ಚುರುಕಾದ ಸಾಕು ಪ್ರಾಣಿ - ಮೊಲ

ಮೊಲ ಒಂದು ಬಹಳ ಚುರುಕಾದ ಪ್ರಾಣಿ. ಹೊಲದ ಬದುವಿನ ಒಂದು ಮೂಲೆಯಿಂದ ಅಥವಾ ಗುಡ್ಡವೊಂದರ ಪುಟ್ಟ ಗುಹೆಯಿಂದ ಸರ್ರನೆ ಆಚೆಯಿಂದ ಈಚೆಗೆ, ಈಚೆಯಿಂದ ಆಚೆಗೆ ಓಡಾಡುವ ಸಾಧು ಪ್ರಾಣಿ ಇದು. ಉದ್ದನೆಯ ಕಿವಿಗಳು ಇವುಗಳಿಗೆ ದೂರದ ಶಬ್ದಗಳನ್ನು ಸ್ಪಷ್ಟವಾಗಿ ಆಲಿಸಲು ನೆರವಾಗುತ್ತದೆ. ರೈತರ ಜಮೀನುಗಳಿರುವ ಕಡೆ ಚಿಕ್ಕಪುಟ್ಟ ಪೊದೆಗಳಂತಹ ಜಾಗವಿರುವ ಕಡೆಗಳಲ್ಲಿ ಬಿಲ ಕೊರೆದು ಜೀವಿಸುವ ಮೊಲಗಳು ಹೆಚ್ಚಾಗಿ ಜಮೀನುಗಳಲ್ಲಿ ಸಿಗುವ ಧಾನ್ಯ ಕಾಳು ಕಡ್ಡಿಗಳನ್ನು ತಿಂದು ಬದುಕುತ್ತವೆ.
ಇಲಿಗಳಂತೆಯೇ ಹೊಲ- ಗದ್ದೆಗಳಲ್ಲಿ ಸಿಗುವ ಧಾನ್ಯಕ್ಕೆ ಮೊದಲು ಬಾಯಿ ಹಾಕುವ ಮೊಲಗಳು ಅದರ ಜೊತೆಗೆ ಸಣ್ಣಪುಟ್ಟ ಕ್ರಿಮಿಕೀಟಗಳನ್ನು ಕಬಳಿಸಿ ಬಿಡುತ್ತವೆ. ಕೀಟಗಳ ನಾಶದಿಂದ ರೈತನ ಶ್ರಮ ಹಗುರವಾಗುತ್ತದೆ. ಪ್ರಪಂಚದ ಬಹುತೇಕ ಎಲ್ಲಾ ಭಾಗಗಳಲ್ಲಿಯೂ ಮೊಲಗಳು ಕಂಡುಬರುತ್ತವೆ. ಭಾರತದಲ್ಲಿ ಕಂಡುಬರುವ ಮೊಲಗಳು ಬಹುತೇಕ ಬಿಳಿ ಬಣ್ಣದ್ದಾಗಿದ್ದು ಬೂದುಬಣ್ಣದ ಮೊಲಗಳೂ ಕಾಣಸಿಗುತ್ತವೆ. ಅಮೆರಿಕ, ಇಥಿಯೋಪಿಯಾ, ಯುರೋಪ್ ಮುಂತಾದ ರಾಷ್ಟ್ರಗಳಲ್ಲಿ ಕಂದುಬಣ್ಣದ, ಬಿಳಿಮಿಶ್ರಿತ ಕಪ್ಪು ವರ್ಣದ ಮೊಲಗಳು ಕಾಣಸಿಗುತ್ತವೆ. ಕಾಡುಗಳಲ್ಲಿ ವಾಸಿಸುವ ಮೊಲಗಳು ಊರಿನ ಸಾಕು ಮೂಲಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತವೆ.
ಮೊಲಗಳು ಸಂಘಜೀವಿ ಅಥವಾ ಒಂಟಿ ಜೀವಿ ಎಂಬ ಸಂಶಯ ಬಹಳಷ್ಟು ಮಂದಿಗಿದೆ. ಮೊಲಗಳು ಒಂಟಿಯಾಗಿ ಕಂಡರೂ ಅವುಗಳು ತನಗೆ ಇಷ್ಟೇ ಕಡಿಮೆ ಆಹಾರ ಸಿಕ್ಕರೂ, ಅದನ್ನು ತನ್ನ ಕುಟುಂಬದವರೆಲ್ಲರ ಜೊತೆ ಸೇರಿ ಹಂಚಿಕೊಂಡು ತಿನ್ನುವ ಅಭ್ಯಾಸದಿಂದ ಇದನ್ನು ಸಂಘಜೀವಿಗಳೆಂದೇ ಹೇಳಬಹುದಾಗಿದೆ..
ಮೊಲಗಳನ್ನು ಸಾಕುವುದು ಈಗ ಹವ್ಯಾಸ ಮಾತ್ರವಲ್ಲ ಹಣವನ್ನು ಸಂಪಾದಿಸಿ ಕೊಡಬಲ್ಲ ಒಂದು ಉದ್ಯಮವಾಗಿ ಬೆಳೆದಿದೆ. ಕುರಿ, ಕೋಳಿಗಳಂತೆಯೇ ಮಾಂಸಕ್ಕಾಗಿ ಮೊಲಗಳ ಸಾಕಣೆ ನಡೆಯುತ್ತಿದೆ. ದೊಡ್ಡ ದೊಡ್ಡ ಸ್ಟಾರ್ ಹೋಟೆಲ್ ಗಳಲ್ಲಿ ಮೊಲಗಳ ಮಾಂಸದ ಖಾದ್ಯಗಳು ಸಿಗುತ್ತವೆ. ಈ ಕಾರಣದಿಂದ ಮೊಲಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಆಹಾರಕ್ಕಾಗಿ ಮೊಲಗಳನ್ನು ಸಾಕುವವರ ಸಂಖ್ಯೆಯು ಅಧಿಕವಾಗುತ್ತಿದೆ. ಕಾಡಿನಲ್ಲಿರುವ ಮೊಲಗಳನ್ನು ಮಾಂಸದ ಆಸೆಗೆ ಕೊಲ್ಲುವುದರಿಂದ ಕಾಡಿನಲ್ಲಿ ಅಸಮತೋಲನ ಕಂಡುಬರುತ್ತದೆ. ಇದರ ಜೊತೆಗೆ ಕಾಡಿನಲ್ಲಿರುವ ಇತರ ಮಾಂಸಹಾರಿ ಪ್ರಾಣಿಗಳು ತಮ್ಮ ಆಹಾರಕ್ಕಾಗಿ ಮೊಲಗಳನ್ನು ಹಿಡಿದು ತಿನ್ನುತ್ತವೆ.
ಆಹಾರಕ್ಕಾಗಿ ಅಷ್ಟೇ ಅಲ್ಲ ಮನೆಯಲ್ಲಿ ಸಾಕುಪ್ರಾಣಿಯಾಗಿ ಮೊಲಗಳನ್ನು ಸಾಕುವವರ ಸಂಖ್ಯೆಯೂ ಬಹಳಷ್ಟಿದೆ. ಹಲವರು ಮೊಲ ಸಾಕುವುದನ್ನು ಒಂದು ಹವ್ಯಾಸದಂತೆ ಮಾಡಿಕೊಂಡಿದ್ದಾರೆ. ಚಲನ ಚಿತ್ರಗಳಲ್ಲೂ ಮೊಲದ ಬಳಕೆ ಇದೆ.
ಚಿತ್ರ ಕೃಪೆ: ಅಂತರ್ಜಾಲ ತಾಣ