಡಳಿತ ಪಕ್ಷವೂ ಸಂಕಟಕ್ಕೆ ಒಳಗಾಯಿತು. ಬಿಹಾರದಲ್ಲಿ ಭಾರತೀಯ ಜನತಾ ಪಕ್ಷ ಚುನಾವಣೆಯಲ್ಲಿ ಸೋಲು ಅನುಭವಿಸಿತು. ಗಮನಿಸಿ, ಈರುಳ್ಳಿ ವ್ಯಾಪಾರಿಗಳೆಲ್ಲರೂ ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷದ ಬೆಂಬಲಿಗರಲ್ಲ. ೨೦೧೩ರ ಕೊನೆಯಲ್ಲಿ, ಈರುಳ್ಳಿ ಬೆಲೆ ಕಿಲೋಕ್ಕೆ ರೂ.೬೦ ದಾಟಿದಾಗ, ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು; ಈ ಬೆಲೆ ಜಿಗಿತದಿಂದ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಲಾಭವಾದದ್ದು ಬಿಜೆಪಿಗೆ. ಅದೇ ೨೦೧೫ ಮತ್ತು ೨೦೧೭ರ ಚಳಿಗಾಲದಲ್ಲಿ ಈರುಳ್ಳಿ ಬೆಲೆ ಕಿಲೋಕ್ಕೆ ರೂ.೬೦ರಿಂದ ರೂ.೭೦ಕ್ಕೆ ಏರಿದ್ದರಿಂದಾಗಿ, ಆಗಿನ ವಿಧಾನಸಭಾ ಚುನಾವಣೆಗಳಲ್ಲಿ ಸಹಾಯವಾದದ್ದು ಕಾಂಗ್ರೆಸ್ ಪಕ್ಷಕ್ಕೆ.

ಎಪ್ರಿಲ್-ಜೂನ್ ೨೦೧೭ರ ಅವಧಿಯಲ್ಲಿ ಏನಾಯಿತೆಂದು ಪರಿಶೀಲಿಸೋಣ. ರೂ.೧,೦೯೮ ಕೋಟಿ ಬೆಲೆಯ ೯,೪೫,೨೬೨ ಟನ್ ಈರುಳ್ಳಿಯನ್ನು ನಮ್ಮ ದೇಶ ರಫ್ತು ಮಾಡಿತು. ಇದು ಒಂದು ವರುಷದ ಮುಂಚೆ (ಅದೇ ಅವಧಿಯಲ್ಲಿ) ರಫ್ತು ಮಾಡಿದ್ದ ೫,೮೭,೪೭೬ ಟನ್ ಈರುಳ್ಳಿಗಿಂತ ಶೇಕಡಾ ೬೦ ಜಾಸ್ತಿ. ಅದಾಗಿ ಎರಡೇ ತಿಂಗಳಲ್ಲಿ, ಸಪ್ಟಂಬರ್ ೨೦೧೭ರ ಮೊದಲ ವಾರದಲ್ಲಿ ಈರುಳ್ಳಿಯ ತೀವ್ರ ಕೊರತೆಯಿಂದಾಗಿ ಪುನಃ ಬೆಲೆಯಲ್ಲಿ ಏರುಪೇರು.

ಈ ಬೆಲೆಯೇರಿಕೆ ತಡೆಯಲಿಕ್ಕಾಗಿ, ಆದಾಯ ತೆರಿಗೆ ಇಲಾಖೆಯ ೧೫೦ ಅಧಿಕಾರಿಗಳು ಮಹಾರಾಷ್ಟ್ರದ ನಾಸಿಕದ ಲಸಲ್ಗಾವೊನ್ ಮಂಡಿಯ (ಅದು ಏಷ್ಯಾದ ಅತಿ ದೊಡ್ಡ ಈರುಳ್ಳಿ ಮಂಡಿ) ಏಳು ಮುಖ್ಯ ಈರುಳ್ಳಿ ವ್ಯಾಪಾರಿಗಳ ಮೇಲೆ ಧಾಳಿ ಮಾಡಿದರು. ಈ ಏಳು ವ್ಯಾಪಾರಿಗಳು, ಆ ಮಂಡಿಯಲ್ಲಿ ವಹಿವಾಟು ಆಗುವ ಒಟ್ಟು ಈರುಳ್ಳಿಯ ಶೇ.೩೦ ಮಾತ್ರ ನಿಯಂತ್ರಿಸುತ್ತಾರೆ. ಈ ಐಟಿ ಧಾಳಿಯ ನಂತರ ಈರುಳ್ಳಿಯ ಬೆಲೆ ಶೇ.೩೦ರಷ್ಟು ಇಳಿಯಿತು. ಆದಾಯ ತೆರಿಗೆ ಇಲಾಖೆ ಈ ಧಾಳಿಯ ಬಗ್ಗೆ ನೀಡಿದ ಹೇಳಿಕೆ ಹೀಗಿದೆ: ಈ ವ್ಯಾಪಾರಿಗಳು ಆಮದು ಮತ್ತು ರಫ್ತಿನಲ್ಲಿ ಕಾನೂನುಬಾಹಿರ ಹಣದ ವ್ಯವಹಾರ ಮತ್ತು ದುಬೈ ಮೂಲಕ ಹವಾಲಾ ವ್ಯವಹಾರ ಮಾಡುತ್ತಿದ್ದರು. ಆದರೆ, ಕೆಲವೇ ಗಂಟೆಗಳಲ್ಲಿ ನಾಸಿಕ್ ಜಿಲ್ಲೆಯ ಮಂಡಿಗಳೆಲ್ಲ ಈ ಏಳು ವ್ಯಾಪಾರಿಗಳನ್ನು ಬೆಂಬಲಿಸಿ, ೧೭ ಸಪ್ಟಂಬರ್ ೨೦೧೭ರಂದು ಮುಷ್ಕರ ನಡೆಸಿದರು.

ಐಟಿ ಧಾಳಿಯ ನಂತರ, ನಾಸಿಕ್ ಜಿಲ್ಲೆಯ ಮಂಡಿಗಳಿಗೆ ಈರುಳ್ಳಿ ಬರುವುದು ಕಡಿಮೆಯಾಯಿತು; ಎಸ್ಎಂಎಸ್ ಮಂಡಿ ಚುರುಕಾಯಿತು. ಇದು, ದೂರದೂರದ ಮಾರುಕಟ್ಟೆಗಳಿಗೆ ಈರುಳ್ಳಿ ಒಯ್ಯಬೇಕೆಂದು ರೈತರಿಗೆ ಸೂಚಿಸಿತು. ಎಸ್ಎಂಎಸ್ ಮಂಡಿಗಳು ಹೊಸ ಬೆಳವಣಿಗೆಯೇನಲ್ಲ. ೨೦೧೦ರಲ್ಲಿ ಸ್ಮಾರ್ಟ್ ಫೋನುಗಳು ಬಳಕೆಗೆ ಬಂದಾಗಿನಿಂದ ಎಸ್ಎಂಎಸ್ ಮಂಡಿಗಳ ಜಾಲ ಬೆಳೆದಿದೆ. ಇದರ ಮೂಲಕ ಹಾಗೂ ವಾಟ್ಸಪ್ ತಂಡಗಳ ಮೂಲಕ, ಯಾವಾಗ ಮತ್ತು ಎಲ್ಲಿಗೆ ಕೃಷಿ ಉತ್ಪನ್ನ ತರಬೇಕೆಂದು ರೈತರಿಗೆ ಮಾಹಿತಿ ಲಭ್ಯ.

ಸ್ಥಳೀಯ ಸಗಟು ವ್ಯಾಪಾರಿಗಳು ಮತ್ತು “ಫ್ಯುಚರ್ ಮಾರ್ಕೆಟಿ”ನ ಹೂಡಿಕೆದಾರರು – ಇವರೆಲ್ಲರೂ ದೊಡ್ಡ ರೈತರು ಮತ್ತು ದೊಡ್ಡ ವ್ಯಾಪಾರಿಗಳ ಪಟ್ಟಭದ್ರ ಗುಂಪುಗಳ ಸಂಪರ್ಕದಲ್ಲಿ ಇರುವುದು ಎಸ್ಎಂಎಸ್ ಮಂಡಿಗಳ ಮೂಲಕ. ಐಟಿ ಧಾಳಿಯ ನಂತರ ಒಂದು ವಾರ ಈರುಳ್ಳಿ ವ್ಯವಹಾರ ತಣ್ಣಗಾಗಿತ್ತು. ಅನಂತರ, ಈರುಳ್ಳಿ ಬೆಲೆ ಏರುತ್ತ ಏರುತ್ತ ಕಿಲೋಕ್ಕೆ ರೂ.೭೦ ತಲಪಿತು! ಕೆಲವೇ ದಿನಗಳಲ್ಲಿ ಟೊಮೆಟೊ ಬೆಲೆಯೂ ಹೆಚ್ಚಳವಾಗಿ ಕಿಲೋಕ್ಕೆ ರೂ.೭೦ ಆಗೇ ಬಿಟ್ಟಿತು! ಸರಕಾರ ಅಸಹಾಯಕವಾಗಿ ಕೂತಿರಬೇಕಾಯಿತು.

ಕೇಂದ್ರ ಸರಕಾರದ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪಡಿತರ ಸಚಿವ ರಾಮ ವಿಲಾಸ್ ಪಾಸ್ವಾನ್ ಈ ಸಂದರ್ಭದಲ್ಲಿ ಪತ್ರಿಕೆಗಳಿಗೆ ನೀಡಿದ ಹೇಳಿಕೆ ಹೀಗಿದೆ: “ಈರುಳ್ಳಿ ಬೆಲೆ ನಿಯಂತ್ರಿಸುವುದು ಸರಕಾರದ ಕೈಯಲ್ಲಿಲ್ಲ.” ಆದರೆ, ಆ ಮಂತ್ರಾಲಯ ಕೈಚೆಲ್ಲಿ ಕೂತರೆ ರೈತರಿಗೂ ಗ್ರಾಹಕರಿಗೂ ಸಂಕಟ ಗ್ಯಾರಂಟಿ. ಇಂತಹ ಹೇಳಿಕೆ ನೀಡಿ, ಜವಾಬ್ದಾರಿಯಿಂದ ನುಣುಚಿಕೊಂಡರೆ, ಜನಸಾಮಾನ್ಯರು ಪಾಠ ಕಲಿಸುತ್ತಾರೆಂದು ಚುನಾವಣೆಗಳು ಮತ್ತೆಮತ್ತೆ ತೋರಿಸಿ ಕೊಟ್ಟಿವೆ. ಆದ್ದರಿಂದ, ಆಡಳಿತದ ಚುಕ್ಕಾಣಿ ಹಿಡಿದಿರುವ ರಾಜಕೀಯ ಪಕ್ಷ, ರೈತರಿಗೆ ನಷ್ಟವಾಗದಿರಲು ಮತ್ತು ಆಹಾರವಸ್ತುಗಳ ಬೆಲೆಯೇರಿಕೆ ಕನಿಷ್ಠವಾಗಿರಲು ಬೇಕಾದ ಕ್ರಮಗಳನ್ನು ಸಕಾಲದಲ್ಲಿ ಕೈಗೊಂಡು ಜವಾಬ್ದಾರಿಯಿಂದ ವರ್ತಿಸಬೇಕಾದ್ದು ಅತ್ಯಗತ್ಯ, ಅಲ್ಲವೇ?