ಜಗತ್ತನ್ನು ತಲ್ಲಣಿಸುವಂತೆ ಮಾಡಿದ ಸ್ಪಾನಿಷ್ ಫ್ಲೂ

ಜಗತ್ತನ್ನು ತಲ್ಲಣಿಸುವಂತೆ ಮಾಡಿದ ಸ್ಪಾನಿಷ್ ಫ್ಲೂ

ಈಗಾಗಲೇ ನೀವು ಜಗತ್ತಿಗೆ ಕಾಡಿದ ಮಹಾಮಾರಿಗಳಾದ ಪ್ಲೇಗ್ ಮತ್ತು ಮಲೇರಿಯಾ ಬಗ್ಗೆ ತಿಳಿದುಕೊಂಡಿರುವಿರಿ. ಈ ಬಾರಿ ನಾನು ಜಗತ್ತನ್ನು ತಲ್ಲಣಿಸುವಂತೆ ಮಾಡಿದ ಭೀಕರ ಕಾಯಿಲೆ ಸ್ಪಾನಿಷ್ ಫ್ಲೂ ಬಗ್ಗೆ ಸ್ವಲ್ಪ ವಿವರಗಳನ್ನು ನೀಡಲಿರುವೆ. ಈ ಜ್ವರದ ಹೆಸರಿನಲ್ಲಿ ಸ್ಪಾನಿಷ್ ಇರುವುದರಿಂದ ಇದು ಸ್ಪೇನ್ ದೇಶದಲ್ಲಿ ಹುಟ್ಟಿಕೊಂಡಿತು ಎಂದು ನೀವು ಅಂದಾಜಿಸಿರಬಹುದಲ್ಲವೇ? ನಿಮ್ಮ ಅಂದಾಜು ತಪ್ಪು. ಹಾಗಾದರೆ ಈ ರೋಗಕ್ಕೆ ‘ಸ್ಪಾನಿಷ್ ಫ್ಲೂ’ ಎಂಬ ಹೆಸರು ಬಂದದ್ದಾದರೂ ಹೇಗೆ?

೧೯೧೫ರಲ್ಲಿ ಈ ಕಾಯಿಲೆ ಪ್ರಪಂಚದಾದ್ಯಂತ ಹರಡಲು ಪ್ರಾರಂಭವಾದಾಗ ಜಗತ್ತು ಮೊದಲ ವಿಶ್ವಯುದ್ಧದ ಕಪಿ ಮುಷ್ಟಿಯಲ್ಲಿ ನರಳುತ್ತಿತ್ತು. ಈ ಯುದ್ಧದ ಸಮಯದಲ್ಲಿ ಹಲವಾರು ರಾಷ್ಟ್ರಗಳು ತಟಸ್ಥ ನೀತಿಯನ್ನು ಅನುಸರಿಸಿದ್ದವು. ಅವುಗಳಲ್ಲಿ ಸ್ಪೇನ್ ದೇಶವೂ ಒಂದು. ಈ ಕಾರಣಗಳಿಂದಾಗಿ ಸ್ಪೇನ್ ಮಾಧ್ಯಮಗಳ ಮೇಲೆ ಯಾವುದೇ ನಿರ್ಭಂಧ ಹೇರಿರಲಿಲ್ಲ. ಹಾಗಾಗಿ ಸ್ಪೇನ್ ನ ಪತ್ರಕರ್ತರು ಜಗತ್ತಿನಾದ್ಯಂತ ಸಂಚರಿಸುತ್ತಾ ಯುದ್ಧದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದರು. ಈ ಕಾರಣದಿಂದ ವಿಶ್ವಯುದ್ಧದಲ್ಲಿ ಭಾಗವಹಿಸಿದ್ದ ಬ್ರಿಟನ್ ಹಾಗೂ ಫ್ರಾನ್ಸ್ ದೇಶಗಳಲ್ಲಿ ಹರಡಿದ್ದ ಈ ಜ್ವರ ಸ್ಪೇನ್ ತಲುಪಿದ ಕೂಡಲೇ ಅಲ್ಲಿನ ಪತ್ರಕರ್ತರು ಇದನ್ನು ದೊಡ್ಡ ಸುದ್ದಿಯನ್ನಾಗಿಸಿದರು. ಇದರಿಂದ ಉಳಿದ ಯಾವುದೇ ದೇಶಗಳಲ್ಲಿ ಹರಡದ ಸುದ್ದಿ ಸ್ಪೇನ್ ನಲ್ಲಿ ಬಹುಬೇಗನೇ ಹರಡಿತು. ಈ ಜ್ವರ ಸ್ಪೇನ್ ನಲ್ಲಿ ಬಹಳವಾಗಿ ಹರಡಿದ ಕಾರಣ ಅದಕ್ಕೆ ‘ಸ್ಪಾನಿಷ್ ಫ್ಲೂ’ ಎಂಬ ಹೆಸರು ಬಂತು.

ಈ ಜ್ವರದಿಂದ ಸುಮಾರು ಐದು ನೂರು ಮಿಲಿಯನ್ ಜನರು ಸೋಂಕಿತರಾದರು. ಐವತ್ತು ಮಿಲಿಯನ್ ಜನ ತಮ್ಮ ಪ್ರಾಣವನ್ನು ಕಳೆದುಕೊಂಡರು. ಆ ಸಮಯದಲ್ಲಿ ಯುದ್ಧ ನಿರಂತರವಾಗಿ ನಡೆಯುತ್ತಿದ್ದುದರಿಂದ ಜನರು ಪ್ರಾಣ ರಕ್ಷಣೆಗಾಗಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಲಸೆ ಹೋಗುವುದು ಸಾಮಾನ್ಯವಾಗಿತ್ತು, ಈ ಕಾರಣಗಳಿಂದಾಗಿ ಹಲವಾರು ದೇಶಗಳಲ್ಲಿ ಸಾಂಕ್ರಾಮಿಕ ಜ್ವರ ಬಹುಬೇಗನೇ ಪ್ರಪಂಚದಾದ್ಯಂತ ಹರಡಿತು. ಕಳೆದ ಮೂರು ವರ್ಷಗಳ ಹಿಂದೆ ಬಂದಿದ್ದ ಕೊರೋನಾ ಸಮಯದಲ್ಲಿ ನಾವು ಹೇಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೆವೋ ಅದೇ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಸ್ಪಾನಿಷ್ ಫ್ಲೂ ಸಮಯದಲ್ಲಿ ವ್ಯಾಪಕವಾಗಿ ಜಾರಿಗೊಳಿಸಲಾಯಿತು. ಈ ರೋಗಕ್ಕೆ ರೋಗನಿರೋಧಕ ಔಷಧಗಳನ್ನು ಕಂಡು ಹಿಡಿಯಲು ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರವಾಗಿ ಸಂಶೋಧನೆಗಳು ನಡೆದವು. ಸೋಂಕಿತರನ್ನು ಆರೋಗ್ಯವಂತರಿಂದ ಪ್ರತ್ಯೇಕಿಸಿ ‘ಕ್ವಾರಂಟೈನ್' ಮಾಡುವುದು. ಸೋಂಕಿತರ ಸಂಪರ್ಕಕ್ಕೆ ಬಂದ ವಸ್ತುಗಳನ್ನು ಶುದ್ಧೀಕರಣ (ಸ್ಯಾನಿಟೈಜ್) ಮಾಡುವುದು ಅಥವಾ ನಾಶ ಮಾಡುವುದು. ಮುಖ ಕವಚ (ಮಾಸ್ಕ್) ಧರಿಸುವುದು ಮೊದಲಾದ ಕ್ರಮಗಳನ್ನು ಕೈಗೊಂಡು ರೋಗವನ್ನು ನಿಯಂತ್ರಣಕ್ಕೆ ತರಲು ಸರ್ವ ಪ್ರಯತ್ನ ಮಾಡಲಾಯಿತು.

ಈ ರೋಗ ಸಾಮಾನ್ಯವಾಗಿ ಯುವ ಜನರನ್ನೇ ಕಾಡಿದ್ದು ವಿಶೇಷ. ಅವರ ಅಕಾಲ ಮೃತ್ಯುವಿನ ಪರಿಣಾಮ ಎಳೆಯ ಮಕ್ಕಳು ಮತ್ತು ವೃದ್ಧ ಜನರು ನಿರಾಶ್ರಿತರಾದರು. ಅವರನ್ನು ಫ್ಲೂ ಆರ್ಫನ್ಸ್ ( ಜನರದ ನಿರಾಶ್ರಿತರು) ಎಂದು ಪರಿಗಣಿಸಿ ಅವರ ಪುನರ್ವಸತಿಯ ಬಗ್ಗೆ ಸರಕಾರಗಳು ಕ್ರಮ ಕೈಗೊಂಡವು. ಹಲವು ಮಂದಿ ತಮ್ಮ ಮಕ್ಕಳನ್ನು ಕಳೆದುಕೊಂಡು ನಂತರದ ದಿನಗಳಲ್ಲಿ ಅಧಿಕ ಮಕ್ಕಳನ್ನು ಪಡೆಯುವ ಮನಸ್ಸು ಮಾಡಿದ ಕಾರಣ ಆ ಘಟನೆಯ ಬಳಿಕ ಯುರೋಪ್ ನಲ್ಲಿ ಜನಸಂಖ್ಯೆ ಒಮ್ಮೆಲೇ ಅಧಿಕವಾಯಿತು. ಸರಕಾರಗಳು ಪ್ರತೀ ಮನೆಯಲ್ಲಿ ಪ್ರತ್ಯೇಕ ಶೌಚಾಲಯದಂತಹ ಮೂಲಭೂತ ಸೌಲಭ್ಯಗಳು ಇರಬೇಕು ಎನ್ನುವ ಬಗ್ಗೆ ಅಧಿಕ ಗಮನ ಹರಿಸಿತು. ಅಮೇರಿಕ ದೇಶವು ಈ ಜ್ವರಕ್ಕೆ ಪರ್ಯಾಯ ಚಿಕಿತ್ಸಾ ಪದ್ಧತಿಗಳ ಮೊರೆ ಹೋಯಿತು. ಸರಕಾರಗಳು ಒಳ ಚರಂಡಿ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಕಸಗಳ ಸೂಕ್ತ ನಿರ್ವಹಣೆಯ ಕಡೆ ಹೆಚ್ಚಿನ ಗಮನ ಹರಿಸತೊಡಗಿತು.

ಭೂಮಿಯ ಮೇಲೆ ಬದುಕಿರುವ ಅತ್ಯಂತ ಬುದ್ಧಿವಂತ ಪ್ರಾಣಿ ಮಾನವ. ಆದರೆ ಈ ಮಾನವನನ್ನೂ ಕಂಗೆಡಿಸುವಂತೆ ಮಾಡುವುದು ಸ್ಪಾನಿಷ್ ಫ್ಲೂ, ಮಲೇರಿಯಾ, ಪ್ಲೇಗ್, ಕೊರೋನಾ, ಡೆಂಗ್ಯೂ ಮೊದಲಾದ ಸಾಂಕ್ರಾಮಿಕ ಕಾಯಿಲೆಗಳು. ಕಣ್ಣಿಗೆ ಕಾಣದ ರೋಗಾಣುಗಳು ಇಂತಹ ರೋಗವನ್ನು ಹರಡಿ ಮಾನವನನ್ನು ಕಂಗೆಡಿಸುವಂತೆ ಮಾಡುತ್ತದೆ. ಸ್ಪಾನಿಷ್ ಫ್ಲೂ ಕಾರಣದಿಂದಲೇ ಮೊದಲ ಮಹಾಯುದ್ಧ ನಿಂತು ಹೋಯಿತು. ಕ್ರಮೇಣ ಈ ರೋಗವೂ ನಿಯಂತ್ರಣಕ್ಕೆ ಬಂತು. ಆದರೆ ಈ ರೋಗ ಮಾಡಿದ ಹಾನಿ ಮಾತ್ರ ಶತಮಾನ ಸಂದರೂ ಇತಿಹಾಸದ ಭೀಕರತೆಯನ್ನು ಸಾರುತ್ತಾ ಇದೆ. ಪ್ರತೀ ಸಲ ಸಾಂಕ್ರಾಮಿಕ ರೋಗಗಳು ಜಗತ್ತನ್ನು ಭಾದಿಸಿದಾಗ ‘ಸ್ಪಾನಿಷ್ ಫ್ಲೂ’ ನೆನಪು ಕಾಡುವುದು ಮಾತ್ರ ಸುಳ್ಳಲ್ಲ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ