ಚೇತರಿಕೆಯ ಆಶಾವಾದ

ಚೇತರಿಕೆಯ ಆಶಾವಾದ

ಕೇಂದ್ರದ ಸಾಂಖ್ಯಿಕ ಮತ್ತು ಯೋಜನಾ ಜಾರಿ ಸಚಿವಾಲಯವು ಮಂಗಳವಾರ, ೨೦೨೧-೨೨ನೇ ಸಾಲಿನ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ದೇಶವು ಈ ಹಣಕಾಸು ಸಾಲಿನಲ್ಲಿ ಶೇ ೮.೭ ಜಿಡಿಪಿಯನ್ನು ದಾಖಲಿಸಿದೆ. ಹಿಂದಿನ ಸಲಕ್ಕೆ ಹೋಲಿಸಿದರೆ ಈ ಕೊನೆಯ ತ್ರೈಮಾಸಿಕದಲ್ಲಿ ಜಿಡಿಪಿ ಪ್ರಮಾಣ ಕಡಿಮೆಯಾಗಿದೆ. ಜಾಗತಿಕ ಪೂರೈಕೆ ಸರಪಳಿಯಲ್ಲಿ ಸಮಸ್ಯೆ ಆಗಿರುವುದು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಹೆಚ್ಚಳ ಹಾಗೂ ಕೈಗಾರಿಕೆಗಳಿಗೆ ಬೇಕಾಗುವ ಕಚ್ಚಾವಸ್ತುಗಳ ದರ ಏರಿಕೆ ಮುಂತಾದ ಕಾರಣದಿಂದ ಹೀಗಾಗಿದೆ ಎಂದು ತಜ್ಞರು ವಿವರಿಸಿದ್ದಾರೆ. ಆದರೂ ಒಟ್ಟಾರೆಯಾಗಿ ಈ ವಿತ್ತ ವರ್ಷದಲ್ಲಿ ಕಳೆದ ಸಾಲಿಗಿಂತ ಹೆಚ್ಚಿನ ಪ್ರಮಾಣದ ಜಿಡಿಪಿ ಗೋಚರಿಸಿರುವುದು ಸ್ವಲ್ಪ ಸಮಾಧಾನಕರ. ಕರೊನಾ ಕಾರಣದಿಂದಾಗಿ ೨೦೨೦-೨೧ನೇ ಸಾಲಿನಲ್ಲಿ -೬.೬% ಜಿಡಿಪಿ ದಾಖಲಾಗುವ ಮೂಲಕ ದಿಗಿಲುಗೊಳಿಸಿತ್ತು. ದೇಶದ ಜಿಡಿಪಿ ಹೀಗೆ ಋಣಾತ್ಮಕ ಪ್ರವೃತ್ತಿ ದಾಖಲಿಸಿದ್ದು ಕಳೆದ ೪೦ ವರ್ಷಗಳಲ್ಲಿ ಮೊದಲ ಸಲವಾಗಿತ್ತು. ಕರೊನಾ ಸಾಂಕ್ರಮಿಕವು ಬಹುತೇಕ ಎಲ್ಲಾ ವಲಯಗಳನ್ನು ಬಾಧಿಸಿದ್ದರಿಂದಾಗಿ ಮತ್ತು ಕರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ವಿಧಿಸಿದ್ದರಿಂದಾಗಿ ಭಾರತ ಎಂದಲ್ಲ, ಅಮೇರಿಕ, ಫ್ರಾನ್ಸ್, ಬ್ರಿಟನ್ ಹೀಗೆ ಅಭಿವೃದ್ಧಿ ಹೊಂದಿದ ದೇಶಗಳೂ ಸೇರಿದಂತೆ ಬಹುತೇಕ ಎಲ್ಲಾ ದೇಶಗಳ ಹಣಕಾಸಿನ ಸ್ಥಿತಿಯೂ ಇದೇ ಆಗಿತ್ತು. ಚೀನಾ ಮಾತ್ರ ಈ ಮಾತಿಗೆ ಅಪವಾದವಾಗಿತ್ತು. ಈಗ ಭಾರತದ ಜಿಡಿಪಿ ಸ್ವಲ್ಪ ಹೆಚ್ಚಿದೆ ಎಂದು ನಿರಾಳವಾಗಿ ಕೂಡುವ ಸನ್ನಿವೇಶ ಇಲ್ಲ ಎಂಬುದನ್ನು ಮರೆಯಬಾರದು. ಹಾಗೆ ನೋಡಿದರೆ ಸಾಂಖ್ಯಿಕ ಮತ್ತು ಯೋಜನಾ ಜಾರಿ ಸಚಿವಾಲಯ ಮತ್ತು ಭಾರತೀಯ ರಿಜರ್ವ್ ಬ್ಯಾಂಕ್ ಅಂದಾಜಿಸಿದ್ದಕ್ಕಿಂತ ಕಡಿಮೆ ಪ್ರಮಾಣದ ಜಿಡಿಪಿ ಕಂಡು ಬಂದಿದೆ. ಹೀಗಿದ್ದರೂ, ಕರೊನಾ ಕಾಲಘಟ್ಟದ ಸಂಕಷ್ಟಗಳನ್ನು ಮೀರಿ ಆರ್ಥಿಕತೆ ಚೇತರಿಕೆಯತ್ತ ಸಾಗಿರುವುದು ಗಮನಾರ್ಹ. ಮೂರು ತಿಂಗಳಿಂದ ಜಾರಿಯಲ್ಲಿರುವ ರಷ್ಯಾ-ಯೂಕ್ರೇನ್ ಸಮರ ಸಹ ಜಾಗತಿಕ ಹಣಕಾಸು ವ್ಯವಸ್ಥೆ ಮೇಲೆ ಬೇರೆ ಬೇರೆ ರೀತಿಗಳಲ್ಲಿ ಪ್ರತಿಕೂಲ ಪರಿಣಾಮ ಬೀರಿದ್ದು, ಭಾರತವೂ ಇದರಿಂದ ಹೊರತಾಗಿಲ್ಲ. ಈ ಸನ್ನಿವೇಶವನ್ನು ಭಾರತವು ಸೂಕ್ತ ರಾಜತಾಂತ್ರಿಕ ಹಾಗೂ ವ್ಯಾವಹಾರಿಕ ಜಾಣ್ಮೆಯಿಂದ ನಿಭಾಯಿಸುತ್ತಿರುವುದರಿಂದಾಗಿ ಇದ್ದುದರಲ್ಲಿ ಸ್ವಲ್ಪ ಪರವಾಗಿಲ್ಲ ಎನ್ನಬಹುದಾಗಿದೆ.

ಇದೇ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಹೆಚ್ಚಳದಿಂದಾಗಿ ಹಣದುಬ್ಬರ ಪ್ರಮಾಣ ಸಹ ಹೆಚ್ಚಿದ್ದು, ಚಿಂತೆಯ ವಿಷಯವಾಗಿದೆ. ಕೆಲ ದಿನಗಳಿಂದ ಹಿಂದಿನವರೆಗೂ ಇಂಧನ ದರ ಸಹ ಜನರ ಜೇಬು ಸುಡುತ್ತಿತ್ತು. ಈಗೇನೋ ಕೇಂದ್ರ ಸರ್ಕಾರ ಇಂಧನದ ಮೇಲಿನ ಅಬಕಾರಿ ಸುಂಕದಲ್ಲಿ ಇಳಿಕೆ ಮಾಡಿದ್ದರಿಂದ, ಲೀಟರ್ ಪೆಟ್ರೋಲ್ ಬೆಲೆ ೧೦೦ ರೂ. ಆಸುಪಾಸು ಬಂದಿದೆ. ಹೀಗಿದ್ದರೂ, ಕೆಲ ಅಗತ್ಯ ವಸ್ತುಗಳ ದರ ಮೇಲೇರಿಕೊಂಡೇ ಇದೆ. ಕರೊನಾ ಕಾಲದ ಸಂಕಷ್ಟಗಳಿಂದ ಎಲ್ಲ ಜನರೂ ಇನ್ನೂ ಹೊರಬಂದಿಲ್ಲ. ಜೀವನ ಮಟ್ಟ ಸ್ವಲ್ಪ ಇಳಿದರೆ ಅವರಿಗೆ ಅಷ್ಟು ನೆರವಾಗುತ್ತದೆ. ಈ ಹೊರೆಯನ್ನು ಇಳಿಸುವತ್ತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಂತಮ್ಮ ಪಾಲಿನ ಜವಾಬ್ದಾರಿಯನ್ನು ನಿಭಾಯಿಸಬೇಕು ಎನ್ನುವುದು ಜನರ ನಿರೀಕ್ಷೆ. 

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೧-೦೬-೨೦೨೨ 

ಚಿತ್ರ ಕೃಪೆ: ಅಂತರ್ಜಾಲ ತಾಣ