ಚೌರಿ ಚೌರಾ ಹತ್ಯಾಕಾಂಡಕ್ಕೆ ನೂರು ವರ್ಷ

ಚೌರಿ ಚೌರಾ ಹತ್ಯಾಕಾಂಡಕ್ಕೆ ನೂರು ವರ್ಷ

ಫೆಬ್ರವರಿ ೪, ೧೯೨೨ರಂದು ಉತ್ತರ ಪ್ರದೇಶದ ಗೋರಖ್ ಪುರ ಜಿಲ್ಲೆಯ ಚೌರಿ ಚೌರಾ ಎಂಬ ಊರಿನಲ್ಲಿ ನಡೆದ ಹತ್ಯಾಕಾಂಡದ ಘಟನೆಯೇ ಚೌರಿ ಚೌರಾ ಘಟನೆ. ಈ ಹತ್ಯಾಕಾಂಡ ಎಂಬ ಪದವನ್ನು ತೆಗೆದು ‘ಜನಾಕ್ರೋಶ' ಎಂದು ಉಲ್ಲೇಖಿಸಬೇಕೆಂದು ಹಲವಾರು ಮನವಿಗಳು ಸಲ್ಲಿಕೆಯಾಗಿವೆ. ಶಾಲಾ ದಿನಗಳಲ್ಲಿ ಇತಿಹಾಸದ ಪಾಠ ಮಾಡುವಾಗ ಚೌರಿ ಚೌರಾ ಘಟನೆ ಬಗ್ಗೆ ಹೇಳಿದ್ದು ನೆನಪಿಗೆ ಬರುತ್ತಿದೆ. ಅದರ ಹಿಂದಿನ ಘಟನೆಗಳು ಏನು? ಯಾಕಾಗಿ ಈ ಹತ್ಯಾ ಕಾಂಡ ನಡೆಯಿತು? ಎಂಬುದುದರ ಬಗ್ಗೆ ತಿಳಿದುಕೊಳ್ಳೋಣ. ಪ್ರಸ್ತುತ ವರ್ಷ ಈ ಘಟನೆಗೆ ನೂರು ವರ್ಷ ತುಂಬಿದೆ ಆ ಪ್ರಯುಕ್ತ ಚೌರಿ ಚರಾ ಘಟನೆಯನ್ನು ನೆನಪು ಮಾಡಿಕೊಳ್ಳುವ.

ಗಾಂಧೀಜಿಯವರು ಭಾರತದ ಸ್ವಾತಂತ್ರ್ಯ ಚಳುವಳಿಯ ನೇತೃತ್ವವಹಿಸಿಕೊಂಡಿದ್ದ ದಿನಗಳವು. ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ಗಳಿಸುವ ಉದ್ದೇಶ ಮಹಾತ್ಮರದ್ದು. ಆ ಕಾರಣದಿಂದ ವಿದೇಶದಿಂದ ಬರುತ್ತಿದ್ದ ಬಟ್ಟೆಗಳ ಬಹಿಷ್ಕರಿಸಿ ಚರಕದಿಂದ ನೂಲು ತೆಗೆದು ಅದರಿಂದ ಬಟ್ಟೆಗಳನ್ನು ತಯಾರು ಮಾಡುವಂತೆ ಗಾಂಧೀಜಿ ಕರೆಕೊಟ್ಟರು. ಬ್ರಿಟೀಷರ ಎಲ್ಲಾ ಉತ್ಪನ್ನಗಳಿಗೆ ಅಸಹಕಾರ ಚಳುವಳಿಯ ಮೂಲಕ ಉತ್ತರ ಕೊಡುವಂತೆ ಗಾಂಧೀಜಿ ತೀರ್ಮಾನಿಸಿದ್ದರು. ಇದು ದೇಶದಾದ್ಯಂತ ದೊಡ್ದ ಚಳುವಳಿಯ ರೂಪ ತಾಳುವ ಸಾಧ್ಯತೆ ಇತ್ತು.

ಅದು ೧೯೨೨ರ ಫೆಬ್ರವರಿ ೪ನೇ ತಾರೀಖು. ಬ್ರಿಟೀಷ್ ಭಾರತದ ಯುನೈಟೆಡ್ ಪ್ರಾಂತ್ಯ (ಈಗಿನ ಉತ್ತರ ಪ್ರದೇಶ) ದಲ್ಲಿ ಅಸಹಕಾರ ಚಳುವಳಿ ನಡೆಯುತ್ತಿತ್ತು. ಇಲ್ಲಿಯ ಚೌರಿಚೌರಾದ ಭೋಪಾ ಬಜಾರಿನಲ್ಲಿ ಸತ್ಯಾಗ್ರಹಿಗಳು ಜಮಾಯಿಸಿದ್ದರು. ಅವರೆಲ್ಲಾ ಪೋಲೀಸ್ ಠಾಣೆಯ ಎದುರು ಮೆರವಣಿಗೆ ಹೋಗಲು ತೀರ್ಮಾನಿಸಿದ್ದರು. ಮೆರವಣಿಗೆಯನ್ನು ಕಾನೂನು ಬಾಹಿರವೆಂದು ಬ್ರಿಟೀಷ್ ಆಡಳಿತಗಾರರು ತೀರ್ಮಾನ ಮಾಡಿದ್ದರು. ಆ ಕಾರಣದಿಂದ ಇವರನ್ನು ಚದುರಿಸಲು ಪೋಲೀಸರು ಗುಂಡು ಹಾರಿಸಿದರು. ಆ ಸಮಯ ಪ್ರತಿಭಟನಾಕಾರರೊಬ್ಬರು ಧರಿಸಿದ್ದ ಗಾಂಧೀ ಟೊಪ್ಪಿ ಕೆಳಗೆ ಬೀಳುತ್ತದೆ. ಅದನ್ನು ಪೋಲೀಸೊಬ್ಬ ತುಳಿದು ಅಗೌರವ ತೋರಿಸುತ್ತಾನೆ.  ಇದರಿಂದ ಕ್ರೋಧಿತರಾದ ಪ್ರತಿಭಟನಕಾರರ ದೊಡ್ದ ಗುಂಪೊಂದು ಆ ಪೋಲೀಸರ ಜೊತೆ ಘರ್ಷಣೆ ನಡೆಸಿದ್ದೇ ಚೌರಿ ಚೌರಾ ಹಿಂಸಾ ಘಟನೆಗೆ ಮುಖ್ಯ ಕಾರಣ. ಆ ಸಮಯ ಪೋಲೀಸರು ಗುಂಡು ಹಾರಿಸುತ್ತಾರೆ. ಸುಮಾರು ೧೧ ಮಂದಿ ಪ್ರತಿಭಟನಾಕಾರರು ಸ್ಥಳದಲ್ಲೇ ಸಾವನ್ನಪ್ಪುತ್ತಾರೆ. ೫೦ ಕ್ಕೂ ಅಧಿಕ ಮಂದಿ ಗಾಯಾಳುಗಳಾಗುತ್ತಾರೆ. ಪೋಲೀಸರ ಬಳಿ ಇದ್ದ ಗುಂಡುಗಳು ಮುಗಿದಾಗ ಅವರು ಠಾಣೆಯತ್ತ ಓಡುತ್ತಾರೆ. ಪೋಲೀಸರ ಗುಂಡೇಟಿಗೆ ಪ್ರತೀಕಾರವಾಗಿ ಪ್ರತಿಭಟನಾಕಾರರು ಪೋಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಠಾಣೆಯಲ್ಲಿದ್ದ ಮೂವರು ನಾಗರಿಕರ ಸಹಿತ ೨೩ ಮಂದಿ ಪೋಲೀಸರನ್ನು ಬೆಂಕಿ ಹಚ್ಚಿ ಜೀವಂತವಾಗಿ ದಹಿಸಿದರು. ಇದೊಂದು ಅತ್ಯಂತ ಹೇಯ ಘಟನೆಯಾಗಿತ್ತು. ಈ ಸಂದರ್ಭದಲ್ಲಿ ಮೊಹಮ್ಮದ್ ಸಿದ್ದಿಕಿ ಎಂಬ ಯೋಧನೊಬ್ಬ ತಪ್ಪಿಸಿಕೊಂಡು ಗೋರಖ್ ಪುರದ ಕಲೆಕ್ಟರ್ ಗೆ ಈ ಹತ್ಯಾಕಾಂಡದ ಮಾಹಿತಿ ನೀಡುತ್ತಾನೆ. 

ಅದೇ ಸಮಯ ಗುಜರಾತ್ ನ ಬಾರ್ಡೋಲಿಯಲ್ಲಿ ಮಹಾತ್ಮ ಗಾಂಧಿಯವರು ಬ್ರಿಟೀಷ್ ಸರಕಾರದ ವಿರುದ್ಧ ಅಸಹಕಾರ ಚಳುವಳಿಯನ್ನು ಪ್ರಾರಂಭಿಸಲಿದ್ದರು. ಆದರೆ ಈ ಚೌರಿ ಚೌರಾ ಘಟನೆಯಿಂದ ಗಾಂಧೀಜಿಯವರ ಮನಸ್ಸು ಬಹಳವಾಗಿ ನೊಂದುಕೊಳ್ಳುತ್ತದೆ. ಅವರು ಆರಂಭಿಸಲು ಯೋಚಿಸಿದ್ದ ಅಸಹಕಾರ ಆಂದೋಲನವನ್ನು ಕೈಬಿಡುತ್ತಾರೆ. ಇದರ ಪರಿಣಾಮವಾಗಿ ದೇಶದಾದ್ಯಂತ ನಡೆಯಬೇಕಾಗಿದ್ದ ಅಸಹಕಾರ ಚಳುವಳಿ ಹಾದಿ ತಪ್ಪಿತು. ಈ ಹತ್ಯಾಕಾಂಡದ ಘಟನೆಯನ್ನು ಇತಿಹಾಸಕಾರರು ಬ್ರಿಟೀಷ್ ಆಳ್ವಿಕೆಯ ಸಮಯದಲ್ಲಿ ನಡೆದ ಮೊದಲ ದೊಡ್ಡ ಘಟನೆ ಎಂದು ಉಲ್ಲೇಖಿಸುತ್ತಾರೆ.

ಪೋಲೀಸರ ಗುಂಡಿಗೆ ಬಲಿಯಾದ ಸ್ವಾತಂತ್ರ್ಯ ಚಳುವಳಿಗಾರರಲ್ಲದೇ, ಪ್ರತಿಭಟನಾಕಾರರ ಕೋಪಕ್ಕೆ ಬಲಿಯಾದ ಪೋಲೀಸರನ್ನು ಮುಂದಿನ ದಿನಗಳಲ್ಲಿ ಹುತಾತ್ಮರೆಂದು ಪರಿಗಣಿಸಲಾಯಿತು. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಪೋಲೀಸರು ತಮ್ಮ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಬಲಿಯಾದ ಕಾರಣ ಅವರನ್ನು ಹುತಾತ್ಮರೆಂದು ಕರೆದರು. ಅದೇ ರೀತಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಹೋರಾಟಗಾರ ಬಲಿದಾನವನ್ನು ಪರಿಗಣಿಸಿ ಅವರನ್ನೂ ಹುತಾತ್ಮರೆಂದು ಕರೆಯಲಾಯಿತು. ಇತಿಹಾಸದಲ್ಲಿ ಇದೊಂದು ರೀತಿಯ ವಿಚಿತ್ರ ಪ್ರಕರಣವೆಂದೇ ದಾಖಲಾಗಿದೆ.

ಪ್ರತೀ ವರ್ಷ ಫೆಬ್ರವರಿ ೪ನ್ನು ಇವರೆಲ್ಲರ ಬಲಿದಾನದ ಹುತಾತ್ಮರ ದಿನ ಎಂದು ಪರಿಗಣಿಸಲಾಗುತ್ತದೆ. ಘಟನೆ ನಡೆದ ಪೋಲೀಸ್ ಠಾಣೆಯ ಬಳಿಯೇ ಆ ಹುತಾತ್ಮ ಪೋಲೀಸರಿಗೆ ಸಮಾಧಿಯನ್ನು ನಿರ್ಮಿಸಲಾಗಿದೆ. 

ಈ ಘಟನೆಯ ತನಿಖೆಯಾಗಿ ಹಲವಾರು ಮಂದಿಗೆ ಗಲ್ಲು ಶಿಕ್ಷೆಯಾಗುತ್ತದೆ. ಪೋಲೀಸರು ನೂರಾರು ಮಂದಿಯನ್ನು ಬಂಧಿಸಿ ಆರೋಪ ಪಟ್ಟಿ ದಾಖಲಿಸುತ್ತಾರೆ. ೧೯೨೩ರ ಜನವರಿ ೯ ರಂದು ತೀರ್ಪು ಪ್ರಕಟಿಸಿದ ಅಂದಿನ ನ್ಯಾಯಾಧೀಶರಾದ ಹೋಲ್ಮಸ್ ಅವರು ತಮ್ಮ ೪೧೮ ಪುಟಗಳ ತೀರ್ಪಿನಲ್ಲಿ ೧೭೨ ಅಪರಾಧಿಗಳಿಗೆ ಮರಣ ದಂಡನೆ ವಿಧಿಸುತ್ತಾರೆ. ಇಬ್ಬರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ಸುಮಾರು ೪೭ ಮಂದಿಯನ್ನು ಬಿಡುಗಡೆ ಮಾಡುತ್ತಾರೆ. ಈ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ನಲ್ಲಿ ಮೇಲ್ಮನವಿಗೆ ನಿರ್ಧಾರ ಮಾಡಲಾಯಿತು. ಚಳುವಳಿಗಾರರ ಪರವಾಗಿ ವಾದ ಮಾಡಿದವರು ಪಂಡಿತ್ ಮದನ್ ಮೋಹನ್ ಮಾಳವಿಯಾ ಅವರು. ಅವರು ತಮ್ಮ ಪ್ರಭಾವಶಾಲೀ ವಾದದಿಂದ ಗಲ್ಲು ಶಿಕ್ಷೆಗೊಳಗಾಗಿದ್ದ ೧೭೨ ಮಂದಿಯಲ್ಲಿ ೧೫೩ ಮಂದಿಯನ್ನು ಬಚಾವು ಮಾಡುತ್ತಾರೆ. ಉಳಿದ ೧೯ ಮಂದಿಗೆ ಗಲ್ಲು ಶಿಕ್ಷೆಯಾಗುತ್ತದೆ. ಗಲ್ಲು ಶಿಕ್ಷೆ ತಪ್ಪಿದ ಸತ್ಯಾಗ್ರಹಿಗಳಿಗೆ ಸ್ವಲ್ಪ ವರ್ಷ ಜೈಲು ಶಿಕ್ಷೆ ಘೋಷಣೆಯಾಗುತ್ತದೆ. 

ಚೌರಿ ಚೌರಾ ಘಟನೆಯ ೧೦೦ ವರ್ಷ ತುಂಬಿದ ಸಲುವಾಗಿ ಕೇಂದ್ರ ಸರಕಾರವು ಅಂಚೆ ಚೀಟಿಯನ್ನು ತರಲು ಉದ್ದೇಶಿಸಿದೆ. ಈ ದುರಂತಮಯ ಇತಿಹಾಸದ ಕುರಿತು ಶಾಲಾ ಮಕ್ಕಳಿಗೆ ಅಧಿಕ ಮಾಹಿತಿ ನೀಡುವ ಸಲುವಾಗಿ ಉತ್ತರ ಪ್ರದೇಶ ಸರಕಾರವು ಈ ಘಟನೆಯ ಬಗ್ಗೆ ಪುಸ್ತಕವನ್ನು ಹೊರತರಲು ಉದ್ದೇಶಿಸಿದೆ. ಅದರಲ್ಲಿ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ವ್ಯಂಗ್ಯ ಚಿತ್ರಗಳು ಹಾಗೂ ಐತಿಹಾಸಿಕ ಚಿತ್ರಗಳನ್ನು ಬಳಸಿಕೊಳ್ಳುವರಂತೆ.  

ಚಿತ್ರ ೧: ಚೌರಿ ಚೌರಾ ಹತ್ಯಾಕಾಂಡದಲ್ಲಿ ನಿಧನಹೊಂದಿದವರಿಗೆ ನಿರ್ಮಿತವಾದ ಸ್ಮಾರಕ

ಚಿತ್ರ ೨: ಚೌರಿ ಚೌರಾ ಘಟನೆಯ ಚಿತ್ರ

ಚಿತ್ರ ಕೃಪೆ: ಅಂತರ್ಜಾಲ ತಾಣ