ಚೌಕಾಸಿ
ಗೆಳೆಯ ಲೋಹಿತಗೌಡನ ವಿವಾಹ ಪೂರ್ವ ಸ೦ಧಿ ಕಾರ್ಯಕ್ರಮಕ್ಕೆ ಹೋಗಲೇಬೇಕಿತ್ತು.
ಧೂಳು ಹಿಡಿದಿದ್ದ ಸುಜುಕಿ ಬೈಕು ಹೊರಗೆಳೆದು, ಸೀಟು ಕೂರುವಷ್ಟು ಜಾಗವನ್ನು ಬಟ್ಟೆಯಿ೦ದ ಒರೆಸಿ ಬೈಕು ಹತ್ತಿ ಹೊರಟೆ.
ಹಳೆ ಪೋಸ್ಟ್ ಆಪೀಸು ರೋಡಲ್ಲಿ ಬೈಕು ನಿಲ್ಲಿಸಿದವನು, ಹಿಮ್ಮಡಿಯ ಸೋಲ್ ಕಿತ್ತು ಹೋದ ಚಪ್ಪಳಿಯನ್ನು ಎಳೆದು ಹೆಜ್ಜೆ ಹಾಕುತ್ತಾ ಗಾ೦ಧಿ ಬಜಾರಿನ ಕಡೆಗೆ ನಡೆದೆ.
ಕಿತ್ತು ಹೋಗಿದ್ದ ಚಪ್ಪಲಿಯನ್ನು ಕಸದ ತೊಟ್ಟಿಗೆ ಬಿಸಾಡಿ,
ಬರಿ!! ಪಾದರಕ್ಷೆಗಳದ್ದೇ ಅ೦ಗಡಿಗಳಿರುವ ಒ೦ದು ಬೀದಿಯೊಳಗೆ ನಡೆದೆ.
ಸಾಲು-ಸಾಲು ಅ೦ಗಡಿಯವರು , ತಮ್ಮಲ್ಲಿಗೆ ಬರುವ೦ತೆ ಆಹ್ವಾನ ನೀಡುತ್ತಿದ್ದರು.
ಯಾವುದೋ ಒ೦ದು ಅ೦ಗಡಿಯೊಳಗೆ ನುಗ್ಗಿದೆ.
"ಹೇ!! ಯಾರಪ್ಪ ಅಲ್ಲಿ. ಸಾಬ್ ನಮ್ದು ಖಾಯಮ್ ಕಸ್ಟಮರು. ಸ್ವಲ್ಪ ನೋಡ್ರಿ ಇಲ್ಲಿ " ಎ೦ದ.
ಎಲಾ ಇವನ.ಇವರುಗಳ ಮುಖ ನೋಡುತ್ತಿರುವುದು ಇದೆ ಮೊದಲು.
ಮೊದಲ ವಿಸಿಟ್ ಗೆ ಖಾಯ೦ ಕಸ್ಟಮರ್ ಆಗಿಬಿಟ್ಟೆ.
"ಏನ್ ಸಾರ್ ..? ಯಾವ ಟೈಪ್ ಚಪ್ಲಿ ಕೊಡ್ಲಿ." ಎ೦ದ.
" ಯಾವುದಾದ್ರು ಸರಿ, ಚಪ್ಲಿ ಹಾಕಿದ್ರೆ ನಾನು ಅದನ್ನ ಹಾಕಿಕೊ೦ಡಿರೋದು ಗೊತ್ತಾಗಲೇಬಾರದು, ಅಂತದ್ದು ತೋರ್ಸು" ಎ೦ದೆ.
"ಹ೦ಗಾದ್ರೆ ನೀವು ಚಪ್ಲಿ ಹಾಕಿಕೊಳ್ಳದೇ!! ಓಡಾಡೋದು ವಳ್ಳೇದು ಸಾರ್.." ಎಂದು ನಕ್ಕ.
ಕೌಂಟರ್ ಇಷ್ಟ ಆಯ್ತು!! ಬಹುಷಃ ನಾನು ಕೇಳಿದ ರೀತಿಯಲ್ಲೇ ತಪ್ಪಿತ್ತು.
ಕೈಲೊ೦ದು ಜೊತೆ ಚಪ್ಪಲಿ ಹಿಡಿದು "ನೋಡಿ ಸಾರ್ ಇದು ಹ೦ಡ್ರೆಡ್ ಪರ್ಸೆ೦ಟ್ ಪ್ಯೂರ್ ಲೆದರ್ರು!! ಫುಲ್ಲು ಕ೦ಫರ್ಟು!! " ಎ೦ದ.
ಕಾಲ ಬಳಿ ಹಿಡಿದು ಹಾಕಿಕೊಳ್ಳುವ೦ತೆ ಪ್ರಚೋದಿಸುತ್ತಿದ್ದವನ ಕೈಯಿ೦ದ ಚಪ್ಪಲಿಯನ್ನು ತೆಗೆದುಕೊ೦ಡು ನೋಡುತ್ತಾ ಹೇಳಿದೆ.
"ಪ್ಯೂರ್ ಲೆದರ್ ಆದ್ರೆ ಬೇಡ ಕಣ್ರಿ!! ಪ್ರಾಣಿಗಳ ಚರ್ಮ ಸುಲಿದು ಮಾಡಿರೊ ಚಪ್ಪಲಿ.
ಬೇಗ ಸವೆಯೋದೆ ಇಲ್ಲಾ. ಹಾಕಿ ಹಾಕಿ ಬೇಜಾರಾಗಿಬಿಡತ್ತೆ." ಎ೦ದೆ.
"ಹೇ!! ಲೆದರ್ ಎಲ್ಲಿ೦ದ ಬ೦ತು ಸಾರ್!!
ಯಾವ್ ನನ್ಮಗ ಕೊಡ್ತಾನೆ ಇನ್ನೂರು-ಮುನ್ನೂರಕ್ಕೆಲ್ಲ ಪ್ಯೂರ್ ಲೆದರ್ರು.
ಇದು ಕ೦ಪನಿದು ಮಾಲು. ಸಿ೦ಥೆಟಿಕ್ಕು!! " ಎ೦ದ.
ದೋಸೆಯನ್ನು ಮಗುಚಿ ಹಾಕಿದಷ್ಟೆ ಸಲೀಸಾಗಿ, ಮಾತು ತಿರುಗಿಸಿದ.
'ಸರಿ!! ಕೊಡಪ್ಪಾ!! ಅದೇನ್ ನೋಡೋಣ' ಅಂತ ಕಾಲಿಗೆ ಹಾಕ್ದೆ!! ಇಷ್ಟ ಆಯ್ತು.
' ಇದನ್ನೇ ಪ್ಯಾಕ್ ಮಾಡು' ಅಂದೆ.
' ಕಲರ್ ಇದೆ ಇರ್ಲಾ !! ಅಥವಾ ಬ್ಯಾರೆ ಯಾವುದಾದ್ರು ಬೇಕಾ ..?' ಅಂದ
' ಅದನ್ನೇನು ತಲೆ ಮೇಲೆ ಇಟ್ಕೋಬೇಕ.. ಹಾಕ್ಕೊಳೋದು ಕಾಲಿಗೆ ತಾನೆ. ಯಾವುದಾದ್ರೇನು!!
ನನಗೆ ಕನಫ್ಯೂಸ್ ಆಗೋಕೆ ಮೊದ್ಲು ಪ್ಯಾಕ್ ಮಾಡು.
ಇಲ್ಲ ಅಂದ್ರೆ ನಿಮ್ಮ ಅಂಗಡಿನಲ್ಲಿರೋ ಎಲ್ಲಾ ಚಪ್ಪಲಿಯನ್ನು ತೆಗೆಸಿ ಬಿಡ್ತೇನೆ.' ಅಂದೆ.
'ಸರಿ ಸಾರ್ ಹಂಗಾದ್ರೆ!! ಎಂಟು ನೂರಾ ತೊಂಬತ್ತೊಂಬತ್ತು ರೂಪಾಯಿ..
ನಿಮಗೆ ಅಂತ ತೊಂಬತ್ತೊಂಬತ್ತು ಡಿಸ್ಕೌಂಟು!! ಎಂಟು ನೂರು ರುಪಾಯಿ ಕೊಡಿ. ' ಅಂದ.
'ಒಂದು ನಿಮಷಕ್ಕೆ ಮುಂಚೆ ಇದರ ಬೆಲೆ ಇನ್ನೂರೋ-ಮುನ್ನೂರೋ ಅಂದೆ.ಈಗ ನೋಡಿದ್ರೆ ಎಂಟು ನೂರಾ ತೊಂಬತ್ತೊಂಬತ್ತು ಅಂತಿಯ!! ಇದು ಮೋಸ!! '
'ನಾವು ಮಾತ್ಗೆ ಹೇಳಿದ್ನೆಲ್ಲಾ ನೀವು ಹಿಂಗೆ ಹಿಡ್ಕಂಡ್ ಬುಟ್ರೆ ಹೆಂಗೆ ಸಾರ್!! ಇದು ಕಂಪನಿದು ಮಾಲು ಅಂತ ಹೇಳುದ್ನಲ್ಲ. ನೀರಲ್ಲಿ ನೆನೆದರು ಹೊಲಿಗೆದು ಬಿಟ್ಕಳಾದಿಲ್ಲ.' ಎಂದ
ನನಗೆ ಮೇಲ್ನೋಟಕ್ಕೆ ವಸ್ತುಗಳ ಬೆಲೆ ಆಗಲಿ, ಮನುಷ್ಯರ ಬೆಲೆ ಆಗಲಿ ನಿಗದಿ ಪಡಿಸೋದು ಬರೋದಿಲ್ಲ.
ಆದರು ಈ ಅಂಗಡಿಯವನು ಜಾಸ್ತಿ ಬೆಲೆ ಹೇಳ್ತಾ ಇದಾನೆ ಅನ್ನಿಸ್ತು.
ಇನ್ನು ಸ್ವಲ್ಪ ಕಡಿಮೆ ಕೇಳೋಣ. ಕೊಟ್ಟಿಲ್ಲ ಅಂದ್ರೆ ಪೂರ್ತಿ ದುಡ್ಡು ಕೊಟ್ಟರೆ ಆಯ್ತು ಅಂದುಕೊಂಡೆ.
'ನಿಮ್ಮ ಅಂಗಡಿಯಲ್ಲಿ ಚೌಕಾಸಿ ಮಾಡೋ ಹಂಗಿಲ್ವಾ..? ಎಲ್ಲಾ ಫಿಕ್ಸು ರೇಟಾ ...?' ಎಂದೆ.
ಈ ಥರ ಕೇಳಬಾರದಿತ್ತೇನೋ!!
ಆದರು ಚೌಕಾಸಿ ಮಾಡೋದಕ್ಕೆ ಮುಂಚೆ ಅದು ಅಲೌಡಾ!! ಅಥವಾ ಇಲ್ಲವಾ ಅನ್ನೋದು ಕ್ಲಿಯರ್ ಮಾಡಿಕೊಳ್ಳಬೇಕಿತ್ತು.
' ನಮ್ದು ನ್ಯಾಯ ಬೆಲೆ ಅಂಗಡಿ ಇದ್ದಂಗೆ ಸಾರ್!!
ಬಕ್ರಾ ಕಸ್ಟಮರ್ ನ ನೋಡಿ ರೇಟು ಫಿಕ್ಸು ಮಾಡಕ್ಕೆ!! ನಾವು ಹೊಟ್ಟೆಗೆ ಸಗಣಿ ತಿನ್ನಲ್ಲ.
ನೀವೆ ಅಲ್ಲ!! ನಿಮ್ಮದು ಅಪ್ಪಂಗೆ ಅಮ್ಮಂಗೆ ಮಗೂಗೆ ಕಳ್ಸಿದ್ರು ನಾವು ಒಂದೇ ರೇಟು ಹೇಳೋದು .."
ಎಂದ.
ಅವನು ಬಕ್ರಾ ಕಸ್ಟಮರ್ ಅಂತ ಹೇಳಿದ್ದು ಯಾಕೋ..? ನನಗೆ ಹೇಳಿದಂಗೆ ಅನ್ನಿಸ್ತು.
ಅದಕ್ಕೆ ಒಂದು ಕಮ್ಮಿ ರೇಟು ಕೇಳಿಯೇ ಬಿಡೋಣ. ಅಂತ ನಿರ್ಧರಿಸಿದೆ.
ಕಮ್ಮಿ!! ಕೇಳೋದೇ ಆದ್ರೆ ಎಷ್ಟು ಅಂತ ಕೇಳೋದು..?
ತುಂಬಾ ಕಡಿಮೆ ಬೆಲೆಗೆ ಕೇಳಿದ್ರೆ!! ಬಯ್ದು ಗಿಯ್ದು ಬಿಟ್ರೆ ಕಷ್ಟ.
ತುಂಬಾ ಜಾಸ್ತಿ ರೇಟಿಗೆ ಕೇಳಿ!! ಅವನು ತಕ್ಷಣ ನಾನು ಕೇಳಿದ ರೇಟಿಗೆ ಕೊಟ್ಟು ಬಿಟ್ರೆ
'ಅಯ್ಯಯ್ಯೋ!! ನಾನು ಇನ್ನು ಸ್ವಲ್ಪ ಕಡಿಮೆ ರೇಟಿಗೆ ಕೇಳಿದ್ರೆ ಬಗ್ತಾ ಇದ್ದ ಅನ್ಸತ್ತೆ. ಮೋಸ ಹೋಗಿಬಿಟ್ಟೆ!!' ಅಂತ ಚಪ್ಪಲಿ ನೋಡಿದಾಗಲೆಲ್ಲಾ ಅನ್ನಿಸಿ ಬಿಡತ್ತೆ.
ಏನಪ್ಪಾ ಮಾಡೋದು ಅಂತ ಯೋಚಿಸ್ತಾ ಇದ್ದೆ.
ನಮ್ಮಮ್ಮ ತರಕಾರಿ ತಗೊಳುವಾಗ ಅಂಗಡಿಯವನು ಹತ್ತು ರುಪಾಯಿ ಕೇಜಿ ಅಂದ್ರೆ ಐದು ರೂಪಾಯಿ ಯಿಂದ ಚೌಕಾಸಿ ಶುರು ಮಾಡ್ತಾಳೆ.
ಅಮ್ಮ ಹಂಗೆ ಕೇಳಿದ ತಕ್ಷಣ ನನಗೆ ಗಾಬರಿ ಆಗಿ ಬಿಡ್ತಿತ್ತು.
ಯಾಕಂದ್ರೆ ರೀಟೇಲ್ ಇಂಡಸ್ಟರಿಯಲ್ಲಿ (ಚಿಲ್ಲರೆ ವ್ಯಾಪಾರಿಗಳಲ್ಲಿ) ನೂರು ಪ್ರತಿಶತ ಲಾಭಕ್ಕೆ ಯಾವುದೇ ವಸ್ತುಗಳನ್ನು ಮಾರೋದಕ್ಕೆ ಸಾಧ್ಯ ಇಲ್ಲ.
ಅದು ಯಾವ ಕಾನ್ಫಿಡೆನ್ಸಿನ ಮೇಲೆ ಅಮ್ಮ ಅರ್ಧಕ್ಕಿಂತ ಕಮ್ಮಿ ಬೆಲೆಯಿಂದ ತನ್ನ ಚೌಕಾಸಿ ಪ್ರಾರಂಭಿಸುವಳೋ ತಿಳಿಯದು.
ಇವರ ಚೌಕಾಸಿಯ ಹಗ್ಗ-ಜಗ್ಗಾಟದಲ್ಲಿ ಕೊನೆಗೆ ತಾನು ಮೋಸ ಹೋಗಲಿಲ್ಲವೆಂಬ ಕೃತಾರ್ತ ಭಾವನೆ ಗ್ರಾಹಕನಿಗೆ ಮೂಡಬೇಕು.
ಅದಕ್ಕಿಂತ ಹೆಚ್ಚಾಗಿ ಇದೊಂದು ಜೀವನ ಶೈಲಿ!! ಮಾಲ್-ಗಳಲ್ಲಿ ಶಾಪಿಂಗ್ ಮಾಡುವ ಹವ್ಯಾಸ ಕೆಲವರಿಗಿರುವಂತೆ ರಸ್ತೆ ಮೇಲೆ ಚೌಕಾಸಿ ಮಾಡುವ ಹವ್ಯಾಸ ಇನ್ನು ಕೆಲವರಿಗೆ.
ಕೊನೆಗೆ ಕೊಂಡು ಕೊಂಡ ಆ ವಸ್ತುಗಳು ತಮ್ಮ ಅಷ್ಟು ವರುಷಗಳ ಚೌಕಾಸಿ ಕಲೆಯ ಅಭಿವ್ಯಕ್ತಿಯಂತೆ ಗ್ರಾಹಕನ ಮನೆಯ ಸ್ಟೋರ್ ರೂಮ್ ಸೇರಿ ಬಿಡುತ್ತವೆ.
ಅಮ್ಮನ ಫಾರ್ಮುಲದಂತೆ ಅರ್ಧ ರೇಟಿನಿಂದ ಚೌಕಾಸಿ ಶುರು ಮಾಡುವ ಧೈರ್ಯ ನನಗಿರಲಿಲ್ಲ. ಆದಕ್ಕೆ
' ಎಂಟು ನೂರು ರೂಪಾಯಿ ಜಾಸ್ತಿ ಆಯ್ತು!! ಆರು ನೂರು ರುಪಾಯಿಗೆ ಕೊಡಿ.' ಎಂದಷ್ಟೇ ಹೇಳಿದೆ.
ಅವರ ಮುಂದೆ ಮತ್ತೆ ಏನೆಲ್ಲಾ ಮಾತುಗಳನ್ನು ಆಡಬಹುದು ಎಂದು ತಿಳಿಯಲಿಲ್ಲ.
ಅಮ್ಮ ಆಗಿದ್ದರೆ!! ತಾನು ವಂಶ ವೃಕ್ಷದ ಪ್ರತಿ ಜೀವಕ್ಕೂ ಇದೇ ಅಂಗಡಿಯಿಂದ ಚಪ್ಪಲಿ ಖರೀದಿಸಿದ್ದಾಗಿಯು..
ನೀವು ಖಾಯಂ ಕಸ್ಟಮರಿಗೆ ಮೋಸ ಮಾಡುತ್ತಿರುವುದಾಗಿಯೂ.. ಏನೆಲ್ಲಾ ಹೇಳಿ ಬಿಡುತ್ತಿದ್ದಳು.
ನಾನು ಆರು ನೂರು ರೂಪಾಯಿ.. ಎನ್ನುತ್ತಲೇ!! ಅಂಗಡಿಯವನು ಚಪ್ಪಲಿ ಬಾಕ್ಸು ಓಪನ್ ಮಾಡಿ!! ಕೈಯಲ್ಲಿ ಚಪ್ಪಲಿ ಹಿಡ್ಕೊಂಡು
ಬರಬರನೆ ನನ್ನ ಬಳಿಗೆ ಬಂದ. ಹತ್ತಿರ ಬಂದವನೇ ಚಪ್ಪಲಿಯನ್ನು ಹಿಂದಕ್ಕೂ ಮುಂದಕ್ಕೂ ಬಗ್ಗಿಸುತ್ತಾ , ನೆಲದ ಮೇಲೆ ಬಾರಿಸುತ್ತಾ ಹೇಳಿದ -
' ನೋಡಿ ಸಾರ್!! ಇಂತ ಮಾಲಿಗೆ ಹೋಗಿ ನೀವು ಚೌಕಾಸಿ ಮಾಡ್ತೀರಲ್ಲ.
ನೀವು ನಮ್ಮ ಸ್ಪೆಷಲ್ ಕಸ್ಟಮರ್ ಅಂತ ನಿಮಗೆ ತುಂಬಾನೆ ಕಮ್ಮಿ ಹೇಳಿದೀವಿ ಸಾರ್.
ಹೋಗ್ಲಿ ತಗಳಿ. ನಮಗೆ ಲಾಭಾನೆ ಬೇಡ.
ಕಂಪನಿ ರೇಟು ಏಳುನೂರು ರೂಪಾಯಿ.
ಕಸ್ಟಮರ್ ಕಳ್ಕೋಬಾರ್ದು ಅನ್ನೋ ಒಂದೇ ಒಂದು ಕಾರಣಕ್ಕೆ ಕೊಡ್ತಾ ಇದೀನಿ.
ತಗೋಳಿ ಸಾರ್!! ಏಳು ನೂರು ಕೊಡಿ'
ಎಂದ.
ಅಂತೂ ನನ್ನ ಚೌಕಾಸಿ ಕುಶಲತೆಯಿಂದ ನೂರು ರೂಪಾಯಿ ಉಳಿಸಿಬಿಟ್ಟೆ.
Comments
ಚೇತನ್ ಹೊನ್ನವಿಲೆ ರವರಿಗೆ
In reply to ಚೇತನ್ ಹೊನ್ನವಿಲೆ ರವರಿಗೆ by partha1059
:))
In reply to ಚೇತನ್ ಹೊನ್ನವಿಲೆ ರವರಿಗೆ by partha1059
:) ಧನ್ಯವಾದಗಳು ಸರ್!!
In reply to ಚೇತನ್ ಹೊನ್ನವಿಲೆ ರವರಿಗೆ by partha1059
"ಬೇಕಿದ್ರೆ ಹೊಡಕೊಂಡ್ ನೋಡಿ ಸಾರ್
ಯಾವುದೇ ವಸ್ತವನ್ನು
In reply to ಯಾವುದೇ ವಸ್ತವನ್ನು by ಮಮತಾ ಕಾಪು
ನಿಮ್ಮ ಬರಹದ ಶೀರ್ಸ್ಶಿಕೆಯೇ
In reply to ನಿಮ್ಮ ಬರಹದ ಶೀರ್ಸ್ಶಿಕೆಯೇ by venkatb83
ಪ್ರತಿಕ್ರಿಯೆಗೆ ಚೌಕಾಶಿ ಇಲ್ಲಾ.
In reply to ಪ್ರತಿಕ್ರಿಯೆಗೆ ಚೌಕಾಶಿ ಇಲ್ಲಾ. by Prakash Narasimhaiya
ಧನ್ಯವಾದಗಳು
In reply to ನಿಮ್ಮ ಬರಹದ ಶೀರ್ಸ್ಶಿಕೆಯೇ by venkatb83
ನಷ್ಟ ಹೌದು!! ಆದರೆ ಚೌಕಾಸಿ
In reply to ಯಾವುದೇ ವಸ್ತವನ್ನು by ಮಮತಾ ಕಾಪು
ನಷ್ಟ ಹೌದು!! ಆದರೆ ಚೌಕಾಸಿ
:)