ಚೋಟು ಮತ್ತು ದೈತ್ಯ

ಚೋಟು ಮತ್ತು ದೈತ್ಯ

ಕಾಡಿನ ಪಕ್ಕದಲ್ಲಿ ಒಬ್ಬ ಬಡ ಕೆಲಸಗಾರ ಪತ್ನಿಯೊಂದಿಗೆ ವಾಸ ಮಾಡುತ್ತಿದ್ದ. ಅವನಿಗೆ ಏಳು ಜನ ಮಕ್ಕಳು. ಅವನ ಕಿರಿಯ ಮಗ ಗಾತ್ರದಲ್ಲಿ ಬಹಳ ಸಣ್ಣವನು. ಹಾಗಾಗಿ ಎಲ್ಲರೂ ಅವನನ್ನು ಚೋಟು ಎಂದು ಕರೆಯುತ್ತಿದ್ದರು. ಅವನು ಬಹಳ ಜಾಣ.

ಆ ಕೆಲಸಗಾರನ ಗಳಿಕೆ ಅವನ ಕುಟುಂಬವನ್ನು ಸಾಕಲು ಸಾಕಾಗುತ್ತಿತ್ತು, ಅಷ್ಟೇ. ಒಂದು ವರುಷ ಆ ಪ್ರದೇಶದಲ್ಲಿ ದೊಡ್ಡ ಬರಗಾಲ ಬಂತು. ರೈತರಿಗೆ ಯಾವ ಬೆಳೆಯನ್ನೂ ಬೆಳೆಸಲಾಗಲಿಲ್ಲ. ಎಲ್ಲ ಕಡೆಯೂ ಆಹಾರವಿಲ್ಲದೆ ಹಾಹಾಕಾರ. ತನ್ನ ದೊಡ್ಡ ಕುಟುಂಬವನ್ನು ಹೇಗೆ ಸಾಕುವುದೆಂದು ಕೆಲಸಗಾರನಿಗೆ ಚಿಂತೆಯಾಯಿತು.

ಕೊನೆಗೊಂದು ದಿನ ಅವರ ಮನೆಯಲ್ಲಿ ತಿನ್ನಲು ಏನೂ ಇರಲಿಲ್ಲ. ಕೆಲಸಗಾರ ಮತ್ತು ಅವನ ಪತ್ನಿ ಮಕ್ಕಳನ್ನು ಮಲಗಿಸಿದರು. ಅನಂತರ ಮುಂದೇನು ಮಾಡುವುದೆಂದು ಪಿಸುಮಾತಿನಲ್ಲಿ ಮಾತಾಡುತ್ತಾ ಕುಳಿತರು. ಕೊನೆಗೆ ತಮ್ಮ ಮಕ್ಕಳನ್ನು ಮರುದಿನ ಕಾಡಿನಲ್ಲಿ ಬಿಟ್ಟು ಬರಲು ನಿರ್ಧರಿಸಿದರು. ಅವರನ್ನು ಅಲ್ಲಿ ಯಾರಾದರೂ ನೋಡಿ ಕರೆದೊಯ್ಯಬಹುದು ಎಂಬುದವರ ಆಶಯ.

ದೊಡ್ಡ ಪಾತ್ರೆಯೊಂದರ ಹಿಂದೆ ಅವಿತು ಕೂತು, ಅಪ್ಪ-ಅಮ್ಮ ಪಿಸುಗುಟ್ಟಿದ ಮಾತುಗಳನ್ನೆಲ್ಲ ಚೋಟು ಕೇಳಿಸಿಕೊಂಡ. ಮರುದಿನ ಮುಂಜಾನೆ ಎದ್ದು ಮನೆ ಹತ್ತಿರದ ನದಿ ದಡಕ್ಕೆ ಹೋದ ಚೋಟು. ಅಲ್ಲಿ ಹಲವಾರು ಬಿಳಿ ಕಲ್ಲುಗಳನ್ನು ಜೇಬಿನಲ್ಲಿ ತುಂಬಿಸಿಕೊಂಡು ಮನೆಗೆ ಬಂದ. ಅನಂತರ ಅವರ ತಂದೆ ಅವರನ್ನೆಲ್ಲ ಕಾಡಿನಲ್ಲಿ ತಿರುಗಾಟಕ್ಕೆ ಕರೆದೊಯ್ದಾಗ, ಚೋಟು ಹಾದಿಯಲ್ಲಿ ಅಲ್ಲಲ್ಲಿ ಒಂದೊಂದೇ ಬಿಳಿಕಲ್ಲು ಎಸೆಯುತ್ತಾ ಬಂದ.

ಅವರ ತಂದೆ ಮಕ್ಕಳನ್ನು ಕಾಡಿನಲ್ಲಿ ಬಹಳ ಒಳಕ್ಕೆ ಮರಗಳು ದಟ್ಟವಾಗಿ ಬೆಳೆದಿದ್ದಲ್ಲಿಗೆ ಕರೆದೊಯ್ದ. ಅಲ್ಲಿ ಮಕ್ಕಳು ಓಡಾಡುತ್ತಾ, ಮರಗಳನ್ನು ಹತ್ತಿ ಇಳಿಯುತ್ತಾ ಆಟವಾಡಿದರು. ಆಗ ಅವರ ತಂದೆ ಸದ್ದಿಲ್ಲದೆ ಅಲ್ಲಿಂದ ಹೊರಟು ಹೋದ.

ಸಂಜೆಯಾದಾಗ ಕಾಡಿನಲ್ಲಿ ಕತ್ತಲು ಕವಿಯಿತು. ತಂದೆ ಇಲ್ಲದ್ದನ್ನು ಕಂಡು ಮಕ್ಕಳಿಗೆಲ್ಲ ಗಾಬರಿಯಾಯಿತು. ಆಗ ಚೋಟು ಅವರಿಗೆ ಧೈರ್ಯ ನೀಡಿ, ತನ್ನ ಹಿಂದೆ ಬರಬೇಕೆಂದು ಅವರಿಗೆಲ್ಲ ಹೇಳಿದ. ತಾನು ಬೆಳಗ್ಗೆ ಗುರುತಿಗಾಗಿ ಎಸೆದಿದ್ದ ಬಿಳಿ ಕಲ್ಲುಗಳ ಜಾಡು ಹಿಡಿದು ಅವರನ್ನೆಲ್ಲ ಮನೆಗೆ ಕರೆ ತಂದ.

ಕೆಲಸಗಾರ ಮತ್ತು ಅವನ ಪತ್ನಿ ತಮ್ಮ ಮಕ್ಕಳ ಗತಿ ಏನಾಗಿರಬಹುದೆಂದು ಚಿಂತಿಸುತ್ತ ಮನೆಯಲ್ಲಿ ಕುಳಿತಿದ್ದರು. ಆಗ ಏಳೂ ಮಕ್ಕಳು ಮನೆಗೆ ಮರಳಿದ್ದನ್ನು ಕಂಡು ಅವರಿಗೆ ಸಂತೋಷವಾಯಿತು. ಅವರು ಮಕ್ಕಳನ್ನೆಲ್ಲ ಅಪ್ಪಿಕೊಂಡರು.

ಒಂದೆರಡು ವಾರಗಳಲ್ಲಿ ಪರಿಸ್ಥಿತಿ ಇನ್ನೊಮ್ಮೆ ಬಿಗಡಾಯಿಸಿತು. ಅವರ ಮನೆಯಲ್ಲಿ ಆಹಾರಧಾನ್ಯ ಏನೂ ಉಳಿದಿರಲಿಲ್ಲ. ಆ ದಿನ ರಾತ್ರಿ ಅಪ್ಪ-ಅಮ್ಮ ಪುನಃ ಪಿಸುಗುಟ್ಟುತ್ತಿದ್ದಾಗ ಚೋಟು ಎಲ್ಲವನ್ನೂ ಮರೆಯಲ್ಲಿ ಕುಳಿತು ಕೇಳಿಸಿಕೊಂಡ. ಪುನಃ ಅಪ್ಪ-ಅಮ್ಮ ತಮ್ಮನೆಲ್ಲ ಕಾಡಿನಲ್ಲಿ ತ್ಯಜಿಸಲಿದ್ದಾರೆಂದು ತಿಳಿದ. ಮರುದಿನ ಅವನು ನದಿ ದಡಕ್ಕೆ ಹೋಗಲೆಂದು ಬೇಗನೆ ಎದ್ದ. ಆದರೆ, ಮನೆಯ ಬಾಗಿಲಿಗೆ ಭದ್ರವಾಗಿ ಚಿಲಕ ಹಾಕಿದ್ದ ಕಾರಣ ಅವನಿಗೆ ಹೊರ ಹೋಗಲು ಸಾಧ್ಯವಾಗಲಿಲ್ಲ.

ಮರುದಿನ ಮುಂಜಾನೆ ಅವರ ಅಮ್ಮ ಮಕ್ಕಳಿಗೆ ಒಂದೊಂದು ತುಂಡು ಬ್ರೆಡ್ ಕೊಟ್ಟಳು. ಅದುವೇ ಅವರ ಮನೆಯಲ್ಲಿದ್ದ ಕೊನೆಯ ತುಣುಕು ಆಹಾರ. ನಂತರ ಅವರ ತಂದೆ ಅವರನ್ನು ಕಾಡಿನಲ್ಲಿ ಬಹಳ ಒಳಕ್ಕೆ ಕರೆದೊಯ್ದ. ಚೋಟು ಅಮ್ಮ ಕೊಟ್ಟ ಬ್ರೆಡ್ಡನ್ನು ಚೂರುಚೂರು ಮಾಡಿದ. ಹಾದಿಯಲ್ಲಿ ಅಲ್ಲಲ್ಲಿ ಒಂದೊಂದು ತುಂಡು ಬ್ರೆಡ್ಡನ್ನು ನೆಲಕ್ಕೆ ಹಾಕುತ್ತಾ ಬಂದ. ಈ ಬಾರಿಯೂ ಅವರ ತಂದೆ ಮಕ್ಕಳೆಲ್ಲ ಆಟವಾಡುತ್ತಿದ್ದಾಗ ಸದ್ದು ಮಾಡದೆ ಅಲ್ಲಿಂದ ಹೊರಟು ಬಂದ.

ಅವತ್ತು ಸಂಜೆ, ಅಪ್ಪ ತಮ್ಮೊಂದಿಗಿಲ್ಲ ಎಂದು ತಿಳಿದಾಗ ಮಕ್ಕಳೆಲ್ಲ ಹೆದರಿ ಬಿಟ್ಟರು. ಚೋಟು ತಾನು ಎಸೆದಿದ್ದ ಬ್ರೆಡ್ ತುಂಡುಗಳಿಗಾಗಿ ಹುಡುಕಾಡಿದಾಗ ಒಂದೂ ಕಾಣಿಸಲಿಲ್ಲ. ಯಾಕೆಂದರೆ ಅವನ್ನೆಲ್ಲ ಹಕ್ಕಿಗಳು ತಿಂದಿದ್ದವು! ಅವರಿಗೆ ಹತ್ತಿರದಲ್ಲೆಲ್ಲೂ ಯಾವುದೇ ಮನೆಯ ಸುಳಿವು ಸಿಗಲಿಲ್ಲ. ಆಗ ಚೋಟು ಒಂದು ಎತ್ತರದ ಮರವನ್ನೇರಿ ನೋಡಿದ.
ದೂರದಲ್ಲಿ ಚೋಟುಗೆ ಬೆಳಕು ಕಾಣಿಸಿತು. ಅಲ್ಲಿ ಮನೆಯಿರಬೇಕೆಂದು ಹೇಳಿದ ಚೋಟು. ಎಲ್ಲರೂ ಅಲ್ಲಿಗೆ ಧಾವಿಸಿದರು. ಅಲ್ಲೊಂದು ಮನೆಯಿತ್ತು. ಇವರು ಬಾಗಿಲು ಬಡಿದಾಗ ಒಬ್ಬಳು ಹೆಂಗಸು ಬಾಗಿಲು ತೆರೆದಳು.

ತಮಗೆ ಆಹಾರ ಕೊಟ್ಟು, ಅಲ್ಲಿ ಮಲಗಲು ಬಿಡಬೇಕೆಂದು ಮಕ್ಕಳು ಅವಳನ್ನು ವಿನಂತಿಸಿದರು. “ಅಯ್ಯೋ ಮಕ್ಕಳೇ, ನನ್ನ ಗಂಡ ಭಯಂಕರ ದೈತ್ಯ. ಅವನು ಮನೆಗೆ ಬಂದರೆ ನಿಮಗೇನೂ ಕೊಡೋದಿಲ್ಲ; ಬದಲಾಗಿ ನಿಮ್ಮನ್ನೇ ತಿನ್ನುತ್ತಾನೆ” ಎಂದಳು. ಮಕ್ಕಳೆಲ್ಲರೂ ಕಂಗಾಲಾದರು. ಆಗ ಚೋಟು ಹೇಳಿದ, “ನಮಗೆ ಕರುಣೆಯಿಂದ ತಿನ್ನಲು ಏನಾದರೂ ಕೊಡು ತಾಯಿ. ನಿನ್ನ ಗಂಡ ಬರುವ ಮುಂಚೆ ಅದನ್ನು ತಿಂದು ನಾವು ಹೊರಟು ಹೋಗ್ತೇವೆ.”

ಆ ಹೆಂಗಸಿಗೆ ಮಕ್ಕಳ ಸ್ಥಿತಿ ಕಂಡು ಕರುಣೆ ಮೂಡಿತು. ಅವಳು ಅವರನ್ನು ಮನೆಯೊಳಗೆ ಕರೆದು, ತಿನ್ನಲು ಬ್ರೆಡ್ ಮತ್ತು ಸೂಪ್ ಕೊಟ್ಟಳು. ಹಸಿದಿದ್ದ ಮಕ್ಕಳು ಅವನ್ನು ಗಬಗಬನೆ ತಿನ್ನುತ್ತಿದ್ದಾಗ ದೈತ್ಯ ಮನೆಗೆ ಬಂದೇ ಬಿಟ್ಟ. ಮಕ್ಕಳು ಹೆದರಿ ಮಂಚದ ಕೆಳಗೆ ಅಡಗಿಕೊಂಡರು. ಹತ್ತಡಿ ಎತ್ತರವಿದ್ದ ಆ ದೈತ್ಯ ದೊಡ್ಡ ಕಲ್ಲುಬಂಡೆಯಂತೆ ಕಾಣಿಸುತ್ತಿದ್ದ! ಅವನ ಧ್ವನಿ ಭಯಾನಕ.

“ಇದೇನು? ನನಗೆ ಮನುಷ್ಯರ ವಾಸನೆ ಬರುತ್ತಿದೆ” ಎಂದ ದೈತ್ಯ. ಅವನ ಹೆಂಡತಿ ಮನೆಯಲ್ಲಿ ಬೇರಾರೂ ಇಲ್ಲವೆಂದಳು. ಆದರೂ ಅವನು ಮನೆಯಲ್ಲೆಲ್ಲ ಹುಡುಕಿದ. ಕೊನೆಗೆ ಮಂಚದಡಿ ಅಡಗಿದ್ದ ಮಕ್ಕಳನ್ನು ಕಂಡು ಅವರನ್ನು ದರದರನೆ ಹೊರಗೆಳೆದ. ಅವರನ್ನು ಕೂಡಲೇ ಸುಟ್ಟು ತಿನ್ನುತ್ತೇನೆಂದ. ಆಗ ಅವನ ಹೆಂಡತಿ ಹೇಳಿದಳು, "ಅವರು ಹಲವಾರು ದಿನಗಳಿಂದ ಉಪವಾಸವಿದ್ದರು. ಈಗ ಅವರನ್ನು ತಿಂದರೆ ಏನೂ ರುಚಿಯಾಗಿರೋದಿಲ್ಲ.”

ಅಂತೂ ಮಕ್ಕಳನ್ನು ಮರುದಿನ ತಿನ್ನುತ್ತೇನೆಂದ ದೈತ್ಯ. ಅನಂತರ ಮಾಂಸ ಬೇಯಿಸಿ. ವೈನ್ ಕುಡಿಯುತ್ತಾ ತನ್ನ ಭೋಜನ ಮುಗಿಸಿ, ಮಲಗಿದ. ಅವನ ಗೊರಕೆಗೆ ಆ ಮನೆಯೇ ನಡುಗುತ್ತಿತ್ತು.

ದೈತ್ಯ ಗಾಢ ನಿದ್ದೆಯಲ್ಲಿದ್ದಾಗ ಚೋಟು ಮಂಚದಡಿಯಿಂದ ಹೊರ ಬಂದ. ಮೆಲ್ಲನೆ ದೈತ್ಯನ ಬೂಟ್ಸುಗಳನ್ನು ಅವನ ಕಾಲಿನಿಂದ ಕಳಚಿದ. ಅವು “ಏಳು ಮೈಲು ಬೂಟ್ಸುಗಳು.” ಅಂದರೆ ಅವನ್ನು ಧರಿಸಿ ಒಂದೊಂದು ಹೆಜ್ಜೆಯಿಟ್ಟಾಗಲೂ ಏಳು ಮೈಲು ದೂರ ದಾಟುತ್ತಿತ್ತು. ಅವನ್ನು ಧರಿಸಿದ ಚೋಟು ಕೆಲವೇ ನಿಮಿಷಗಳಲ್ಲಿ ನೇರವಾಗಿ ರಾಜನ ಅರಮನೆಗೆ ಹೋದ. ತುರ್ತಾಗಿ ರಾಜನನ್ನು ಕಾಣಬೇಕೆಂದು ಕಾವಲುಗಾರರಿಗೆ ಹೇಳಿದ. ರಾಜನೆದುರು ನಿಂತು, ಕಾಡಿನಲ್ಲೊಬ್ಬ ದುಷ್ಟ ದೈತ್ಯನಿದ್ದಾನೆಂದೂ, ಅವನು ಕಾಡಿನೊಳಗೆ ಸಂಚರಿಸುವ ಪ್ರಜೆಗಳನ್ನು ದೋಚುತ್ತಿದ್ದಾನೆಂದೂ ಚೋಟು ತಿಳಿಸಿದ.

ರಾಜ ಕೂಡಲೇ ತನ್ನ ಸೈನಿಕರನ್ನು ಕರೆದು, ಕಾಡಿಗೆ ಹೋಗಿ, ದೈತ್ಯನನ್ನು ಕೊಲ್ಲಬೇಕೆಂದು ಆದೇಶಿಸಿದ. ಆ ದಿನವೇ ರಾಜನ ಸೈನಿಕರು ದೈತ್ಯನ ಮನೆಯನ್ನು ಸುತ್ತುವರಿದರು. ಇನ್ನೂ ಮಲಗಿಕೊಂಡೇ ಇದ್ದ ದೈತ್ಯನನ್ನು ಕೊಂದು ಹಾಕಿದರು. ಅನಂತರ ಅವನ ಮನೆಯಲ್ಲಿ ಹುಡುಕಾಡಿದಾಗ, ದೈತ್ಯ ದರೋಡೆ ಮಾಡಿ ಸಂಗ್ರಹಿಸಿದ್ದ ಸಂಪತ್ತೆಲ್ಲ ಸಿಕ್ಕಿತು. ಅಂತಹ ದುಷ್ಟ ದೈತ್ಯನನ್ನು ಸಂಹಾರ ಮಾಡಲು ಸಹಕರಿಸಿದ್ದಕ್ಕಾಗಿ ರಾಜ ಚೋಟುಗೆ ಒಂದು ದೊಡ್ಡ ಚೀಲದ ತುಂಬ ಚಿನ್ನ ಉಡುಗೊರೆಯಾಗಿ ನೀಡಿದ.

ಚೋಟು ಮತ್ತು ಇತರ ಮಕ್ಕಳು ಮನೆಗೆ ಮರಳಿದಾಗ ಅವರ ಅಪ್ಪ-ಅಮ್ಮ ಸಂತೋಷದಿಂದ ಕಣ್ಣೀರು ಸುರಿಸಿದರು. ತಮ್ಮ ಮಕ್ಕಳನ್ನು ಕಾಡಿನಲ್ಲಿ ತ್ಯಜಿಸಿದ ನಂತರ ಅವರೂ ದಿನವೂ ಕಣ್ಣೀರಿನಲ್ಲೇ ಕೈತೊಳೆಯುತ್ತಿದ್ದರು.

ಚೋಟು ತಂದ ಸ್ವಲ್ಪ ಚಿನ್ನವನ್ನು ಅಪ್ಪ-ಅಮ್ಮ ಮಾರಾಟ ಮಾಡಿದರು. ಆ ಹಣದಿಂದ ಮೂರು ತಿಂಗಳುಗಳಿಗೆ ಸಾಕಾಗುವಷ್ಟು ಆಹಾರಧಾನ್ಯ ತಂದರು. ಮುಂದೆ ಯಾವತ್ತೂ ಅವರು ಉಪವಾಸ ಇರಬೇಕಾಗಲಿಲ್ಲ. ಚೋಟು ತಂದ ಚಿನ್ನದಿಂದಾಗಿ ಅವರು ಬಹುಕಾಲ ನೆಮ್ಮದಿಯಿಂದ ಬದುಕಿದರು.