ಚೈನಾ - ಜಪಾನ್ ಪ್ರಸಿದ್ಧ ಕಥೆಗಳು

ಚೈನಾ - ಜಪಾನ್ ಪ್ರಸಿದ್ಧ ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಅನುವಾದ : ನೀಲತ್ತಹಳ್ಳಿ ಕಸ್ತೂರಿ
ಪ್ರಕಾಶಕರು
ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಜೆ ಸಿ ರಸ್ತೆ, ಬೆಂಗಳೂರು ೫೬೦೦೦೨
ಪುಸ್ತಕದ ಬೆಲೆ
ರೂ. ೫೦.೦೦, ಮುದ್ರಣ: ೨೦೦೭

ವಿವಿದ ಲೇಖಕರಿಂದ ಬರೆಯಲ್ಪಟ್ಟ ಚೈನಾ ಮತ್ತು ಜಪಾನ್ ದೇಶದ ಪ್ರಸಿದ್ಧ ಕಥೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಖ್ಯಾತ ಅನುವಾದಕರಾದ ನೀಲತ್ತಹಳ್ಳಿ ಕಸ್ತೂರಿ ಇವರು. ಈ ಪುಸ್ತಕವನ್ನು ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯವರು ಹೊರತಂದಿದ್ದಾರೆ. ಈ ಕೃತಿಯಲ್ಲಿ ೮ ಕಥೆಗಳಿವೆ. 

ಮೊದಲ ಕಥೆ ಹಾನನ ಅಕೃತ್ಯ ಇದರ ಮೂಲ ಲೇಖಕರು ಷಿಗೆ ನಯೋಯ. ಇವರು ಆಧುನಿಕ ಜಪಾನಿನ ಅತಿ ಪ್ರಮುಖ ಹಾಗೂ ಪ್ರಭಾವಶಾಲಿ ಲೇಖಕರಲ್ಲಿ ಒಬ್ಬರು. ಅವರ ಬರಹಗಳಲ್ಲಿ ಅಸಾಧಾರಣವಾದ ಒಂದು ಚೆಲುವು ಹಾಗೂ ಸೂಕ್ಷ್ಮ ದೃಷ್ಟಿಗಳ ಮಿಲನವಿದೆ. ಅವರ ಹಲವಾರು ಕಥೆಗಳು ಕೇವಲ ಕಾಲ್ಪನಿಕ. ಆದರೆ ಅವರ ‘ಕಿನೋಸಾತಿಯಲ್ಲಿ' ಮುಂತಾದ ವೈಶಿಷ್ಟ್ಯಪೂರ್ಣ ಕೃತಿಗಳು ಸಾವಿನ ಮೇಲಿನ ಚಿಂತನೆಯನ್ನು ಒಳಗೊಂಡು ಆತ್ಮಕಥಾ ರೂಪದಲ್ಲೇ ಇವೆ. ಷಿಗಾ ಅವರ ಅಪಾರ ಯಶಸ್ಸು ಇನ್ನಿತರ ಅನೇಕ ಬರಹಗಾರರನ್ನು ‘ನಾನು, ನನ್ನದು' ರೀತಿಯ ಕಾದಂಬರಿಯ ಕಡೆ ತಿರುಗಿಸಿದೆ. ಇಪ್ಪತ್ತನೆಯ ಶತಮಾನದ ಜಪಾನೀ ಸಾಹಿತ್ಯದಲ್ಲಿ ಈ ರೀತಿಗೆ ಪ್ರಮುಖ ಸ್ಥಾನವುಂಟು. ಹಾನನ ಅಕೃತ್ಯ ಎಂಬುದು ಇವರು ೧೯೧೩ರಲ್ಲಿ ಬರೆದ ‘ಹಾನ್ ನೊ ಹಾಗ್ ಚಾಯ್' ಎನ್ನುವ ಕಥೆಯ ಅನುವಾದ.

‘ನರಕದ ಪರದೆ’ ಎಂಬುದು ಒಂದು ನೀಳ್ಗಥೆಯಾಗಿದೆ. ಇದರ ಲೇಖಕರು ಅಕುಟಗಾವಾ ರೈಯು ನೊಸುಕೆ. ಇವರು ೧೯೧೮ರಲ್ಲಿ ಬರೆದ ‘ಜಿಗೊ ಕುಹೆನ್' ಎನ್ನುವ ಕಥೆಯ ಅನುವಾದ. ಮೂರನೇ ಕಥೆ ‘ಮಚ್ಚೆ’. ಕವಾಬಾಟ ಯಸುನಾರಿ ಇವರ ಪೂರ್ಣ ಪಕ್ವ ಕಾಲದ ಸೃಷ್ಟಿ ‘ಮಚ್ಚೆ’ ಸ್ತ್ರೀಯ ಮನೋವಿಶ್ಲೇಷಣೆಯ ಪಾಂಡಿತ್ಯವನ್ನು ವ್ಯಕ್ತಗೊಳಿಸುತ್ತದೆ. ಆತನ ಬರಹದ ವಿಶಿಷ್ಟ ಗುಣ ಈ ಕಥೆಗಿದೆ. ಇದು ಅವರು ೧೯೪೦ರಲ್ಲಿ ಬರೆದ ‘ಹೀಕುರೆ ನೊ ನಿಕ್ಕಿ' ಎನ್ನುವ ಕಥೆಯ ಅನುವಾದ.

ಈ ಕಥಾಸಂಕಲನದ ನಾಲ್ಕನೇ ಕಥೆ ‘ಪಾತಿವ್ರತ್ಯ' ಇದರ ಮೂಲ ಬರಹಗಾರರ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇದನ್ನು ವಿನೋದ ಹಾಗೂ ಚುಟುಕಗಳ ಜನಪ್ರಿಯ ಪುಸ್ತಕಗಳಲ್ಲಿರುವ ಒಂದು ಪುಟ್ಟ ಘಟನೆಯೊಂದರಿಂದ ಇದನ್ನು ಆರಿಸಲಾಗಿದೆ. ಒಬ್ಬ ವಿಧವೆ ಗೌರವಾರ್ಥವಾಗಿ ಒಂದು ಕಮಾನನ್ನು ನಿರ್ಮಿಸುವ ಸಂದರ್ಭದಲ್ಲಿ ಆಕೆ ಹೇಗೆ ಸೇವಕನೊಬ್ಬನಿಂದ ಮೋಹಿತಳಾಗಿ, ಗೌರವವನ್ನು ಕಳೆದುಕೊಂಡು, ನೇಣು ಹಾಕಿಕೊಂಡಳೆಂಬುದನ್ನು ಈ ಕಥೆ ತಿಳಿಸುತ್ತದೆ. ಐದನೇ ಕಥೆ ಹುಲಿ. ಇದನ್ನು ಬರೆದದ್ದು ಯೆನ್ ಎಂಬಾತ. ಆತನ ‘ಲಿಫು' ಎಂಬ ಕಥೆಯ ಅನುವಾದ ಇದು.

ಆರನೇ ಕಥೆ ಬಿಳೀ ಕೋತಿ. ಈ ಕಥೆಯನ್ನು ಬರೆದವರು ಯಾರೆಂದು ತಿಳಿಯದು. ಇದರ ಶಿರೋನಾಮೆ ವಿಚಿತ್ರವಾಗಿದೆ. ‘ಚಿಯಾಂಗ್ ತ್ಸುಂಗನ ಬಿಳೀ ಕೋತಿಯ ಕಥೆಗೆ ಪುರವಣಿ' ಚಿಯಾಂಗ್ ತ್ಸುಂಗ್ (೫೧೯-೫೯೪) ಬಿಳೀ ಕೋತಿಯ ಮಗನನ್ನು  ಮರೆಮಾಡಿಟ್ಟು ಕಾಪಾಡಿದವನು. ಊಯಾಂಗ್ ಹಸೂನ ಚೀನಾದ ಅತ್ಯಂತ ಸುಂದರ ಬರವಣಿಗೆಗಾರರಲ್ಲಿ ಒಬ್ಬ. ಅವನು ಕೋತಿಯ ಹಾಗೆ ವಿಕಾರವಾಗಿ ಇದ್ದ. ಅವನನ್ನು ಬಿಳೀ ಕೋತಿಯ ಮಗ ಎನ್ನುತ್ತಿದ್ದರು. ಅವನನ್ನು ಅಣಕಿಸಲು ಬರೆದದ್ದು ಕಥೆ. ಎಂದರೆ, ಈ ಕಥೆ ಏಳನೇ ಶತಮಾನದ ಪ್ರಾರಂಭದಲ್ಲಿ ಬರೆದದ್ದಿರಬಹುದು. ಚೀನೀ ದಳಪತಿ ತನ್ನ ಹೆಂಡತಿಯನ್ನು ಬಿಳೀ ಕೋತಿಗೆ ಸೋತದ್ದರ ಅವಮಾನವನ್ನೇ ಮುಖ್ಯವಾಗಿ ಮಾಡಿ ಕಥೆ ಬದಲಾಯಿಸಿದೆ. ಕಾಡುಜನರ ಸಂಪ್ರದಾಯಗಳಿಗಾಗಿ ಬೇರೆ ಆಧಾರಗಳನ್ನು, ಟಾಂಗ್ ಹಾಗೂ ಸೂಂಗ್ ವರದಿಗಳನ್ನು ಉಪಯೋಗಿಸಿದೆ. ಕ್ಯಾಂಗ್ ಟುಂಗ್ ಗುಡ್ಡಗಳಲ್ಲಿ ಹೆಂಡತಿಯನ್ನು ಕಳೆದುಕೊಂಡ ಚೀನಿ ದಳಪತಿಯೊಬ್ಬನ ಇನ್ನೊಂದು ಕಥೆ ಇಂಥದ್ದೇ ಇದೆ.

ಏಳನೇ ಕಥೆ ‘ಚುಂಗ್ ಷಾನನ ತೋಳ'. ಈ ವಿಚಿತ್ರ ಸುಂದರ ಕಥೆಯನ್ನು ಬರೆದವನು ಸೂಂಗ್ ಮನೆತನದ ಹೆಸೆಲಿಯಂಗ್. ಕೆಲವು ಕಡೆ ಮಿಂಗ್ ಮನೆತನದ ಮಾ ಚಾಂಗ್ಲಿಯ ಹೆಸರನ್ನು ಈ ಕಥೆಗಾರ ಎಂದು ಹೇಳಿದೆ. ಬಹುಷಃ ಹಸೆಯ ಬರಹವನ್ನು ಮಾ ತಿದ್ದಿರಬಹುದು. ಶೈಲಿ ಸ್ವಲ್ಪ ಆಡಂಬರದ್ದು. ಹಳೆಯ ಕಾಲದ್ದು. ತೋಳವು ಸುಸಂಸ್ಕೃತ ಮನುಷ್ಯನ ಹಾಗೆ ಮಾತಾಡಿದಂತೆ ಬರೆದಿದೆ. ಅನುವಾದಕರು ಅದನ್ನು ಅನುಕರಿಸಿಲ್ಲ. ಆದರೆ ಮನುಷ್ಯರು ತಮಗೆ ಗೆಳೆಯರೂ ನಂಬಿಕೆಯ ಸೇವಕರೂ ಆದ ಪ್ರಾಣಿಗಳಿಗೆ ತೋರುವ ಕೃತಜ್ಞತೆಯನ್ನು ಕಥೆಗಾರ ಟೀಕಿಸಿರುವ ಸ್ವತಂತ್ರ ರೀತಿಗಾಗಿ ಇದನ್ನು ಮನ್ನಿಸಬಹುದು. ಎಂಟನೇ ಹಾಗೂ ಕೊನೆಯ ಕಥೆ ‘ಮೂವರು ಕುರುಡರು' ಬಗ್ಗೆ ಯಾವುದೇ ಮಾಹಿತಿಯನ್ನು ಈ ಪುಸ್ತಕದಲ್ಲಿ ನೀಡಿಲ್ಲ. ಸುಮಾರು ೧೧೫ ಪುಟಗಳ ಈ ಕಥಾ ಸಂಕಲನವನ್ನು ವಿದೇಶೀ ಕಥೆಗಳನ್ನು ಓದ ಬಯಸುವವರು ಅವಶ್ಯಕವಾಗಿ ಓದಬೇಕು.