ಚೈತ್ರದ ಚರಮಗೀತೆ

ಚೈತ್ರದ ಚರಮಗೀತೆ

ಪುಸ್ತಕದ ಲೇಖಕ/ಕವಿಯ ಹೆಸರು
ಶಿಲ್ಪಾ ಮ್ಯಾಗೇರಿ
ಪ್ರಕಾಶಕರು
ವಿಶಾಲ ಪ್ರಕಾಶನ, ಕೊಪ್ಪಳ
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ: ೨೦೨೪

ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆಯುತ್ತಿದ್ದಾನೆ ಎನ್ನುತ್ತಾರೆ ಕೃತಿಯ ಪ್ರಕಾಶಕರಾದ’ ಜಿ.ಎಸ್. ಗೋನಾಳ. ಅವರು ಶಿಲ್ಪಾ ಮ್ಯಾಗೇರಿ ಅವರ ‘ಚೈತ್ರದ ಚರಮಗೀತೆ’ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

“ಇತ್ತೀಚೆಗೆ ಮನುಷ್ಯನು ಬಹಳಷ್ಟು ಸ್ವಾರ್ಥಿಯಾಗುತ್ತಿದ್ದಾನೆ. ಬರೀ ನಾನು, ನನ್ನಿಂದ, ನನಗಾಗಿ, ಎಂಬ ಭ್ರಮೆಯಲ್ಲಿ ತೇಲುತ್ತಿದ್ದಾನೆ. ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆಯುತ್ತಿದ್ದಾನೆ. ಅಲ್ಲದೇ ಸಮೃದ್ಧಿ, ಸಾಧನೆ, ಗುರಿ, ಯಶಸ್ಸು, ನೆಮ್ಮದಿಗಳಿಂದ ಬದುಕನ್ನು ಕಟ್ಟಿಕೊಳ್ಳಲು ಹೆಣಕಾಡುತ್ತಿದ್ದಾನೆ. ಯಾಕೆಂದರೆ ಮಾನವರಲ್ಲಿ ಇಂದು ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಜನಪದ, ವಚನ ಸಾಹಿತ್ಯ, ವೈಚಾರಿಕತೆ, ಓದು, ಬರಹ ಮೊದಲಾದ ಮಾನವೀಯ ಸಂಬಂಧ ಮತ್ತು ಮೌಲ್ಯಗಳನ್ನು ತೊರೆಯುತ್ತಿದ್ದಾನೆ ಅವುಗಳೂ ಸಹ ನಮ್ಮಿಂದ ಕಣ್ಮರೆಯಾಗುತ್ತಲಿವೆ. ಇಂತದ ಹೊತ್ತಿನಲ್ಲಿ ಶ್ರೀಮತಿ ಶಿಲ್ಪ ಮ್ಯಾಗೇರಿ ಅವರು ತಮ್ಮ ಸ್ವರಚಿತ ನಾಲ್ಕನೇ ಸಂಕಲನ "ಚೈತ್ರದ ಚರಮಗೀತೆ" ಸಂಕಲನವನ್ನು ನಮ್ಮ ವಿಶಾಲ ಪ್ರಕಾಶನದ ಮೂಲಕ ಪ್ರಕಟಿಸಲು ಕೇಳಿದಾಗ ಈ ಕೃತಿಯನ್ನು ಪ್ರಕಟಣೆ ಮಾಡಲು ನಿರ್ಧರಿಸಿದ್ದೇವೆ.

ಶ್ರೀಮತಿ ಶಿಲ್ಪ ಮ್ಯಾಗೇರಿ ಅವರು ಮೂಲ ಕೊಪ್ಪಳದವರು. ಕಾಳಿದಾಸ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿ ಪಿ.ಯು.ಸಿ. ಅಭ್ಯಾಸ ಶ್ರೀ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಓದುತ್ತಿರುವಾಗಲೇ ಕವಿತೆ, ಚುಟುಕುಗಳನ್ನು, ಬರೆಯುವ ಹವ್ಯಾಸ ರೂಢಿಸಿಕೊಂಡು ಇಂದು ಒಬ್ಬ ಉತ್ತಮ ಕವಯತ್ರಿಯಾಗಿ ಹೊರಹೊಮ್ಮಿದ್ದಾರೆ. ಶ್ರೀಮತಿ ಶಿಲ್ಪಾರವರು 2005ರಲ್ಲಿ ಕೊಪ್ಪಳದ ಅಮೀನಪುರದಲ್ಲಿದ್ದ ನಮ್ಮ ತಿಂಗಳ ವಾರ್ತ ಪತ್ರಿಕೆ ಮತ್ತು ವಿಶಾಲ ಪ್ರಕಾಶನದ ಕಾರ್ಯಾಲಯಕ್ಕೆ ತಾವು ಬರೆದ ಕವಿತೆಗಳನ್ನು ಪ್ರಕಟಣೆಗೆ ಕೊಡಲು ಮೊದಲನೇ ಸಲ ಬಂದಿದ್ದರು. ಆಗ ಅವರಲ್ಲಿನ ನಯ, ವಿನಯ, ಪ್ರೀತಿ, ವಿಶ್ವಾಸ, ಸೌಜನ್ಯ, ಹಿರಿಯರಿಗೆ ತೋರುವ ಗೌರವಯುತವಾದ ಸಂಸ್ಕಾರವನ್ನು ನೋಡಿದಾಗಲೇ ಶಿಲ್ಪರವರು ಮುಂದೊಂದು ದಿನ ಉತ್ತಮ ಕವಿಗಳ ಸಾಲಿನಲ್ಲಿ ಸೇರ್ಪಡೆಯಾಗುತ್ತಾರೆ ಏನನ್ನಾದರೂ ಸಾಧಿಸುತ್ತಾರೆ ಎಂದು ನನಗನಿಸಿತ್ತು.

ಅದೇ ಭರವಸೆಯಿಂದಲೇ ಅವರನ್ನು ನಮ್ಮ ಹಲವಾರು ಕಾರ್ಯಕ್ರಮಗಳಲ್ಲಿ ಸಂಘಟನೆಗಳಲ್ಲಿ ಸದಸ್ಯರಾಗಿ, ಪದಾಧಿಕಾರಿಗಳಾಗಿ ನೇಮಕ ಮಾಡಿಕೊಂಡಿದ್ದೆವು. ಅವರು ನಮ್ಮ ಸಂಘಟನೆಯಲ್ಲಿ ಅತ್ಯುತ್ತಮ ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತ ವಿವಿಧ ಕಾರ್ಯಕ್ರಮಗಳಲ್ಲಿ ಶಿಸ್ತಿನಿಂದ ಪಾಲ್ಗೊಳ್ಳುತ್ತಿದ್ದರು. ಆದ್ದರಿಂದ ಅವರು ಕೊಪ್ಪಳ ಜಿಲ್ಲೆಯಲ್ಲಿ ಒಳ್ಳೆಯ ಕವಯತ್ರಿಯಾಗಿ ಎಲ್ಲರ ಮನ ಗೆದ್ದಿದ್ದಾರೆ. ಇಂದು ಗದಗದಲ್ಲಿ ಶ್ರೀಯುತ ರಮೇಶ್ ಮತ್ತು ಮಕ್ಕಳ ಜೊತೆ ವಾಸವಿದ್ದು ಓದಬೇಕು ಏನಾದರೂ ಸಾಧನೆ ಮಾಡಬೇಕೆಂಬ ಹಂಬಲದಿಂದ ಬಿ.ಈಡಿ. ಹಾಗೂ ಎಂ.ಎ. ಸ್ನಾತಕೋತ್ತರ ಪದವಿಯನ್ನು ಮುಗಿಸಿಕೊಂಡು ಈಗ ಗದುಗಿನ ಶ್ರೀ ತೋಂಟದಾರ್ಯ ಮಠದ ಶ್ರೀ ಬಸವೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಉಪನ್ಯಾಸಕಿರಾಗಿ ಸೇವೆಸಲ್ಲಿಸುತ್ತಿದ್ದು ಜೊತೆಗೆ ಗದಗ ಜಿಲ್ಲೆ ಮತ್ತು ಕೊಪ್ಪಳ ಜಿಲ್ಲೆಯ ಭರವಸೆಯ ಕವಿ ಮತ್ತು ಲೇಖಕಿಯಾಗಿ ಗುರುತಿಸಿಕೊಂಡಿದ್ದು ಹೆಮ್ಮೆ ಪಡುವ ಸಂಗತಿಯಾಗಿದೆ.

ಶ್ರೀಮತಿ ಶಿಲ್ಪಾರವರ ಕಾವ್ಯವು ನಾಡಿನೆಲ್ಲೆಡೆ ಪಸರಿಸಲಿ ಅವರ ಸಾಹಿತ್ಯವು ಮಹಿಳಾ ಲೋಕದಲ್ಲಿ ಗಟ್ಟಿಯಾದ ಧ್ವನಿಯಾಗಿನಿಲ್ಲಲಿ ಎಂಬ ಮಹದಾಸೆಯಿಂದ ಅವರ ಈ ಕೃತಿಯನ್ನು ವಿಶಾಲ ಪ್ರಕಾಶನದಿಂದ ಪ್ರಕಟಿಸಿ ನಿಮ್ಮ ಮುಂದೆ ಇಟ್ಟಿದ್ದೇವೆ. ವಿಶಾಲ ಪ್ರಕಾಶನದ 43ನೇ ಕೃತಿಯಾದ 'ಚೈತ್ರದ ಚರಮಗೀತೆ' ಕರುನಾಡಿನಲ್ಲಡೆ ಓದುಗರ ಗಮನ ಸೆಳೆದು ಪ್ರಶಂಸೆಗೆ ಪಾತ್ರವಾದರೆ ನಮ್ಮ ವಿಶಾಲ ಪ್ರಕಾಶನದ ಶ್ರಮ ಸಾರ್ಥಕವಾದಂತೆ.”

ಈ ಕವನ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ ಡಾ ವೈ.ಎಂ. ಯಾಕೊಳ್ಳಿ ಪ್ರಾಚಾರ್ಯರು ಪದವಿ ಪೂರ್ವ ಕಾಲೇಜು ಸವದತ್ತಿ ಇವರು ಹಾಗೂ ಬೆನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ್ದಾರೆ ಪತ್ರಕರ್ತರೂ, ಅದ್ಭುತ ಅನುವಾದಕರೂ ಆದ ಶ್ರೀಮತಿ ಮಂಜುಳಾ ಕಿರುಗಾವಲು ಅವರು. ಪುಸ್ತಕಕ್ಕೆ ಸುಂದರವಾದ ಮುಖಪುಟದ ವಿನ್ಯಾಸ ಮಾಡಿದ್ದಾರೆ ಶ್ರೀಮತಿ ರೂಪಶ್ರೀ ಕಲ್ಲಿಗನೂರ ಇವರು. ಶಿಲ್ಪಾ ಅವರ ಕವನಗಳು ಓದುಗರಲ್ಲಿ ಹೊಸ ಭರವಸೆಯನ್ನು ಹುಟ್ಟಿಸುವಂತವು. ಈ ಪುಟ್ಟ ಪುಸ್ತಕ ಕಾವ್ಯಾಸಕ್ತರು ಕೊಂಡು ಓದಲು ಸಹಕಾರಿ.