ಜಗಕೆ ಮಾದರಿ
ಕೇಳು ನಮ್ಮ ಚಿಂತೆಯನ್ನು
ನಂದನರಸಿ ಯಶೋದೆ
ದೂರು ಕೊಡಲು ಬಂದೆವಿಂದು
ಕೃಷ್ಣನಾಟ ತಾಳದೆ
ಮುದ್ದೆ ಬೆಣ್ಣೆ ಕದ್ದ ಕೃಷ್ಣ
ಅದನು ಮೆದ್ದುದಲ್ಲದೆ
ಮೊಸರು ಗಡಿಗೆ ಒಡೆದನಿಂದು
ಮೊಸರು ಪೂರ್ತಿ ಚೆಲ್ಲಿದೆ
ನಗುವೆಯೇಕೆ ರಾಣಿ ನೀನು
ನಾವು ದೂರು ನೀಡಿರೆ
ಕಳ್ಳ ಕೃಷ್ಣ ಕಾಣನಲ್ಲ
ಹೊರಗೆ ಕರೆಯಬಾರದೆ?
ನಗದೆ ಏನು ಮಾಡಲೀಗ
ಬಲ್ಲೆ ನಿಮ್ಮ ಆಟವ
ಇಂದು ನನ್ನ ಜೊತೆಗೆ ಇರುವ
ಕಾಡಲೆಂತು ಕೇಶವ?
ಅವನ ಕಂಡು ಹೋಗಲೆಂದು
ನೆಪವ ಹಿಡಿದು ಬಂದಿರಿ
ನನ್ನ ಕಂದ ಮುದ್ದು ಕೃಷ್ಣ
ಜಗಕೆ ಅವನು ಮಾದರಿ||
-ಪೆರ್ಮುಖ ಸುಬ್ರಹ್ಮಣ್ಯ ಭಟ್