ಚೆಸ್ ಒಲಿಂಪಿಯಾಡ್ ನಲ್ಲಿ ಭಾರತದ ಕ್ರೀಡಾಪಟುಗಳ ದರ್ಬಾರ್ !

ಚೆಸ್ ಒಲಿಂಪಿಯಾಡ್ ನಲ್ಲಿ ಭಾರತದ ಕ್ರೀಡಾಪಟುಗಳ ದರ್ಬಾರ್ !

ಕಳೆದ ಕೆಲವು ದಿನಗಳ ಹಿಂದೆ ಹಂಗೇರಿ ದೇಶದಲ್ಲಿ ಚೆಸ್ ಒಲಿಂಪಿಯಾಡ್ ನಡೆಯುತ್ತಿತ್ತು; ಆ ಕ್ರೀಡಾಕೊಟ ಮುಕ್ತಾಯಗೊಂಡಿತು. ಈ ಒಲಿಂಪಿಯಾಡ್ ನಲ್ಲಿ ನಮ್ಮ ದೇಶದ ಉದಯೋನ್ಮುಖ ಕ್ರೀಡಾಪಟುಗಳು ಅಮೋಘ ಪ್ರದರ್ಶನ ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಎರಡು ಚಿನ್ನದ ಪದಕಗಳೊಂದಿಗೆ ನಮ್ಮ ಯುವ ಪ್ರತೀಭೆಯರು ಮುಂದೊಂದು ದಿನ ತಾವು ಚೆಸ್ ದಿಗ್ಗಜರಾಗುವ ಎಲ್ಲ ಲಕ್ಷಣಗಳನ್ನು ತೋರಿಸಿದ್ದಾರೆ.

ಅಂದಹಾಗೆ, ಚೆಸ್ ಆಟವು ಭಾರತದಲ್ಲಿ ಹುಟ್ಟಿಕೊಂಡಿತ್ತು; ಹಾಗೆಯೇ, ಭಾರತೀಯ ಚೆಸ್ ತಂಡಗಳು ಸತತವಾಗಿ ಟ್ರೋಫಿಗಳನ್ನು ಗೆದ್ದು ಬರುತ್ತ, ಈಗ ಬೃಹತ್ ಡಬಲ್ ವಿಜಯವನ್ನು ಗಳಿಸಿದವು. ಓಪನ್ ತಂಡ ಮತ್ತು ಮಹಿಳಾ ತಂಡಗಳೆರಡೂ ಚಿನ್ನ ಗೆದ್ದವು; ನಾಲ್ವರು ಆಟಗಾರರು ವೈಯಕ್ತಿಕ ಚಿನ್ನವನ್ನೂ ಗೆದ್ದುಕೊಂಡರು. ಚೆಸ್ ದೈತ್ಯವಾದ ಸೊವಿಯತ್ ಒಕ್ಕೂಟದ ಅವಸಾನದ ನಂತರ, 'ಡಬಲ್'ಅನ್ನು 2018 ರಲ್ಲಿ ಚೀನಾ ತಂಡ ಒಮ್ಮೆ ಮಾತ್ರ ಸಾಧಿಸಿತ್ತು. ಈಗ ಭಾರತ ತಂಡವು ಅದನ್ನು ಬಹಳ ಜಿದ್ದಾಜಿದ್ದಿಯ ರೀತಿಯಲ್ಲಿ ಗೆದ್ದುಕೊಂಡಿತು.

ಓಪನ್ ತಂಡವು 11 ಪಂದ್ಯಗಳಲ್ಲಿ 21 ಅಂಕಗಳನ್ನು ಗಳಿಸಿತು; ಉಜ್ಬೇಕಿಸ್ತಾನ್ ವಿರುದ್ಧ ಕೇವಲ ಒಂದು ಡ್ರಾ ಪಂದ್ಯದೊಂದಿಗೆ 193 ತಂಡಗಳ ಜಟಾಪಟಿಯಲ್ಲಿ 4 ಅಂಕಗಳನ್ನು ಗಾಳಿಸುತ್ತ ಅಗ್ರಸ್ಥಾನ ಪಡೆಯಿತು. ಮಹಿಳೆಯರ ತಂಡವು 19 ಅಂಕಗಳನ್ನು ಗಳಿಸಿತು; ಪೋಲೆಂಡ್‌ ತಂಡದ ವಿರುದ್ದ ಒಂದು ಸೋಲು ಮತ್ತು US ತಂಡದ ವಿರುದ್ಧ ಡ್ರಾದೊಂದಿಗೆ, 180 ತಂಡಗಳ ಸೆಣಸಾಟದಲ್ಲಿ ಉತ್ತಮ ಸ್ಥಾನ ಪಡೆಯಿತು. ಓಪನ್ ಆಟಗಾರರಾದ ಗುಕೇಶ್ ಮತ್ತು ಅರ್ಜುನ್ ಏರಿಗೈಸಿ ಅವರು ಅತ್ಯುತ್ತಮ ಪ್ರದರ್ಶನ ನೀಡುತ್ತಾ, ಇಬ್ಬರೂ ಚಿನ್ನದ ಪದಕಗಳನ್ನು ಗೆದ್ದರು!

ಅವರೊಂದಿಗೆ, ಇತರ ಆಟಗಾರರಾದ ಪ್ರಜ್ಞಾನಂದ, ವಿದಿತ್ ಗುಜರಾತಿ, ಮತ್ತು ಹರಿಕೃಷ್ಣ ತಮ್ಮ ಉತ್ತಮ ಪ್ರದರ್ಶನ ನೀಡಿದರು. ಮಹಿಳಾ ತಂಡದ ಆಟಗಾರ್ತಿ, ದಿವ್ಯ ದೇಶಮುಖ್ ಮತ್ತು ವಾಂತಿಕ ಅಗರ್ವಾಲ್ ಇಬ್ಬರೂ ಚಿನ್ನದ ಪದಕದ ಬೇಟೆ ಸಫಲವಾಗಿ ಆಡಿದರು. ಇತರ ಮಹಿಳಾ ಕ್ರೀಡಾಪಟುಗಳಾದ ಹರಿಕಾ, ತಾನಿಯ ಸಚದೇವ, ಮತ್ತು ವೈಶಾಲಿ ಅವರು ತಮ್ಮ ಅಮೋಘ ಪ್ರದರ್ಶನ ನೀಡಿದರು.

18ನೇ ವರ್ಷದ ಗುಕೇಶ್ ಅವರು ಈ ವರ್ಷದ ನವೆಂಬರ್ ತಿಂಗಳಿನಲ್ಲಿ ಸಿಂಗಾಪುರದಲ್ಲಿ ನಡೆಯುವ ವಿಶ್ವ ಚಾಂಪಿಯನ್ ಶಿಪ್ ಪದವಿಗಾಗಿ ಈಗಿನ ವಿಶ್ವ ಚಾಂಪಿಯನ್ ಡಿಂಗ್ ಲಾರೆನ್ ವಿರುದ್ಧ ಆಡಲಿದ್ದಾರೆ. ಕಳೆದ ವಾರ ನಡೆದ ಚೆಸ್ ಒಲಿಂಪಿಯಾಡ್ ನಲ್ಲಿ ಗುಕೇಶ್ ಅವರು ಹತ್ತು ಪಂದ್ಯಗಳಲ್ಲಿ ಎಂಟು ಪಂದ್ಯಗಳನ್ನು ಗೆದ್ದು, ಎರಡರಲ್ಲಿ ಡ್ರಾ ಸಾಧಿಸಿದರು. ಅವರು ಚೀನಾದ ಆಟಗಾರ ವೀ ಯೀ ವಿರುದ್ಧ ಅತ್ಯಂತ ಕಠಿಣ ಆಟವನ್ನು ಆಡುತ್ತ ಚೆಸ್ ದಿಗ್ಗಜರನ್ನು ಚಕಿತಗೊಳಿಸಿದರು. ಒಂದು ವೇಳೆ, ಗುಕೇಶ್ ಅವರು ವೀ ಯೀ ಅವರನ್ನು ಸೋಲಿಸಿದರೆ, ಅವರು ಜಗತ್ತಿನ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

21 ವರ್ಷದ ಅರ್ಜುನ್ ಏರಿಗೈಸಿ ಅವರು ಈಗ ಜಗತ್ತಿನ ರ಼್ಯಾಂಕಿಂಗ್ ಪಟ್ಟಿಯಲ್ಲಿ ಮೂರನೆಯ ಸ್ಥಾನದಲ್ಲಿದ್ದಾರೆ; ಅವರು ನಿನ್ನೆ ನಡೆದ ಚೆಸ್ ಒಲಿಂಪಿಯಾಡ್ ನಲ್ಲಿ ಹನ್ನೊಂದು ಪಂದ್ಯಗಳಲ್ಲಿ ಒಂಬತ್ತು ಪಂದ್ಯವನ್ನು ಗೆದ್ದು, ಎರಡರಲ್ಲಿ ಡ್ರಾ ಸಾಧಿಸಿದರು. ಮಹಿಳಾ ತಂಡದ 18 ವರ್ಷದ ಆಟಗಾರ್ತಿ ದಿವ್ಯ ದೇಶಮುಖ್ ಅವರು ಹನ್ನೊಂದು ಪಂದ್ಯಗಳಲ್ಲಿ ಎಂಟು ಪಂದ್ಯಗಳನ್ನು ಗೆದ್ದು, ಉಳಿದ ಮೂರರಲ್ಲಿ ಡ್ರಾ ಸಾಧಿಸಿದರು. ಈ ಸಾಧನೆಯ ಬಳಿಕ ಅವರು ಜಗತ್ತಿನ ಹತ್ತು ಶ್ರೇಷ್ಠ ಮಹಿಳಾ ಚೆಸ್ ಕ್ರೀಡಾಪಟುಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿದರು. ಶೀಘ್ರದಲ್ಲಿ, ಅವರು ಚೆಸ್ ಗ್ರ್ಯಾಂಡ್ ಮಾಸ್ಟರ್ ಪದವಿ ಪಡೆಯುವ ಹಂತದಲ್ಲಿದ್ದಾರೆ.

ಪ್ರಪ್ರಥಮ ಬಾರಿಗೆ ಚೆಸ್ ಒಲಿಂಪಿಯಾಡ್ ಸ್ಪರ್ಧಿಸಿದ 21 ವರ್ಷದ ಆಟಗಾರ್ತಿ ವಾಂತಿಕ ಅಗರ್ವಾಲ್ ಅವರು ಒಂಬತ್ತು ಪಂದ್ಯಗಳಲ್ಲಿ 7.5 ಅಂಕಗಳನ್ನು ಪಡೆದು ತಮ್ಮ ಸಾಮರ್ಥ್ಯವನ್ನು ಎತ್ತಿ ತೋರಿಸಿದರು. ಸಹೋದರ-ಸಹೋದರಿಯರಾದ ವೈಶಾಲಿ ಮತ್ತು ಪ್ರಜ್ಞಾನಂದ ಊಹಿಸಿದಂತೆಯೇ ಉತ್ತಮ ಪ್ರದರ್ಶನ ನೀಡಿದರು. ಗ್ರ್ಯಾಂಡ್‌ಮಾಸ್ಟರ್ ಪ್ರಜ್ಞಾನಂದ ಚಿನ್ನ ಜಯಿಸಿರುವ ಪುರುಷರ ತಂಡದ ಅವಿಭಾಜ್ಯ ಅಂಗವಾಗಿದ್ದರೆ, ಪ್ರಜ್ಞಾನಂದರ ಹಿರಿಯ ಸಹೋದರಿ ವೈಶಾಲಿ ಮಹಿಳೆಯರ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. ಚೆಸ್‌ ಬೇಸ್‌-ಇಂಡಿಯಾ ಪೋಸ್ಟ್ ಮಾಡಿರುವ ವೀಡಿಯೊವೊಂದು ವೈರಲ್ ಆಗಿದ್ದು, ಇದರಲ್ಲಿ ಪ್ರಜ್ಞಾನಂದ, ವೈಶಾಲಿ ಹಾಗೂ ಅವರ ತಾಯಿ ನಾಗಲಕ್ಷ್ಮೀ ಒಟ್ಟಿಗೆ ಇರುವ ಚಿತ್ರವಿದೆ. ನಿಜವಾಗಿಯೂ ಹೆಮ್ಮೆಯ ತಾಯಿ ಎಂದು ಸಾಮಾಜಿಕ ಬಳಕೆದಾರರು ವೀಡಿಯೊದಲ್ಲಿ ಬರೆದಿದ್ದಾರೆ.

2022ರಲ್ಲಿ ನಡೆದ ಒಲಿಂಪಿಯಾಡ್ ನಲ್ಲಿ ಕೇವಲ ಒಂದೇ ಒಂದು ಕಂಚಿನ ಪದಕ ಗೆದ್ದು ದೇಶಕ್ಕೆ ನಿರಾಸೆ ಮೂಡಿಸಿದ್ದ ಚೆಸ್ ಆಟಗಾರರು, ಈ ವರ್ಷದ ಒಲಿಂಪಿಯಾಡ್ ನಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಪ್ರಸ್ತುತ ದಿನಗಳಲ್ಲಿ ನಮ್ಮ ದೇಶದಲ್ಲಿ 85 ಚೆಸ್ ಗ್ರ್ಯಾಂಡ್ ಮಾಸ್ಟರ್ಸ್ ಇದ್ದಾರೆ; ಅವುಗಳಲ್ಲಿ ಹೆಚ್ಚಿನವರು ಹದಿಹರೆಯದವರು. ಜಗತ್ತಿನ ಶ್ರೇಷ್ಠ 100 ಚೆಸ್ ಆಟಗಾರ ರ಼್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ 11 ಆಟಗಾರರು ಸ್ಥಾನ ಪಡೆದಿದ್ದಾರೆ; ಶ್ರೇಷ್ಠ 100 ಮಹಿಳಾ ಚೆಸ್ ಆಟಗಾರ ರ಼್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ 9 ವನಿತೆಯರು ತಮ್ಮ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಹಾಗೆಯೇ, ಶ್ರೇಷ್ಠ 100 ಕಿರಿಯ ಚೆಸ್ ಆಟಗಾರ ರ಼್ಯಾಂಕಿಂಗ್ ಪಟ್ಟಿಯಲ್ಲಿ ಭಾರತದಿಂದ ಬೃಹತ್ ಸಂಖ್ಯೆಯಲ್ಲಿ 18 ಕಿರಿಯ ಆಟಗಾರರು ತಮ್ಮ ಸ್ಥಾನವನ್ನು ಪಡೆದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಸದ್ಯಕ್ಕೆ, ನಮ್ಮ ದೇಶದಲ್ಲಿ 33,000 ಅಂತಾರಾಷ್ಟ್ರೀಯ ಮಟ್ಟದ ಚೆಸ್ ಆಟಗಾರರು ಇದ್ದಾರೆ.

ನಮ್ಮ ದೇಶದಲ್ಲಿ ಚೆಸ್ ಆಟವು ವಿಶ್ವನಾಥನ್ ಆನಂದ್ ಅವರು ವಿಶ್ವ ಚಾಂಪಿಯನ್ ಆದ ಬಳಿಕ ಬಹಳ ಜನಪ್ರಿಯತೆ ಗಳಿಸಿತ್ತು; ಬಳಿಕ ಚೆಸ್ ಆಟದ ಗೀಳು ನಿಧಾನವಾಗಿ ಕಡಿಮೆಯಾಗಿತ್ತು. ಈಗ ಪುನಃ ಚೆಸ್ ಆಟ ಜನಪ್ರಿಯತೆ ಪಡೆಯುತಿದೆ. ಚೆಸ್ ಆಟದ ರಾಷ್ಟೀಯ ಸಂಸ್ಥೆಯಾದ: 'ಚೆಸ್‌ ಬೇಸ್‌-ಇಂಡಿಯಾ'ದ ಯೂಟ್ಯೂಬ್ ಚಾನೆಲಿನಲ್ಲಿ 1.9 ಮಿಲಿಯನ್ ಸಬ್ಸ್ ಕ್ರೈಬರ್ಸ್ ಇದ್ದಾರೆ.

ಕ್ರಿಕೆಟಿನಲ್ಲಿ ಐಪಿಎಲ್ ಇದ್ದಹಾಗೆ, ಮುಂದೆ 'ಚೆಸ್ ಪ್ರೀಮಿಯರ್ ಲೀಗ್' ಬರುವ ಲಕ್ಷಣಗಳು ಈಗ ಕಾಣಸಿಗುತ್ತಿದೆ; ಈ ಕ್ರೀಡಾಕೂಟಕ್ಕೆ ಕೊರ್ಪೊರೇಟ್ ಗಳ ಬೆಂಬಲವೂ ಸಿಗಲಿದೆ ಎಂದು ವರದಿಗಳು ಬರುತ್ತಿವೆ. ಒಂದು ಮಾತು ಮಾತ್ರ ಸ್ಪಷ್ಟವಾಗಿ ಒಡೆದೆದ್ದು ಕಾಣಸಿಗುತ್ತಿದೆ. ನಿನ್ನೆ ವಿಜಯಶಾಲಿಯಾಗಿ ಬಂದ ಎಲ್ಲ ಚೆಸ್ ಆಟಗಾರರು ವಿಶ್ವನಾಥನ್ ಆನಂದ್ ಅವರಿಂದಲೇ ತರಬೇತು ಪಡೆದು ಬಂದಿರುವುದು ಗಮನಾರ್ಹ ವಿಷಯವಾಗಿದೆ. ಹಿಂದೆ ಗುರು, ಮುಂದೆ ಗುರಿ ಎಂಬಂತೆ ನಮ್ಮ ಯುವ ಆಟಗಾರರು ಆನಂದ್ ಅವರಿಂದ ತಾಲೀಮು ಪಡೆದು ಭವಿಷ್ಯದಲ್ಲಿ ಉತ್ತಮ ಆಟಗಾರರಾಗಲಿ ಎಂಬ ಶುಭ ಹಾರೈಕೆಗಳು

-ಶಿಕ್ರಾನ್ ಶರ್ಫುದ್ದೀನ್ ಎಂ., ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ