ಛಾಯಗ್ರಹಣದಲ್ಲಿ "Shutter Speed" ನ ಪಾತ್ರ

ಛಾಯಗ್ರಹಣದಲ್ಲಿ "Shutter Speed" ನ ಪಾತ್ರ

ಬರಹ

ಕ್ಯಾಮರಾದ ಸೆನ್ಸರ್ ಎಷ್ಟು ಸಮಯ ನೀವು ತೆಗೆಯುವ ಚಿತ್ರವನ್ನು ನೋಡುತ್ತದೆಯೋ ಆ ಕಾಲಾವಧಿಯೇ "Shutter Speed". ಇದನ್ನು ಸಾಮಾನ್ಯವಾಗಿ ೧/೧೦೦೦, ೧/೨೦೦, ೧/೬೦ ಮುಂತಾದ ಕ್ಷಣದ ಭಾಗದಲ್ಲಿ ಅಳೆಯುತ್ತಾರೆ. ಇಲ್ಲಿ ಭಾಜಕ ಕ್ಷಣದ ಭಾಗವನ್ನೂ, ಭಾಜ್ಯ ಕ್ಷಣವನ್ನೂ ಸೂಚಿಸುತ್ತದೆ. ಆದ್ದರಿಂದ ಭಾಜಕ ಹೆಚ್ಚಾದಂತೆಲ್ಲಾ "Shutter Speed" ಜಾಸ್ತಿಯಾಗುತ್ತದೆ ಮತ್ತು ಕ್ಯಾಮರಾದ ಸೆನ್ಸರ್ ಕಡಿಮೆ ಬೆಳಕನ್ನು ಪಡೆಯುತ್ತದೆ. "Shutter Speed" ೧/೬೦ ಗಿಂತ ಕಡಿಮೆ ಇದ್ದ ಪಕ್ಷದಲ್ಲಿ ಸಾಮಾನ್ಯವಾಗಿ ತೆಗೆದ ಚಿತ್ರದಲ್ಲಿ ಅಸ್ಪಷ್ಟತೆ ಇರುವುದರಿಂದ, ಇಂತಹ ಸಂದರ್ಭದಲ್ಲಿ ಟ್ರೈಪೋಡ್ ನ ನೆರವು ಅಗತ್ಯವಿರುತ್ತದೆ.

ನೀವು ತೆಗೆಯ ಹೊರಟ ಚಿತ್ರಕ್ಕೆ ಯಾವ "Shutter Speed" ಎಂದು ಅದರ ಚಲನೆಯನ್ನು ಗಮನಿಸಿ ನಿರ್ಧರಿಸಬಹುದು. ವೇಗವಾಗಿ ಚಲಿಸುವ ವಾಹನ, ಹರಿಯುವ ನೀರು, ಉಯ್ಯಾಲೆಯಲ್ಲಿ ಆಡುತ್ತಿರುವ ಮಕ್ಕಳು ಮುಂತಾದ ಚಲಿಸುವ ವಿಷಯವಾಗಿದ್ದಲ್ಲಿ, ಹೆಚ್ಚಿನ "Shutter Speed" ಬಳಸಿ, ಆ ಚಲನೆಯನ್ನು ನಿಮ್ಮ ಚಿತ್ರದಲ್ಲಿ ಸ್ತಬ್ಧಗೊಳಿಸಬಹುದು. ಗುಡ್ಡ, ಬೆಟ್ಟ, ಮರ ಮುಂತಾದ ಚಲಿಸದ ವಿಷಯವಾಗಿದ್ದಲ್ಲಿ ಇದನ್ನು ಕಡಿಮೆಮಾಡಬಹುದು. ಕೆಳಗಿನ ಚಿತ್ರದಲ್ಲಿ ಜೇನಿನ ಚಲನೆಯನ್ನು ಸ್ತಬ್ಧಗೊಳಿಸಲು ನಾನು ಉಪಯೋಗಿಸಿದ "Shutter Speed" ೧/೫೦೦.

ಮೇಲೆ ತಿಳಿಸಿದಂತೆ ಚಲಿಸುವ ವಸ್ತುಗಳನ್ನು ಸ್ತಬ್ಧಗೊಳಿಸಲು ಹೆಚ್ಚಿನ "Shutter Speed" ಅಗತ್ಯ ಇದೆಯಾದರೂ ಕೆಲವೊಂದು ಸಂದರ್ಭದಲ್ಲಿ, ಕಡಿಮೆ "Shutter Speed" ಉಪಯೋಗಿಸಿ ಚಲನೆಯ ಪರಿಣಾಮವನ್ನು ನಿಮ್ಮ ಚಿತ್ರದಲ್ಲಿ ಸೆರೆಹಿಡಿಯಬಹುದು.
ಈ ಕೆಳಗಿನ ಎರಡು ಚಿತ್ರ ಅದಕ್ಕೆ ಉದಾಹರಣೆ.


ಇಲ್ಲಿ ಸೈಕಲ್ ಸವಾರನನ್ನು ನನ್ನ ವಿಷಯವನ್ನಾಗಿಸಿಕೊಂಡು, ಚಲನೆಯನ್ನು ನನ್ನ ಚಿತ್ರದಲ್ಲಿ ಸೆರೆಹಿಡಿಯಲು ಕಡಿಮೆ "Shutter Speed" (೧/೧೫) ಬಳಸಿದ್ದೇನೆ. ಇಲ್ಲಿ ಸವಾರ ಸ್ಪಷ್ಟವಾಗಿದ್ದು, ಹಿನ್ನೆಲೆ ಅಸ್ಪಷ್ಟವಾಗಿದ್ದು ಚಲನೆಯನ್ನು ಬಿಂಬಿಸುತ್ತಿದೆ (panning).



ಈ ಚಿತ್ರದಲ್ಲಿ ಬೆಂಕಿಯ ಜಾಡನ್ನು ಚಿತ್ರಿಸಲು ನಾನು ಬಳಸಿದ್ದು ೧೫ ಕ್ಷಣಗಳಷ್ಟು ದೀರ್ಘವಾದ "Shutter Speed".

ಹಾಗಾಗಿ ಛಾಯಾಗ್ರಹಣದಲ್ಲಿ "Shutter Speed" ನ್ನು ಬೆಳಕು ಹಾಗು ಚಲನೆಯನ್ನು ನಿಯಂತ್ರಿಸಲು ಉಪಯೋಗಿಸಬಹುದು.