ಚೆನ್ನಭೈರಾದೇವಿ
ದಕ್ಷಿಣ ಕೊಂಕಣ ಹಾಗೂ ಮಲೆನಾಡನ್ನು ಸುಮಾರು ಐದು ದಶಕಗಳ ಕಾಲ ಆಳಿದ ಚೆನ್ನಾಭೈರಾದೇವಿ ಎಂಬ ರಾಣಿಯ ಬಗ್ಗೆ ತಿಳಿದಿರುವವರ ಸಂಖ್ಯೆ ಬಹಳ ಕಡಿಮೆ. ನಾವು ಶಾಲೆಗಳಲ್ಲಿ ಇಂತಹ ಮಹಾರಾಣಿಯರ ಜೀವನ ಕಥೆಯನ್ನು ಕೇಳಿಯೇ ಇಲ್ಲ, ಕಲಿತೂ ಇಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯ ದುರಂತ ಇದು. ಭಾರತವನ್ನು ಆಕ್ರಮಿಸಿ ಲೂಟಿ ಮಾಡಿದ ಮೊಘಲರು ಮತ್ತು ಹಲವಾರು ಮುಸ್ಲಿಂ ದೊರೆಗಳ ಬಗ್ಗೆ ಬಹಳ ವಿವರವಾಗಿ ಓದಿರುವ ನಾವು, ನಮ್ಮದೇ ದೇಶದ ಹಲವಾರು ರಾಜರ ಬಗ್ಗೆ, ರಾಣಿಯರ ಬಗ್ಗೆ ಓದಿದ್ದು ಕಡಿಮೆ. ಎಲ್ಲೋ ಒಂದೆಡೆ ರಾಣಿ ಅಬ್ಬಕ್ಕ, ಮತ್ತೊಂದೆಡೆ ಕಿತ್ತೂರು ರಾಣಿ ಚೆನ್ನಮ್ಮ, ಮಗದೊಂದು ಕಡೆ ಒನಕೆ ಓಬವ್ವ ಇವರ ಬಗ್ಗೆ ಓದಿದ್ದೇವೆ. ಆದರೆ ಎಲ್ಲೂ ‘ಕರಿಮೆಣಸಿನ ರಾಣಿ' ಎಂದೇ ಖ್ಯಾತಿ ಪಡೆದ ರಾಣಿ ಚೆನ್ನಭೈರಾದೇವಿ ಬಗ್ಗೆ ಓದಿದ ಬಗ್ಗೆ ನೆನಪೇ ಇಲ್ಲ. ಪೋರ್ಚ್ ಗೀಸರ ಆಕ್ರಮಣದಿಂದ ತನ್ನ ರಾಜ್ಯವನ್ನು ಸುಮಾರು ಐದು ದಶಕಗಳ ಕಾಲ ಉಳಿಸಿ ಬೆಳೆಸಿದ ಕೀರ್ತಿ ಚೆನ್ನಭೈರಾದೇವಿ ಇವರದ್ದು.
ಚೆನ್ನಭೈರಾದೇವಿ ಎನ್ನುವ ಐತಿಹಾಸಿಕ ಕಾದಂಬರಿಯನ್ನು ಬರೆದಿರುವುದು ‘ಪುನರ್ವಸು' ಕಾದಂಬರಿಯ ಖ್ಯಾತಿಯ ಡಾ. ಗಜಾನನ ಶರ್ಮ. ಇವರು ಈ ಕಾದಂಬರಿಯ ಮೂಲಕ ಮರೆತು ಹೋದ ಅಕಳಂಕ ರಾಣಿಯ ಚರಿತ್ರೆಯನ್ನು ಹೇಳಲು ಹೊರಟಿದ್ದಾರೆ. ಯಾರೋ ಇತಿಹಾಸ ತಜ್ಞ ಎನ್ನುವ ಹದಿನೇಳನೇ ಶತಮಾನದ ಇಟಲಿ ದೇಶದ ಪ್ರವಾಸಿ ಪೀಟ್ರೋ ಡೆಲ್ಲಾವಲ್ಲೆ ಈಕೆಯ ಮೇಲೆ ಅಪವಾದವನ್ನು ಹಾಕಿದ್ದ. ರಾಣಿಗೆ ತನ್ನ ಅಂಗರಕ್ಷಕ ಪಡೆಯ ಗೊಂಡನಾಯಕನ ಜೊತೆ ಅನೈತಿಕ ಸಂಬಂಧ ಇದೆ ಎಂದು. ಆದರೆ ಇದನ್ನು ಪುಷ್ಟೀಕರಿಸುವ ಯಾವುದೇ ದಾಖಲೆಗಳನ್ನು ಆತ ನೀಡಿಲ್ಲ. ಆದರೆ ಅದನ್ನೇ ಸತ್ಯ ಎಂದು ನಂಬಿದ ಹಲವಾರು ಮಂದಿ ಇತಿಹಾಸ ತಜ್ಞರು ಈ ಅಕಳಂಕ ರಾಣಿಗೆ ಕಳಂಕವನ್ನು ಮೆತ್ತುವ ಕೆಲಸ ಮಾಡಿದ್ದಾರೆ.
ಈ ಅದ್ಭುತವಾದ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಸಾಹಿತಿ, ಪತ್ರಕರ್ತ ಹಾಗೂ ಅಂಕಣಕಾರರಾದ ‘ಜೋಗಿ'. ಅವರು ತಮ್ಮ ಬೆನ್ನುಡಿಯಲ್ಲಿ ಕೆಲವೇ ಮಾತುಗಳಲ್ಲಿ ಚೆನ್ನಭೈರಾದೇವಿಯ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರ ಮಾತುಗಳ ಆಯ್ದ ಭಾಗಗಳು ಇಲ್ಲಿವೆ…
“ಸಂಕಷ್ಟದಲ್ಲಿರುವವರಿಗೆ ದೂರದಲ್ಲೇ ಇದ್ದು ಕಾಪಾಡುವ ಅವ್ವರಸಿ, ಹತ್ತಿರದಿಂದ ಕಂಡವರಿಗೆ ಸಣ್ಣಮ್ಮ, ಶತ್ರುಗಳ ಪಾಲಿಗೆ ಎದೆನಡುಗಿಸುವ ಚೆನ್ನಭೈರಾದೇವಿ, ಬಂಧು ಮಿತ್ರರಿಗೆ ಎಂದೂ ಎಚ್ಚರ ತಪ್ಪದ ನಿರ್ದಾಕ್ಷಿಣ್ಯ ಹೆಣ್ಣು, ಪೋರ್ಚ್ ಗೀಸರ ಪಾಲಿಗೆ ರೈನಾ ದ ಪಿಮೆಂಟಾ.
ದಕ್ಷಿಣ ಕೊಂಕಣ ಹಾಗೂ ಮಲೆನಾಡನ್ನು ೫೪ ವರ್ಷಗಳ ಕಾಲ ಆಳಿದ ಚೆನ್ನಾಭೈರಾದೇವಿಯ ಕಥೆಯನ್ನು ಎಷ್ಟು ವಸ್ತುನಿಷ್ಟವಾಗಿ ಹೇಳಲು ಸಾಧ್ಯವೋ ಅಷ್ಟು ಅಚ್ಚುಕಟ್ಟಾಗಿ ಹೇಳಿದ್ದಾರೆ ಡಾ. ಗಜಾನನ ಶರ್ಮ. ಇದು ಕೇವಲ ಚೆನ್ನಬೈರಾದೇವಿಯ ಕಥೆಯಷ್ಟೇ ಅಲ್ಲ, ನೂರು ವರುಷಗಳ ಶರಾವತಿ ದಂಡೆಯ ಚರಿತ್ರೆ, ಕರಾವಳಿ - ಪಶ್ಚಿಮ ಮಲೆನಾಡಿನ ವೈವಿಧ್ಯಮಯ ಜೀವನ ಶೈಲಿಯ ಕಷ್ಟಕತೆ, ಜೈನ ಧರ್ಮೀಯರ ಸಾಹಸ ತ್ಯಾಗದ ಚಿತ್ರ, ಬಿಜಾಪುರದ ಸುಲ್ತಾನರು ಹಾಗೂ ವಿಜಯನಗರದ ಅರಸರೊಂದಿಗಿನ ಸಂಬಂಧ ಕಡಿದುಕೊಳ್ಳದೇ ಒತ್ತೊತ್ತಿ ಬಂದ ಪೋರ್ಚ್ ಗೀಸರಿಂದ ಒಂದಿಡೀ ತಲೆಮಾರನ್ನು ಕಾಪಾಡಿದ ರಾಣಿಯ ಸಾಹಸ, ಪ್ರೇಮ, ತ್ಯಾಗ ಮತ್ತು ಧೀಮಂತ ವ್ಯಕ್ತಿತ್ವದ ಸಮಗ್ರ ಚಿತ್ರ.
ಚಾರಿತ್ರಿಕ ಕಾದಂಬರಿಗಳನ್ನು ಬರೆಯುವುದು ಸುಲಭವಲ್ಲ. ಏಕಕಾಲಕ್ಕೆ ಇತಿಹಾಸಕ್ಕೂ ನಿಷ್ಟರಾಗಿದ್ದುಕೊಂಡು ರೋಚಕತೆಗೂ ಮೋಸವಾಗದಂತೆ ಬರೆಯಲಿಕ್ಕೆ ಅಗಾಧವಾದ ಪರಿಶ್ರಮ, ಪ್ರತಿಭೆ ಮತ್ತು ಅಧ್ಯಯನ ಬೇಕು. ಡಾ. ಗಜಾನನ ಶರ್ಮರಿಗೆ ಅದು ಸಿದ್ಧಿಸಿದೆ. ಈ ಹಿಂದೆ ಪುನರ್ವಸು ಕಾದಂಬರಿಯ ಮೂಲಕ ಶರಾವತಿಯ ಕಥನವನ್ನು ಕಟ್ಟಿಕೊಟ್ಟ ಗಜಾನನ ಶರ್ಮರು, ಇಲ್ಲಿ ಚರಿತ್ರೆಯ ಬೆನ್ನುಹತ್ತಿದ್ದಾರೆ. ಚೆನ್ನಭೈರಾದೇವಿಯ ಬದುಕಿನ ಅಪರೂಪದ ಘಟನೆಗಳನ್ನು ತಂದು ನಮ್ಮ ಮುಂದಿಟ್ಟಿದ್ದಾರೆ. ಪುಟಪುಟದಲ್ಲೂ ರೋಮಾಂಚನಗೊಳಿಸುವ ವಿವರಗಳ ಜತೆಗೇ ರಾಜನೀತಿ, ಜೀವನ ವಿಧಾನ, ಧೀಮಂತಿಕೆ, ಉತ್ಕಟವಾದ ಪ್ರೇಮ ಮತ್ತು ಹೆಣ್ಣಿನ ಅಂತಃಸತ್ವವನ್ನು ತೆರೆದಿಡುವ ಈ ಕೃತಿ ಚಾರಿತ್ರಿಕ ಕಥನಗಳ ಪಟ್ಟಿಗೆ ಅಮೂಲ್ಯ ಸೇರ್ಪಡೆ. ಇತ್ತೀಚಿನ ನೂರು ನಾಲ್ಕು ದಶಕಗಳಲ್ಲಿ ನಾನು ಇಷ್ಟು ಸಮೃದ್ಧವಾದ ಪ್ರಾಮಾಣಿಕವಾದ ಐತಿಹಾಸಿಕ ಕಾದಂಬರಿಯನ್ನು ಓದಿಲ್ಲ.” ಇದು ಜೋಗಿಯವರ ಮನದಾಳದ ಮೆಚ್ಚುಗೆ ಮಾತು.
ಲೇಖಕರಾದ ಡಾ ಗಜಾನನ ಶರ್ಮ ಅವರು ತಮ್ಮ ಮಾತಿನಲ್ಲಿ ರಾಣಿ ಚೆನ್ನಭೈರಾದೇವಿ ಬಗ್ಗೆ ಬಹಳ ಮಾಹಿತಿ ನೀಡಿದ್ದಾರೆ. ತಾವು ಆಕೆಯ ಬಗ್ಗೆ ಏಕೆ ಈ ಕಾದಂಬರಿಯನ್ನು ಬರೆಯುವ ಸಾಹಸ ಮಾಡಿದೆವು ಎಂಬುದಾಗಿಯೂ ವಿವರಿಸಿದ್ದಾರೆ. ಅವರು ಹೇಳುವಂತೆ “ ಚೆನ್ನಭೈರಾದೇವಿ ಐವತ್ತೂ ವರ್ಷಗಳಿಗೂ ಹೆಚ್ಚು ಕಾಲ ರಾಜ್ಯವಾಳಿದ್ದು, ಕರಾವಳಿ ಮಾತ್ರವಲ್ಲದೆ ಘಟ್ಟದ ಮೇಲಿನ ಭಾರಂಗಿ, ಮರಬಿಡಿ, ಕರೂರು, ಹನ್ನಾರ, ಸೌಳನಾಡುಗಳಷ್ಟೇ ಅಲ್ಲದೆ ಇಕ್ಕೇರಿಯಿಂದ ಕೂಗಳತೆಯ ದೂರದಲ್ಲಿದ್ದ ಆವಿನ ಹಳ್ಳಿ ಸೀಮೆ ಕೂಡ ಅವಳ ವ್ಯಾಪ್ತಿಗೆ ಒಳಪಟ್ಟಿದ್ದು, ಯುದ್ಧದಲ್ಲಿ ಅವಳು ಪರಂಗಿಗಳನ್ನೇ ಸೋಲಿಸಿದ್ದು, ಸಮುದ್ರದಾಚೆಯ ದೇಶಗಳಿಗೆ ಕಾಳುಮೆಣಸು, ಅಡಿಕೆ, ಗಂಧ, ದಾಲ್ಚಿನ್ನಿ, ಶುಂಠಿ ನಿರ್ಯಾತ ಮಾಡಿ ಅದಕ್ಕೆಲ್ಲ ಬೆಲೆ ತಂದುಕೊಟ್ಟಿದ್ದು, ಮಣಗಟ್ಟಲೆ ಬೆಳ್ಳಿ ಬಂಗಾರಗಳಿಸಿ ನೆಲದಡಿಯಲ್ಲಿ ಹುಗಿಸಿಟ್ಟದ್ದು, ಸಂಪತ್ತನ್ನು ಹುಗಿದಿಟ್ಟ ಕಾರಣದಿಂದಲೇ ಹಲವು ಊರುಗಳಿಗೆ ಕೊಪ್ಪರಿಗೆ, ಹೊನ್ನೇಮಕ್ಕಿ, ಮುತ್ತಳ್ಳಿ, ಸಿರಿಮನೆ, ಗಿಂಡಿಮನೆ, ಬಂಗಾರಮಕ್ಕಿ, ಬೆಲ್ಲಿಮಕ್ಕಿ, ಅಂತೆಲ್ಲ ಹೆಸರು ಬಂದಿದ್ದು ಅಂತೆಲ್ಲ ಹೇಳುತ್ತಿದ್ದರು. ನಮ್ಮೂರು ಪಕ್ಕದ ಬಿದರೂರಿನ ಬಸದಿ ಪುರೋಹಿತರಾಗಿದ್ದ ಸಿದ್ಧಾರ್ಥ ಇಂದ್ರರು ‘ಬಿದರೂರು ಅಂದ್ರೆ ವೇಣುಪುರ. ಇಲ್ಲಿರುವ ಸಾಳುವ ವಂಶದವರು ಕಟ್ಟಿದ್ದು, ಕೆಲವು ಕಾಲ ಅವರ ಒಂದು ಕವಲು ಇಲ್ಲಿಂದ ಆಳ್ವಿಕೆ ನಡೆಸಿತ್ತು. ರಾಣಿ ಚೆನ್ನಭೈರಾದೇವಿ ಇಲ್ಲಿನ ವರ್ಧಮಾನ ಬಸದಿ, ಯೋಗಾನರಸಿಂಹಸ್ವಾಮಿ ದೇವಾಲಯವನ್ನೆಲ್ಲ ಜೀರ್ಣೋದ್ಧಾರ ಮಾಡಿಸಿ ದಾನದತ್ತಿ ಕೊಟ್ಟಿದ್ದಳು. ಮುಂದೆ ಇಕ್ಕೇರಿಯ ನಾಯಕ ಆಕೆಯನ್ನು ಸೋಲಿಸಿ ಗೇರುಸೊಪ್ಪೆಯ ಅರಮನೆಗೆ ಬೆಂಕಿಯಿಡಿಸಿದಾಗ ಹತ್ತಿ ಉರಿದ ಗಂಧ ಚಂದನಗಳ ಪರಿಮಳ ನಮ್ಮೂರಿಗೂ ಹಬ್ಬಿತ್ತು' ಎಂದು ಹೇಳುತ್ತಿದ್ದರು.”
ಚೆನ್ನಭೈರಾದೇವಿಗೆ ಯಾವುದೇ ಇತಿಹಾಸಕಾರರು ಸಂಪೂರ್ಣ ನ್ಯಾಯ ಒದಗಿಸಿಲ್ಲ ಎನ್ನುವುದು ಈ ಕಾದಂಬರಿಯನ್ನು ಓದುವಾಗ ವೇದ್ಯವಾಗುತ್ತದೆ. ಈಕೆಯ ಕಾಲದ ಬಗ್ಗೆ ಹಾಗೂ ಹಲವು ವಿಷಯಗಳ ಬಗ್ಗೆ ಗೊಂದಲಗಳು ಇವೆಯಾದರೂ ಅವುಗಳು ರಾಣಿಯ ವರ್ಚಸ್ಸನ್ನು ಕಡಿಮೆ ಮಾಡುವುದಿಲ್ಲ. ಹಲವು ವರ್ಷಗಳ ಕಾಲ ರಾಣಿಯಾಗಿದ್ದೂ ಆಕೆ ತನ್ನನ್ನು ಎಂದೂ ಮಹಾರಾಣಿಯಂತೆ ಬಿಂಬಿಸಲಿಲ್ಲ, ತನ್ನ ಹಿರಿಮೆಯನ್ನು ಸಾರಲು ಹೊಗಳು ಭಟ್ಟರನ್ನು ಸಾಕಿ ಅವರಿಂದ ತಾಮ್ರ ಪತ್ರದಲ್ಲಿ ತನ್ನ ಬಗ್ಗೆ ಬರೆಯಿಸಿಡಲಿಲ್ಲ. ಸರಳವಾಗಿ ಜನರ ಕ್ಷೇಮಕ್ಕಾಗಿ, ಉದ್ಧಾರಕ್ಕಾಗಿ ಅವಿವಾಹಿತಳಾಗಿಯೇ ಬದುಕಿ ಜೀವನ ಸವೆಸಿದ ರಾಣಿಯ ಕಥೆಯನ್ನು ಕನ್ನಡಿಗರಾದ ನಾವು ಓದಲೇ ಬೇಕು. ಈ ಚಾರಿತ್ರಿಕ ಕಾದಂಬರಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಡಾ. ಶರ್ಮರು ಅಭಿನಂದನಾರ್ಹರು ಎನ್ನುವುದರಲ್ಲಿ ಎರಡು ಮಾತಿಲ್ಲ.
ಸುಮಾರು ೪೨೦ ಪುಟಗಳ ಈ ಬೃಹತ್ ಕಾದಂಬರಿಯನ್ನು ನೀವು ಓದಲು ಕೈಗೆತ್ತಿಕೊಂಡರೆ, ನಂತರ ಎಲ್ಲೂ ಕೆಳಗಿಡದೇ ಓದಿ ಮುಗಿಸುವುದರಲ್ಲಿ ಸಂದೇಹವಿಲ್ಲ. ಸಾಮಾನ್ಯ ಓದುಗನಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ ಮನಮುಟ್ಟುವಂತೆ ಬರೆಯುವುದು ಡಾ ಶರ್ಮರಿಗೆ ಸಿದ್ಧಿಸಿದ ಕಲೆ. ಕರಿಮೆಣಸಿನ ರಾಣಿ ಚೆನ್ನಭೈರಾದೇವಿಯ ಸೊಗಸಾದ ಮುಖಪುಟವನ್ನು ರಚನೆ ಮಾಡಿದ ಪೂರ್ಣಿಮಾ ಆಚಾರ್ಯ ಹಾಗೂ ವಿನ್ಯಾಸ ಮಾಡಿದ ಸುಧಾಕರ ದರ್ಬೆ ಇವರೂ ಅಭಿನಂದನಾರ್ಹರು. ಡಾ ಶರ್ಮರು ಇನ್ನಷ್ಟು ಐತಿಹಾಸಿಕ ಕಾದಂಬರಿಗಳನ್ನು ಬರೆಯಲಿ. ಮರೆಮಾಚಲ್ಪಟ್ಟ ಕನ್ನಡ ನಾಡಿನ ಇತಿಹಾಸವು ಎಲ್ಲರಿಗೂ ತಿಳಿಯಲಿ.