ಚೆನ್ನಭೈರಾದೇವಿ

ಚೆನ್ನಭೈರಾದೇವಿ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಗಜಾನನ ಶರ್ಮ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೩೯೫.೦೦, ಮುದ್ರಣ : ೨೦೨೧

ಚೆನ್ನಭೈರಾದೇವಿ ಈಕೆ ಕರಿಮೆಣಸಿನ ರಾಣಿ ಎಂಬ ಖ್ಯಾತಿ ಹೊತ್ತವಳು. ನಮ್ಮ ಇತಿಹಾಸಕಾರರು ಈಕೆಯನ್ನು ಗುರುತಿಸಿ ಪರಿಚಯಿಸಿದ್ದು ಕಡಿಮೆ. ಆ ಕರಿಮೆಣಸಿನ ರಾಣಿಯ ಅಕಳಂಕ ಚರಿತ್ರೆಯನ್ನು ನಿಮ್ಮ ಮುಂದೆ ಇಟ್ಟಿದ್ದಾರೆ ಲೇಖಕರಾದ ಡಾ. ಗಜಾನನ ಶರ್ಮ ಇವರು.  ಈ ಪುಸ್ತಕದ ಬಗ್ಗೆ ಖ್ಯಾತ ಅಂಕಣಕಾರ, ಪತ್ರಕರ್ತ ಜೋಗಿ ತಮ್ಮ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ.

“ ಸಂಕಷ್ಟದಲ್ಲಿರುವವರಿಗೆ ದೂರದಲ್ಲೇ ಇದ್ದು ಕಾಪಾಡುವ ಅವ್ವರಸಿ, ಹತ್ತಿರದಿಂದ ಕಂಡವರಿಗೆ ಸಣ್ಣಮ್ಮ, ಶತ್ರುಗಳ ಪಾಲಿಗೆ ಎದೆನಡಗಿಸುವ ಚೆನ್ನಭೈರಾದೇವಿ ಬಂಧುಮಿತ್ರರಿಗೆ ಎಂದೂ ಎಚ್ಚರ ತಪ್ಪದ ನಿರ್ದಾಕ್ಷಿಣ್ಯ ಹೆಣ್ಣು. ಪೋರ್ಚುಗೀಸರ ಪಾಲಿಗೆ ರೈನಾದ ಪಿಮೆಂಟಾ.

ದಕ್ಷಿಣ ಕೊಂಕಣ ಹಾಗೂ ಮಲೆನಾಡನ್ನು ೫೪ ವರ್ಷಗಳ ಕಾಲ ಆಳಿದ ಚೆನ್ನಭೈರಾದೇವಿಯ ಕಥೆಯನ್ನು ಎಷ್ಟು ವಸ್ತುನಿಷ್ಟವಾಗಿ ಹೇಳಲು ಸಾಧ್ಯವೋ ಅಷ್ಟು ಅಚ್ಚುಕಟ್ಟಾಗಿ ಹೇಳಿದ್ದಾರೆ ಡಾ. ಗಜಾನನ ಶರ್ಮ. ಇದು ಕೇವಲ ಚೆನ್ನಭೈರಾದೇವಿಯ ಕಥೆಯಷ್ಟೇ ಅಲ್ಲ, ನೂರು ವರುಷಗಳ ಶರಾವತಿ ದಂಡೆಯ ಚರಿತ್ರೆ. ಕರಾವಳಿ ಪಶ್ಚಿಮ ಮಲೆನಾಡಿನ ವೈವಿಧ್ಯಮಯ ಜೀವನ ಶೈಲಿಯ ಕಷ್ಟ ಕತೆ. ಜೈನಧರ್ಮೀಯರ ಸಾಹಸ ತ್ಯಾಗದ ಚಿತ್ರ . ಬಿಜಾಪುರದ ಸುಲ್ತಾನರು ಹಾಗೂ ವಿಜಯನಗರದ ಅರಸರೊಂದಿಗಿನ ಸಂಬಂಧ ಕಡಿದುಕೊಳ್ಳದೇ ಒತ್ತೊತ್ತಿ ಬಂದ ಪೋರ್ಚುಗೀಸರಿಂದ ಒಂದಿಡೀ ತಲೆಮಾರನ್ನು ಕಾಪಾಡಿದ ರಾಣಿಯ ಸಾಹಸ, ಪ್ರೇಮ, ತ್ಯಾಗ ಮತ್ತು ಧೀಮಂತ ವ್ಯಕ್ತಿತ್ವದ ಸಮಗ್ರ ಚಿತ್ರ. 

ಚಾರಿತ್ರಿಕ ಕಾದಂಬರಿಗಳನ್ನು ಬರೆಯುವುದು ಸುಲಭವಲ್ಲ. ಏಕಕಾಲಕ್ಕೆ ಇತಿಹಾಸಕ್ಕೂ ನಿಷ್ಟರಾಗಿದ್ದುಕೊಂಡು ರೋಚಕತೆಗೂ ಮೋಸವಾಗದಂತೆ ಬರೆಯಲಿಕ್ಕೆ ಅಗಾಧವಾದ ಪರಿಶ್ರಮ, ಪ್ರತಿಭೆ ಮತ್ತು ಅಧ್ಯಯನ ಬೇಕು. ಡಾ. ಗಜಾನನ ಶರ್ಮರಿಗೆ ಅದು ಸಿದ್ಧಿಸಿದೆ.

ಈ ಹಿಂದೆ ಪುನರ್ವಸು ಕಾದಂಬರಿಯ ಮೂಲಕ ಶರಾವತಿಯ ಕಥನವನ್ನು ಕಟ್ಟಿಕೊಟ್ಟ ಗಜಾನನ ಶರ್ಮರು, ಇಲ್ಲಿ ಚರಿತ್ರೆಯ ಬೆನ್ನುಹತ್ತಿದ್ದಾರೆ. ಚೆನ್ನಭೈರಾದೇವಿಯ ಬದುಕಿನ ಅಪರೂಪದ ಘಟನೆಗಳನ್ನು ತಂದು ನಮ್ಮ ಮುಂದಿಟ್ಟಿದ್ದಾರೆ. ಪುಟಪುಟದಲ್ಲೂ ರೋಮಾಂಚನಗೊಳಿಸುವ ವಿವರಗಳ ಜತೆಗೇ ರಾಜನೀತಿ, ಜೀವನ ವಿಧಾನ, ಧೀಮಂತಿಕೆ, ಉತ್ಕಟವಾದ ಪ್ರೇಮ ಮತ್ತು ಹೆಣ್ಣಿನ ಅಂತಃಸತ್ವವನ್ನು ತೆರೆದಿಡುವ ಈ ಕೃತಿ ಕನ್ನಡ ಚಾರಿತ್ರಿಕ ಕಥನಗಳ ಪಟ್ಟಿಗೆ ಅಮೂಲ್ಯ ಸೇರ್ಪಡೆ. 

ಇತ್ತೀಚಿನ ಮೂರು ನಾಲ್ಕು ದಶಕಗಳಲ್ಲಿ ನಾನು ಇಷ್ಟು ಸಮೃದ್ಧವಾದ ಪ್ರಾಮಾಣಿಕವಾದ ಐತಿಹಾಸಿಕ ಕಾದಂಬರಿಯನ್ನು ಓದಿಲ್ಲ. “ ಈ ಬೆನ್ನುಡಿಯನ್ನು ಓದಿದವರು ಖಂಡಿತಾ ಈ ಪುಸ್ತಕವನ್ನು ಓದಲು ಮನಸ್ಸು ಮಾಡಿಯೇ ಮಾಡುತ್ತಾರೆ.