ಜಗತ್ತನ್ನು ಅನುಭವಿಸುವ ರೀತಿ

ಜಗತ್ತನ್ನು ಅನುಭವಿಸುವ ರೀತಿ

ನೀವೆಲ್ಲ ರವೀಂದ್ರನಾಥ್ ಟ್ಯಾಗೋರ್ ಹೆಸರು ಕೇಳಿದ್ದೀರಿ. ಅವರಿಗೆ ಋಷಿ ಎಂದು ಕರೆಯುತ್ತಾರೆ. ಅವರ ಗೀತಾಂಜಲಿ ಎಂಬ ಪುಟ್ಟ ಪುಸ್ತಕಕ್ಕೆ ನೋಬೆಲ್ ಪಾರಿತೋಷಕದ ಬಹುಮಾನ ಬಂದಿರುವುದು ನಿಮಗೆಲ್ಲ ತಿಳಿದಿದೆ. ಅವರ ಜೀವನದ ಒಂದು ಘಟನೆ. ಅವರು ಶಾಂತಿನಿಕೇತನ ಸ್ಥಾಪಿಸಿ ಅಲ್ಲೇ ಇದ್ದರು. ಅದು ಹೆಸರಾಂತ ನೈಸರ್ಗಿಕ ವಿಶ್ವವಿದ್ಯಾನಿಲಯ ವಾಗಿತ್ತು. ಒಮ್ಮೆ ಶಾಂತಿನಿಕೇತನದಿಂದ ಕಲ್ಕತ್ತಾಗೆ ಹೋಗಲು ರೈಲ್ವೆ ಟಿಕೆಟ್ ಕಾಯ್ದಿರಿಸಿದ್ದರು. ಅವರ ಜೊತೆ ಕೆಲವರು ಹೋಗಲು ರೈಲು ಟಿಕೆಟ್ ಕಾಯ್ದಿರಿಸಿದ್ದರು. ಸಂಜೆ ವೇಳೆಗೆ ರೈಲು ಬರಲಿತ್ತು. ಆಗ ಸೂರ್ಯಾಸ್ತದ ಸಮಯ. ಸೂರ್ಯನ ಕೆಂಪಾದ ಕಿರಣಗಳು ಮೋಡಗಳು ವೈವಿಧ್ಯಪೂರ್ಣ ಸೌಂದರ್ಯ ರಚಿಸಿತು. ಶಾಂತಿನಿಕೇತನದಲ್ಲಿ ಹೂ ಹಣ್ಣುಗಳಿಂದ ತುಂಬಿದ್ದ ಗಿಡಮರಗಳು ಇದ್ದವು. ಕೆಂಪಾದ ಕಿರಣಗಳು ಹೂಗಳು ಗಿಡಗಳ ಮೇಲೆ ಬಿದ್ದು ಸೌಂದರ್ಯ ಎದ್ದು ಕಾಣುತ್ತಿತ್ತು. ಅದನ್ನೆಲ್ಲವನ್ನು ನೋಡುವುದರಲ್ಲಿ ಅನುಭವಿಸುವುದರಲ್ಲಿ ರವೀಂದ್ರನಾಥ್ ಟ್ಯಾಗೋರ್ ಮಗ್ನರಾಗಿದ್ದರು. ರೈಲಿಗೆ ತಡವಾಗುತ್ತಿತ್ತು. ಜೊತೆಯಲ್ಲಿದ್ದವರು ಬಂದು ಬೇಗ ಬೇಗ ಬನ್ನಿ ಸಾರ್ ಎಂದು ಒತ್ತಾಯ ಮಾಡುತ್ತಿದ್ದರು. ಆಗ ರವೀಂದ್ರನಾಥ್ ಟ್ಯಾಗೋರ್ ಅವರು ಹೇಳಿದ್ದು.... ರೈಲು ದಿನಾ ಬರುತ್ತದೆ. ಕಲ್ಕತ್ತವೂ ಇದ್ದಲ್ಲೇ ಇದೆ. ಅದು ಎಲ್ಲಿಗೂ ಹೋಗುವುದಿಲ್ಲ. ಈಗ ಮೂಡಿದೆಯಲ್ಲ ಸೌಂದರ್ಯ ನಾಳೆ ಮೂಡುತ್ತದೆ ಎನ್ನುವಂತಿಲ್ಲ. ಈಗ ಮೂಡಿದೆ ಈ ಕ್ಷಣವೇ ಅದನ್ನ ಅನುಭವಿಸಬೇಕು. ನಾಳೆ ಮೂಡುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಹಾಗಾಗಿ ನಾಳೆ ಹೋದರಾಯಿತು ಎಂದು ಸೌಂದರ್ಯ ಅನುಭವಿಸುವುದರಲ್ಲಿ ಮಗ್ನರಾಗಿದ್ದರು.  

ರವೀಂದ್ರನಾಥ್ ಟ್ಯಾಗೋರ್ ರವರ ಗೀತಾಂಜಲಿ ಪುಸ್ತಕಕ್ಕೆ ನೋಬೆಲ್ ಪಾರಿತೋಷಕ ಬಂದಂತಹ ಸಂದರ್ಭ. ಗಿಡ ಚಿಕ್ಕದಾಗಿದ್ದರೆ ನೆರಳು ಚಿಕ್ಕದಾಗಿರುತ್ತದೆ. ಮರ ದೊಡ್ಡದಾಗಿದ್ದರೆ ನೆರಳು ದೊಡ್ಡದಾಗಿರುತ್ತದೆ. ರವೀಂದ್ರನಾಥ್ ಟ್ಯಾಗೋರ್ ದೊಡ್ಡದಾಗಿ ಬೆಳೆದಿದ್ದರು. ಅವರಿಗೆ ವೈರಿಗಳು ಹೆಚ್ಚಾಗಿದ್ದರು. ಅವರ ವೈರಿಗಳು ರವೀಂದ್ರನಾಥ್ ಟ್ಯಾಗೋರ್ ಬಗ್ಗೆ ಬಹಳ ಟೀಕೆ ಟಿಪ್ಪಣಿ ಮಾಡುತ್ತಿದ್ದರು. ಬಹಳ ಕೆಟ್ಟದಾಗಿ ಟೀಕೆ ಮಾಡುತ್ತಿದ್ದರು. ಅವರನ್ನು ಇಂಚಿಂಚು ಹರಿದು ತಿನ್ನುತ್ತಿದ್ದರು. ಆಗ ಅವರ ಮಿತ್ರೊಬ್ಬರು ಬಂದು ಇದಕ್ಕೆ ಪ್ರತಿಕ್ರಿಯೆ ನೀಡುವಂತೆ ತಿಳಿಸಿದಾಗ ಅವರು ಹೇಳಿದ್ದು , "ನನಗೆ ಉತ್ತರ ಕೊಡಲು ವೇಳೆಯೆಲ್ಲಿದೆ...? ಸುಂದರ ಹೂವು ನೋಡುವುದರಲ್ಲಿಯೇ ಸಮಯ ಕಳೆದು ಹೋಗುತ್ತದೆ. ಸಮಯ ಎಲ್ಲಿದೆ ? ಜಗತ್ತಿನ ತುಂಬಾ ಒಳ್ಳೆಯದು ಸಾಕಷ್ಟಿದೆ. ಜಗತ್ತಿನ ತುಂಬಾ ಸೌಂದರ್ಯ ತುಂಬಿದೆ. ಅದನ್ನು ನೋಡಿ, ಮನಸ್ಸಿನಲ್ಲಿ ತುಂಬಿಕೊಂಡು, ಮಧುರ ಅಕ್ಷರಗಳಲ್ಲಿ ಮೂಡಿಸಬೇಕಾಗಿದೆ. ಒಳ್ಳೆಯದು ನೋಡಲು, ಕೇಳಲು, ಮಾಡಲು, ಭಾವಿಸಲು ಮತ್ತು ಚಿಂತಿಸಲು ಸಮಯ ಸಾಕಾಗುತ್ತಿಲ್ಲ. ಸಮಯ ಎಲ್ಲಿದೆ ಹೇಳಿ....? ಅವರಿಗೆ ಸಮಯವಿದೆ. ಅವರಿಗೆ ಮಾಡಲು ಬೇರೆ ಕೆಲಸವಿಲ್ಲ. ಅವರು ಅವರ ಕೆಲಸ ಮಾಡಲಿ. ನಾನು ನನ್ನ ಕೆಲಸ ಮಾಡುತ್ತೇನೆ. ಅವರಿಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ" ಎಂದರು.

ರವೀಂದ್ರನಾಥ್ ಟ್ಯಾಗೋರ್ ಯಾವುದನ್ನೂ ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ಕೇವಲ ಒಳ್ಳೆಯದನ್ನು ಮಾತ್ರ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಜಗತ್ತು ಕೆಟ್ಟಿದೆ ಎಂದು ಹೇಳುತ್ತೇವೆ. ಆವಾಗ ಇದ್ದಂತಹ ಗಿಡ, ಮರ, ಹೂವು ಈಗಲೂ ಇದೆ. ಆಗಿನ ಸೂರ್ಯೋದಯ ಸೂರ್ಯಾಸ್ತ ಈಗಲೂ ಇದೆ. ಆಗಲೂ ಇದ್ದ ಹೊಳೆ, ನದಿ, ಪರ್ವತ, ಸರೋವರ, ಸಾಗರ, ನಕ್ಷತ್ರ, ಚಂದ್ರೋದಯ ಮತ್ತು ಮಳೆ ಈಗಲೂ ಇದೆ. ಜಗತ್ತು ಬದಲಾಗಿಲ್ಲ. ನಾವು ನೋಡುವ ನೋಟ, ದೃಷ್ಟಿಕೋನ ಮತ್ತು ರೀತಿ ಬದಲಾಗಿದೆ. ಭಾವ ಬದಲಾಗಿದೆ. ಸೌಂದರ್ಯ ಸವಿಯಲು ಹಣ ವೆಚ್ಚ ಮಾಡಬೇಕಾಗಿಲ್ಲ. ಒಂದು ಸಿನಿಮಾ ನೋಡಲು ಹಣ ಬೇಕು. ಸೂರ್ಯೋದಯ ಸೂರ್ಯಾಸ್ತದ ಚಿತ್ರ ತೆಗೆಯಲು ಹಣ ಬೇಕು. ಪ್ರತ್ಯಕ್ಷ ಸೂರ್ಯೋದಯ, ಪ್ರತ್ಯಕ್ಷ ಸೂರ್ಯಾಸ್ತ , ಪ್ರತ್ಯಕ್ಷ ಚಂದ್ರೋದಯ, ಪ್ರತ್ಯಕ್ಷ ಆಕಾಶ ಇದನ್ನೆಲ್ಲಾ ನೋಡಲು ಏನು ಬೇಕಾಗಿದೆ....? ಕೇವಲ ಮನಸ್ಸು ಬೇಕಾಗಿದೆ. ಒಳ್ಳೆಯದನ್ನು ನೋಡಲು ಬಹಳ ಕಷ್ಟ ಪಡಬೇಕಾಗಿಲ್ಲ. ಕೆಟ್ಟದ್ದನ್ನು ನೋಡಲು ಕಷ್ಟ ಪಡಬೇಕು. ಎಷ್ಟು ಒಳ್ಳೆಯದಿದೆ ಜಗತ್ತು. ನಮ್ಮ ದೃಷ್ಟಿಕೋನ ಭಾವನೆಗಳನ್ನು ಬದಲಾವಣೆ ಮಾಡಿಕೊಂಡರೆ ಸೌಂದರ್ಯ, ಮಾಧುರ್ಯ ಅನುಭವಿಸಲು ಸಾಧ್ಯವಾಗುತ್ತದೆ. ಒಳ್ಳೆಯದು ಜಗತ್ತಿನಲ್ಲಿ ಸಾಕಷ್ಟು ಇದ್ದರೂ ದೃಷ್ಟಿಕೋನ ಭಾವನೆ ಮತ್ತು ರೀತಿ ಬದಲಾಗದಿದ್ದರೆ ಏನೆಲ್ಲಾ ಇದ್ದರೂ ನರಕವೇ. ಜಗತ್ತನ್ನ , ಜಗತ್ತಿನ ಪ್ರತೀ ವಸ್ತುವನ್ನು ಅನುಭವಿಸಲು ಮಧುರ ಭಾವ ತುಂಬಿದ ಪ್ರೇಮ ಬೇಕಾಗುತ್ತದೆ. ಪ್ರೇಮದಿಂದ ನೋಡಿದರೆ ಜಗತ್ತು ಅದ್ಬುತವಾಗುತ್ತದೆ. ಅದೇ ಸ್ವರ್ಗ. ನಿಸರ್ಗದಲ್ಲಿ ಪ್ರತಿದಿನ, ಪ್ರತಿ ಕ್ಷಣ ಹೊಸದು ಹೊಸದು ನಿರ್ಮಾಣವಾಗುತ್ತಿದೆ. ಇಂದು ಇದ್ದದ್ದು ನಾಳೆ ಇಲ್ಲ. ಅಷ್ಟು ವೈಭವ ಪೂರ್ಣ ಜಗತ್ತನ್ನು ಅನುಭವಿಸುವ ರೀತಿ ಬಹಳ ಮುಖ್ಯ ಅಲ್ಲವೇ?

-ಎಂ.ಪಿ. ಜ್ಞಾನೇಶ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ