ಜಗನ್ಮಾತೆಗೆ ನಮನ‌

ಜಗನ್ಮಾತೆಗೆ ನಮನ‌

ಕವನ

ತಾಯೆ,ಲೋಕದ ತಾಯೆ,ಶಾಂಭವಿ

ಮಾಯೆ,ನಿರ್ಜರಪೂಜಿತೆ 

ಕಾಯೆ,ಕರುಣದಿ ನನ್ನ ಕವಿತಾ-

ಪಾಯಸವ ಸ್ವೀಕರಿಸುತೆ                       [೧]

ಮುಕ್ತಿದಾಯಕಿ ಶಕ್ತಿರೂಪಿಣಿ

ರಕ್ತಬೀಜವಿನಾಶಿನಿ

ರಕ್ತವಸ್ತ್ರಾವಲಿಸುಶೋಭಿತೆ

ಭಕ್ತಹೃದಯನಿವಾಸಿನಿ                           [೨]

ಸೃಷ್ಟಿಪಾಲನ ನಾಶಕಾರಿಣಿ

ಅಷ್ಟಭುಜಪರಮೇಶ್ವರಿ

ದುಷ್ಟಶಿಕ್ಷಕಿ ಕಷ್ಟನಾಶಕಿ

ಶಿಷ್ಟರಕ್ಷಣ ತತ್ಪರೆ                                 [೩]

ನಿರ್ಗುಣಾತ್ಮಕಿ ನಿರ್ವಿಕಾರಕಿ

ಅರ್ಗಲಾಸ್ತವ ಸಂಸ್ತುತೇ

ಭರ್ಗನರಸಿ ಕಪಾಲಿ ಸುಲಲಿತೆ

ದುರ್ಗೆ,ಮತ್ಕುಲದೇವತೆ                         [೪]

ಅಂಬುರುಹದಲನೇತ್ರೆ,ವೈಷ್ಣವಿ

ಶುಂಭಮಹಿಷನಿಷೂದಿನಿ

ಶಂಭುಹರಿಕಮಲಾಸನಾರ್ಚಿತೆ

ಅಂಬೆ,ಕೇಸರಿವಾಹಿನಿ                             [೫]

ನೀನೆ ಜಗದಧಿದೇವಿ ಧಾರಿಣಿ

ನೀನೆ ಶಾರದೆ ಲಕ್ಷ್ಮಿಯು

ನೀನೆ ಹಿಮಗಿರಿಜಾತೆ,ಚಿನ್ಮಯಿ

ನೀನೆ ಭಾರತಮಾತೆಯು                         [೬]

ಯಾವ ಬಗೆಯಲಿ ನಿನ್ನ ತಿಳಿಯಲಿ

ಯಾವ ವಾಕ್ಯದಿ ಹೊಗಳಲಿ

ದೇವದುರ್ಲಭೆ ನಿನ್ನನೀ ಪರಿ

ಸೇವಿಸುವೆನೀ ದಿನದಲಿ                             [೭]

ಮಾತೆ,ನಿನಗಿದೊ ನಮಿಪೆ ನಿನ್ನಯ

ಜಾತರೆಮ್ಮನು ಸಂತತ

ಪ್ರೀತಿಯಿಂ ಕಾಪಾಡು ಸದಮಲ

ನೀತಿ ಮಾರ್ಗದಿ ನಡೆಸುತ                       [೮]

[ಕಾಸರಗೋಡು ತಾಲೂಕು ಕುಡಾಲು ಬಾಡೂರು ಎಂಬ ಜೋಡು ಗ್ರಾಮಗಳ ಮುಖ್ಯ ಆರಾಧನಾಲಯ ಕಂಬಾರು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಬ್ರಹ್ಮಕಲಶೋತ್ಸವ ೧೯೮೬ರಲ್ಲಿ ಜರಗಿತ್ತು.ಆ ಸಂದರ್ಭದಲ್ಲಿ ನಾನು ಬರೆದ ಈ ಕೃತಿ ಅಲ್ಲಿನ ಸ್ಮರಣ ಸಂಚಿಕೆ 'ಶ್ರೀ ಮಾತಾ'ದಲ್ಲಿ ಅಚ್ಚಾಗಿತ್ತು. ನವರಾತ್ರಿಯ ಶುಭಾವಸರದಲ್ಲಿ ಇದನ್ನು ಸಂಪದದ ಓದುಗರಿಗೆ ಶುಭಾಶಯ ಸಹಿತ ಅರ್ಪಿಸುತ್ತಿದ್ದೇನೆ.]

 

Comments