ಚೈತ್ರ ನಾಟ್ಯೋತ್ಸವ
ಬನ್ನಿ ಬನ್ನಿರಿ ಬನ್ನಿ ಚಿಣ್ಣರೆ!
ಹಾಡಿ ಕುಣಿಯುವ ಬನ್ನಿರಿ!
ಸುಗ್ಗಿ ಬಂದಿದೆ ಹಿಗ್ಗು ತಂದಿದೆ
ನೋಡಿ ನಲಿಯುವ, ಬನ್ನಿರಿ!
೧
ನೋಡಿರೆಲ್ಲೆಡೆ ಹೇಗೆ ತೂಗಿದೆ
ಹೊನ್ನ ಬೆಳಕಿನ ಹಂದರ!
ಹೊಳೆದು ಥಳಥಳ ತುಂಬಿ ತುಳು-
ಕುವ ಸುಗ್ಗಿ ಸಂಜೆಯ ಸಿಂಗರ!
ಮೇಲೆ ಬಾಂದಳ ಕೆಳಗೆ ನೆಲಜಲ
ಎಲ್ಲ ಬಣ್ಣದ ಅಂಗಳ!
ಕೇಳಿ ಮಂಜುಳ ಸ್ವರದಿ ಮಂಗಳ
ಮೊಳಗುತಿದೆ ಖಗ ಸಂಕುಲ!
ದಿನದ ಹಾಡಿಗೆ ದನಿಯ ಕೂಡಿಸಿ
ಹಾಡಿ ಕುಣಿಯುವ ಬನ್ನಿರಿ!
ನುಡಿಸಿ ಮೋದದ ಕಿನ್ನರಿ !
೨
ಅಲ್ಲಿ ಆ ಕಡೆ ಮುಗಿಲ ಮಕ್ಕಳು
ನಗು ನಗುತ ಆಕಾಶದಿ
ಆಡುತಿರುವರು ಓಡುತಿರುವರು
ನೆರೆದು ನವನವ ವೇಷದಿ!
ಚೈತ್ರ ಪುಳಕಿತ ಜಗವೆ ನಲಿದಿದೆ
ಹೊಸ ಹಸಿರ ಉಲ್ಲಾಸದಿ!
ಎಲ್ಲು ಘಮಘಮ! ಪುಷ್ಪ ಸಂಭ್ರಮ
ವರ್ಣ ಗಾಯನ ವೈಭವ!
ನವ ವಸಂತನ ನಲ್ಮೆಯುತ್ಸವ!
ಬನ್ನಿ ನಾವೊಡಗೂಡುವ !
ಹಾಡಿ ನಲಿನಲಿದಾಡುವ !
೩
ಮೇಲೆ ಅಗೊ! ಕಂಗೊಳಿಸುತಿರುವಾ
ಇಂದ್ರಧನು ಸುರ ತೋರಣ!
ಗಗನ ಚುಂಬಿತ ಚೆಮ್ಮುಗಿಲ ರಥ
ಬನ್ನಿರೆನುತಿದೆ ಕ್ಷಣ ಕ್ಷಣ!
ಬಿಚ್ಚು ಬೆಳಕಲಿ ರೆಕ್ಕೆ ಪುಚ್ಚದ
ಹುಚ್ಚು ಹಿಗ್ಗಿನ ರಿಂಗಣ!
ಮಣ್ಣಿನೊಡಲಲಿ ಹುಲ್ಲು ಹಸಿರಲಿ
ಎಲ್ಲು ಗುಂಜನ ಕೂಜನ!
ಹೊಮ್ಮಿ ಹರಿದಿದೆ ಕೋಟಿ ಕೊರಳ
ಪ್ರಫುಲ್ಲ ಜಗದದೆ ಗಾಯನ!
ಹಾಡುತಿವೆ ಜಡ ಚೇತನ!
. ೪
ಕಿರಣ ಕೇಸರ ರಾಗ ರಂಜಿತ
ಗಗನ ಮುಖ ನಳನಳಿಸಿದೆ!
ಹಂಸ ಗಣ ಅರವಿಂದ ಬಂಧುರ
ಹಾರ ವಕ್ಷದೊಳೆಸೆದಿದೆ!
ಪ್ರೀತಿ ಧಾರೆಯ ಅಮೃತ ವರ್ಷದಿ
ಧರೆಯ ಮೈಮನ ಮರೆಸಿದೆ!
ಭೂಮ ವ್ಯೋಮದ ಭವ್ಯ ಮಿಲನದ
ದಿವ್ಯ ಕ್ಷಣವಿದು! ನಮಿಸುವ!
ಹರ್ಷ ಪುಳಕದ ಕೇಕೆ ಕುಣಿತದ
ಸ್ವಸ್ತಿ ಘೋಷವ ಮೊಳಗುವ!
ಧನ್ಯ ಮೌನದಿ ಮುಳುಗುವ!
೫
ಮಣ್ಣಿನೊಲುಮೆಯೆ ಹೊಮ್ಮಿ
ಎಲ್ಲೆಡೆ ಹೂ ಹಸಿರು ಹಚ್ಚನೆಯಲಿ
ಕರೆಯುತಿದೆ ಕುಣಿಕುಣಿದು ಎಲ-
ರೊಳು ಹೊಂದಳಿರು ತೆನೆತೆನೆ
. ಯಲಿ!
ನೀಲ ಕುವಲಯ ಕಿರಣ ಕಿಸಲಯ
ಕೊನರುತಿದೆ ಬನಬನದಲಿ!
ನಾವೆ ಪಾತರಗಿತ್ತಿ ಮಧುಕರ
ನಲ್ಮೆಯರಗಿಳಿ ಗೀಜಗ!
ಜಗದೊಡಲ ಸೊಗಸೊಗವ
ಸವಿಯುವ!
ಮಮತೆ ಮಡಿಲೊಳಗಾಡುವ!
ನಂದನದ ಸವಿಯೂಡುವ!
೬
ಎತ್ತ ನೋಡಿದರತ್ತ ಕಾನನ
ಹಚ್ಚ ಹಸಿರು ವಸುಂಧರ!
ಹಕ್ಕಿಯಕ್ಕರೆ ಉಕ್ಕಿ ಹರಿಯುವ
ಮೌನ ಗಿರಿ ವನ ಕಂದರ!
ರಂಗು ರಂಗಿನ ಕನಸ ಕಾಣುವ
ಝರಿ ತರಂಗಿಣಿ ಬಂಧುರ!
ಕೊಳದಿ ನೈದಿಲೆ ಬನದಿ ಕಣಗಿಲೆ
ಎಲ್ಲ ನಮ್ಮನೆ ಕರೆದಿದೆ!
ಮರದಿ ಕೋಗಿಲೆ ದಿವದ ಬಾಗಿಲೆ
ತೆರೆದಿದೆನ್ನುತ ಹಾಡಿದೆ!
ಚೆಲುವು ಎಲ್ಲೆಡೆಯಾಡಿದೆ!
೭
ಮಾವು ಬೇವಿನ ತಳಿರು ತೊಂಗಲು
ಮಿಂದು ಚಿನ್ನದ ಹೊಳೆಯಲಿ
ಬೃಹದಶ್ವತ್ಥದ ಸಾಸಿರೆಲೆ ಎಲೆ
ಕುಣಿಕುಣಿದು ಎಲರಲೆಯಲಿ
ಗಿಳಿ ನವಿಲ ಜತೆ ನಲಿನಲಿವ ಪರಿ
ನೋಡಿ! ಬೆಟ್ಟದ ಸೆರಗಲಿ!
ನೆಗೆದು ಛಂಗನೆ ಟೊಂಗೆ ಟೊಂಗೆಗೆ
ಒಂದನಿನ್ನೊಂದಟ್ಟುತ
ಮುಟ್ಟುವಾಟವ ಆಡುತಿಹವಿಗೊ
ಕೋತಿ ಹೆಮ್ಮರ ತುದಿಯಲಿ!
ಸೊಕ್ಕಿ ಸುಗ್ಗಿಯ ಖುಶಿಯಲಿ!
೮
ಬನ್ನಿ ಬನದೊಳು ಬೇರು ಬಿಳಲು-
ಯ್ಯಾಲೆಯಲಿ ಓಲಾಡುವ!
ಪೊದರು ಪೊದರೊಳಗವಿತು
ಓಡುತ ಕಣ್ಣಮುಚ್ಚಲೆಯಾಡುವ!
ಭೃಂಗ ಭೃಂಗ ಪತಂಗ ವೃಂದದ
ರಂಗಿನಾಟವ ನೋಡುವ!
ನೋಡಿ ನಲಿಯುವ ಹಾಡಿ ಕುಣಿ-
ಯುವ ಆಡುತೆಲ್ಲರು ಮುದದಲಿ!
ಕೂಡಿ ನೆಲಜಲ ಪೊಡವಿಯಲ್ಲಾ
ಜೀವ ಕೋಟಿಯೆ ಕೆಳೆಯಲಿ!
ದೇವನಾಡುಂಬೊಲದಲಿ!
೯
ನಲಿಯಲಲ್ಲವೆ ನಾವು ಎಲ್ಲರು
ಇಲ್ಲಿ ಮಣ್ಣಿನ ಕುಣಿಯೊಳು
ದಾಟಿ ಯಾವುದೊ ತಿಮಿರ ಸಾಗರ
ಬಂದ ಬೆಳಕಿನ ಮಣಿಗಳು!
ಜಗವೆ ನಲಿವುದು ಅರಳಿ ಕ್ಷಣ ಕ್ಷಣ
ನಮ್ಮ ಕಣ್ಣಿನ ಬೆಳಕೊಳು!
ಸುಗ್ಗಿ ಬಂದಿದೆ ಹಿಗ್ಗು ತಂದಿದೆ
ಸಗ್ಗವೇ ಇಳೆಗಿಳಿದಿದೆ!
ಇದ್ದುದೆಲ್ಲವು ಎದ್ದು ಝಗಝಗ
ಹಬ್ಬದುಡಿಗೆಯ ತೊಟ್ಟಿವೆ!
ಚೈತ್ರ ಜಾತ್ರೆಯ ತೇರಿಗೆಲ್ಲವು
ಕೂಡಿ ಹೊರಟಿವೆ ಒಟ್ಟಿಗೆ!
- ರಘುರಾಮ ರಾವ್, ಬೈಕಂಪಾಡಿ
