ಚೆಲುವು ಸುನೀತ
ಇದು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು “ಶ್ರೀನಿವಾಸ" ಕಾವ್ಯನಾಮದಲ್ಲಿ ಬರೆದಿರುವ ಎರಡು ಕವನ ಸಂಕಲನಗಳ ಸಂಯುಕ್ತ ಪುಸ್ತಕ. ಮೊದಲ ಪ್ರಕಟಣೆ: ೧೯೩೧ರಲ್ಲಿ “ಚೆಲುವು" ಮತ್ತು ೧೯೪೬ರಲ್ಲಿ “ಸುನೀತ”.
“ಚೆಲುವು" ಸಂಕಲನದಲ್ಲಿ ೧೪ ಕವನಗಳಿವೆ. ಎಲ್ಲವೂ ಮನಮುಟ್ಟುವ ಕವನಗಳು. “ಬೆಳವನ ಹಕ್ಕಿ” ಎಂಬ ಕವನದ ಆರಂಭದ ಸಾಲುಗಳು ಹೀಗಿವೆ: ತೋಪಿನ ಮರದಲಿ ಮೊಳಗಲು ತೊಡಗಿವೆ ಬೆಳವನ ಹಕ್ಕಿ ಸಖಿ. ಓಪನ ಓಪಳ ಕೂಗಿದು ಜಗದಲಿ ಹಳೆ ಕಾಲದ ಕೂಗು. (ಎರಡನೆಯ ಚರಣ) ಕೂಯೆನ್ನುವುದಿದು ಕೂಯೆನ್ನುವುದದು ಅರೆ ಅರೆ ಚಣಬಿಟ್ಟು; ಆಯವರಿತು ಬರಬರುತ ಅಂತರವ ಮರೆಯಿಸಿ ಮೊರೆಯುವವು. ಹೀಗೆ, ಎರಡು ಬೆಳವನ ಹಕ್ಕಿಗಳ “ಕೂ ಕೂ ಕೂ ಕೂ” ಸ್ವರಮೇಳ ಕೇಳುವಾಗಿನ ಭಾವತರಂಗಗಳನ್ನು ಅಕ್ಷರರೂಪದಲ್ಲಿ ಇಳಿಸುತ್ತಾ ಕವಿ ಬದುಕಿಗೊಂದು ಸಂದೇಶ ನೀಡಿದ್ದಾರೆ.
“ಮುರಿದುಬಿದ್ದ ವೀರಗಲ್ಲು" ಎಂಬುದು ಆ ಕಲ್ಲನ್ನು ನೋಡಿದಾಗ ಕವಿಯ ಮನದಲ್ಲಿ ಚಿಮ್ಮಿದ ಭಾವಗಳ ಸರಮಾಲೆ. ಅದು ಆರಂಭವಾಗುವುದು ಈ ಸಾಲುಗಳಿಂದ: “ನಿನ್ನ ಹೆಸರು ಏನು ವೀರ? ಮುನ್ನ ಯಾವ ಕಾಲದಲ್ಲಿ ಇನ್ನು ಯಾವ ಸಾಹಸದಲಿ, ಜೀವ ನನ್ನದಲ್ಲವೆಂದು ನೋವು ನನಗೆ ಸದರ ಎಂದು ಸಾವದಾಡೆಯನ್ನು ಹೊಕ್ಕು, ಊರಜನರ ಮನವನುಲಿಸಿ ವೀರನಹುದು ಇವನು ಎನಿಸಿ ಯಾರ ಕಣ್ಣ ನೀರು ಹರಿಸಿ ಅಮರನಾದೆ ನೀ?”
ಕವನದ ಮುಂದಿನ ಸಾಲುಗಳು ಆತ ಯಾವ ಕಾರಣದಿಂದ ಮಡಿದಿರಬಹುದು? ಅವನ ಕೊನೆಯ ಕ್ಷಣಗಳು ಹೇಗಿರಬಹುದು? ಆಗ ಅವನ ತಾಯಿ, ತಂದೆ, ಮಡದಿ ಯಾವ ರೀತಿ ದುಃಖಿಸಿರಬಹುದು? ಊರ ಜನರು ಯಾವ ರೀತಿ ಮರುಗಿರಬಹುದು? ಎಂಬುದನ್ನೆಲ್ಲ ಚಿತ್ರಿಸಿವೆ. "ಊರಿಗಾಗಿ ಜೀವವಿತ್ತ ವೀರನೆಂದು ಗ್ರಾಮವೆಲ್ಲ ಸೇರಿ ಮೆಚ್ಚಿ ಅತ್ತು ಮರುಗಿ; ಶೂರನೆಂದು ಹಾಡಿ, ಹೂವ ಹಾರಗಳನು ಹೇರಿ, ಬಳಿಯ ಊರುಗಳಲಿ ಹೊಗಳಿ ಮೆರೆಸಿ ಇಲ್ಲಿ ಮಣ್ಣು ಮಾಡಿ, ಹೆಸರು ನಿಲ್ಲಲೆಂದು ಕತೆಯ ಕೆತ್ತಿ, ಕಲ್ಲ ನೆಲಸಿ, ಒಲವಗುಡಿಯ ಅಂದೆ ಸಮೆದರು” ಎಂದು ದಾಖಲಿಸುತ್ತದೆ. ನಂತರದ ಸಾಲುಗಳು, "ಈಗ ಆ ವೀರನ ವೀರಗಾಥೆಯ ಬಲ್ಲ ಜನತೆಯಿಲ್ಲ; ಸ್ಮಾರಕದ ಕಲ್ಲು ಮುರಿದು ಬಿದ್ದಿದೆ; ಅಂದು ನಿನ್ನ ಒಡಲು ಅಳಿದ ರೀತಿಯಲ್ಲಿಯೇ ಈಗ ನಿನ್ನ ಕೀರ್ತಿ ಅಳಿದಿದೆ” ಎಂಬುದನ್ನೂ ಸಾರುತ್ತವೆ.
“ನೀಲಗಾರ ಮಾದ” ಕವನವು ಇತರರಂತೆ “ಯಾಸ ಹಾಕಬೇಕು” ಎಂಬ ಹೈದರಾಲಿ ಸುಲ್ತಾನನ ಒತ್ತಡಕ್ಕೆ ಬಗ್ಗದೆ, “ನನ್ನನ ನಮ್ಮ ಅವ್ವ ಮಾರ್ಯಮ್ಮನಿಗೆ ಮೀಸಲು ಮಾಡಿ ಕೊಟ್ಟವಳೆ; ಸಿದ್ಯೋರ ದೇವರಿಗೆ ನಾ ಯಾಸ ಹಾಕಿದ್ರೆ ಗಾಶಿ ಮಾಡ್ಯಾಳು ಮಾರ್ಯಮ್ಮ" ಎಂದು ನೇರಾನೇರ ಉತ್ತರವಿತ್ತ ಧೀಮಂತನ ಕಥನ. “ಚಿಕ್ಕ ಮಲ್ಲಮ್ಮ" ಎಂಬ ನೀಳ್ಗವನ ನಮ್ಮ ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತದೆ. ಇದು ಕ್ರೂರಿಗಳಿಂದ "ಹೇಸಿದ ಮೆಯ್ಯಿ” ಅನ್ನು ಕೆಂಡದ ಕುಂಡಕ್ಕೆ ನಡೆದು ಹೋಗಿ, ಬಲಿಗೊಟ್ಟು ಅಮರಳಾದ ತಾಯಿಯೊಬ್ಬಳ ಕಥೆ.
"ಸುನೀತ" ಸಂಕಲನದಲ್ಲಿವೆ ಮೂವತ್ತು ಕವನಗಳು. ಇದರಲ್ಲಿರುವ “ಡ್ಯೂಕ್ - ಸ್ಯಾಂಡಿ ಸಂವಾದ” ಒಡೆಯ - ಸೇವಕನ ಸಂವಾದವನ್ನು ನವಿರಾದ ಭಾಷೆಯಲ್ಲಿ ತೆರೆದಿಡುವ ಕವನ. ನಾಗೋಜಿ ದೀಕ್ಷಿತ, ವಾಲ್ಟೇರ್ ಮಾತು, ಆಚಾರ್ಯ - ಗಾಣಿಗ ಸಂವಾದ, ಬರ್ನಾರ್ಡ್ ಷಾ ಮಾತು, ದೊರೆ ದಳಪತಿ, ರಾಯಪಾಲು, ಮೂರು ಕರು, ವೀಣೆಯ ಕೊಟ್ಟಿಗೆ - ಈ ಕವನಗಳು, ಅನಿರೀಕ್ಷಿತ ತಿರುವುಗಳನ್ನು ಒಳಗೊಂಡಿದ್ದು, ಕವನಗಳ ಸಂವಹನ ಸಾಧ್ಯತೆಗೆ ಅತ್ಯುತ್ತಮ ನಿದರ್ಶನಗಳು.
ಕೃಷ್ಣ ಭಕ್ತೆ "ಮೀರಾ" ಮತ್ತು ಶಿವಪಾರ್ವತಿಯರ ಕುರಿತಾದ “ಹಲಸಂಗಿ ಜಕ್ಕವ್ವ” ಮತ್ತು ದಕ್ಷಿಣ ಅಮೇರಿಕದ ಒಂದು ಅಳಿದ ನಾಗರಿಕತೆಯ ದೈವದ ಬಗೆಗಿನ “ಕ್ವೆಟ್-ಜಲ್ ಕೊವಾಟಲಿ” -ಇವು ನೀಳ್ಗವನಗಳು. ಮೂರನೇ ಕವನ ಆ ದೈವಕ್ಕೆ ಪ್ರಾಣಿಬಲಿ ಕೊಡುವ ಪರಿಪಾಠ ಒಬ್ಬ ಸುಧಾರಕನಿಂದಾಗಿ ಹೂಹಣ್ಣಿನ ಪೂಜೆಯಾಗಿ ಬದಲಾದ ಸಂದರ್ಭವನ್ನು ಕವಿ ಊಹಿಸಿ ರಚಿಸಿದ್ದು.