ಚೂರು ಪಾರು ಚುಟುಕಗಳು

ಚೂರು ಪಾರು ಚುಟುಕಗಳು

೧) ರಾಜಕಾರಣಿಗಳ ಧ್ಯೇಯವಾಕ್ಯ
'ಗುಡಿಸಲು ಮುಕ್ತ ಭಾರತ..'
ಇವರು'ಗುಡಿಸುತ್ತಿರುವ'ರೀತಿಗೇ
ಗೊತ್ತಾಯ್ತು, ನಿಜಕ್ಕೂ ಇದು,
'ಗುಡಿಸಲು,....ಮುಕ್ತ ಭಾರತ..!!'

********************************

 

೨)ತಪ್ತ ಮನಸಿನ ಬೇಗುದಿಗೆ
ಗುಪ್ತ ನಾಮದ ರಕ್ಷೆ
ರಿಕ್ತ ಬಾಳಿನ ಆಸೆಗೆ
ಶಕ್ತ ನಿಗ್ರಹವೇ ರಕ್ಷೆ

********************************

 

೩)ಹಾದಿ ಬೀದಿಯೋಳಿಲ್ಲದ ಆ ದೇವ,
ಸೃಷ್ಟಿಸಿದ ನಲಿವ ಜೊತೆ ನೋವ
ತಿನ್ನಬೇಕು ಬೆಲ್ಲದೊಟ್ಟಿಗೆ ಬೇವ,
ಇದೇ ಅಲ್ಲವೇ ಬಾಳಿನ ಭಾವ...

*********************************

೪)ಬ್ಲಾಕ್ ರಂ,ವೈಟ್ ರಂ,
ಗೋಲ್ಡ್ ರಂ,ಲೈಮ್ ರಂ,
ಎಲ್ಲವೂ ಮುಗಿದ ಮೇಲೆ,
ಕಾಂಚೀವ'ರಂ',ಧರ್ಮಾವ'ರಂ'
ಎಂದರೂ,
ಯಾವುದದು ಬ್ರ್ಯಾಂಡು
ಕೇಳುತ್ತದೆ ಮನಸು...!!

**********************************

೫)ಕನ್ನಡದಲ್ಲಿ spectaclesಗೆ ಏನೆನ್ನುತ್ತಾರೆ...?
ಕೇಳಿದೇನಾ ಕನ್ನಡತಿಗೆ.
'i dont know....' ಎಂದಳಾಕೆ.
ನಿಜ ಬಿಡಿ,
'ಕನ್ನಡ'ವೇ ಮರೆತವಳಿಗೆ,
'ಕನ್ನಡ'ಕ ನೆನಪಿದ್ದೀತೇ...?

**********************************

೬)ಪ್ರೀತಿ ಇರಲು ಎಲ್ಲರಲಿ
ಭೀತಿ ಇರಲು ದೈವದೆಡೆ
ನೀತಿ ಬಾಳಿನೊಳಿರಲು
ಕೋತಿ ಮನಕದೇ ಮುಕ್ತಿ ಮಾರ್ಗ

Comments