ಚುನಾವಣ ಅಕ್ರಮಗಳು ರಾಜ್ಯಕ್ಕೆ ಭೂಷಣವಲ್ಲ

ಚುನಾವಣ ಅಕ್ರಮಗಳು ರಾಜ್ಯಕ್ಕೆ ಭೂಷಣವಲ್ಲ

ದೇಶದ ಹದಿನೇಳನೆ ಲೋಕಸಭೆಗೆ ಸಂಸದರನ್ನು ಆಯ್ಕೆ ಮಾಡಿ ಕಳಿಸಲು ರಾಜ್ಯದಲ್ಲಿ ಚುನಾವಣೆ ಕಾವು ಪಡೆದುಕೊಂಡಿದೆ. ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತನ್ನು ಆರಂಭಿಸಿದ್ದಾರೆ. ಚುನಾವಣೆಯನ್ನು ‘ಪ್ರಜಾಪ್ರಭುತ್ವದ ಹಬ್ಬ; ಎಂದು ಕರೆಯಲಾಗುತ್ತದೆ. ಈ ಹಬ್ಬದ ಸಂಭ್ರಮ ಎಷ್ಟು ಜೋರಾಗಿದೆಯೋ ಅದಕ್ಕಿಂತಲೂ ಹತ್ತಾರುಪಟ್ಟು ಚುನಾವಣ ಅಕ್ರಮಗಳು ಸದ್ದು ಮಾಡುತ್ತಿವೆ. ನ್ಯಾಯ ಸಮ್ಮತ, ಮುಕ್ತ ಹಾಗೂ ಪಾರದರ್ಶಕ ಚುನಾವಣೆ ಖಾತರಿಪಡಿಸುವುದು ಚುನಾವಣ ಆಯೋಗದ ಪ್ರಯತ್ನವಾಗಿರುತ್ತದೆ. ಆದರೆ ಇದನ್ನು ಅಣಕಿಸುವಂತೆ ಚುನಾವಣ ಅಕ್ರಮಗಳು ನಡೆದಿವೆ.

ನಗದು, ಮದ್ಯ, ಉಚಿತ ಉಡುಗೊರೆಗಳು, ಮಾದಕ ವಸ್ತು ಇತ್ಯಾದಿಗಳು ಚುನಾವಣೆಯನ್ನು ಆಕ್ರಮಿಸಿಕೊಂಡಂತಿವೆ. ಲೋಕಸಭೆ ಚುನಾವಣೆಗೆ ಅಧಿಸೂಚನೆ ಹೊರಡಿಸಿದ ಮಾ ೧೬ರಿಂದ ಇಲ್ಲಿಯವರೆಗೆ ಬರೋಬ್ಬರಿ ೨೮೮ ಕೋಟಿ ರೂ ಚುನಾವಣ ಅಕ್ರಮಗಳನ್ನು ನೀತಿ ಸಂಹಿತೆ ಜಾರಿ ತಂಡಗಳು ಜಪ್ತಿ ಮಾಡಿಕೊಂಡಿವೆ. ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು ಮೊದಲ ಹಂತದ ಮತದಾನ ಎಪ್ರಿಲ್ ೨೬ ಮತ್ತು ಎರಡನೇ ಹಂತದ ಮತದಾನ ಮೇ ೭ರಂದು ನಡೆಯಲಿದ್ದು, ಎರಡೂ ಹಂತದ ಮತದಾನದ ನಡುವಿನ ಅವಧಿ ಸುಮಾರು ೧೨ ದಿನ ಇದೆ. ಈಗಿನ ಚುನಾವಣ ಅಕ್ರಮಗಳ ವೇಗ ಗಮನಿಸಿದರೆ ಇದು ಮುಂದಿನ ದಿನಗಳಲ್ಲಿ ಯಾವ ಗತಿಯಲ್ಲಿ ಸಾಗಬಹುದು ಎಂದು ಊಹಿಸಲಿಕ್ಕೂ ಅಸಾಧ್ಯ. ಲೋಕಸಭೆ ಚುನಾವಣೆಗೆ ಒಬ್ಬ ಅಭ್ಯರ್ಥಿಗೆ ಚುನಾವಣ ಆಯೋಗ ವೆಚ್ಚದ ಮಿತಿಯನ್ನು ೯೫ ಲಕ್ಷ ರೂ. ನಿಗದಿಪಡಿಸಿದೆ. ಆದರೆ, ಪಕ್ಷಗಳು ಮಾಡುವ ವೆಚ್ಚದ ಮೇಲೆ ಯಾವುದೇ ಮಿತಿ ಇರುವುದಿಲ್ಲ. ಇದರ ಹೊರತಾಗಿ ಯಥೇಚ್ಛ ಪ್ರಮಾಣದಲ್ಲಿ ಹಣ ಚುನಾವಣ ಕಣದಲ್ಲಿ ಹರಿದಾಡುತ್ತದೆ. ಚುನಾವಣ ಅಕ್ರಮಗಳಿಗೆ ಕಡಿವಾಣ ಹಾಕಲು ರಾಜಕೀಯ ಪಕ್ಷಗಳು ಮಾಡುವ ವೆಚ್ಚದ ಮೇಲೆ ನಿರ್ಭಂಧ ಹೇರಬೇಕು ಎಂಬ ಒಂದು ವಾದವಿದೆ. ಆದರೆ ಇದು ಸಾಧ್ಯವೇ ಎಂಬುದು ಯಕ್ಷಪ್ರಶ್ನೆಯಾಗಿದೆ. 

ಮತದ ಮೌಲ್ಯ ಮತ್ತು ಪಾವಿತ್ರ್ಯತೆ ಕ್ಷೀಣಿಸುತ್ತಾ ಹೋದರೆ ಚುನಾವಣೆ ಮತ್ತು ಪ್ರಜಾಪ್ರಭುತ್ವದ ಮಹತ್ವವೂ ಕ್ರಮೇಣ ಕಡಿಮೆ ಆಗುತ್ತದೆ. ಚುನಾವಣ ಅಕ್ರಮಗಳಿಗೆ ಕಡಿವಾಣ ಹಾಕುವುದು ಮತ್ತು ಚುನಾವಣೆಗಳಲ್ಲಿ ಹಣಬಲ, ತೋಳ್ಬಲಗಳಿಂದ ಮುಕ್ತ ಮಾಡುವುದೇ ಪರಿಹಾರವಾಗಿದೆ. ಚುನಾವಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವುದರ ಮೂಲಕ ದೇಶದಲ್ಲಿ ಚುನಾವಣೆಯ ಪಾವಿತ್ರ್ಯತೆಗೆ ಮುನ್ನುಡಿ ಬರೆಯಬೇಕಾಗಿದೆ. ನೋವಿನ ಸಂಗತಿ ಎಂದರೆ ಚುನಾವಣೆಗಿಂತ ಚುನಾವಣೆಗೆ ಅಕ್ರಮಗಳು ಹೆಚ್ಚಾಗುತ್ತಿವೆ. ೨೦೧೯ರ ಲೋಕಸಭೆ ಚುನಾವಣೆ ವೇಳೆ ೮೮.೨೭ ಕೋಟಿ ಚುನಾವಣ ಅಕ್ರಮ ಜಪ್ತಿ ಮಾಡಲಾಗಿತ್ತು. ೨೦೨೩ರ ವಿಧಾನಸಭೆ ಚುನಾವಣೆ ವೇಳೆ ಚುನಾವಣ ಅಕ್ರಮ ೪೦೦ ಕೋಟಿ ರೂ. ದಾಟಿತ್ತು. ಈ ಬಾರಿ ಚುನಾವಣ ದಿನಾಂಕ ಘೋಷಣೆ ಆಗುವುದಕ್ಕಿಂತ ಹಿಂದಿನ ೬ ತಿಂಗಳ ಅವಧಿಯಲ್ಲಿ ೫೦೦ ಕೋಟಿಗೂ ಅಧಿಕ ಚುನಾವಣ ಅಕ್ರಮಗಳನ್ನು ಜಪ್ತಿ ಮಾಡಲಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ನಡೆಯುವ  ಚುನಾವಣೆ ಅಕ್ರಮಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಸ್ಥಿತಿ ಸ್ವಲ್ಪ ಸಮಾಧಾನಕರವಾಗಿದೆ. ಆದರೆ ಈಗ ನಡೆಯುತ್ತಿರುವ ಚುನಾವಣ ಅಕ್ರಮಗಳು ರಾಜ್ಯಕ್ಕೆ ಭೂಷಣವಲ್ಲ.

ಚುನಾವಣ ಅಕ್ರಮಗಳಿಗೆ ಕಡಿವಾಣ ಹಾಕಲು ಈಗಾಗಲೇ ಸಾಕಷ್ಟು ಕಾನೂನು-ನಿಯಮಗಳನ್ನು ಜಾರಿಗೆ ತರಲಾಗಿದೆ. ಕಾಲ-ಕಾಲಕ್ಕೆ ಚುನಾವಣ ಆಯೋಗ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಲೇ ಇರುತ್ತದೆ. ಆದರೆ ನಿಜ ಅರ್ಥದಲ್ಲಿ ಚುನಾವಣ ಅಕ್ರಮಗಳಿಗೆ ಕಡಿವಾಣ ಬಿದ್ದು ಚುನಾವಣೆಗಳು ಪಾರದರ್ಶಕ, ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯಬೇಕಾದರೆ ಸಮಾಜದ ಧೋರಣೆಯಲ್ಲೂ ಬದಲಾಗಬೇಕು.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೯-೦೪-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ