ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು
ಸಪ್ನ ಬುಕ್ ಹೌಸ್ ಅವರು ಪ್ರಕಾಶಿಸಿದ ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು ಪುಸ್ತಕವು ವಾಲ್ಮೀಕಿಯಿಂದ ರಾಜೀವ್ ಗಾಂಧಿವರೆಗಿನ ೩೦೪ ಸ್ತ್ರೀ-ಪುರುಷರ ಜೀವನ - ಸಾಧನೆಗಳ ಮೂಲಕ ಪ್ರಪಂಚದ ಇತಿಹಾಸದ ಒಂದು ಇಣುಕುನೋಟವನ್ನು ತೋರಿಸಲು ಲೇಖಕರು ಹೊರಟಿದ್ದಾರೆ. ತಾಯಿನಾಡಿಗಾಗಿ ದುಡಿದವರ ಬಗ್ಗೆ ಯುವಜನರಿಗೆ ಪರಿಚಯ ಮಾಡಿಕೊಟ್ಟು, ಅವರು ಸಮಾಜದ ಹಿರಿಯರ ಸದ್ಗುಣಗಳಿಂದ ಸ್ಪೂರ್ತಿ ಪಡೆದು, ತ್ಯಾಗ ಮಾಡಬಲ್ಲವರಾಗಿ, ಸಿದ್ಧಿ ಪಡೆಯುವಂತೆ ಮಾಡಬೇಕು. ವಿವಿಧ ಯುಗದ, ವಿವಿಧ ಕ್ಷೇತ್ರಗಳ, ಅನೇಕ ಹಿರಿಯ ಚೇತನಗಳ ಹಾಗೂ ಬದುಕಿಗೆ ಹೆಚ್ಚಿನ ಸಂಸ್ಕಾರವನ್ನು ಒದಗಿಸಬಲ್ಲ ಮಹಾನ್ ವ್ಯಕ್ತಿಗಳ ಪರಿಚಯ ಯುವಜನರಿಗೆ ಆಗಬೇಕು ಎನ್ನುವುದು ಈ ಪುಸ್ತಕದ ಉದ್ದೇಶ.
ಹಲವಾರು ಜನರ ವಿವರಗಳು ಇವೆಯಾದರೂ ಬಹಳ ಚುಟುಕಾಗಿವೆ. ವ್ಯಕ್ತಿ ಪರಿಚಯ ಮಾಡುವಾಗ ಅವರ ಭಾವಚಿತ್ರವಿರುವುದು ಅತ್ಯಂತ ಅಗತ್ಯ. ಆದರೆ ಈ ಪುಸ್ತಕದ ಮುಖಪುಟದಲ್ಲಿ ಒಂದಷ್ಟು ಜನರ ಚಿತ್ರಗಳಿವೆ ಬಿಟ್ಟರೆ ಒಳಗಡೆ ಯಾರ ಭಾವಚಿತ್ರವೂ ಇಲ್ಲ. ಇದು ಈ ಪುಸ್ತಕದ ದೊಡ್ಡ ಕೊರತೆ ಎನ್ನಬಹುದು. ಈ ಪುಸ್ತಕದ ಮೊದಲ ಮುದ್ರಣವಾದದ್ದು ೧೯೭೩ರಲ್ಲಿ. ಈಗ ಇರುವ ಮುದ್ರಣ ಮೂರನೇ ಮುದ್ರಣ. ಹೊಸ ಮುದ್ರಣವಾಗುವ ಸಂದರ್ಭದಲ್ಲಾದರೂ ಕೆಲವು ತಪ್ಪು ಮಾಹಿತಿಗಳನ್ನು ಸರಿಪಡಿಸುವುದು ಹಾಗೂ ಪ್ರಸಿದ್ಧ ವ್ಯಕ್ತಿಗಳ ಚಿತ್ರಗಳನ್ನು ಮುದ್ರಿಸುವ ಬಗ್ಗೆ ಯೋಚಿಸಬಹುದಿತ್ತು. ಆದರೂ ಇದರಲ್ಲಿರುವ ಹಲವಾರು ಮಾಹಿತಿಗಳು ಉಪಯುಕ್ತವಾಗಿವೆ.