ಜಡೆಕವನ - ರಂಗವಲ್ಲಿಯ ರಂಗು
ಕವನ
ರಂಗವಲ್ಲಿಯ ರಂಗು ಮನ ಸೆಳೆಯಿತು
ಸೆಳೆಯಿತು ನಾರಿಯ ಬೆರಳುಗಳ ಚಮತ್ಕಾರದಲಿ
ಚಮತ್ಕಾರದಲಿ ಅರಳಿತು ಅದ್ಭುತ ಕಲೆಯೊಂದು
ಕಲೆಯೊಂದು ನೆಲೆಯಾಗಿ ಬೆಲೆ ಪಡೆಯಿತು
ಪಡೆಯಿತು ಅಂತರಂಗದಿ ಸಂತಸವನು
ಸಂತಸವನು ಬಿತ್ತರಿಸಿ ಅನ್ಯರನು ಸೆಳೆಯಿತು
ಸೆಳೆಯಿತು ಮನೆಯ ಮುಂದಿನ ಅಂಗಳದಲಿ
ಅಂಗಳದಲಿ ಬಣ್ಣಬಣ್ಣದ ಚಿತ್ತಾರ ಮೂಡಿತು
ಮೂಡಿತು ಮನಮೋಹಕ ನಾಟ್ಯದ ನವಿಲು
ನವಿಲು ಗರಿಯ ಅಂದ ಸೆಳೆಯಿತು
ಸೆಳೆಯಿತು ವೈವಿಧ್ಯ ಮಾದರಿಯ ಚಿತ್ರಗಳ ಬಿಂಬ
ಬಿಂಬ ಹಬ್ಬವಾಗಿ ಕುಣಿಯಿತು ಕಣ್ಣ ಕಾಂತಿಯಲಿ
ಕಾಂತಿಯಲಿ ಮಿನುಗಿತು ರಂಗಿನೋಕುಳಿ
ರಂಗಿನೋಕುಳಿ ನೀರೆಯರ ಶೃಂಗಾರ ಲಾಸ್ಯದಲಿ
ಲಾಸ್ಯದಲಿ ತೂಗಿ ಬಾಗಿತು ಬೆರಳ ಚೆಲುವಿಕೆ
ಚೆಲುವಿಕೆ ನಲಿಯಿತು ರಂಗಿನ ರಂಗವಲ್ಲಿಯಲಿ
-ರತ್ನಾ ಕೆ ಭಟ್,ತಲಂಜೇರಿ*
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್