" ಜತೆಯೋದು" ಮತ್ತು "ಗಂಡಸರ ಅಡುಗೆ"
" ಜತೆಯೋದು" ಮತ್ತು "ಗಂಡಸರ ಅಡುಗೆ"
ಪ್ರಾಯಶಃ ಅಡುಗೆ ಮನೆ ಕಡೆ ತಲೆಯೇ ಹಾಕದ ಮಹಾನುಭಾವರನ್ನು ನೋಡಿ ಗಂಡಸರಿಗೆ ಅಡುಗೆ ಬಾರದೇ ಅಂತ ಕೇಳಿದ್ದಿರಬೇಕು. ಅಥವಾ ಎಲ್ಲಾ ಬಲ್ಲವರಿಗೆ ಈ ಅಡುಗೆಯೊಂದು ಮಹಾ ವಿದ್ಯೆಯಾ ಅಂತ ಲೇವಡಿ ಮಾಡಿದ್ದಾ ಅಂತ ಅಡುಗೆ ಭಟ್ಟರ ಅನುಮಾನ. ಆದರೆ ಈ ನವ ನವ್ಯ ಆಧುನಿಕ ಭಾರತ ವರ್ಷದಲ್ಲಿ ಅಡುಗೆ ಬಾರದವರು ಕಡಿಮೆಯೇ ಅಂತ ನನ್ನ ಅಭಿಪ್ರಾಯ. ಯಾಕೆಂದರೆ ಎಲ್ಲಿಗೇ ಹೋಗಿ ಮ್ಯಾಗಿ/ಟೋಪ್ ರಾಮನ್/ ಫಾಸ್ತ ಅಂತ ಹತ್ತು ಹಲವಾರು ದಿಢೀರ್ ಪಾಕ ಸಾಮಗ್ರಿಗಳು ಮತ್ತೆ ಮಯ್ಯಾಸ್/ಎಮ್ ಟಿ ಆರ್ ಆಶಿರ್ವಾದ್ ರವರ ದಿಡೀರ್ ಮಾಡುವಂತ ತರಹೇವಾರಿ ಉತ್ತರ ಮತ್ತು ದಕ್ಷಿಣ ಹಾಗೂ ಚೀನಾ ಮತ್ತಿತರ ಅಡುಗೆ ಸಾಮಗ್ರಿ ಸಿಗುತ್ತಿರುವಾಗ...ಬಾರದೇ ಇರಬಹುದೇ ಅನ್ನುವುದೇ ದೊಡ್ಡ ಸಂಶಯ.
ನಮ್ಮಲ್ಲಂತೂ ಭಾರೀ ಖುಷಿ ಇರೋವಾಗ... ಅಂದರೆ ಫ್ರೀ ಇರೋವಾಗ ನಾನು ಅಡುಗೆ ಮನೆ ಕಡೆ ಹೋಗುವುದುಂಟು. ಯಾರಲ್ಲದಿದ್ದರೂ ನನ್ನ ಶ್ರೀಮತಿಯಂತೂ ನನಗೆ ಸಾತ್ ಕೊಡ್ತಾಳೆ ಅಡುಗೆ ಮಾಡುವುದರಲ್ಲೂ ಮತ್ತು ಖಾಲಿಸುವುದರಲ್ಲೂ. ಇದಕ್ಕೆ ಕಾರಣವೂ ಇದೆ, ಈ ಹಾಳೂ ಮೂಳೂ ತಿಂದು ಹೊಟ್ಟೇನೂ ಹಾಳು ಮಾಡಿಕೊಂಡ ನಂತರದ ಮೂರ್ನಾಲ್ಕು ದಿನ ಪಡೋ ಪಾಡೂ ಇದೆಯಲ್ಲ ..ದೇವರೇ ಗತಿ....ಅದಕ್ಕೇ ಮನೇಲೇ ಹೊಸ ರುಚಿ ತಿನ್ನೋದೇ ಒಳ್ಳೆಯದೂ ಅಂತ ನಾಅವಿಬ್ಬರೂ ಮಾಡಿಕೊಂಡ ಹೊಸ ಒಡಂಬಡಿಕೆಯಿದು........ ಇಲ್ಲೂ ಖಾಲಿಯಾಗದಿದ್ದರೆ ಅಂತಾನಾ..?? ಮತ್ತೆ ಇದ್ದೇ ಇದೆಯಲ್ಲ... ರಸ್ತೆ ಪಕ್ಕದ ಕಚಡಾ ದಾನಿಗಳು. ಆದರೆ ಅ ಕಷ್ಟ ಇಷ್ಟರವರೆಗೆ ಬರಲಿಲ್ಲ ಬಿಡಿ. ಮೊದ ಮೊದಲೊಮ್ಮೆ ವಾರಕ್ಕೊಮ್ಮೆಯಾದರೂ ಮನೆಯಲ್ಲಿ ಹೊಸ ರುಚಿ ಅಂತ ನಾನು ಅಡುಗೆ ಮನೆಗೆ ಹೋಗುತ್ತಿರುವಾಗ...ಮಾಡುತ್ತಿರುವಾಗ ಸಾರಿಗೆ ರುಚಿ ಆಗಲಿ ಅಂತ ಸಾಮ್ಭಾರ್ ಹುಡಿ, ಸಾಂಬಾರ್ಗೆ ಹುಳಿ ಹುಡಿ ಮತ್ತು ಸಾರು ಹುಡಿ ಮತ್ತೆ ಪಲ್ಯಕ್ಕೆ ಸಾರಿನ ಹುಡಿಯನ್ನೂ ಸೇರಿಸಿ ನಮ್ಮದೇ ನಳ ಪಾಕ ಅಂತ ಮಾಡಿದಾಗ, ದಿನಾ ತಿನ್ನೋ ರುಚಿಯಿಂದ ಬೇರೆಯೇ ಆದ ಈ ಅಡುಗೆಯನ್ನು ನನ್ನ ಮಕ್ಕಳು ಮತ್ತು ಹೆಂಡತಿ ಸವಿದು ಒಳ್ಳೆಯದಿತ್ತು ಅಂತಿದ್ದಂತೂ ಹೌದು. ಆದರೆ ನಿಜವಾದ ಖುಷಿಯಿಂದ ಅಂತಿದ್ದರೋ ಅಥವಾ ಪಾಪದ ಪ್ರಾಣಿ ಇಷ್ಟಾದರು ಮಾಡಿತಲ್ಲಾ ಅಂತ ಒಳ್ಳೆಯದಿದೆ ಅಂತ ಹೇಳಿದ್ರಾ ಅಂತ ಈಗಲೂ ಈ ಒಂದು ವಿಷಯದಲ್ಲಿ ಸಂಶಯವಿದ್ದೇ ಇದೆ ನನಗೆ. ಈ ಗುಟ್ಟು ಮುಂದೆ ಯಾವುದಾದರೊಂದು ಸಂಧರ್ಭದಲ್ಲಿ ರಟ್ಟಾಗಬಹುದು ಬಿಡಿ.
ಈಗ ಮಾತ್ರ ನಾನು ಹಲಕೆಲವೊಮ್ಮೆ ಶ್ರೀಮತಿಯವರಿಗೆ ಸಹಾಯ ಮಾಡಲು ಹೋಗುವಾಗಲೆಲ್ಲಾ ಜಾಗೃತೆಯಿಂದ ನನ್ನಿಂದ ಸಾಧ್ಯವಾಗುವ ಕೆಲಸವನ್ನು ಮಾತ್ರ ವಹಿಸಿಕೊಳ್ಳುತ್ತೇನೆ. ಉದಾಹರಣೆಗೆ ಲಟ್ಟಿಸೋ ಕೆಲಸ. ಒಂದು ಕಡೆ ಕುಳಿತು ಲಟ್ಟಿಸುತ್ತಿದ್ದರಾಯ್ತು. ಆಕಾರ ಕ್ಕೆ ಜಾಸ್ತಿ ಉರುಟಾಗಬೇಕಾದರೆ ಯಾವುದಾದರೂ ಉರುಟುರುಟಾದ ಬಟ್ಟಲಿನಿಂದ ಕತ್ತರಿಸಿದರಾಯ್ತು. ಇನ್ನು ಪಲಾವ್ ಅಥವಾ ಚಿತ್ರಾನ್ನವನ್ನು (ಬಟ್ಟಲು) ತಟ್ಟೆಯಲ್ಲಿ ತುಂಬಿ ಅದನ್ನು ಊಟದ ಬಟ್ಟಲಿನ ( ತಟ್ಟೆ) ಮೇಲೆ ಕವುಚಿಟ್ಟು ಮೇಲೆತ್ತಿದರಾಯ್ತು. ಪ್ರಸೆಂಟೇಶನ್ ನಲ್ಲಿ ನಮ್ಮ ಹೆಸರೇ ಬರುತ್ತದಲ್ಲ..?? ಇಲ್ಲವಾದರೆ ಉಪ್ಪೋ ಹುಳಿಯೋ ಖಾರವೋ ಜಾಸ್ತಿ ಹಾಕಿ ನಾವು ಮಾಡಿದ್ದು ಅನ್ನಿಸೋದಕ್ಕಿಂತ ಇದೇ ಒಳ್ಳೆಯದಲ್ಲವೇ...? ಈ ಸೀಕ್ರೆಟ್ ಎಲ್ಲರಿಗೂ ತಿಳಿಸಬೇಡಿ ದಯವಿಟ್ಟು.
ಈ ಅಡುಗೆಯ ಅಮಲು ನನಗಿರಲಿಲ್ಲ. ಯಾಕೆಂದರೆ ಮನೆಯಲ್ಲಿ- ಚಿಕ್ಕವನಿರುವಾಗ- ಅಮ್ಮನ ಅಡುಗೆಯ ರುಚಿ ವರ್ಣನಾತೀತ. ಹಲಸಿನ ಕಾಲದಲ್ಲಿ ಅಂದರೆ ಗರ್ಮಿಯಲ್ಲಿ ಹಲಸಿನ ಹಣ್ಣು ಅದರ ದೋಸೆ ಪಾಯಸ, ಮುಳಕ( ಅಪ್ಪ), ಕಡುಬು, ಕಾಯಿಯ ದೋಸೆ, ಪಲ್ಯ, ಹಪ್ಪಳದ್ದೂ ಅದರಲ್ಲೆಲ್ಲ ನಮ್ಮ ಕೆಲಸವೂ (ಸಹಾಯದಲ್ಲಿ) ಖುಷಿ ಮಿಶ್ರಿತ . ಯಾಕೆಂದರೆ ಬೆಳೆದ ಹಲಸಿನ ಕಾಯಿಯನ್ನು ಮರದಿಂದ ಕೊಯ್ದು ತೆಗೆದು ಅದನ್ನು ಕತ್ತರಿಸಿ( ಮಯಣದ ಆ ಹಲಸಿನ ಕಾಯಿ ಕತ್ತರಿಸಿ ಅದರ ಸೊಳೆಗಳನ್ನು ಬೇಏರ್ಪಡಿಸುವದೂ ನಂತರ ನಮ್ಮ ಕೈಯಲ್ಲಿ ಹಿಡಿದ ಆ ಮೇಣವನ್ನೂ ತೆಗೆಯುವದೂ ಒಂದು ಕಲೆಯೇ.) ಆ ಸೊಳೆಯನ್ನು ಹದವಾಗಿ ಬೇಯಿಸಿಕೊಂಡು ಅರೆದು ಅದನ್ನು ಸಣ್ಣಸಣ್ಣ ಉಂಡೆಗಳನ್ನಾಗಿ ಮಾಡಿ ಮಣೆಯ ಮೇಲೋ ಅಥವಾ ಬಟ್ಟಲಿನ ಮೇಲೋ ಒತ್ತಿ ಹಪ್ಪಳ ಮಾಡಿ ಬೇಯಿಸುವದು. ನಿಜವಾಗಿ ಒಣ ಬಿರು ಬೇಸಗೆಯಲ್ಲಿ ಇದನ್ನು ಉತ್ಪಾದಿಸೋ ಕೆಲಸ ತುಂಬಾ ತ್ರಾಸವಾದರೂ ಆಸಕ್ತಿ ದಾಯಕವಾಗಿತ್ತು. ಇದೇ ರೀತಿ ಗೆಣಸಿನ ಹಪ್ಪಳ ಸಹಾ. ಈ ರೀತಿ ಮಾಡುವಾಗ ಈ ಹಪ್ಪಳದ ಹೂರಣ ನಮ್ಮ ಹೊಟ್ಟೆಗೆ ಸೇರುತ್ತಿದ್ದುದೂ ಉಂಟು, ಹಲಸಿನ ಹಣ್ಣಿನ ಹಪ್ಪಳ ಮಾಡುವಾಗಲಂತೂ ಹೊಟ್ಟೆ ಸೇರಿ ಉಳಿದದ್ದು ಮಾತ್ರ ಹಪ್ಪಳವಾಗುವ ಸಾಧ್ಯತೆಯೇ ಹೆಚ್ಚು. ಇನ್ನು ಮಾವಿನ ಹಣ್ಣೀನ ಸೀಸನ್ನಲ್ಲಂತು ಮಾವಿನ ಹಣ್ಣುಗಳನ್ನು ತಂದು ಅದರ ಸಿಪ್ಪೆ ತೆಗೆದು ಅವುಗಳ ರಸವನ್ನು ಬೇರ್ಪಡಿಸಿ ಒಳ್ಳೆಯ ಬಿಸಿಲಿನಲ್ಲಿ ಚಾಪೆಯ ಮೇಲೆ ಹರಡುತ್ತಾ ಒಣಗಿದ ಮೇಲೆ ಅದರ ಮೇಲೆಯೇ ಪದರ ಪದರವಾಗಿ ಹಚ್ಚುತ್ತಾ ಒಣಗಿಸಿ ಮಾಡಿದ ಹಪ್ಪಳದಂತಹ ಮುರಬ್ಬಾ ( ಹಿಂದಿಯಲ್ಲಿ ಆಮ್ ಪಾಪಡ್) ಮಳೆಗಾಲದಲ್ಲಿ ತಿನ್ನಲು ಬಹಳ ರುಚಿ ಅದು ಚಾಪೆಯ ಮೇಲೋ ಅಥವಾ ಗೆರೆಸಿನ ಮೇಲೋ ಒಣಗಿಸಿದಾಗ ಅದರ ಪಡಿಯಚ್ಚು ಈ ಹಣ್ಚಟ್ ಮೇಲೆ ಬರುತ್ತದಲ್ಲ, ಆ ಡಿಸಾಯ್ನ್ ನೋಡಲು ತುಂಬಾ ಚೆನ್ನಾಗಿರತ್ತೆ. ಇನ್ನು ಮುರಿನ ಹಣ್ಣು ಸಹಾ ತಂದು ಒಣಗಿಸಿ ಇಟ್ಟುಕೊಳ್ಳುತ್ತಿದ್ದೆವು ಬೇಸಗೆಯಲ್ಲಿ ಅದರ ಪಾನಕ ಸಾರು ತುಂಬಾನೇ ಒಳ್ಳೆಯದು. ನಾನು ತುಂಬಾ ಚಿಕ್ಕವನಿರಬೇಕಾದರೆ ನಮ್ಮ ಮನೆಯಲ್ಲಿ ಧೂಪದ ಎಣ್ಣೆಯನ್ನೂ ಮಾಡುತ್ತಿದ್ದರು. ಅದು ಇನ್ನೂ ಜಾಸ್ತಿ ಪರಿಶ್ರಮ ಮತ್ತು ತಾಳ್ಮೆ ಬೇಡುತ್ತೆ. ಭೆಳೆದ ದೂಪದ ಕಾಯನ್ನು ತಂದು ಅದರ ಸಿಪ್ಪೆ ತೆಗೆದು ಕಾಯನ್ನು( ಬೀಜವಾ ಕಾಯಿಯಾ ಇನ್ನೂ ಸಂಶಯವಿದೆ ನನಗೆ) ಒಡೆದು ಅದರ ಮಧ್ಯದ ಸಿಂಬಳದಂತಹ ಪದಾರ್ಥವನ್ನು ತೆಗೆದು ತೊಳೆದು ಗುದ್ದಿ ನೀರಿನಲ್ಲಿ ಕದಡಿಸಿ ತುಂಬಿದ ಪಾತ್ರೆಯಲ್ಲಿ ಬೇಯಿಸುತ್ತಾರೆ . ಬೇಯಿಸುವ ಅನ್ನುವುದಕ್ಕಿಂತ ಕುದಿಸುವುದು ಅನ್ನುವುದು ಸರಿಯಾದ ಶಬ್ದ. ಕುದಿಯುವ ನೀರಿನ ಮೇಲಿನಿಂದ ಎಣ್ಣೆ ಬರುತ್ತದೆ ಅದನ್ನ ತೆಗೆಯಬೇಕು . ಇದಕ್ಕೆ ಬೇಕಾದ ತಾಳ್ಮೆಪರಿಶ್ರಮ ಈಗಿನವರಲ್ಲಿ ಕಷ್ಟವೇ ........... ಅದನ್ನೇ ಹಳ್ಳಿಗಳಲ್ಲಿ ನಿತ್ಯ ಅಡುಗೆಗೆ ಬಳಸುತ್ತಿದ್ದರು . ಈಗ ಇದೆಲ್ಲ ಇರಲಿಕ್ಕಿಲ್ಲ ಬಿಡಿ. ನನಗೆ ಇವೆಲ್ಲ ಈಗ ಅಸ್ಪಷ್ಟ ನೆನಪು ಅಷ್ಟೆ. ಯಾವುದೋ ತಿಂಡಿ ಮಾಡುವ ಸಂಭ್ರಮದಲ್ಲಿ ಹಳ್ಳಿಯಲ್ಲಿ ಗಂಟೆಗಟ್ಟಲೆ ಒಲೆ ಮುಂದೆ ಕುಳಿತ ಹೆಂಗಸರು ಮಾಡುವ ಕೆಲಸ ಅವರ ಪರಿಶ್ರಮ ಈಗಲೂ ಎಣಿಸಿದರೆ ಅದೊಂದು ಸಂಭ್ರಮದ ಅಚ್ಚರಿಯೇ. ಆದರೆ ಇಂತಹ ಶ್ರಮದಲ್ಲೆಲ್ಲಾ ಮಕ್ಕಳದ್ದೂ ಮನೆಯ ಗಂಡಸರದ್ದೂ ಸಮಪಾಲೇ ಇರುತ್ತಿತ್ತು. ಮತ್ತೆ ಆಚೆ ಈಚೆ ಮನೆಯವರ ಪರಸ್ಪರ ಶ್ರಮ ದಾನದ ಪದ್ಧತಿಯೂ ಇದಕ್ಕೆ ಇಂಬುಕೊಡುತ್ತಿದ್ದು ಅದರ ಮಜವೇ ಬೇರೆ ಬಿಡಿ. ಇವೆಲ್ಲಾ ಸಹನೆಯ ಸಹಬಾಳ್ವೆಯ ಉತ್ತಮೋತ್ತಮ ನಿದರ್ಶನಗಳೆಂದೆನಿಸುತ್ತದೆ ನನಗೆ.
ಕೆಸುವಿನ ಪತ್ರೊಡೆ, ಅದರ ಉಪ್ಪಿಟ್ಟು( ಈಗಲೂ ಬಾಯಲ್ಲಿ ನೀರೂರುವುದು) ಮಳೆಗಾಲದಲ್ಲಿ ಅದು ಮಾಡಬಹುದಾದಂತ ದಿನವನ್ನೂ ಕರಾರುವಾಕ್ಕಾಗಿ ನಿರ್ಧರಿಸಿ ಬಿಟ್ಟಿದ್ದೂ ಉಂಟು ಮರ ಕೆಸ ಹುಡುಕಲು. ಅದಕ್ಕೂ ಕಾಡಿನ ಕೆಲವೊಂದು ಮರ ಮಾತ್ರ ಮೀಸಲು. ಮಳೆಗಾಲ ಶುರುವಾಗಿ ಸುಮಾರು ಹದಿನೈದಿಪ್ಪತ್ತು ದಿನಗಳಲ್ಲಿ ನಾವು ಸರ್ವೇ ಮಾಡಲು ಹೊರಡುತ್ತಿದ್ದೆವು. ಮೇಲಿನ ೨ ಅಥವಾ ಮೂರು ಎಲೆ ಮಾತ್ರ ಕೊಯ್ಯಬೇಕು ಅದು ಎಳೆ ಹಸಿರು ಎಲೆ ಮಾತ್ರ. ಜಾಸ್ತಿ ಬೆಳೆದರೆ ಬಾಯಿ ತುರಿಸೋದು ಗ್ಯಾರಂಟಿ ( ಕಾಯಿ ಕತ್ತವೇ ಬೇಕಾದೀತು ತುರಿಸಲು- ನಮ್ಮ ತಮಾಷೆ ಇರುತ್ತಿತ್ತು) ಹೀಗೆ ಚಿಗುರು ಮರಕೆಸದ ಎಲೆ ಕೊಯ್ದು ತಂದು ಮನೆಯಲ್ಲಿ ತೊಳೆದಿಟ್ತರೆ ನಮ್ಮ ಕೆಲಸ ಮುಗಿಯಿತು. ಮತ್ತೆ ಅಮ್ಮ ಅಕ್ಕ ಅದರ ಹಿಂಬದಿ ಚೆನ್ನಾಗಿ ಒರೆಸಿ ( ಇಲ್ಲವಾದರೆ ಹುಳ ಕುಟ್ಟಿ ಇರುವ ಸಾಧ್ಯತೆ ಹೆಚ್ಚು) ಮೊದಲೇ ಅರೆದಿಟ್ಟ ಅಕ್ಕಿ ಮೆಣಸು ಹುಣಿಸೆ ಹುಳಿ ಮಿಶ್ರಣ ಹಚ್ಚುತ್ತಾರೆ. ಮೇಲೆ ಮತ್ತೊಂದು ಎಲೆಯಿಟ್ಟು ಅದರ ಬೆನ್ನಿಗೇ ಹಚ್ಚುತ್ತಾ ಹೀಗೆ ಮೂರ್ನಾಲ್ಕು ಪದರವನ್ನಾಗಿ ಮಡಿಸಿ ಅದನ್ನು ಇಡ್ಲಿ ಅಟ್ಟದಲ್ಲಿ( ಕುಕ್ಕರಿನಲ್ಲಿ) ಬೇಯಿಸುತ್ತಾರೆ. ನಂತ ರ ಅದನ್ನು ಚಿಕ್ಕಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಕಾಯಿ ಬೆಲ್ಲ ಈರುಳ್ಳಿ ಹಾಕಿ ಮಾಡುವ ಕರಿಬೇವಿನ ಒಗ್ಗರಣೆಯ ಉಪ್ಪಿಟ್ಟು ಅಹಾಹಾ ಅದರ ರುಚಿಯೇ ಬೇರೆ.
ಇನ್ನು ಅಕ್ಕ ಮಾಡುವ ಅತ್ರಾಸ ಅವಳಿಗೆ ಅವಳೇ ಸಾಠಿ, ಇದೊಂದು ಕಲಿಯಾಗಲಿಲ್ಲವೆಂಬ ಕೊರಗು ಈಗಲೂ ಇದೆ ನನ್ನ ಅಮ್ಮನಿಗೆ. ಒಂದೆರಡು ಸಾರಿ ಪ್ರಯತ್ನ ಪಟ್ಟಿದ್ದರು ಅದರ ಪಾಕ ಸರಿಯಾಗದೆ ಅತ್ರಾಸವನ್ನು ಎಣ್ಣೆಯಲ್ಲಿ ಹಾಕಿದಾಗ ಅದು ಒಡೆದು ಚೂರು ಚೂರಾಗಿ ಅದನ್ನ ಅಪ್ಪಯ್ಯ ಒಂದು ಎರಡು ಮೂರು ಅಂತ ಲೆಕ್ಕ ಹಾಕುವಂತೆ ನಟಿಸುತ್ತಾ ನೂರು ಎಂದದ್ದು ನಾವೆಲ್ಲಾ ನಗಾಡಿದ್ದು ನೆನಪಿಗೆ ಬರುತ್ತಿದೆ. ಆದರೆ ರವೆ ಲಾಡು, ಹೆಸರು ಗೋಧಿ ಲಾಡು, ತಂಬಿಟ್ಟಿನ ಲಾಡು ತರಹೇವಾರಿ ದೋಸೆಗಳು, ಅದರಲ್ಲೂ ಕಬ್ಬಿನ ಹಾಲಿನ ದೋಸೆ ಮೆಂತೆ ದೋಸೆ ಹಲಸಿನ ಹಣ್ಣೀನ ದೋಸೆ ಇತ್ಯಾದಿ. ಇನ್ನು ಪಾಯಸಗಳು ರಸಾಯನ ಇಂತಹವುಗಳೆಲ್ಲಾ ನಮ್ಮ ಬಾಯಿ ರುಚಿಯನ್ನು ಮತ್ತಷ್ಟು ಹೆಚ್ಚಿಸೋ ಅಮ್ಮನ ಕೈ ಚಳಕದ ಸಾಧನಗಳಾಗಿ ನಮ್ಮನ್ನು ಅಡುಗೆ ಕೆಲಸದ ಸಹಾಯಕ್ಕಾಗಿ ಹಚ್ಚಿಸುವ ಸಾಧನಗಳಾಗಿದ್ದವು. ತೆಂಗಿನ ಕಾಯಿ ಹಾಕಿ ಅಕ್ಕಿ ಕಜ್ಜಾಯವಂತೂ ನಾನು ನಾನು ಕದ್ದೂ ತಿಂದದ್ದಿದೆ ಅವೆಲ್ಲಾ ಅಷ್ಟು ರುಚಿಕರ. ತಂದೆ ಸಂಜೆ ಬಂದ ಮೇಲೆ ಅವರೂ ಅಮ್ಮನಿಗೆ ಸಹಾಯ ಮಾಡಲು ಬರುತ್ತಿದ್ದರು. ಕಾರದ ಕಡ್ಡಿ ಚಕ್ಕುಲಿ ಹಿಟ್ಟುಗಳನ್ನು ಅವುಗಳ "ಬಂಡಿ"ಯಿಂದ ಸ್ವಾತಂತ್ರ್ಯ ಕೊಡೋ ಜವಾಬ್ದಾರಿ ಯೆಲ್ಲಾ ನನ್ನ ತಂದೆಯಿಂದ ಕಲಿಯುತ್ತಿದ್ದೆವು. ಮತ್ತೆ ಆ ಗೋದಿಯ ಸೇವಿಗೆ ಉಪ್ಪಿಟ್ಟು ಅದರ ರುಚಿಯೂ ವರ್ಣನಾತೀತವೇ. ಆಗೆಲ್ಲಾ ರೇಶನ್ ನಲ್ಲಿ ಗೋದಿ ಸಿಗುತ್ತಿದ್ದು ಅದನ್ನ ತಂದು ಖಾರದ ಬಿಸಿಲಿಲಲ್ಲಿ ಒಣ ಹಾಕಿ ನಂತರ ಮೂರು ದಿನ ನೀರಲ್ಲಿ ನೆನೆ ಹಾಕಬೇಕು, ಅದರ ನೀರನ್ನು ಮಾತ್ರ ದಿನಾ ಬದಲಿಸಬೇಕು ಇಲ್ಲವಾದರೆ ಅವರ ವಾಸನೆಯಲ್ಲಿ ಎಷ್ಟಾಗುತ್ತದೆ ಎಂದರೆ ಯಾರೂ ಸಹಿಸಲಾರರು. ಅದನ್ನು ಅರೆಯುವ ಕಲ್ಲಿನಲ್ಲಿ ಹಾಕಿ ಅರೆಯಬೇಕು ನಂತರ ಅರೆ ಬೇಯಿಸಿಕೊಂಡು ಅದನ್ನ ಶಾವಿಗೆ ಬಂಡಿಯಲ್ಲೋ ಅಥವಾ ಚಕ್ಕುಲಿಯ ಬಂಡಿಯಲ್ಲೋ ಶ್ಯಾವಿಗೆ ಮಾಡಿ ಮತ್ತೆ ಖಾರದ ಬಿಸಿಲಿನಲ್ಲಿ ಒಣಗಿಸಿ ಇಟ್ಟರೆ ಮಳೆಗಾಲದ ಮಧ್ಯಾನ್ನದ ತಿಂಡಿಯಾದ ಗರಿಗರಿಯಾದ ಸುವಾಸನಾಯುಕ್ತ ಉಪ್ಪಿಟ್ಟು ತಯಾರಿಸಲು ಸಿದ್ಧವಾಗುತ್ತೆ. ಅದೂ ಹಾಗೇ ಸ್ವಲ್ಪ ಸಿಹಿಯಾದ ಆ ಉಪ್ಪಿಟ್ಟಿನ ರುಚಿಯೋ , ಅಹಾಹಾ.... ರುಚಿಯಂತೂ ಈಗಲೂ ನಾಲಗೆಯಲ್ಲಿದೆ.
ಆಗಿನ ಒಂದು ಮಜಾ ನಿಮಗೆ ಹೇಳಬೇಕೆನ್ನಿಸಿದೆ. "ಜೊತೆಯೋದು" ಕಂಬೈನ್ಡ್ ಸ್ಟಡಿ ಮಾಡುವುದಕ್ಕೆಂತ ಒಮ್ಮೆ ಶಂಕರ ನಾರಾಯಣಕ್ಕೆ ನನ್ನ ಗೆಳೆಯನ ( ಆತ ಬ್ರಹ್ಮಚಾರೀ ಕೋಣೆಯಲ್ಲಿದ್ದ- ಅಂದರೆ ಓದಲು ಬಾಡಿಗೆ ಖೋಲಿಯಲ್ಲಿದ್ದ ನನ್ನನ್ನು ಕರೆದಿದ್ದ. ಸರಿ ಅಮ್ಮನ ಹತ್ರ ಕೇಳಿದ್ದಕ್ಕೆ ಸದಾ ತಿಂಡಿ ಪೋತನಾದ ನನಗೆ ಊಟ ದ ಕಥೆ ಏನು ಅಂದಾಗ ನಾವಿಬ್ಬರೂ ಅಡುಗೆ ಮಾಡಿಕೊಳ್ಳುತ್ತೇವೆ ಎಂದಿದ್ದೆ. ಅಮ್ಮ ನಗಾಡಿದ್ದರು. ಸರಿ ಗೆಳೆಯನ ರೂಮಿಗೆ ಬಂದೆ . ಆತನ ಬಳಿಯಲ್ಲಿದ್ದ ಪರಿಕರಗಳಿಂದ ಎಲ್ಲದಕ್ಕಿಂತ ಸುಲಭವೆಂದರೆ ಕುಚ್ಚಕ್ಕಿ ಗಂಜಿ ಅನ್ನಿಸಿತು. ಸರಿ ಪಾತ್ರ ಸ್ಟೌ ಮೇಲಿಟ್ಟು ಪಾತ್ರ ಇಟ್ಟು ನೀರು ಹಾಕಿ ಅಕ್ಕಿ ತೊಳೆದು ಬೇಯಿಸಲಿಟ್ಟೆವು. ಸ್ವಲ್ಪ ಕುದಿಯಲು ಆರಂಭವಾಗುವಾಗ ಓದಿನ ಮಧ್ಯೆ ಏನನ್ನಾದರೂ ಮುಚ್ಚಬೇಕಿತ್ತಲ್ಲ ಅನ್ನಿಸಿತು. ಅದನ್ನೇ ಹೇಳಿದಾಗ ಪಕ್ಕದಲ್ಲಿ ಏನಾದರೂ ಮುಚ್ಚಲು ಹೇಳಿದ. ನಾನೋ......., ಪಕ್ಕದಲ್ಲಿ ಕಂಡ ಒಂದು ರಟ್ಟಿನ ತುಂಡನ್ನು ಮುಚ್ಚಿದೆ. ನಮ್ಮ ಓದು ಮುಗಿಯುತ್ತಾ ಬಂದಂತೆ ಹಸಿವೆಯೂ ಜೋರಾಯ್ತು. ಆತ ಊಟ ಮಾಡೋಣವೇ ಎಂದು ಕೇಳಿದ. ಸರಿ ಅಂತ ಉಣಲು ಕುಳಿತೆವು. ಮಧ್ಯೆ ಮಧ್ಯೆ ಏನೋ ಗಟ್ಟಿಯಾಗಿ ತಿನ್ನಲು ಸಿಗುತ್ತಿರಬೇಕಾದರೆ ಏಯ್ ಆಲೂ ಹಾಕಿದ್ಯಾ? ಚೆನ್ನಾಗಿದೆ ಅಂದೆ ನಾನು. ಯಾರು ಹಾಕಿದ್ದು ಆಲುಗಡ್ಡೆ? ನಾನು ಹಾಕಿರಲಿಲ್ಲವಲ್ಲಾ ಎಂದ ಅಚ್ಚರಿಯಿಂದ ಆತ. ಮತ್ತೆ..??
ನಾನು ಮುಚ್ಚಿದ್ದು ರಟ್ಟಾದುದರಿಂದ ಬಿಸಿ ಗಂಜಿಯ ಹಬೆಗೆ ಅದು ಮುದ್ದೆಯಾಗಿ ಗಂಜಿಗಿಳಿದಿತ್ತು. ಅದೂ ಗೊತ್ತಾಗಿದ್ದ ಸಂಜೆ ಮನೆಗೆ ಬಂದ ಮೇಲೆ ಈವಿಷಯಗಳೆಲ್ಲಾ ಅಮ್ಮನ ಹತ್ರ ಹೇಳಿಕೊಂಡಾಗ ಅವಳು ಕಂಡು ಹಿಡಿದಾಗಲೇ.
ಈ ವಾರ್ಷಿಕ ಪರೀಕ್ಷೆಗಳೆಲ್ಲಾ ಮಾವಿನ ಹಣ್ಣಿನ ಸೀಸನ್ ನಲ್ಲೇ ಬರೋದು, ನಮ್ಮ ಹೊಟ್ಟೆ ಉರಿಸಲು. ಒಮ್ಮೆ ನಾನೂ ನನ್ನ ದೊಡ್ಡಪ್ಪನ ಮಗನೂ ಕಂಬೈನ್ಡ್ ಓದಿನ ನೆಪದಲ್ಲಿ ದೊಡ್ದ ಮಾವಿನ ಮರದ ಕೆಳಗೆ ನೆರಳಲ್ಲಿ ಓದುತ್ತಾ ಜತೆಗೆ ದಂಡಿಯಾಗಿ ಮಾವಿನ ಹಣ್ಣುಗಳನ್ನೂ ತಿನ್ನುತ್ತಾ ಮಾವಿನ ಹಣ್ಣಿನ ರಾಸಾಯನಿಕ ಕ್ರೀಯೆಯಿಂದಾಗಿ ನಿದ್ರಾ ದೇವಿಯ ವಶರಾಗಿ, ಅಮ್ಮನ ಬೇಹುಗಾರರ ದೆಸೆಯಿಂದಾಗಿ ಮನೆಯಲ್ಲೆಲ್ಲಾ ಗೊತ್ತಾಗಿ ರಾದ್ದಾಂತವಾದುದನ್ನು ಈಗಲೂ ಹೇಳಿ ನಮ್ಮನ್ನು ನಾಚಿಸುತ್ತಿರುತ್ತಾರೆ.
ಈ ಸಲ ಇಷ್ಟೇ ಸಾಕು. ಮುಂದಿನ ಸಲ ಮತ್ತೆ.
Comments
ಉ: " ಜತೆಯೋದು" ಮತ್ತು "ಗಂಡಸರ ಅಡುಗೆ"
In reply to ಉ: " ಜತೆಯೋದು" ಮತ್ತು "ಗಂಡಸರ ಅಡುಗೆ" by ಗಣೇಶ
ಉ: " ಜತೆಯೋದು" ಮತ್ತು "ಗಂಡಸರ ಅಡುಗೆ"
ಉ: " ಜತೆಯೋದು" ಮತ್ತು "ಗಂಡಸರ ಅಡುಗೆ"
In reply to ಉ: " ಜತೆಯೋದು" ಮತ್ತು "ಗಂಡಸರ ಅಡುಗೆ" by nageshamysore
ಉ: " ಜತೆಯೋದು" ಮತ್ತು "ಗಂಡಸರ ಅಡುಗೆ"
ಉ: " ಜತೆಯೋದು" ಮತ್ತು "ಗಂಡಸರ ಅಡುಗೆ"