ಚೋಳರು ಸನಾತನಿಗಳಲ್ಲವೇ?

ಚೋಳರಸರು ಹಿಂದೂಗಳೇ ಆಗಿರಲಿಲ್ಲ. ರಾಜೇಂದ್ರ ಚೋಳನಂತೂ ಹಿಂದೂ ಎಂದುಕೊಂಡು ಆಳ್ವಿಕೆಯನ್ನೇ ಮಾಡಿರಲಿಲ್ಲ ಎಂದು ತಮಿಳು ನಟ ಕಮಲ್ ಹಾಸನ್ ಹೇಳಿಕೆ ಕೊಟ್ಟಿದ್ದಾರೆ. ಇದಕ್ಕೂ ಮುನ್ನ ಖ್ಯಾತ ತಮಿಳು ಸಿನೆಮಾ ನಿರ್ದೇಶಕ ವೆಟ್ರಿ ವೇಲನ್ ಕೂಡ ಚೋಳರೆಂದೂ ಹಿಂದುಗಳಾಗಿರಲಿಲ್ಲ ಎಂದು ಹೇಳಿಕೆಯನ್ನು ನೀಡಿ ಎಂದೋ ಸತ್ತು ಹೋಗಿದ್ದ ಆರ್ಯ-ದ್ರಾವಿಡ ವಾದಕ್ಕೆ ಜೀವ ತುಂಬಲು ಪ್ರಯತ್ನಿಸಿದ್ದರು ! ಅರ್ಥಾತ್ ಆರ್ಯ - ದ್ರಾವಿಡ ಎಂಬ ಶವಕ್ಕೆ ಸಿಂಗಾರ ಮಾಡಲು ಹೊರಟಿದ್ದರು. ಈಗ ಕಮಲ್ ಹಾಸನ್ ಪಾಳಿ.
ಚೋಳರು ತಮಿಳರಸರಾಗಿದ್ದರೂ ಅವರ ಪ್ರತ್ಯಕ್ಷ ಅಥವಾ ಪರೋಕ್ಷ ಪ್ರಭಾವ ಇಡೀ ದಕ್ಷಿಣ ಭಾರತದ ಮೇಲಿತ್ತು. ಅದರಲ್ಲೂ ರಾಜೇಂದ್ರ ಚೋಳನ ಕಾಲಾವಧಿಯಲ್ಲಂತೂ ಅದು ಸಾಗರದಾಚೆಗೂ ಹಬ್ಬಿ ಭಾರತವೆಂದರೆ ಚೋಳ ದೇಶ ಎಂದು ಖ್ಯಾತವಾಗುವಷ್ಟಿತ್ತು. ಸುಸಜ್ಜಿತ ನೌಕಾ ಸೈನ್ಯವನ್ನು ಕಟ್ಟಿದ್ದ ಚೋಳರು ಚೀನಾಕ್ಕೂ ಕಾಲಿಟ್ಟ ಕುರುಹುಗಳನ್ನು ಇತಿಹಾಸ ತಜ್ಞರು ಶೋಧಿಸಿದ್ದಾರೆ. ಅಲ್ಲದೆ ಮೊಟ್ಟಮೊದಲನೆಯದಾಗಿ ಗಂಗೆಯನ್ನು ದಾಟಿ ದಂಡಯಾತ್ರೆಯನ್ನು ಕೈಗೊಂಡ ರಾಜ ವಂಶಸ್ಥರು ಈ ಚೋಳರು ಎಂಬ ಹೆಮ್ಮೆ ಚೋಳರಿಗಿದೆ. ಇಷ್ಟೇ ಅಲ್ಲದೆ ಚೋಳರ ಸಾಂಸ್ಕೃತಿಕ ಕೊಡುಗೆಗಳನ್ನು ಇಂದು ಕೇವಲ ತಮಿಳುನಾಡು ಮಾತ್ರವಲ್ಲದೆ ವಿಶ್ವದ ಕಲಾಲೋಕವೇ ಕೊಂಡಾಡುತ್ತಿದೆ. ಕರ್ಮಠ ಶೈವಾರಾಧಕರಾಗಿದ್ದ ಚೋಳರ ಆಳ್ವಿಕೆ ಮತ್ತು ಕಲಾ ಶ್ರೀಮಂತಿಕೆಯನ್ನು ಭಾರತದ ಅಸ್ಮಿತೆಗಳೆಂದೇ ಕರೆಯಲಾಗುತ್ತದೆ. ಒಟ್ಟಾರೆ ಹೇಳಬೇಕೆಂದರೆ ಚೋಳ ಎಂದರೆ ಭಾರತೀಯ ಸಂಸ್ಕೃತಿ, ಆರಾಧನಾ ವಿಧಾನ, ಹಿಂದು ಕ್ಷಾತ್ರ ಪರಂಪರೆಗಳು ನೆನಪಾಗುತ್ತವೆ. ಆದ್ದರಿಂದ ಚೋಳರನ್ನು ನಿಂದಿಸಿದರೆ ಇವೆಲ್ಲವನ್ನೂ ನಿಂದಿಸಬಹುದೆನ್ನುವುದು ಬುದ್ಧಿಜೀವಿಗಳಿಗೆ ಚೆನ್ನಾಗಿ ತಿಳಿದಿದೆ. ಅದರಲ್ಲೂ ಚೋಳ ಇತಿಹಾಸದ ನೆರಳಲ್ಲೇ ಹುಟ್ಟಿಬೆಳೆದ ಪೆರಿಯಾರ್ ಶಿಷ್ಯರಿಗಂತೂ ಹಿಂದು ನಿಂದನೆಗೆ ಮೊಟ್ಟಮೊದಲು ಕಾಣುವುದೇ ಚೋಳ ಸಾಮ್ರಾಜ್ಯ. ಅದರಲ್ಲೂ ಹಿಂದೂ ಹೃದಯ ಸಾಮ್ರಾಟ ರಾಜೇಂದ್ರ ಚೋಳ.
ಚೋಳ ಅರಸರ ಬಗೆಗಿನ ಈ ರೀತಿಯ ನಿಂದೆ, ಅಪ್ರಚಾರ ಇದೇ ಮೊದಲೇನಲ್ಲ. ತಮಿಳುನಾಡಿನಲ್ಲಿ ಪೆರಿಯಾರ್ ಚಳುವಳಿ ತೀವ್ರವಾಗಿದ್ದ ಸಮಯದಲ್ಲೆಲ್ಲಾ ಚೋಳ, ಪಾಂಡ್ಯ, ಚೇರ ಮತ್ತು ಪಲ್ಲವರನ್ನೆಲ್ಲಾ ದ್ರಾವಿಡ ಎಂದೇ ಚಿತ್ರಿಸುತ್ತಾ ಬಂದಿದ್ದಾರೆ. ತಮಿಳುನಾಡಿನ ಪಠ್ಯಪುಸ್ತಕಗಳಲ್ಲೂ ಸಹ ಈ ರಾಜಮನೆತನಗಳನ್ನು ತಮಿಳು ಹಿರಿಮೆಯ ದ್ರಾವಿಡರು ಎಂದೇ ಉಲ್ಲೇಖಿಸಿದೆ. ಚೋಳ ಇತಿಹಾಸವನ್ನು ಹಾಡಿಹೊಗಳುವ ಭರದಲ್ಲಿ ತಮಿಳು ಪಠ್ಯಗಳು, ಸಂಶೋಧನಾ ಗ್ರಂಥಗಳು ದ್ರಾವಿಡರು, ಆರ್ಯರ ಮೇಲೆ ಸೇಡು ತೀರಿಸಿಕೊಂಡರು ಎಂಬಂತೆ ರಾಜೇಂದ್ರ ಚೋಳನನ್ನು ಹೊಗಳುತ್ತದೆ. ಅದರಲ್ಲೂ ಚೋಳ ಅರಸರ ಕನ್ನಡ ಮತ್ತು ತೆಲುಗು ನೆಲದ ಆಕ್ರಮಣವನ್ನು ವೈಭವೀಕರಿಸುವ ಪರಂಪರೆ ಮೊದಲಿನಿಂದಲೂ ಇದೆ. ಅದರ ಮುಂದುವರಿದ ಭಾಗವೇ ವೆಟ್ರಿ ಮಾರನ್ ಹೇಳಿಕೆ.
ಸಿನೆಮಾ ರಂಗವನ್ನು ಅತಿಯಾಗಿ ವೈಭವೀಕರಿಸುವ ಸಂಸ್ಕೃತಿಯನ್ನು ಹೊಂದಿರುವ ತಮಿಳುನಾಡಿನಲ್ಲಿ ನಟ, ನಿರ್ದೇಶಕರುಗಳು ಒಂದರ್ಥದಲ್ಲಿ ಸಾಮಾಜಿಕ ನೀತಿ ನಿರೂಪಕರಿದ್ದಂತೆ. ಅದರಲ್ಲೂ ವೆಟ್ರಿ ಮಾರನ್ ನಂಥ ನಿರ್ದೇಶಕ ಸಿನೆಮಾ ಮೂಲಕ ಹಿಂದೂ ವಿರೋಧಿ, ಕಮ್ಯೂನಿಸ್ಟ್ ಪರ ನಿಲುವುಗಳನ್ನು ವ್ಯಕ್ತಪಡಿಸುವುದರಲ್ಲಿ ಎತ್ತಿದ ಕೈ. ಕಮ್ಯೂನಿಸ್ಟ್ ಪ್ರೇರಿತ ಹೋರಾಟ, ಚಳುವಳಿಗಳನ್ನು ಕರುಣಾಜನಕ ಕಥೆಯನ್ನಾಗಿ ತೆರೆಯ ಮೇಲೆ ತೋರಿಸುವ ವೆಟ್ರಿ ಮಾರನ್ ಚೋಳರ ಬಗ್ಗೆ ಇಂಥ ಹೇಳಿಕೆಯನ್ನು ಕೊಟ್ಟಿರುವುದರಲ್ಲಿ ಅಚ್ಚರಿಯೇನೂ ಇಲ್ಲ. ಚೋಳರ ಕಾಲವಾಗಿ ಸಾವಿರಕ್ಕೂ ಅಧಿಕ ವರ್ಷಗಳಾಗಿವೆ. ಸಾವಿರ ವರ್ಷಗಳ ಹಿಂದೆ ಚೋಳರು ಆಚರಿಸುತ್ತಿದ್ದ ಶೈವತ್ವಕ್ಕೂ, ಆಡಳಿತ ಧರ್ಮಕ್ಕೂ ಹಿಂದು ಎಂಬ ಹೆಸರಿರಲಿಲ್ಲ ನಿಜ. ಆದರೆ ಅವರು ಆಚರಿಸುತ್ತಿದ್ದ ಧರ್ಮ ಸನಾತನವಾಗಿತ್ತು. ಹೆಸರು ಏನಿದ್ದರೆ ತಾನೇ ಏನು? ಚೋಳರು ಶೈವರು ಮತ್ತು ಸನಾತನಿಗಳಾಗಿದ್ದರು ಎಂಬುದರಲ್ಲೇ ಎಲ್ಲಾ ಸತ್ಯವೂ ಅಡಗಿದೆ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೮-೧೦-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ