ಜಗತ್ತಿಗೆ ವಿದಾಯ ಹೇಳಿದ ಆಟಗಾರ ಯಶ್ಪಾಲ್ ಶರ್ಮ

ಜಗತ್ತಿಗೆ ವಿದಾಯ ಹೇಳಿದ ಆಟಗಾರ ಯಶ್ಪಾಲ್ ಶರ್ಮ

೧೯೮೩ರ ಕ್ರಿಕೆಟ್ ವಿಶ್ವಕಪ್ ಎಂದಾಗ ನಮಗೆ ನೆನಪಿಗೆ ಬರುವುದು ನಾಯಕ ಕಪಿಲ್ ದೇವ್ ಹಾಗೂ ಫೈನಲ್ ನಲ್ಲಿ ಪಂದ್ಯಶ್ರೇಷ್ಟ ಪ್ರಶಸ್ತಿ ಮುಡಿಗೇರಿಸಿಕೊಂಡ ಮೊಹಿಂದರ್ ಅಮರನಾಥ್. ಆದರೆ ಭಾರತ ಕ್ರಿಕೆಟ್ ತಂಡವನ್ನು ಫೈನಲ್ ಗೆ ತಂದ ಕೀರ್ತಿ ಯಶ್ಪಾಲ್ ಶರ್ಮ ಅವರಿಗೂ ಸಲ್ಲಬೇಕು. ಏಕೆಂದರೆ ವಿಶ್ವಕಪ್ ಗೆಲುವಿಗೆ ಭದ್ರ ಬುನಾದಿ ಹಾಕಿದ್ದೇ ಯಶ್ಪಾಲ್ ಶರ್ಮ ಎಂಬ ದಾಂಡಿಗ. ಯಶ್ಪಾಲ್ ಶರ್ಮ ತಮ್ಮ ಬದುಕಿನ ಇನ್ನಿಂಗ್ಸ್ ಮುಗಿಸಿ ಜುಲೈ ೧೩ರಂದು ಮರಳಿ ಬಾರದ ಲೋಕಕ್ಕೆ ತೆರಳಿದ್ದಾರೆ. ಅವರ ನೆನಪಿನಲ್ಲಿ ಈ ಲೇಖನ.

ಯಶ್ಪಾಲ್ ಶರ್ಮ ಹುಟ್ಟಿದ್ದು ೧೯೫೪ರ ಆಗಸ್ಟ್ ೧೧ರಂದು ಪಂಜಾಬಿನ ಲುಧಿಯಾನಾದಲ್ಲಿ. ೧೯೭೦-೮೦ರ ದಶಕದಲ್ಲಿ ಯಶ್ಪಾಲ್ ಶರ್ಮರ ಹೆಸರು ಬಹಳ ಖ್ಯಾತಿಯಲ್ಲಿತ್ತು. ಕ್ರಿಕೆಟ್ ನಲ್ಲಿ ಮಧ್ಯಮ ಸರದಿಯ ಬಲಗೈ ದಾಂಡಿಗರಾದ ಯಶ್ಪಾಲ್ ತಮ್ಮ ಹೊಡಿ ಬಡಿ ಆಟಕ್ಕೆ ಹಾಗೂ ರಕ್ಷಣಾತ್ಮಕ ಆಟಕ್ಕೆ ಖ್ಯಾತಿ ಪಡೆದಿದ್ದರು. ಯಾವುದೇ ವೇಗದ ಬೌಲಿಂಗ್ ಗೆ ಎದೆಯೊಡ್ಡಿ ನಿಲ್ಲುವ ಖ್ಯಾತಿ ಹೊಂದಿದ್ದ ಯಶ್ಪಾಲ್ ಶರ್ಮ ಆಗಿನ ವೆಸ್ಟ್ ಇಂಡೀಸ್ ನ ದೈತ್ಯ ಬೌಲರ್ ಗಳನ್ನು ಯಶಸ್ವಿಯಾಗಿ ಎದುರಿಸಿದ್ದರು. ಸುನೀಲ್ ಗಾವಸ್ಕರ್, ವೆಂಗ್ ಸರ್ಕಾರ್, ಚೇತನ್ ಚೌಹಾಣ್, ವಿಶ್ವನಾಥ್ ಮೊದಲಾದ ಆಟಗಾರರ ಸಹವರ್ತಿಯಾದ ಯಶ್ಪಾಲ್ ಟೆಸ್ಟ್ ಕ್ರಿಕೆಟ್ ನಲ್ಲಿ ಆಪತ್ಭಾಂಧವರೆಂದೇ ಖ್ಯಾತಿ ಪಡೆದಿದ್ದರು. 

ಯಶ್ಪಾಲ್ ನಿಜಕ್ಕೂ ಆಪತ್ಭಾಂಧವರೆಂದು ರುಜುವಾತಾದ್ದು ೧೯೮೩ರ ವಿಶ್ವಕಪ್ ನ ಮೊದಲ ಪಂದ್ಯದಲ್ಲಿ. ಭಾರತಕ್ಕೆ ಪ್ರಥಮ ಲೀಗ್ ಸುತ್ತಿನ ಮೊದಲ ಪಂದ್ಯದಲ್ಲಿ ಎದುರಾಳಿಯಾದ ತಂಡ ವೆಸ್ಟ್ ಇಂಡೀಸ್. ಮೊದಲ ಎರಡು ವಿಶ್ವಕಪ್ ಗಳನ್ನು ಗೆದ್ದು (೧೯೭೫ ಮತ್ತು ೧೯೭೯) ಹ್ಯಾಟ್ರಿಕ್ ವಿಜಯದ ಕನಸು ಕಾಣುತ್ತಿದ್ದ ವೆಸ್ಟ್ ಇಂಡೀಸ್ ತಂಡದಲ್ಲಿ ಬಹಳ ಖ್ಯಾತನಾಮರಾದ ಆಟಗಾರರ ದಂಡೇ ಇತ್ತು. ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್ ಮಾಡಿ ೮ ವಿಕೆಟ್ ಗೆ ೨೬೨ರ ಗಳಿಸಿತ್ತು. ಈ ಉತ್ತಮ ಮೊತ್ತವನ್ನು ಗಳಿಸಲು ಕಾರಣರಾದವರು ಬೇರೆ ಯಾರೂ ಅಲ್ಲ, ಯಶ್ಪಾಲ್ ಶರ್ಮ ಅವರೇ. ಅವರು ೮೯ ರನ್ ಬಾರಿಸಿ ತಂಡಕ್ಕೆ ಉತ್ತಮ ಮೊತ್ತ ಒಟ್ಟುಗೂಡಲು ನೆರವಾಗಿದ್ದರು. ಭಾರತ ಈ ಪಂದ್ಯವನ್ನು ೩೪ ರನ್ ಗಳಿಂದ ಜಯಿಸಿತು. ಆ ಪಂದ್ಯದಲ್ಲಿ ಯಶ್ಪಾಲ್ ಶರ್ಮ ಅವರದ್ದು ಮಾತ್ರ ಏಕೈಕ ಅರ್ಧ ಶತಕ ದಾಖಲಾಗಿತ್ತು. ಅರ್ಹವಾಗಿಯೇ ಯಶ್ಪಾಲ್ ಶರ್ಮ ಅವರಿಗೆ ಪಂದ್ಯಶ್ರೇಷ್ಟ ಪುರಸ್ಕಾರ ದೊರೆಯಿತು. ಹೀಗೆ ಮೊದಲ ಪಂದ್ಯದಲ್ಲೇ ಸೋತ ಹಾಲಿ ವಿಶ್ವ ಚಾಂಪಿಯನ್ನರಿಗೆ ಶಾಕ್ ಆದದ್ದು ಮಾತ್ರ ನಿಜ. ಆ ಸಮಯದವರೆಗೆ ವಿಶ್ವಕಪ್ ನಲ್ಲಿ ತಮ್ಮ ವಿಜಯದ ಯಾತ್ರೆಯನ್ನೇ ಮುಂದುವರೆಸುತ್ತಾ ಬಂದಿದ್ದ ವೆಸ್ಟ್ ಇಂಡೀಸ್ ಗೆ ಯಶ್ಪಾಲ್ ಶರ್ಮ ತಮ್ಮ ಬ್ಯಾಟಿಂಗ್ ಶಕ್ತಿಯನ್ನು ತೋರಿಸುವುದ ಮೂಲಕ ಅಚ್ಚರಿಯಲ್ಲಿ ಕೆಡವಿದ್ದರು. ವೆಸ್ಟ್ ಇಂಡೀಸ್ ಮನೋಬಲವೂ ಅಲ್ಪಮಟ್ಟಿಗೆ ಕುಸಿದು ಹೋಗಿತ್ತು. 

ಆಸ್ಟ್ರೇಲಿಯಾದ ವಿರುದ್ಧ ನಡೆದ ಅಂತಿಮ ಲೀಗ್ ಪಂದ್ಯದಲ್ಲೂ ಯಶ್ಪಾಲ್ ಅವರು ಗಳಿಸಿದ ೪೦ ರನ್ ತಂಡದ ಟಾಪ್ ಸ್ಕೋರ್ ಆಗಿತ್ತು. ಯಶ್ಪಾಲ್ ಶರ್ಮ ನಂತರದ ಸೆಮಿಫೈನಲ್ ನಲ್ಲೂ ತಮ್ಮ ಬ್ಯಾಟಿಂಗ್ ಶಕ್ತಿಯನ್ನು ತೋರಿಸಿದ್ದರು. ಅತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ೬೧ ರನ್ ಗಳ ಕೊಡುಗೆಯನ್ನು ತಂಡಕ್ಕೆ ನೀಡಿದ್ದರು. ಈ ಪಂದ್ಯದಲ್ಲೂ ಯಶ್ಪಾಲ್ ಅವರೇ ಟಾಪ್ ಸ್ಕೋರರ್. ಯಶ್ಪಾಲ್ ಅವರ ಬ್ಯಾಟಿಂಗ್ ನೆರವಿನಿಂದ ಭಾರತ ಫೈನಲ್ ತಲುಪಿದ್ದು ತಪ್ಪಲ್ಲ. ಲೀಗ್ ಹಂತದಲ್ಲಿ ಕಪಿಲ್ ದೇವ್ ಜಿಂಬಾಬ್ವೆ ತಂಡದ ವಿರುದ್ಧ ಸಿಡಿಸಿದ ಅಜೇಯ ೧೭೫ ರನ್ ಗಳೂ, ಮೊಹಿಂದರ್ ಅಮರನಾಥ್ ಅವರ ಬೌಲಿಂಗ್ ಚಮತ್ಕಾರವೂ ಭಾರತದ ವಿಜಯಕ್ಕೆ ಸಾಥ್ ನೀಡಿದ್ದು ಸುಳ್ಳಲ್ಲ.

ಯಶ್ಪಾಲ್ ಶರ್ಮ ಅವರು ತಮ್ಮ ರಣಜಿ ಜೀವನವನ್ನು ಮೂರು ತಂಡಗಳ ಪರ ಆಟವಾಡುತ್ತ ಕಳೆದಿದ್ದಾರೆ. ಪಂಜಾಬ್, ಹರಿಯಾಣ ಮತ್ತು ರೈಲ್ವೇಸ್ ತಂಡಗಳನ್ನು ಅವರು ಪ್ರತಿನಿಧಿಸಿದ್ದರು. ೧೯೭೯ರಲ್ಲಿ ಇವರು ಇಂಗ್ಲೆಂಡ್ ತಂಡದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡುವ ಮೂಲಕ ತಮ್ಮ ಟೆಸ್ಟ್ ಜೀವನವನ್ನು ಪ್ರಾರಂಭಿಸಿದರು. ಇವರು ತಾವಾಡಿದ ೩೭ ಪಂದ್ಯಗಳ ೫೯ ಇನ್ನಿಂಗ್ಸ್ ಗಳಲ್ಲಿ ೩೩.೪೫ರ ಸರಾಸರಿಯಲ್ಲಿ ೧೬೦೬ ರನ್ ಗಳಿಸಿದ್ದಾರೆ. ಇವರು ೨ ಶತಕ ಹಾಗೂ ೯ ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಇವರ ಟೆಸ್ಟ್ ನಲ್ಲಿ ಗರಿಷ್ಟ ಮೊತ್ತ ೧೪೦ ರನ್.

ಇವರ ಈ ಗರಿಷ್ಟ ಮೊತ್ತ ದಾಖಲಾದದ್ದು ೧೯೮೨ರ ಮದ್ರಾಸ್ ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ. ಆ ಪಂದ್ಯದಲ್ಲಿ ಸುನೀಲ್ ಗಾವಸ್ಕರ್, ವೆಂಗ್ ಸರ್ಕಾರ್ ಮೊದಲಾದ ಆಟಗಾರರು ಬೇಗನೇ ಔಟಾದಾಗ ಕನ್ನಡಿಗ ಜಿ.ಆರ್.ವಿಶ್ವನಾಥ್ (೨೨೨ ರನ್) ಜೊತೆ ಸೇರಿ ತ್ರಿಶತಕದ ಜೊತೆಯಾಟವಾಡಿದ್ದ ಕೀರ್ತಿ ಯಶ್ಪಾಲ್ ಶರ್ಮ ಅವರಿಗೆ ಸಲ್ಲುತ್ತದೆ. ಆ ಜೊತೆಯಾಟದ ಬಗ್ಗೆ ವಿಶ್ವನಾಥ್ ಹೇಳುವುದು ಹೀಗೆ “ಯಶ್ಪಾಲ್ ಉತ್ತಮ ಆಟಗಾರ. ಆ ದಿನ ನಾವಿಬ್ಬರೂ ಇಡೀ ದಿನ ಕ್ರೀಸ್ ಗೆ ಅಂಟಿಕೊಂಡೆವು. ಅವರೊಬ್ಬ ಉತ್ತಮ ಫೀಲ್ಡರ್ ಸಹಾ ಆಗಿದ್ದರು. ಉತ್ತಮ ಟೀಂ ಮ್ಯಾನ್'.

ಯಶ್ಪಾಲ್ ಶರ್ಮ ಏಕದಿನ ಪಂದ್ಯದಲ್ಲೂ ತಮ್ಮ ಉತ್ತಮ ಆಟದ ಮುಖಾಂತರ ಭಾರತ ತಂಡಕ್ಕೆ ನೆರವಾಗಿದ್ದಾರೆ. ಅವರು ಆಡಿದ ೪೨ ಪಂದ್ಯಗಳ ೪೦ ಇನ್ನಿಂಗ್ಸ್ ಗಳಲ್ಲಿ ೨೮.೬೮ ಸರಾಸರಿಯಲ್ಲಿ ೮೮೩ ರನ್ ಸಿಡಿಸಿದ್ದಾರೆ. ೪ ಅರ್ಧ ಶತಕಗಳನ್ನು ಸಿಡಿಸಿದ ಅವರಿಗೆ ಏಕದಿನ ಶತಕ ಮರೀಚಿಕೆಯಾಗಿಯೇ ಉಳಿಯಿತು. ವಿಶ್ವಕಪ್ ಪಂದ್ಯದಲ್ಲಿ ದಾಖಲಾದ ೮೯ ರನ್ ಅವರ ಜೀವನ ಶ್ರೇಷ್ಟ ಏಕದಿನ ಗಳಿಕೆ. ಪ್ರಥಮ ದರ್ಜೆಯಲ್ಲಿ ೧೬೦ ಪಂದ್ಯಗಳನ್ನು ಆಡಿ ೮೯೩೩ ರನ್ ಗಳಿಸಿದ್ದಾರೆ. ೨೧ ಶತಕ ಹಾಗೂ ೪೬ ಅರ್ಧ ಶತಕಗಳು ಇವರ ಸಾಧನೆ. ಇವರು ಟೆಸ್ಟ್ ಹಾಗೂ ಒಂದು ದಿನದ ಪಂದ್ಯದಲ್ಲಿ ತಲಾ ಒಂದು ವಿಕೆಟ್ ಕಿತ್ತಿದ್ದಾರೆ. ಇವರು ಬಲಗೈ ಮೀಡಿಯಂ ಪೇಸ್ ಬೌಲಿಂಗ್ ಮಾಡುತ್ತಿದ್ದರು. 

ಸಕ್ರಿಯ ಕ್ರಿಕೆಟ್ ಆಟದಿಂದ ನಿವೃತ್ತಿಯಾದರೂ ಆಯ್ಕೆ ಸಮಿತಿ ಸದಸ್ಯನಾಗಿ, ತೀರ್ಪುಗಾರರಾಗಿ, ತರಭೇತುದಾರರಾಗಿ, ವೀಕ್ಷಕ ವಿವರಣೆಗಾರನಾಗಿ ವಿವಿಧ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಮಹಿಳಾ ಏಕದಿನ ಪಂದ್ಯಗಳಿಗೆ ತೀರ್ಪುಗಾರರಾಗಿದ್ದ ಖ್ಯಾತಿಯೂ ಇವರಿಗೆ ಸಲ್ಲುತ್ತದೆ. ಉತ್ತರ ಪ್ರದೇಶದ ರಣಜಿ ತಂಡಕ್ಕೆ ತರಭೇತುದಾರರಾಗಿದ್ದರು. ಎರಡು ಅವಧಿಗೆ (೨೦೦೪-೦೫ ಹಾಗೂ ೨೦೦೮-೧೧) ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. ಭಾರತ ೨೦೧೧ರಲ್ಲಿ ಎರಡನೇ ಕ್ರಿಕೆಟ್ ವಿಶ್ವಕಪ್ ಗೆದ್ದ ತಂಡವನ್ನು ಆರಿಸಿದ ಆಯ್ಕೆಗಾರರ ಸಮಿತಿಯಲ್ಲಿ ಯಶ್ಪಾಲ್ ಇದ್ದರು. ಹೀಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಎರಡೂ ವಿಶ್ವಕಪ್ ವಿಜೇತ ತಂಡಕ್ಕೆ ನೆರವಾದದ್ದು ಯಶ್ಪಾಲ್ ಶರ್ಮ ಹೆಗ್ಗಳಿಕೆ.   

ಯಶ್ಪಾಲ್ ಶರ್ಮ ಅವರಿಗೆ ತಮ್ಮ ಗರಿಷ್ಟ ರನ್ ಹೊಡೆದ ಪಂದ್ಯದ ದೃಶ್ಯಾವಳಿಗಳು ಲಭ್ಯವಿಲ್ಲ ಎಂಬ ಬೇಸರ ಕೊನೆಯ ತನಕ ಇತ್ತು. ೧೯೮೩ರ ವಿಶ್ವಕಪ್ ನ ಮೊದಲ ಕೆಲವು ಪಂದ್ಯಗಳ ಪ್ರಸಾರ ಇರಲಿಲ್ಲ. ಈ ಬಗ್ಗೆ ಯಶ್ಪಾಲ್ ಶರ್ಮ ಅವರು ಆಗ ನೇರ ಪ್ರಸಾರದ ಹಕ್ಕು ಹೊಂಡಿದ್ದ ಬಿಬಿಸಿಯವರನ್ನೂ ಸಂಪರ್ಕ ಮಾಡಿ ಹೇಗಾದರೂ ಲಭ್ಯವಿರುವ ದೃಶ್ಯಾವಳಿಗಳನ್ನು ನೀಡಿ ಎಂದು ಕೇಳಿಕೊಂಡಿದ್ದರು. ಅವರು ಅದಕ್ಕೆ ಸಾವಿರಾರು ಪೌಂಡ್ ನೀಡಲೂ ತಯಾರಿದ್ದರು. ಆದರೆ ಅವರಿಗೆ ಆ ದೃಶ್ಯಗಳು ಸಿಗದ ಬಗ್ಗೆ ಕೊರಗು ಕೊನೆಯವರೆಗೆ ಇತ್ತು. 

ಹೃದಯಾಘಾತವಾಗಿ ಯಶ್ಪಾಲ್ ಶರ್ಮ ಕೊನೆಯುಸಿರೆಳೆಯುವಾಗ ಅವರಿಗೆ ೬೬ ವರ್ಷ. ಯಶ್ಪಾಲ್ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರರನ್ನು ಅಗಲಿದ್ದಾರೆ. ಈ ಪ್ರಾಯ ಸಾಯುವ ವಯಸ್ಸಲ್ಲ. ಆದರೂ ವಿಧಿಯಾಟದ ಎದುರು ತಮ್ಮ ಆಟ ಮುಗಿಸಿ ಮರಳಿಬಾರದ ಲೋಕಕ್ಕೆ ತೆರಳಿದ್ದಾರೆ ಯಶ್ಪಾಲ್ ಶರ್ಮ.

ಚಿತ್ರ ಕೃಪೆ: ಅಂತರ್ಜಾಲ ತಾಣ