ಚೆನ್ನವೀರಯ್ಯ ಕಂಡುಕೊಂಡಿರುವ ಹೀಗೊಂದು ಅನುಕರಣೀಯ ಅನ್ನದ ಹಾದಿ!

ಚೆನ್ನವೀರಯ್ಯ ಕಂಡುಕೊಂಡಿರುವ ಹೀಗೊಂದು ಅನುಕರಣೀಯ ಅನ್ನದ ಹಾದಿ!

ಬರಹ

ಈ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಅಪ್ಪ-ಅಮ್ಮಂದಿರಿಗೆ ತಮ್ಮ ಮನೆಗಳಲ್ಲಿ ವೈದ್ಯರು, ಅಭಿಯಂತರರು ಸಾಧ್ಯವಾದರೆ ‘ಗ್ಲೋರಿಫಾಯಿಡ್ ಕ್ಲರ್ಕ್’ ಗಳನ್ನು ಬಿತ್ತಿ ಬೆಳೆಯಬೇಕಿದೆ. ಹಣ ಎಣಿಸುವ ಅಥವಾ ಲಾಭದಾಯಕ ಕಾಯಕ ಮಾತ್ರ ನಮ್ಮ ಕಣ್ಣಿಗೆ ಕಾಣುತ್ತದೆ. ಜೀವನದ ಎಲ್ಲ ತಿರುವುಗಳಲ್ಲಿಯೂ ಹಣವೇ ಪ್ರಧಾನ!

`REWRITE RULES; RETAIN VALUES!' ಈ ಮನಸ್ಥಿತಿಯ ಜನ ನಮಗೆ ಕಾಣಸಿಗುವುದು ಈಗ ಬಲು ಅಪರೂಪ. ಕಂಡರು ಅವರು ತೀರ ಅವ್ಯಾವಹಾರಿಕ ಎನ್ನಿಸಿಕೊಳ್ಳುತ್ತಾರೆ ಲೋಕದ ದೃಷ್ಠಿಯಲ್ಲಿ. ಹಾಗಾದರೆ ಮೌಲ್ಯಗಳಸಹಿತ ವ್ಯಾವಹಾರಿಕ ಬದುಕಿನ ಸೂಕ್ಷ್ಮತೆಗಳನ್ನು ಸಹಿತ ಜೋಡಿಸಿಕೊಂಡು ಬದುಕಲು ಕಲಿಸುವ ಮಂದಿ ಇಲ್ಲವೇ? ಇದ್ದಾರೆ. ನಮ್ಮವರೇ ಇದ್ದಾರೆ. ಆದರೆ ಅವರಿಗೆ ನಮ್ಮ ಮನೆಯ ಹಿತ್ತಿಲುಗಿಡಕ್ಕೆ ಸಿಗುವ ಗೌರವ!

ಹಾವೇರಿಯ ಚೆನ್ನವೀರಯ್ಯ ಗಂಗಾಧರಯ್ಯ ಹಿರೇಮಠ ಅಂತಹ ವಿಶೇಷ ವ್ಯಕ್ತಿ. ಸ್ವಯಂ ಉದ್ಯೋಗ ಕಂಡುಕೊಂಡು ನಾಲ್ಕಾರು ಜನರ ಉಪಜೀವನಕ್ಕೆ ಆಧಾರವಾಗಿ ಸ್ವತ: ಶ್ರೀಮಂತರಾಗುವ ಕನಸು ಕಂಡ ಧೈರ್ಯವಂತ ಅವರು. ನಾವೆಲ್ಲ ಸಾಕಷ್ಟು ಜಾಣರಿದ್ದೇವೆ, ಆದರೆ ಸ್ವಯಂ ಉದ್ಯೋಗ ಕೈಗೊಳ್ಳುವಷ್ಟಲ್ಲ! ನಮ್ಮ ಜ್ನಾನ, ಪರಿಶ್ರಮ ಬಳಸಿಕೊಂಡು ಶ್ರೀಮಂತರಾಗಲು ಹೊರಟವರಿಗೆ ನಾವು ಅಡಿಯಾಳಾಗಿ, ಜಿಹುಜೂರಿಗೂ ಇಲ್ಲ ಎನ್ನದೇ, ನಮ್ಮ ಮಾಲೀಕರುಗಳನ್ನು ಶ್ರೀಮಂತಗೊಳಿಸಲು ಹೊರಟವರು ನಾವು. ಹಣ, ಬಂಡವಾಳ ಅವರದ್ದು. ಬುದ್ಧಿ, ಶ್ರಮ ನಮ್ಮದು. ಅದನ್ನೇ ನಮ್ಮ ಸ್ವಂತಕ್ಕೆ ಬಳಸಿಕೊಂಡರೆ?

ಸ್ವಾಮಿ ವಿವೇಕಾನಂದರ ಮಾತು ಇಲ್ಲಿ ಉಲ್ಲೇಖನೀಯ. ‘ನೀನು ನಿನಗೆ ಕೇಡನ್ನುಂಟು ಮಾಡಿಕೊಳ್ಳದಿದ್ದರೆ ಜಗತ್ತಿನ ಯಾವ ಶಕ್ತಿಯೂ ನಿನಗೆ ಕೇಡನ್ನು ಉಂಟುಮಾಡಲಾರದು!’ ಎಂತಹ ಅಮೃತವಾಣಿ.

೧೯೯೧ ರಲ್ಲಿ ಹುಬ್ಬಳ್ಳಿಯ ತಾರಿಹಾಳ ರೂರಲ್ ಡಿಪ್ಲೊಮಾ ಮಹಾವಿದ್ಯಾಲಯದಿಂದ ಇಲೆಕ್ಟ್ರಾನಿಕ್ಸ್ ಹಾಗು ಕಮ್ಯುನಿಕೇಶನ್ ಇಂಜಿನೀಯರಿಂಗ್ ನಲ್ಲಿ ಪದವಿ ಪಡೆದ ಚೆನ್ನವೀರಯ್ಯ ಅವರು ಕಾಲಿಟ್ಟದ್ದು ಕಾರ್ಖಾನೆಯಲ್ಲಿ. ಆದರೆ ಒಳಗಿನ ತುಡಿತ ಬೇರೆಯೇ ಇತ್ತು. ಶೀಘ್ರವೇ ನೌಕರಿಗೆ ರಾಜೀನಾಮೆ ಇತ್ತು, ಸ್ವಯಂ ಉದ್ಯೋಗ ಕೈಗೊಳ್ಳಲು ಮನಸ್ಸು ಮಾಡಿದರು. ತಂದೆ ಗಂಗಾಧರಯ್ಯ ಹಿರೇಮಠ ಹಾಗು ತಾಯಿ ಶ್ರೀಮತಿ ಶಾರದಾಬಾಯಿ ಅವರು ಮಗನ ಒತ್ತಾಸೆಗೆ ಬೆಂಬಲವಾಗಿ ನಿಂತು ಪ್ರೋತ್ಸಾಹಿಸಿದರು.

ಮನೆಯವರ ಪ್ರೋತ್ಸಾಹದ ಫಲವಾಗಿ ಚೆನ್ನವೀರಯ್ಯ ಅವರು ೧೯೯೩ರಲ್ಲಿ ಹಾವೇರಿ ಸುತ್ತಮುತ್ತಲಿನ ಎಲ್ಲ ಶಾಲಾ-ಕಾಲೇಜುಗಳಿಗೆ ಬೋಧನಾ ಸಾಮಗ್ರಿ, ಪಾಠೋಪಕರಣ ಹಾಗು ನಕಾಶೆಗಳು, ಚಿತ್ರಪಟ, ವೈಜ್ನಾನಿಕ ಉಪಕರಣಗಳನ್ನು ಪೂರೈಸುವ ಸಣ್ಣ ಪ್ರಮಾಣದ ಉದ್ದಿಮೆಯಲ್ಲಿ ತೊಡಗಿಸಿಕೊಂಡರು. ಭೂಗೋಳ ಹಾಗು ಇತಿಹಾಸ ವಿಷಯಕ್ಕೆ ಸಂಬಂಧಿಸಿದಂತೆ ಅವರು ತಯಾರಿಸಿರುವ ಪಾಠೋಪಕರಣಗಳು ಮೌಲ್ಯಯುತವಾಗಿವೆ.

೨೦೦೫ ರಲ್ಲಿ ವಿಶ್ವ ವಿದ್ಯಾಲಯಗಳ ಅನುದಾನ ಆಯೋಗ ‘ನ್ಯಾಕ್’ ಶ್ರೇಣಿಕರಣವನ್ನು ಮಹಾವಿದ್ಯಾಲಯಗಳಿಗೆ ಕಡ್ಡಾಯಗೊಳಿಸಿದಾಗ ಬದುಕಿನ ಹಲವಾರು ಕ್ಷೇತ್ರಗಳನ್ನು ತಮ್ಮ ಕೊಡುಗೆಗಳಿಂದ ಶ್ರೀಮಂತಗೊಳಿಸಿದ ಮಹನೀಯರ ಛಾಯಾಚಿತ್ರ, ಅವರ ಜೀವನ-ಸಾಧನೆ, ಕೊಡುಗೆಗಳನ್ನು ಸಾಕ್ಷೀಕರಿಸುವ ಫೋಟೊ ಫ್ರೇಮ್ ಉದ್ಯಮಕ್ಕೆ ಕೈಹಾಕಿದರು ಚೆನ್ನವೀರಯ್ಯ. ಹಾವೇರಿ, ಧಾರವಾಡ ಜಿಲ್ಲೆಗಳು ಸೇರಿದಂತೆ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಹಾಗು ಗುಜರಾತ್ ರಾಜ್ಯದ ವಿವಿಧ ವಿಶ್ವವಿದ್ಯಾಲಯ ಮತ್ತು ಮಹಾವಿದ್ಯಾಲಯಗಳಿಂದ ಸಾಕಷ್ಟು ಬೇಡಿಕೆಯ ಮಹಾಪೂರವೇ ಹರಿದುಬಂದಿದೆ.

ಆದರೆ ಚೆನ್ನವೀರಯ್ಯ ಅವರ ಅನುಭವ ಬೇರೆ ಇದೆ. ಈ ಉದ್ದಿಮೆ ಪ್ರೋತ್ಸಾಹದಾಯಕವಾಗಿದೆ ಆದರೆ ಲಾಭದಾಯಕವಾಗಿಲ್ಲ ಎನ್ನುತ್ತಾರೆ. ಈ ಫೋಟೋ ಫ್ರೇಮ್ ಉದ್ದಿಮೆಯೊಂದಿಗೆ ವೈಜ್ನಾನಿಕ ಪಾಠೋಪಕರಣ ಹಾಗು ಬೋಧನಾ ಸಾಮಗ್ರಿ ಅವರು ತಯಾರಿಸಿ ಮಾರಾಟ ಮಾಡುತ್ತಿರುವುದೇ ನಿಜವಾಗಿ ಅನ್ನ ಗೆಲ್ಲುವ ಮಾರ್ಗ ಎನ್ನುತ್ತದೆ ಅವರ ಅನುಭವ. ಹಾಗೆಯೇ ಯಾರೂ ಮಾರುಕಟ್ಟೆಗೆ ಇಲ್ಲಿಯ ವರೆಗೆ ಪರಿಚಯಿಸದ ವಿಶೇಷ ವಸ್ತುಗಳನ್ನು ಕಂಡು ಹಿಡಿದು ಪರಿಚಯಿಸುವುದು, ನ್ಯಾಷನಲ್ ಜಿಯಾಗ್ರಫಿ ಚಾನೆಲ್ ನಕಾಶ ಮುದ್ರಣ ವಿಭಾಗದಿಂದ ಅಂತಾರಾಷ್ಟ್ರೀಯ ಸ್ಥರದ ನಕಾಶಗಳನ್ನು ಆಮದು ಮಾಡಿಕೊಂಡು ಗ್ರಾಮೀಣ ಭಾಗದ ಶಾಲೆ-ಕಾಲೇಜುಗಳಿಗೆ ವಿತರಿಸುವುದು ಅವರ ಹವ್ಯಾಸ. ಲಾಭ-ನಷ್ಟದ ದೃಷ್ಟಿಯಿಂದಲ್ಲ. ಸಮಾಜ ಸೇವೆ ಜೊತೆಗೆ ಉಪಜೀವನಕ್ಕೆ ಒಂದು ಮಾರ್ಗ.

ಹಾಗೆಯೇ ಜಾಗತಿಕ ಉಪಗ್ರಹ ನಕ್ಷೆ, ಜಾಗತಿಕ ಉಪಗ್ರಹ ಆಧಾರಿತ ಹವಾಮಾನ ನಕ್ಷೆ, ಸಾಗರಗಳ ತಳ ಭಾಗದ ನಕ್ಷೆ ಮೊದಲಾದ ವೈಶಿಷ್ಠ್ಯಪೂರ್ಣವಾದ ವಸ್ತುಗಳನ್ನು ಹೊರದೇಶಗಳಿಂದ ಆಮದು ಮಾಡಿಕೊಂಡು ಶಾಲೆ-ಕಾಲೇಜುಗಳಿಗೆ ತೆರಳಿ ಮನವೊಲಿಸಿ ಮಾರಾಟ ಮಾಡುವ ಕಾಯಕವನ್ನು ವೃತದಂತೆ ಅವರು ಪಾಲಿಸುತ್ತ ಬಂದಿದ್ದಾರೆ. ಹಾಗೆಯೇ ಕಚೇರಿಗಳಲ್ಲಿ ಅಲಂಕಾರಿಕವಾಗಿ ಅಥವಾ ನಾಡಿನ ಸಾಮಾಜಿಕ, ಐತಿಹಾಸಿಕ, ರಾಜಕೀಯ, ಪೌರಾಣಿಕ, ಸಾಹಿತ್ತಿಕ, ಶೈಕ್ಷಣಿಕ ಚೇತನಗಳ ಸಾಧನೆಯನ್ನು ಸಾಕ್ಷೀಕರಿಸುವ ಛಾಯಾಚಿತ್ರಗಳನ್ನು ಮುದ್ರಿಸಿ ೧,೫೦೦ ರುಪಾಯಿಯಿಂದ ೩,೫೦೦ ರುಪಾಯಿಗಳ ವರೆಗೆ ಕಡಿಮೆ ಲಾಭದಲ್ಲಿ ಮಾರಟ ಮಾಡುತ್ತ ಸಮಾಜ ಸೇವೆಯನ್ನೂ ಎಲೆಮರೆಯ ಕಾಯಿಯಾಗಿ ಅವರು ಮಾಡುತ್ತಿದ್ದಾರೆ. ಕೇಳಿದರೆ ‘ಇದು ಉಪಜೀವನ ನನಗೆ’ ಎನ್ನುವಷ್ಟು ವಿನೀತಭಾವ.

ಸದ್ಯ ಪತ್ರಿಕೋದ್ಯಮ ವಿಭಾಗಕ್ಕೆ ಸಂಬಂಧಿಸಿದ ಪಾಠೋಪಕರಣ, ಮಹನೀಯರು, ಛಾಯಾಪತ್ರಿಕೋದ್ಯಮದ ಬೆಳವಣಿಗೆಗೆ ಕಾರಣೀಭೂತರಾದ ವಿಜ್ನಾನಿಗಳು, ಅನ್ವೇಷಿಕರು ಹಾಗು ನಾಡಿನ ಪತ್ರಿಕಾ ಶ್ರೀಮಂತಿಕೆಯನ್ನು ಬಿಂಬಿಸುವ ಸಂಚಿಕೆಗಳ ಫೊಟೋ ಫ್ರೇಂ ತಯಾರಿಸುವಲ್ಲಿ ನಿರತರಾಗಿದ್ದಾರೆ. ಸಹಾಯಕಾರಾಗಿ ಉಷಾ, ಅವಿನಾಶ ಮತ್ತು ಶಂಕರ ಚೆನ್ನವೀರಯ್ಯ ಅವರ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ. ಪತ್ನಿ ಸೌ.ಲೀಲಾವತಿ ಅವರಿಗೆ ಪ್ರೇರಣೆಯಾಗಿದ್ದಾರೆ.

ಮನಸ್ಸು ಮಾಡಿದ್ದರೆ ಚೆನ್ನವೀರಯ್ಯ ಯಾವುದಾದರೊಂದು ಕಾರ್ಖಾನೆಯಲ್ಲಿ ಉದ್ಯೋಗಿಯಾಗಿ ಸಹಜ ಜೀವನ ನಡೆಸಬಹುದಾಗಿತ್ತು. ಆದರೆ ಈ ಸಾಹಸಕ್ಕೆ ಕೈಹಾಕಿ ಹೋರಾಟದ ಬದುಕು ತಮ್ಮದಾಗಿಸಿಕೊಂಡಿದ್ದಾರೆ. ಅಸಾಮಾನ್ಯ ಜನರಿಂದಲೇ ಈ ಜಗತ್ತಿನಲ್ಲಿ ಬದಲಾವಣೆ ಸಾಧ್ಯವಿದೆ; ಸಾಮಾನ್ಯ ಜನರಿಂದಲ್ಲ ಎಂಬ ಮಾತನ್ನು ಅವರ ಬದುಕು ಸಾಕ್ಷೀಕರಿಸುತ್ತದೆ. ಅವರಿಗೆ, ಅವರ ಮೌಲ್ಯಯುತ ಹೋರಾಟದ ಬದುಕಿಗೆ ಸಂಪದ ಬಳಗದಿಂದ ನಮ್ಮದೊಂದು ಆತ್ಮೀಯ ಪುಟ್ಟ ಅಭಿನಂದನೆ ಈ ಲೇಖನ.