ಚೊಕ್ಕವಾದ ಚಕ್ಕಡಿ

ಚೊಕ್ಕವಾದ ಚಕ್ಕಡಿ

ಕವನ

ಚೊಕ್ಕ ಗಾಡಿಯು ಮರದ ಬಂಡಿಯು

ನಕ್ಕು ನಲಿಯುತ ಸಾಗಿ ನಿಂತಿದೆ

ಸಿಕ್ಕ ಹುಲ್ಲನು ತೆಗೆದು ತುಂಬುತ ಬದುಕು ಸಾಗುತಿದೆ

ಪಕ್ಕ ಹೊಲವಿದೆ ಜಗ್ಗು ಹೊರಟಿದೆ

ರೊಕ್ಕ ಪಡೆಯುತ ಜೀವ ನಡೆದಿದೆ

ತಕ್ಕ ಮಟ್ಟಿಗೆ ಚೆಂದ ನೋಡಿರಿ ಹಳೆಯ ಸಾರೋಟು||

 

ರೈತ ಜೀವಿಗೆ ಸುಖದ ವಾಹನ

ನೈತಿಕತೆಯದು ಸಾರಿ ಹೇಳಿದೆ

ಭಾತಿಗೊಳ್ಳುತ ನಾಥನಪ್ಪಣೆ ಪಡೆದು ನಿಂತಿರಲು

ಗೀತೆ ಬರೆಯುತ ಹಾಡು ಹೇಳುತ

ಮಾತು ಮಾತಿಗು ಸುಮವು ಚೆಲ್ಲಿದೆ

ಗಾಥೆ ಚರಣದ ತುಂಬ ಕಂಡಿದೆ ದುಡಿಮೆ ವೈಭವವು...

 

ಮನೆಯ ಭಾಗ್ಯವು ಗಾಡಿ ಚಂದವು

ವನವ ತುಂಬಿದ ಹಸಿರ ಮಡಿಲದು

ತನುವ ನೆಮ್ಮದಿ ಬೀಗಿ ತಂದಿದೆ ಜಗದ ಹೊಳಪಿನಲಿ

ಮನದ ಮಾಳಿಗೆ ಸೋರಿ ನಿಂತಿದೆ

ಜನರ ಕಷ್ಟದ ಚಿತ್ರ ಮೂಡಿದೆ

ಸನಿಹ ಬಂದಿಹ ನೋವು ನಲಿವಿನ ಚೊಕ್ಕ ಮುದ್ರಣದಿ..

 

ಅವನಿಯೊಳಗೆಯೆ ದುಡಿದು ದಣಿಯುವ

ಪವನ ಮೂರ್ತಿಯ ಭಕ್ತದಾತನು

ದವನ ಪರಿಮಳ ಹರಡುವಂತೆಯೆ ಮಿಂಚಿ ನಿಂತಿಹನು

ಭವದ ದುಃಖ ಮೆಟ್ಟಿ ನಿಂತಿಹೆ

ತವಕದಿಂದಲಿ ಮುಂದೆ ಸಾಗುತ

ಬೆವರ ಹನಿಯದು ರುಧಿರ ಸಾರದಿ ಕೆಚ್ಚು ಮೆರೆದಿರಲು...

 

-ಅಭಿಜ್ಞಾ ಪಿ ಎಮ್ ಗೌಡ 

 

ಚಿತ್ರ್