ಚೆಲುವು ಮೂಡಲು

ಚೆಲುವು ಮೂಡಲು

ಕವನ

ಚೆಲುವು ಮೂಡಲು ಮನದೆ

ಹಾಡು ಗರ್ಭವ ಸೇರೆ

ಮಿಲನ ರೂಪದಿ ನಲಿಯೆ

ದೇಹ ಸುಖಿಸುತ ಕೂಡೆ

 

ತನುವು ಸಾಗಿತು ಹೀಗೆ

ಸಪ್ನಲೋಕದಿ ನಡೆಯೆ

ಮೌನ ಮರೆಯುತ ಹೋಗೆ

ಹೊಸತು ಸೃಷ್ಟಿಯ ಸೆರೆಯೆ

 

ಒಂಟಿ ಮಾತದು ಜಾರೆ

ಕೂಡಿ ಮನಸೊಳು ಹಾಡೆ

ಇರುವ ಕಾಲವು ಉರುಳೆ

ಒಲವ ಸೊಬಗೊಳು ಇಳೆಯೆ

 

ವಯಸು ಮಾಗಿತು ನೋಡೆ

ಹಾಡು ಹರಟೆಯು ಕಳೆಯೆ

ಕೊಡವು ತುಂಬುತ ಹೊರಡೆ

ಬೇರೆ ಯಾನಕೆ ನಡೆಯೆ

***

ಗಝಲ್

ಹರಸಿ ಸಾಗಿರಿ ಹಿರಿಯರೆಲ್ಲರು ಬದುಕ ಕಟ್ಟಿಹ ಒಲವೊಳು

ನಮಿಸಿ ಬಾಗಿರಿ ಕಿರಿಯರೆಲ್ಲರು ಉಸಿರ ತಟ್ಟಿಹ ಒಲವೊಳು

 

ಕೊಳೆಯ ತೊಳೆಯುತ ಸಾಗಿರೆಲ್ಲರು ಮತ್ತೆ ಸಂಶಯವೇತಕೊ

ವಿಷಯ ಕಲಿಯುತ ಬಾಳಿರೆಲ್ಲರು ಜ್ಞಾನ ಇಟ್ಟಿಹ ಒಲವೊಳು

 

ನಿಶೆಯ ಹೊಂದದೆ ಬದುಕಿರೆಲ್ಲರು ವಿಷಮ ಚೈತ್ರವು ಏತಕೆ

ವಶಕೆ ಸಿಗದೆ ದುಡಿಯಿರೆಲ್ಲರು ಬದುಕ ಕೊಟ್ಟಿಹ ಒಲವೊಳು

 

ಕನಸ ದೇಶದಿ ನೋಡಿಯೆಲ್ಲರು ನನಸು ಬಾರದೆ ಇರುವುದೆ

ಹಸಿರ ಲೋಕದಿ ಹಾಡಿರೆಲ್ಲರು ಜೀವ ಹುಟ್ಟಿಹ ಒಲವೊಳು

 

ನೋಡಿರೆಲ್ಲರು ಭವದ ಸುತ್ತಲು ಮನದಿ ಸವಿಯಿದೆ ಈಶನೆ

ಮೇನೆಯಲ್ಲಿಯೆ ಮಲಗಿರೆಲ್ಲರು ಬಯಕೆ ನೆಟ್ಟಿಹ ಒಲವೊಳು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

 

ಚಿತ್ರ್