ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಬುದ್ಧ

ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಬುದ್ಧ

"ಬುದ್ಧ, ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ" ಎಂದು ಆರಂಭವಾಗುವ ಕವನ ಕನ್ನಡದ ಪ್ರಸಿದ್ಧ ಕವನ. ಬುದ್ಧನ ಜನ್ಮ ದಿನವೇ ಬುದ್ಧ ಪೂರ್ಣಿಮೆ ಅಥವಾ ಬೈಸಾಕಿ (ಮೇ ೭). ಬೈಸಾಕಿಯಂದೇ ಬುದ್ಧನಿಗೆ ಜ್ನಾನೋದಯವಾಯಿತು ಮತ್ತು ಬೈಸಾಕಿಯಂದೇ ಆತ ನಿರ್ವಾಣ ಹೊಂದಿದ ಎಂದು ಪ್ರತೀತಿ.

ಕ್ರಿಪೂ ೬೨೩ರಲ್ಲಿ ಕಪಿಲವಸ್ತುವಿನ ರಾಜ ಶುದ್ಧೋದನನ ರಾಣಿ ಮಾಯಾದೇವಿ ಜನ್ಮವಿತ್ತ ಗಂಡುಮಗು ಸಿದ್ಧಾರ್ಥ. ಅದಾಗಿ ಏಳನೇ ದಿನಕ್ಕೆ ಮಾಯಾದೇವಿ ತೀರಿಕೊಂಡಳು. ಅನಂತರ ಸಿದ್ಧಾರ್ಥನನ್ನು ಸಲಹಿದಾಕೆ ಮಲತಾಯಿ ಗೌತಮಿ ದೇವಿ. ಆದ್ದರಿಂದ ಗೌತಮನೆಂಬ ಹೆಸರು ಬಂತು.

ವಿದ್ಯಾವಂತನಾಗಿ ಶಾಸ್ತ್ರಗಳಲ್ಲಿ ಪರಿಣತನಾದ ಗೌತಮ. ಮುಂದೆ ಯಶೋಧರೆಯೊಂದಿಗೆ ಆತನ ವಿವಾಹ. ನಂತರ ರಾಹುಲ ಎಂಬ ಮಗುವಿನ ತಂದೆಯಾದ. ಆದರೆ ಗೌತಮ ಎಲ್ಲ ವೈಭೋಗ ತೊರೆದು, ಜ್ನಾನದ ಅನ್ವೇಷಣೆಗಾಗಿ ಹೊರಡಲು ಸಂಕಲ್ಪ ಮಾಡಿದ. ರಾತ್ರೋರಾತ್ರಿ ಪತ್ನಿ ಯಶೋಧರೆ, ಎಳೆ ಮಗು, ಅರಮನೆ, ಸಂಪತ್ತು, ಬಂಧುಬಳಗ ಎಲ್ಲವನ್ನೂ ತೊರೆದು ನಡೆದ.

ಅದೊಂದು ದಿನ ರೋಗಿ, ವೃದ್ಧ, ಮತ್ತು ಶವಯಾತ್ರೆ ನೋಡಿದ ಗೌತಮನಲ್ಲಿ ವೈರಾಗ್ಯ ಮೂಡಿದ್ದು ಆತ ಎಲ್ಲವನ್ನೂ ತೊರೆದು ಹೋಗಲು ಕಾರಣವಾಯಿತು ಎನ್ನಲಾಗಿದೆ. ಆದರೆ ಇದನ್ನು ಒಪ್ಪಲಾಗದು. ಯಾಕೆಂದರೆ ಗೌತಮ ಸರ್ವಸಂಗ ಪರಿತ್ಯಾಗ ಮಾಡಿದ್ದು ತನ್ನ ೨೯ನೆಯ ವಯಸ್ಸಿನಲ್ಲಿ. ಆ ಹೊತ್ತಿಗೆ ಆತನ ತಂದೆಗೆ ೭೦ ವರುಷ ಮತ್ತು ದೊಡ್ಡಮ್ಮಳಿಗೆ ೮೦ ವರುಷ ವಯಸ್ಸು. ಹಾಗಾಗಿ, ತನ್ನ ಕುಟುಂಬದಲ್ಲೇ ಗೌತಮ ವೃದ್ಧಾಪ್ಯವನ್ನು ಕಣ್ಣಾರೆ ಕಂಡಿದ್ದ; ಅಂತಹ ದೊಡ್ಡ ರಾಜ ಮನೆತನದ ಆತ ಸಾವನ್ನೂ ಕಂಡಿದ್ದ ಎಂದು ನಂಬಬೇಕಾಗುತ್ತದೆ.

ಅದಲ್ಲದೆ, ಗೌತಮ ಸನ್ಯಾಸ ಸ್ವೀಕರಿಸಲು ಕಾರಣ ಆತನ ರಾಜ್ಯದ ರಾಜಕಾರಣ ಎಂಬುದನ್ನು ನಂಬಲು ಆಧಾರಗಳಿವೆ. ಗೌತಮನ ಶಾಕ್ಯ ರಾಜ್ಯವು ರೋಹಿಣಿ ನದಿ ದಡದಲ್ಲಿತ್ತು. ಇನ್ನೊಂದು ದಡದಲ್ಲಿತ್ತು ಕೋಲಿ ರಾಜ್ಯ. ಈ ಎರಡೂ ರಾಜ್ಯಗಳೊಳಗೆ ರೋಹಿಣಿ ನದಿ ನೀರು ಹಂಚಿಕೆ ಬಗ್ಗೆ ಆಗಾಗ ಕಲಹ - ಯುದ್ಧ. ಗೌತಮ ಎರಡೂ ರಾಜ್ಯಗಳ ನಡುವೆ ಸಂಧಾನವಾಗಲೆಂದು ಆಗ್ರಹಿಸಿದ. ಇದು ಶಾಕ್ಯರನ್ನು ರೊಚ್ಚಿಗೆಬ್ಬಿಸಿತು. ರಾಜನೀತಿ ವಿರೋಧಿಸಿದ ಗೌತಮನಿಗೆ ಕೊನೆಗೆ ಮರಣದಂಡನೆ ವಿಧಿಸಲಾಯಿತು. ಮರಣದಂಡನೆ ತಪ್ಪಿಸಿಕೊಳ್ಳಲು ಗೌತಮನಿಗಿದ್ದ ದಾರಿ ಸನ್ಯಾಸ ಸ್ವೀಕರಿಸುವುದು. ಆದ್ದರಿಂದ ಗೌತಮ ಸನ್ಯಾಸಿಯಾಗಿ, ರಾಜ್ಯ ತೊರೆದು ನಡೆದ. ತಾನು ನಂಬಿದ ಶಾಂತಿಯ ಸಂದೇಶವನ್ನು ಜಗತ್ತಿಗೆ ಬಿತ್ತರಿಸಲು ಅಣಿಯಾದ.

ಅನಂತರ, ಬಿಂಬಸಾರನ ರಾಜ್ಯದ ಅರಣ್ಯ ತಲಪಿ, ತಪಸ್ಸಿಗೆ ತೊಡಗಿದ ಗೌತಮ. ನಾಲ್ಕು ವರುಷಗಳ ಅಖಂಡ ತಪಸ್ಸು. ನಂತರ, ಬೋಧಿವೃಕ್ಷದ ಬುಡದಲ್ಲಿ ಜ್ನಾನೋದಯವಾಗಿ ಬುದ್ಧನಾಗುತ್ತಾನೆ. ಆಸೆಯೇ ದುಃಖಕ್ಕೆ ಮೂಲ ಎಂದು ಅರಿತುಕೊಂಡ ಬುದ್ಧನಿಗೆ ಅದರ ಪರಿಹಾರದ ದಾರಿಗಳು ಸ್ಪಷ್ಟವಾಗುತ್ತವೆ.

ತಾನು ಅರಿತದ್ದನ್ನು ಸರಳ ಮಾತುಗಳಲ್ಲಿ ಜನರಿಗೆ ತಿಳಿಸಲಿಕ್ಕಾಗಿ ಲೋಕಸಂಚಾರಕ್ಕೆ ಹೊರಟ ಬುದ್ಧ. ಜಗತ್ತಿಗೆ ಆತ ಬೋಧಿಸಿದ ಧರ್ಮವೇ ಬೌದ್ಧ ಧರ್ಮ. ಸತ್ಯಪಾಲನೆ, ಶೀಲವಂತಿಕೆ, ದಾನ ಮಾಡುವುದು, ಮದ್ಯಪಾನ ಮಾಡದಿರುವುದು ಉತ್ತಮ ಜೀವನದ ದಾರಿ ಎಂದು ಸಾರಿದ ಬುದ್ಧ. ಬೌದ್ಧ ಧರ್ಮದ ಜೀವನ ಮೌಲ್ಯಗಳು ಮತ್ತು ತತ್ವಗಳು ಎಷ್ಟು ಸರಳ ಎಂದರೆ ಬುದ್ಧ ಹೋದಲ್ಲೆಲ್ಲ ಸಾವಿರಾರು ಜನರು ಆತನ ಅನುಯಾಯಿಗಳಾಗಿ, ಬೌದ್ಧ ಭಿಕ್ಷುಗಳಾದರು.

ಕ್ರಮೇಣ ಬೌದ್ಧ ಧರ್ಮ ಭಾರತದ ಗಡಿಗಳನ್ನು ದಾಟಿತು. ಚೀನಾ, ಜಪಾನ್, ಥೈಲ್ಯಾಂಡ್, ಕೆಂಬೋಡಿಯಾ, ಶ್ರೀಲಂಕಾ, ಅಫಘಾನಿಸ್ಥಾನ ಇತ್ಯಾದಿ ದೇಶಗಳಲ್ಲಿ ನೆಲೆಯೂರಿತು. ಈಗಲೂ ಲಕ್ಷಗಟ್ಟಲೆ ಬೌದ್ಧ ಧರ್ಮದ ಅನುಯಾಯಿಗಳಿರುವ ಈ ಎಲ್ಲ ದೇಶಗಳಲ್ಲಿ ಬೌದ್ಧ ಧರ್ಮ ಹರಡಲು ಬುದ್ಧನ ಶಿಷ್ಯರ ಕೊಡುಗೆಯೂ ಅಪಾರ.

ಇತರ ಧರ್ಮಗಳ ಬಗ್ಗೆ ಅಸಹನೆ ತೋರುತ್ತಾ, ತಮ್ಮ ಧರ್ಮವೇ ಶ್ರೇಷ್ಠವೆಂದು ಕಚ್ಚಾಡುವ ಜನರಿಗೆ ನಿಜವಾದ ಧರ್ಮವೇನೆಂದು ಬುದ್ಧ ತಿಳಿಸಿದ್ದಾನೆ. ಒಬ್ಬರ ಕಷ್ಟಗಳಿಗೆ ಇನ್ನೊಬ್ಬರು ಸ್ಪಂದಿಸುವುದೇ ನಿಜವಾದ ಧರ್ಮ ಎಂಬುದು ಬುದ್ಧನ ಸಂದೇಶ. ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ. ಬುದ್ಧನ ಕೆಲವು ಸರಳ ಚಿಂತನೆಗಳನ್ನು ತಿಳಿಯೋಣ:
-ಸಾವಿರ ಯುದ್ಧಗಳನ್ನು ಗೆಲ್ಲುವುದಕ್ಕಿಂತ ನಿನ್ನನ್ನೇ ಗೆಲ್ಲುವುದು ಉತ್ತಮ. ಆ ಗೆಲುವು ನಿನ್ನದೇ. ಅದನ್ನು ಯಾರೂ ನಿನ್ನಿಂದ ಕಿತ್ತುಕೊಳ್ಳಲಾರರು.
-ನೀನು ನಡೆಯುವಾಗ, ತಿನ್ನುವಾಗ, ಪ್ರಯಾಣಿಸುವಾಗ ಸಂಪೂರ್ಣ ಗಮನ ಕೊಡು. ಇಲ್ಲವಾದರೆ ನಿನ್ನ ಬದುಕಿನ ಬಹುಪಾಲನ್ನು ಕಳೆದುಕೊಳ್ಳುತ್ತಿ.
-ಧ್ಯಾನದಿಂದ ವಿವೇಕ ಲಭ್ಯ; ಧ್ಯಾನ ಮಾಡದಿದ್ದರೆ ಅಜ್ನಾನವೇ ಗತಿ.
-ನಿನ್ನನ್ನು ಯಾವುದು ಮುನ್ನಡೆಸುತ್ತದೆ ಮತ್ತು ಯಾವುದು ಹಿಂದಕ್ಕೆ ಜಗ್ಗುತ್ತದೆ ಎಂಬುದನ್ನು ತಿಳಿದುಕೋ; ವಿವೇಕದೆಡೆಗೆ ನಿನ್ನನ್ನು ಒಯ್ಯುವ ಪಥ ಆಯ್ದುಕೋ.
-ನಿನ್ನ ಶರೀರ ಅಮೂಲ್ಯ. ಅದುವೇ ಜ್ನಾನೋದಯದ ವಾಹನ. ಅದನ್ನು ಚೆನ್ನಾಗಿಟ್ಟುಕೋ.
-ಶಾಂತಿಯನ್ನು ತರುವ ಒಂದು ಪದವು, ಸಾವಿರ ಟೊಳ್ಳು ಪದಗಳಿಗಿಂತ ಉತ್ತಮ.
-ಒಳ್ಳೆಯದನ್ನು ಮಾಡುತ್ತೇನೆಂಬ ಸಂಕಲ್ಪ ಮಾಡು. ಮತ್ತೆಮತ್ತೆ ಅದನ್ನೇ ಮಾಡು. ಆಗ ನಿನ್ನಲ್ಲಿ ಆನಂದ ತುಂಬಿಕೊಳ್ಳುತ್ತದೆ.
-ಈ ಮೂರನ್ನು ದೀರ್ಘಕಾಲ ಮುಚ್ಚಿಡಲು ಸಾಧ್ಯವಿಲ್ಲ: ಸೂರ್ಯ, ಚಂದ್ರ ಮತ್ತು ಸತ್ಯ.
-ಬೇರೊಬ್ಬರಿಗಾಗಿ ದೀಪವೊಂದನ್ನು ನೀನು ಬೆಳಗಿಸಿದರೆ, ಅದು ನಿನ್ನ ದಾರಿಯನ್ನೂ ಬೆಳಗಿಸುತ್ತದೆ.
-ನಾವು ಏನಾಗಿದ್ದೇವೆ ಅದು ನಮ್ಮ ಯೋಚನೆಗಳ ಫಲ. ಸಕಲವೂ ನಮ್ಮ ಮನಸ್ಸೇ. ನಾವು ಏನು ಯೋಚಿಸುತ್ತೇವೆಯೋ ಅದೇ ಆಗುತ್ತೇವೆ.
-ಅಂತಿಮವಾಗಿ, ಇವು ಮೂರು ಮುಖ್ಯವಾಗುತ್ತವೆ:
ನೀನು ಎಷ್ಟು ಚೆನ್ನಾಗಿ ಪ್ರೀತಿಸಿದೆ?
ನೀನು ಎಷ್ಟು ಪರಿಪೂರ್ಣವಾಗಿ ಬದುಕಿದೆ?
ನೀನು ಎಷ್ಟು ಆಳವಾಗಿ ಎಲ್ಲದರಿಂದ ಬಿಡುಗಡೆಯಾದೆ?