ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ...

ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ...

ಗೆಲುವಿನ ಹಿಂದೆ ಸಾಕಷ್ಟು ಹೆಜ್ಜೆಗಳು - ಸೋಲಿಗೆ ಏಕಾಂತ - ಬದುಕಿನ ಮಾಯೆಯ ಬಗ್ಗೆ ಯೋಚಿಸಿದಾಗ.. ರಿಷಿ ಸುನಾಕ್ - ಬಂಡೆ ಮಠದ ಸ್ವಾಮಿ - ನಡುವೆ ವಿರಾಟ್ ಕೊಹ್ಲಿ.

ಇಂಗ್ಲೆಂಡಿನಲ್ಲೇ ಹುಟ್ಟಿ ಬೆಳೆದ ರಿಷಿ ಸುನಾಕ್ ಭಾರತೀಯ ಮಹಿಳೆಯನ್ನು ಮದುವೆಯಾದ ಕಾರಣದಿಂದಾಗಿ ಆತ ಇಂಗ್ಲೆಂಡಿನ ಪ್ರಧಾನಿ ಹುದ್ದೆ ಅಲಂಕರಿಸಿದ ಹೊತ್ತಿನಲ್ಲಿ ಆತನನ್ನು ಭಾರತದಲ್ಲಿ ಹಾಡಿ ಹೊಗಳಲಾಗುತ್ತಿದೆ ಆತನ ಮೂಲ ಹಿಡಿದು. ಇರಲಿ ಒಂದು ಸಾಧನೆಗೆ ಒಂದು ಸಂಭ್ರಮಕ್ಕೆ ಸಣ್ಣ ಕಾರಣವೇ ಆದರೂ ಸಂಭ್ರಮಿಸೋಣ ಅದು ಸ್ವಾಗತಾರ್ಹ. ಒಂದು ಕಾಲದಲ್ಲಿ ವಿಶ್ವದ ಬಹಳಷ್ಟು ದೇಶಗಳನ್ನು ತಮ್ಮ ವಸಾಹತುಗಳಾಗಿ ಮಾರ್ಪಡಿಸಿಕೊಂಡು ಬಹುದೊಡ್ಡ ಸಾಮ್ರಾಜ್ಯ ನಿರ್ಮಿಸಿದ್ದ ಇಂಗ್ಲೆಂಡ್ ಇಂದು ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಕಾಲ ಚಕ್ರದಲ್ಲಿ ಇದೆಲ್ಲಾ ‌ಸಹಜ. ರಿಶಿ ಸುನಾಕ್ ತಮ್ಮೆಲ್ಲಾ ಸಾಮರ್ಥ್ಯ ಬಳಸಿ ಹುದ್ದೆಯ ಘನತೆಯನ್ನು ಕಾಪಾಡಿಕೊಂಡು ಇಂಗ್ಲೆಂಡ್ ಅನ್ನು ಮತ್ತೆ ಉತ್ತುಂಗಕ್ಕೆ ಕೊಂಡೊಯ್ಯಲಿ ಎಂದು ಆಶಿಸೋಣ.

ಗೆಲುವಿನ ಈ ಹಂತದಲ್ಲಿ ಅವರನ್ನು ಬೆಂಬಲಿಸುವವರ ಸಂಖ್ಯೆಗೆ ಕೊರತೆಯಿಲ್ಲ. ಹಾಗೆಯೇ ಅದಕ್ಕೆ ವಿರುದ್ಧ ಘಟನೆ ನಮ್ಮ ನಡುವೆಯೇ ಇದ್ದು ಸ್ವಾಮಿ ಪಟ್ಟ ಪಡೆದು ಅದರೊಳಗಿನ ಮರ್ಮ ಅರಿಯದೆ ಆತ್ಮಹತ್ಯೆ ಮಾಡಿಕೊಂಡ ಬಂಡೆ ಮಠದ ಬಸವಲಿಂಗ ಸ್ವಾಮಿ ಸಹ ಈ ಸಮಯದಲ್ಲಿ ಕಾಡುತ್ತಾರೆ. ಈಗಿನ ಮಾಧ್ಯಮಗಳ ಸುದ್ದಿಯ ಪ್ರಕಾರ ಅವರು ಹನಿ ಟ್ರ್ಯಾಪ್ ಎಂಬ ವಂಚನೆಯನ್ನು ಅರಗಿಸಿಕೊಳ್ಳಲಾಗದೆ ಸಾವಿಗೆ ಶರಣಾಗಿದ್ದಾರೆ. ನೋಡಿ ಈ ಹನಿ ಟ್ರ್ಯಾಪ್ ಏಕಾಏಕಿ ಆಗುವುದಿಲ್ಲ. ಯಾರೋ ಒಂದಷ್ಟು ಪ್ಲಾನ್ ಮಾಡಿ ಮನುಷ್ಯ ಸಹಜ ಆಸೆಗಳನ್ನು ಕೆರಳಿಸಿ ತಂತ್ರಜ್ಞಾನ ಉಪಯೋಗಿಸಿಕೊಂಡು ಅದನ್ನು ಚಿತ್ರೀಕರಿಸಿ ಹಣ ಮಾಡುವ ಒಂದು ಬ್ಲಾಕ್‌ ಮೇಲ್ ವಿಧಾನ.

ಯಾವುದೋ ಕ್ಷಣದಲ್ಲಿ ಆ ಸ್ವಾಮಿ ದಾರಿ ತಪ್ಪುತ್ತಾರೆ. ಅಷ್ಟೇ, ಅಲ್ಲಿಂದ ಅವರ ಭಾವನಾತ್ಮಕ ನರಕಯಾತನೆ ಪ್ರಾರಂಭವಾಗುತ್ತದೆ. ಸಮಾಜದ ನೀತಿ ನಿಯಮಗಳು, ನೈತಿಕ ಮತ್ತು ಧಾರ್ಮಿಕ ಕಟ್ಟಲೆಗಳು, ಜನರ ಅಭಿಪ್ರಾಯಗಳು ಎಲ್ಲವೂ ಆ ವ್ಯಕ್ತಿಯ ಬೆನ್ನೇರುತ್ತದೆ. ಆತ ಒಂಟಿಯಾಗಿ ಮಾನಸಿಕ ತೊಳಲಾಟಕ್ಕೆ ಬೀಳುತ್ತಾನೆ. ಆತ ಹೆದರುವುದು ತನ್ನ ತಪ್ಪಿಗಾಗಿ ಅಲ್ಲ. ಸಮಾಜದ ಅಭಿಪ್ರಾಯಗಳಿಗೆ. ಇದನ್ನು ಯಾರೊಂದಿಗೂ ಹಂಚಿಕೊಳ್ಳಲು ಸಾಧ್ಯವಿಲ್ಲದಷ್ಟು ಕರ್ಮಠವಾಗಿದೆ ನಮ್ಮ ಮನಸ್ಥಿತಿಗಳು. ಒಂದು ವಯಸ್ಕ ಒಪ್ಪಿತ ಲೈಂಗಿಕ ಸಂಪರ್ಕ ಅನೈತಿಕವಾದರೂ ಅದು ಅಸಹಜವಲ್ಲ. ಅದು ತೀರಾ ಖಾಸಗಿ ಮತ್ತು ಕ್ಷಮೆಗೆ ಅರ್ಹ. ಸಾವಿನಷ್ಟು ತೀವ್ರ ಶಿಕ್ಷೆಯ ಅವಶ್ಯಕತೆ ಇಲ್ಲ ಎಂಬ ಸಾಮೂಹಿಕ ಭಾವನೆ ಇಲ್ಲ. ಒಮ್ಮೆ ತಪ್ಪು ಮಾಡಿದ ವ್ಯಕ್ತಿ ಅದರಿಂದ ಹೊರಗೆ ಬರಲು ಆತ್ಮೀಯರ ಸಹಾನುಭೂತಿ ನಿರೀಕ್ಷಿಸುತ್ತಾನೆ. ಅದು ಸಾಧ್ಯವಾಗದ ಸಂದರ್ಭದಲ್ಲಿ ಪಲಾಯನ ಅಥವಾ ಸಾವಿನ ಆಯ್ಕೆ ಮಾಡುತ್ತಾನೆ. ಬಹುಶಃ ಬಂಡೆ ಮಠದ ಸ್ವಾಮಿ ಎರಡನೇ ಆಯ್ಕೆ ಮಾಡಿಕೊಂಡಿದ್ದಾರೆ.

ನಿಜಕ್ಕೂ ವಿಷಯವೇನೇ ಇರಲಿ, ಕಾರಣವೇನೇ ಇರಲಿ ಕಾನೂನಾತ್ಮಕ ಗಂಭೀರ ಅಪರಾಧಗಳನ್ನು ಹೊರತುಪಡಿಸಿ ಸೋಲಿನ - ಅವಮಾನದ ಸಮಯದಲ್ಲಿ ಆ ವ್ಯಕ್ತಿಗೆ ಬದುಕುವ ಸಾಂತ್ವನ ಹೇಳುವುದು ಒಂದು ನಿಜವಾದ ಮಾನವೀಯ ಮೌಲ್ಯ. ಮಾನ ಮರ್ಯಾದೆಗಿಂತ ಜೀವ ಉಳಿಸಿಕೊಳ್ಳುವುದೇ ಹೆಚ್ಚುಗಾರಿಕೆ. ಇದರ ಅರ್ಥ ಎಲ್ಲರೂ ತಪ್ಪು ಮಾಡಬಹುದು ಎಂದಾಗಲಿ ಅಥವಾ ತಪ್ಪಿನ ಸಮರ್ಥನೆಯಲ್ಲ. ಆಕಸ್ಮಿಕವಾಗಿ ಯಾವುದಾದರೂ ತಪ್ಪಾದಾಗ ಅದನ್ನು ಕ್ಷಮಿಸುವ ಔದಾರ್ಯತೆ ಮತ್ತು ಅದನ್ನು ಮುಕ್ತವಾಗಿ ಹೇಳಿಕೊಳ್ಳುವ ವಾತಾವರಣ ನಾವು ಸೃಷ್ಟಿಸಿಕೊಡಬೇಕು. ಕಾನೂನು ತನ್ನ ಕ್ರಮ ಕೈಗೊಳ್ಳಲಿ. ಆದರೆ ಹತ್ತಿರದ ಗೆಳೆಯರು ಸೋಲಿನ ಸಂದರ್ಭದಲ್ಲಿ ಸಹಾನುಭೂತಿ ತೋರುವುದು ಉತ್ತಮ ನಡವಳಿಕೆ.

ಮತ್ತೆ ಹಾಗೆಯೇ ಕಳೆದ ಎರಡು ವರ್ಷಗಳಿಂದ ತನ್ನ ಆಟದ ಹೊಳಪು ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಅನೇಕರಿಂದ ಸಾಕಷ್ಟು ನಿಂದನೆಗೆ ಒಳಗಾಗಿದ್ದರು. ಅದು ಅವರ ಒತ್ತಡ ಹೆಚ್ಚಿಸಿ ಮತ್ತೆ ಮತ್ತೆ ವಿಫಲರಾಗುತ್ತಿದ್ದರು. ಕಳೆದ ಕೆಲವು ಪಂದ್ಯಗಳಲ್ಲಿ ಉತ್ತಮ ಆಟ ಆಡುತ್ತಿದ್ದಾರೆ. ಮೊನ್ನೆ ಭಾರತದ ಪ್ರಬಲ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನದ ವಿರುದ್ಧ ಅತ್ಯಂತ ಪೈಪೋಟಿಯ ಪಂದ್ಯದಲ್ಲಿ ಉತ್ತಮವಾಗಿ ಆಡಿ ಪಂದ್ಯ ಗೆಲ್ಲಿಸಿ ಕೊಟ್ಟರು. ಈಗ ಅವರನ್ನು ಸೂಪರ್ ಮ್ಯಾನ್ ರೀತಿ ಬಣ್ಣಿಸಲಾಗುತ್ತಿದೆ.

ಸ್ವಲ್ಪ ಯೋಚಿಸಿ ನೋಡಿ. ವಿರಾಟ್ ಕೊಹ್ಲಿ ಒಂಟಿಯಾಗಿ ರಾತ್ರಿ ಹಾಸಿಗೆಯ ಮೇಲೆ ತಲೆ ಚಾಚಿಕೊಂಡು ಮಲಗುವ ಸಮಯದಲ್ಲಿ ಅವರ ಮನದಲ್ಲಿ ಯಾವ ಭಾವನೆ ಮೂಡಬಹುದು ! ತಾನು ರನ್ ಗಳಿಸಲು ಪರದಾಡುವಾಗ ಇದೇ ಜನ ನಿಂದಿಸುತ್ತಾರೆ. ಚೆನ್ನಾಗಿ ಆಡಿದಾಗ ಎಲ್ಲರೂ ಹೊಗಳುತ್ತಾರೆ. ಅಂದರೆ ಬೇರೆಯವರಿಗೆ ಯಶಸ್ಸು ಮಾತ್ರ ಬೇಕು ಮತ್ತು ಅವರ ನಿರೀಕ್ಷೆಗಳನ್ನು ಪೂರೈಸಬೇಕು. ಇಲ್ಲದಿದ್ದರೆ ನಮ್ಮನ್ನು ತಿರಸ್ಕರಿಸುತ್ತಾರೆ. ಇದು ಎಷ್ಟೊಂದು ಸ್ವಾರ್ಥ ಮತ್ತು ಅಮಾನವೀಯ ಎಂದು ಕೊಹ್ಲಿಗೆ ಅನಿಸಿರಬಹುದಲ್ಲವೇ ?

ನಮ್ಮ ನಮ್ಮ ವೈಯಕ್ತಿಕ ಮಟ್ಟದಲ್ಲಿ ಸಹ ನಮಗೆ ಈ ಭಾವನೆ ಉಂಟಾಗಿರುತ್ತದೆ. ಗೆದ್ದಾಗ ಅಥವಾ ಯಶಸ್ವಿಯಾದಾಗ ಸಾಕಷ್ಟು ಜನ ನಮ್ಮ ಬೆಂಬಲಕ್ಕಿರುತ್ತಾರೆ. ಸೋತಾಗ ಯಾರೂ ಇರುವುದಿಲ್ಲ ಅಷ್ಟೇ ಅಲ್ಲ ನಮ್ಮನ್ನು ಅತ್ಯಂತ ಕೀಳಾಗಿ ಕಾಣುತ್ತಾರೆ. ಸಮಾಜ ಮತ್ತು ವ್ಯಕ್ತಿ ಇರುವುದೇ ಹೀಗೆ ಎಂಬ ತಪ್ಪು ಅಭಿಪ್ರಾಯ ಬೇಡ. ಕನಿಷ್ಠ ನಮ್ಮ ನಮ್ಮ ನೆಲೆಯಲ್ಲಿ ಗೆದ್ದವರ ಅಭಿನಂದನೆಗಿಂತ ಹೆಚ್ಚಾಗಿ ಸೋತವರ ಬಗೆಗಿನ ಸಾಂತ್ವನ ನೀಡುವುದಕ್ಕೆ ಹೆಚ್ಚು ಆದ್ಯತೆ ನೀಡೋಣ. ಅದರಿಂದ ಕೆಲವು ಜೀವಗಳಾದರೂ ಉಳಿಯಬಹುದು. 

ಗೆಳೆಯರೊಬ್ಬರು ಹೇಳಿದರು " ನೀನು ಸಂತೋಷದಿಂದ ಇರುವಾಗ ನಾನು ನೆನಪಾಗದಿರಲಿ. ಆದರೆ ದುಃಖದಲ್ಲಿ ಇರುವಾಗ ನಿನಗೆ ಸದಾ ಸ್ವಾಗತ " ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ ಎಂಬ ಕವಿವಾಣಿ ಗುಣಗುಣಿಸುತ್ತಾ...

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ