ಜಗತ್ತನ್ನು ಆಳುವ ಮೂರು ಮಹಾನ್ ಶಕ್ತಿಗಳೆಂದರೆ...
ಮೂರು ಮಹಾನ್ ಶಕ್ತಿಗಳು ಜಗತ್ತನ್ನು ಆಳುತ್ತವೆ. ಅವೆಂದರೆ, ಮೂರ್ಖತನ - ಭಯ - ದುರಾಸೆ - ಆಲ್ಬರ್ಟ್ ಐನ್ ಸ್ಟೈನ್...ಜಗತ್ತಿನ ಅತ್ಯಂತ ಬುದ್ದಿವಂತ ಎಂದು ಕರೆಯಲ್ಪಡುವ ವಿಜ್ಞಾನಿ ಹೇಳಿದ ಮಾತಿದು.
ಇದರ ವಿರುದ್ಧ ಪದಗಳು.
ಮೂರ್ಖತನ × ಬುದ್ದಿವಂತಿಕೆ,
ಭಯ × ಧೈರ್ಯ,
ದುರಾಸೆ × ಆಸೆ.
ಚಿಂತನೆಗೆ ಹಚ್ಚುವ ಬಹುಮುಖ್ಯ ವಿಷಯವಿದು. ಒಂದು ರೀತಿಯಲ್ಲಿ ನಮ್ಮೊಳಗೆ ಒಂದು ಆತ್ಮಾವಲೋಕನ ಪ್ರಕ್ರಿಯೆಗೆ ಚಾಲನೆ ನೀಡಬಹುದಾದ ವಿಷಯವಿದು. ವ್ಯಕ್ತಿಗತವಾಗಿ ಇದನ್ನು ಹೇಳಿರುವುದು ಜಗತ್ತಿನ ಅತ್ಯಂತ ಬುದ್ದಿವಂತ ವ್ಯಕ್ತಿ. ಆದ್ದರಿಂದ ಇದು ಪರಿಶೀಲನೆಗೆ ಅರ್ಹ ಎಂದು ಭಾವಿಸುತ್ತೇನೆ. ಭಾರತದ ಮಟ್ಟಿಗೆ ಈ ಮೂರು ಅಂಶಗಳು ಬಹುತೇಕ ಸತ್ಯ ಮತ್ತು ವಾಸ್ತವ.
ನೇರವಾಗಿ ಹೇಳಬೇಕೆಂದರೆ ಈ ಸಮಾಜದೊಂದಿಗಿನ ನನ್ನ ಅನುಭವದಲ್ಲಿ ರೂಪಗೊಂಡಿರುವ ಅಭಿಪ್ರಾಯವೆಂದರೆ ಭಾರತದ ಮದ್ಯಮ ವರ್ಗದ ಜನ ಬಹುತೇಕ ಮೂರ್ಖತನದ ಹತ್ತಿರದಲ್ಲಿದ್ದಾರೆ. ಆದರೆ ಆ ಮೂರ್ಖತನ ಸಂಪೂರ್ಣ ಅರಿವಿಲ್ಲದ ಸಹಜ ಅಜ್ಞಾನವಲ್ಲ. ಅದು ಸ್ವಾರ್ಥ ಮತ್ತು ಸೋಮಾರಿತನದ ಮಿಶ್ರಣವಾಗಿ ಕಂಡುಬರುತ್ತದೆ.
ಬಹುತೇಕ ಶ್ರೀಮಂತರು ಅಹಂಕಾರ ಮತ್ತು ದುಷ್ಟತನದ ಹತ್ತಿರದಲ್ಲಿದ್ದಾರೆ. ಅದು ಹಣ ಅಧಿಕಾರ ಅಂತಸ್ತಿನ ಸಮ್ಮಿಲನದ ಒಟ್ಟು ಭಾವ. ಮೂರ್ಖತನದ ಇನ್ನೊಂದು ಮುಖ. ಬಡವರು ಬದುಕುವುದೇ ಒಂದು ಸಾಧನೆ ಎಂಬ ಅತ್ಯಂತ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಅವರು ಅಜ್ಞಾನಿಗಳೇ ಆದರೂ ಅದೊಂದು ಅನಿವಾರ್ಯ ಮೂರ್ಖತನ ಮತ್ತು ವ್ಯವಸ್ಥೆಯ ಸೃಷ್ಟಿ.
ಭಯ, ಇದು ಸಹ ಮಧ್ಯಮ ವರ್ಗದವರಲ್ಲಿಯೇ ಹೆಚ್ಚು. ಭಯ ಕೇವಲ ಒಂದು ರೀತಿಯಲ್ಲಿ ಇಲ್ಲ. ಅದು ಸಾವಿನ ಭಯ, ಸೋಲಿನ ಭಯ, ಅವಮಾನದ ಭಯ, ಕಳೆದುಕೊಳ್ಳುವ ಭಯ ಹೀಗೆ ನಾನಾ ರೀತಿಯಲ್ಲಿರುತ್ತದೆ. ಇಲ್ಲಿ ಶ್ರೀಮಂತರಿಗೂ ಭಯ ಇರುತ್ತದೆ. ಆದರೆ ತಮ್ಮ ಬಳಿ ಇರುವ ಹಣದಿಂದ ವ್ಯಾವಹಾರಿಕವಾಗಿ ಅದನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಅದು ಇನ್ನೊಂದು ರೀತಿಯಲ್ಲಿ ಹೆಚ್ಚು ಭಯವಾಗಿ ಮಾರ್ಪಡುತ್ತದೆ. ಬಡವರಿಗೆ ಹಣವಿಲ್ಲದ ಕಾರಣವೇ ಭಯ ಸ್ವಲ್ಪ ಕಡಿಮೆಯಾಗಲು ಕಾರಣವಾಗಿರುತ್ತದೆ. ಆದರೆ ಅವರಿಗೆ ಸದಾ ಬದುಕಿನ ಭಯವೇ ಕಾಡುತ್ತಿರುತ್ತದೆ. ದುರಾಸೆ. ಇಲ್ಲಿ ಶ್ರೀಮಂತ ಮತ್ತು ಮಧ್ಯಮ ವರ್ಗದವರಲ್ಲಿ ಅಂತಹ ವ್ಯತ್ಯಾಸವೇನು ಇಲ್ಲ. ಆಸೆ, ಅತಿಯಾಸೆ, ಮಹದಾಸೆ, ದುರಾಸೆಯಾಗಿ ಪರಿವರ್ತನೆಯಾಗುತ್ತಾ ಸಾಗುತ್ತದೆ. ಇದು ಎಂದೂ ತೃಪ್ತಿಯಾಗದ ನಿರಂತರ ಅತೃಪ್ತಿಯಾಗಿ ಜೀವ ಇರುವವರಿಗೂ ಕಾಡುತ್ತದೆ. ಇದಕ್ಕೆ ಮಿತಿಯೇ ಇಲ್ಲ. ಬಡವರ ಆಸೆ ದುರಾಸೆ ಬಹುತೇಕ ಜೀವನದ ಮೂಲಭೂತ ಅವಶ್ಯಕತೆಗಳಿಗೇ ಸೀಮಿತವಾಗಿರುತ್ತದೆ.
ಮೂಲಭೂತವಾಗಿ ಮನುಷ್ಯನ ಈ ಮೂರ್ಖತನ ಭಯ ಮತ್ತು ದುರಾಸೆಗಳು ಆತ ನಾಗರಿಕ ಸಮಾಜದ ಪ್ರವೇಶಿಸುವಾಗಲೇ ಆತನೊಳಗೆ ಬೆಳವಣಿಗೆ ಹೊಂದಿರಬೇಕು. ಅದನ್ನು ಧಾರ್ಮಿಕ ಚಿಂತಕರು ಭಕ್ತಿ - ನಂಬಿಕೆಯಾಗಿ ಮಾರ್ಪಡಿಸಿ ಜನರನ್ನು ಆ ಮೂಲಕ ನಿಯಂತ್ರಿಸಿ ಆಳುತ್ತಾರೆ. ತದನಂತರ ರಾಜಪ್ರಭುತ್ವ ಜನರ ಈ ಭಾವನೆಗಳ ಮೇಲೆಯೇ ಅವರನ್ನು ಗುಲಾಮರನ್ನಾಗಿಸಿ ಆಡಳಿತ ನಡೆಸುತ್ತದೆ. ರಾಜ ಪ್ರತ್ಯಕ್ಷ ದೈವ ಎಂಬುದನ್ನು ಬಲವಾಗಿ ನಂಬಿಸಲಾಗುತ್ತದೆ. ಇದು ಕೆಲವು ಸಂದರ್ಭಗಳಲ್ಲಿ ಉತ್ತಮ, ಕೆಲವು ಸನ್ನಿವೇಶಗಳಲ್ಲಿ ಸಮಾಧಾನಕರ, ಮತ್ತೆ ಕೆಲವು ಕಾಲಘಟ್ಟದಲ್ಲಿ ಘನಘೋರ ಪರಿಣಾಮ ಬೀರಿರುತ್ತದೆ.
ಇದನ್ನೆಲ್ಲಾ ಮೀರಿ ಇದರ ಆಧುನಿಕ ರೂಪಾಂತರವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾಗುತ್ತದೆ. 19 ನೇ ಶತಮಾನದ ಐನ್ ಸ್ಟೈನ್ ಈ ಮಾತುಗಳನ್ನು ಹೇಳಿರಬೇಕಾದರೆ ಅದು ಈಗಲೂ ಎಷ್ಟು ಪ್ರಸ್ತುತ ಎಂದು ಯೋಚಿಸಿದರೆ ಆಶ್ಚರ್ಯವಾಗುತ್ತದೆ. ಈಗಲೂ ನಮ್ಮ ಆಡಳಿತ ವ್ಯವಸ್ಥೆ ಜನರ ಈ ಭಾವನೆಗಳ ಮೇಲೆಯೇ ಸವಾರಿ ಮಾಡುತ್ತಿದೆ. ದರೋಡೆಕೋರ, ಅತ್ಯಾಚಾರಿ, ವಚನ ಭ್ರಷ್ಟ, ಕ್ರಿಮಿನಲ್ ಗಳು ಚುನಾವಣೆಯಲ್ಲಿ ಲಕ್ಷಾಂತರ ಮತಗಳನ್ನು ಪಡೆದು ಆಯ್ಕೆಯಾಗುತ್ತಿರುವಾಗ ಐನ್ ಸ್ಟೈನ್ ಮಾತು ನಿಜ ಎನಿಸುವುದಿಲ್ಲವೇ ?
ನಮ್ಮದೇ ತೆರಿಗೆ ಹಣ ತಿಂದು ತಮ್ಮ ಸಂಸಾರ ಸಾಗರದಲ್ಲಿ ಸುಖವಾಗಿ ತೇಲುತ್ತಿರುವ ಅಧಿಕಾರಿಗಳು ನಮ್ಮ ಬಳಿಯೇ ಲಂಚ ತಿಂದು ನಮ್ಮನ್ನೇ ಅಸ್ಪೃಶ್ಯರಂತೆ ನೋಡುವ ವ್ಯವಸ್ಥೆ ರಾಜಾರೋಷವಾಗಿ ನಡೆಯುವಾಗ ಐನ್ ಸ್ಟೈನ್ ನೆನಪಾಗುವುದಿಲ್ಲವೇ ? ಒಂದೇ ಕಾನೂನಿನ ನಿಯಮವನ್ನು ಬಡವರಿಗೆ ಒಂದು ರೀತಿ, ಶ್ರೀಮಂತರಿಗೆ - ಬಲಿಷ್ಠರಿಗೆ - ತಮ್ಮ ಸಂಬಂಧಿಗಳಿಗೆ ಒಂದು ರೀತಿ ನಮ್ಮ ಕಣ್ಣ ಮುಂದೆಯೇ ಬಹಿರಂಗವಾಗಿ ಅನ್ವಯಿಸುತ್ತಿರುವಾಗ ನಾವು ಮೂಕ ಪ್ರೇಕ್ಷಕರಂತೆ ನೋಡುತ್ತಿರುವಾಗ ಐನ್ ಸ್ಟೈನ್ ಗಹಗಹಿಸಿ ನಗುತ್ತಿರುವಂತೆ ಭಾಸವಾಗುವುದಿಲ್ಲವೇ ?
ಚುನಾವಣಾ ಸಮಯದಲ್ಲಿ ಮತ್ತೆ ಮತ್ತೆ ಸುಳ್ಳು ಪೊಳ್ಳು ಭರವಸೆಗಳನ್ನು ಕೊಡುತ್ತಾ, ಅತ್ಯಂತ ನೀಚ ಭಾಷೆಯಲ್ಲಿ ಪರಸ್ಪರ ನಿಂದಿಸುತ್ತಾ, ಜಾತಿ ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯುತ್ತಾ, ಹಣ ಹೆಂಡ ಸೀರೆ ಪಂಚೆ ಹಂಚಿ ಗೆಲ್ಲುತ್ತಾ, ಅದನ್ನು ವಂಶಪಾರಂಪರ್ಯವಾಗಿ ಆಳುತ್ತಾ, ಬೆಲೆ ಏರಿಸಿಯೂ ಧೈರ್ಯವಾಗಿ ಓಡಾಡುತ್ತಾ, ಸಮಾಜದ ನಾಯಕರಾಗಿ ಈ ದುಷ್ಟರೇ ಆಳುತ್ತಿರುವಾಗ ಐನ್ ಸ್ಟೈನ್ ಒಬ್ಬ ನಿಜವಾದ ದೂರದೃಷ್ಟಿಯ ಸತ್ಯ ಶೋಧಕ ಎಂದು ಮನಸ್ಸು ನುಡಿಯುವುದಿಲ್ಲವೇ ?
ಇದು ಸಾಂಕೇತಿಕ ಉದಾಹರಣೆಗಳು ಮಾತ್ರ. ಆಳಕ್ಕೆ ಇಳಿದರೆ ಬ್ರಹ್ಮಾಂಡದ ದರ್ಶನವಾಗುತ್ತದೆ. ಇದರ ಒಟ್ಟು ಪರಿಣಾಮ ವಿಶ್ವಸಂಸ್ಥೆ ಅಧ್ಯಯನದ ಮೂಲಕ ನಿಗದಿಪಡಿಸಿದ ಮಾನವನ ನೆಮ್ಮದಿಯ ಗುಣಮಟ್ಟದ ಆಧಾರದಲ್ಲಿ ಭಾರತ ಈಗಲೂ ಸಹ 200 ದೇಶಗಳ ಪೈಕಿ 140 ರ ಆಸುಪಾಸಿನಲ್ಲಿಯೇ ಇದೆ. ಅಂದರೆ ಸ್ವಾತಂತ್ರ್ಯ ನಂತರ ಭಾರತದ ಪ್ರಗತಿ ಭೌತಿಕವಾಗಿ ಅಭಿವೃದ್ಧಿಯ ಕಡೆಗೆ ಸಾಗುತ್ತಿದ್ದರು ಜನರ ಜೀವನಮಟ್ಟದ ಆಧಾರದಲ್ಲಿ ತೀವ್ರವಾಗಿ ಕುಸಿಯುತ್ತಿದೆ. ಗಾಳಿ ನೀರು ಆಹಾರದ ಕಲ್ಮಶ, ಪ್ರಜಾಪ್ರಭುತ್ವ ಸಂಸ್ಥೆಗಳ ಭ್ರಷ್ಟಾಚಾರ ಒಟ್ಟು ಆತನ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಂಪೂರ್ಣ ಕುಸಿಯುವಂತೆ ಮಾಡಿದೆ. ಆತನ ಯೋಚನಾ ಶಕ್ತಿಯೇ ದುರ್ಬಲವಾಗಿದೆ. ಅದರ ಫಲವಾಗಿ ಭ್ರಷ್ಟ ವ್ಯವಸ್ಥೆ ನಮ್ಮನ್ನು ನಿರಂತರವಾಗಿ ಆಳುತ್ತಿದೆ.
ಈಗಲೂ ಕಾಲ ಮಿಂಚಿಲ್ಲ. ಯಾವುದೇ ಹೆಚ್ಚು ಶ್ರಮ ಪಡದೆ ನಮ್ಮ ನಮ್ಮ ಮನಸ್ಸುಗಳಲ್ಲಿ ಒಂದು ಮುಕ್ತ ಮತ್ತು ಸ್ವಾರ್ಥವಿಲ್ಲದ ಆತ್ಮ ವಿಮರ್ಶೆ ಮಾಡಿಕೊಂಡು ಬುದ್ಧಿವಂತಿಕೆಯಿಂದ, ಧೈರ್ಯದಿಂದ, ಒಳ್ಳೆಯವರಾಗಿ ನೆಮ್ಮದಿಯಿಂದ ಬದುಕುವ ಆಸೆಯಿಂದ ಒಂದು ತೀರ್ಮಾನ ಕೈಗೊಂಡು, ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ,
ನಮ್ಮ ಸುತ್ತಮುತ್ತಲಿನ ಜನರಲ್ಲಿ ಒಂದು ಬದಲಾವಣೆ ಉಂಟು ಮಾಡಿದರೆ ಐನ್ ಸ್ಟೈನ್ ಮಾತನ್ನು ಸುಳ್ಳಾಗಿಸಬಹುದು. ಜ್ಞಾನ ಧೈರ್ಯ ಬದುಕುವ ಆಸೆ ನಮ್ಮನ್ನು ಆಳಬಹುದು. ಇದು ಹಗಲುಗನಸಲ್ಲ. ಖಂಡಿತ ಈ ಸಂಪರ್ಕ ಕ್ರಾಂತಿಯ ಸಂದರ್ಭದಲ್ಲಿ ನನಸಾಗಬಹುದಾದ ಸಾಧ್ಯತೆ ಇರುವ ವಿಷಯ. ದಯವಿಟ್ಟು ಗಂಭೀರವಾಗಿ ಯೋಚಿಸಿ. ಜನರನ್ನು ಮೂರ್ಖರೆಂದು ಕರೆದು ಬುದ್ದಿವಂತ ಎಂದು ಹೆಸರಾದ ಐನ್ ಸ್ಟೈನ್ ಮಾತುಗಳನ್ನು ಸುಳ್ಳಾಗಿಸಿ ಜನರು ಬುದ್ದಿವಂತರು ಐನ್ ಸ್ಟೈನ್ ಒಬ್ಬ ಮೂರ್ಖ ಎಂದು ಹೇಳುವ ಸುವರ್ಣಾವಕಾಶ ನಮ್ಮ ಮುಂದಿದೆ. ಈಗ ಯೋಚಿಸುವ ಸರದಿ ನಮ್ಮದು.
-ವಿವೇಕಾನಂದ ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ