ಜನಜಾಗೃತಿಯೇ ಭ್ರಷ್ಟಾಚಾರಕ್ಕೆ ಮದ್ದು! [ಶ್ರೀ ಮದನಗೋಪಾಲರೊಂದಿಗೆ ನಡೆಸಿದ ಸಂದರ್ಶನ] - 1

ಜನಜಾಗೃತಿಯೇ ಭ್ರಷ್ಟಾಚಾರಕ್ಕೆ ಮದ್ದು! [ಶ್ರೀ ಮದನಗೋಪಾಲರೊಂದಿಗೆ ನಡೆಸಿದ ಸಂದರ್ಶನ] - 1

ನಪರ ಕಾಳಜಿಯನ್ನೂ, ಪ್ರಾಮಾಣಿಕತೆಯನ್ನೂ ಹೊಂದಿರುವ ರಾಜ್ಯದ ಸರಕಾರಿ ಅಧಿಕಾರಿಗಳ ಸಾಲಿನಲ್ಲಿ ಎದ್ದು ನಿಲ್ಲುವ ಹೆಸರು - ಮದನಗೋಪಾಲ್. ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ರು ರಾಜಕಾರಣದ ಆಗುಹೋಗುಗಳಿಗೆ ತಲೆ ಕೆಡಿಸಿಕೊಳ್ಳದೆ, ಪದೇ ಪದೇ ಬಂದೆರಗುವ ಸ್ವಾರ್ಥಕೇಂದ್ರಿತ ಒತ್ತಡಗಳಿಗೆ ಮಣಿಯದೆ, ನಿಜವಾದ ಅರ್ಥದಲ್ಲಿ 'ಸರಕಾರದ ಕೆಲಸ ದೇವರ ಕೆಲಸ' ಎಂದು ನಂಬಿ ನಡೆಯುತ್ತಿರುವವರು. ಇಂದು ಬಹುತೇಕ ಖಾಸಗಿ-ಸಾರ್ವಜನಿಕ ಎಂಬ ಭೇದವಿಲ್ಲದೆ, ಎಲ್ಲೆಡೆಗೂ ವ್ಯಾಪಿಸಿರುವ ಆಡಳಿತಶಾಹಿ ದುರಹಂಕಾರದ ಕಬಂಧಬಾಹುಗಳಿಗೆ ಪಕ್ಕಾಗದೆ, ಸಾಮಾನ್ಯ ವ್ಯಕ್ತಿಯನ್ನೂ ಆತ್ಮೀಯವಾಗಿ ಮಾತನಾಡಿಸುವ, ಆತನ ಕಷ್ಟ ಸುಖಗಳನ್ನು ಕೇಳಿಸಿಕೊಳ್ಳುವ ಸೌಜನ್ಯ ಉಳ್ಳವರು, ಮದನಗೋಪಾಲ್.

 

'ಭ್ರಷ್ಟಾಚಾರದ ಬೇರು-ಬಿಳಿಲುಗಳು ಹೇಗೆಲ್ಲ ಹರಡಿವೆ ಮತ್ತು ಅದಕ್ಕೆ ಪರಿಹಾರವೇನು?' ಎಂಬ ಕುರಿತಾಗಿ ಅವರೊಂದಿಗೆ ನಾನು ಉತ್ಥಾನ ಪತ್ರಿಕೆಗಾಗಿ ನಡೆಸಿದ ಸಂದರ್ಶನ ಇಲ್ಲಿದೆ. 'ಉತ್ಥಾನ' ಮಾಸಪತ್ರಿಕೆಯ ಜನವರಿ, ೨೦೧೩ರ ಸಂಕ್ರಾಂತಿ ವಿಶೇಷಾಂಕದಲ್ಲಿ ಇದು ಪ್ರಕಟವಾಗಿದೆ. 'ಭ್ರಷ್ಟಾಚಾರದ ವಿರಾಡ್ ರೂಪ-ಕಾರಣ-ಪರಿಹಾರ' - ಇದು ಈ ವಿಶೇಷಾಂಕದ ವಿಶೇಷ ವಿಷಯ. ನ್ಯಾ. ಸಂತೋಷ ಹೆಗ್ಡೆಯವರ ಸಂದರ್ಶನವೂ ಸೇರಿದಂತೆ ಅನೇಕ ಉಪಯುಕ್ತ ಲೇಖನಗಳುಳ್ಳ ಈ ಸಂಚಿಕೆ ಸಮಯೋಚಿತವಾಗಿದೆ ಮತ್ತು ಓದಬೇಕಾದುದಾಗಿದೆ.

-ಕ.ವೆಂ.ನಾಗರಾಜ್.<--break->

ಪ್ರಶ್ನೆ: ನಿಮ್ಮನ್ನು ಒಬ್ಬರು ಜನಪರ ಕಾಳಜಿಯುಳ್ಳ ಅಧಿಕಾರಿ ಎಂದು ಜನ ಗುರುತಿಸುತ್ತಾರೆ. ನಿಮ್ಮ ಈ ವ್ಯಕ್ತಿತ್ವ ರೂಪಿತವಾಗುವಲ್ಲಿ ನಿಮ್ಮ ಮೇಲೆ ಪ್ರಭಾವ ಬೀರಿದ ಸಂಗತಿಗಳು, ವ್ಯಕ್ತಿಗಳ ಬಗ್ಗೆ ತಿಳಿಸುವಿರಾ?

ಮ.ಗೋ: ನಾವು ಆಂಧ್ರದ ಗುಂಟೂರಿನಲ್ಲಿದ್ದೆವು. ನನ್ನ ತಂದೆ ಆಂಧ್ರಪ್ರದೇಶದಲ್ಲಿ ಕಮ್ಯೂನಿಸ್ಟ್ ಪಾರ್ಟಿಯ ಸ್ಥಾಪಕರಾಗಿದ್ದರು. ಅವರು ೧೭ ಭಯೋತ್ಪಾದನಾ ಪ್ರಕರಣಗಳಲ್ಲಿ ಆರೋಪಿಯಾಗಿದ್ದರು. ಒಂದು ಪ್ರಕರಣದಲ್ಲಿ ೬ ವರ್ಷಗಳ ಸೆರೆಮನೆವಾಸದ ಶಿಕ್ಷೆಗೆ ಗುರಿಯಾಗಿ ಯರವಡಾ ಮತ್ತು ಆಲಿಪುರ ಸೆರೆಮನೆಗಳಲ್ಲಿದ್ದರು. ನನ್ನ ಅಜ್ಜ ಗುಂಟೂರು ಕಾರ್ಪೋರೇಷನ್ನಿನ ಮೇಯರ್ ಆಗಿದ್ದರು. ೧೯೨೧ರಲ್ಲಿ ಗಾಂಧೀಜಿ ಅಸಹಕಾರ ಚಳುವಳಿಗೆ ಕರೆ ಕೊಟ್ಟಾಗ ತನ್ನ ಹುದ್ದೆಗೆ ರಾಜಿನಾಮೆ ನೀಡಿ ಚಳುವಳಿಯಲ್ಲಿ ಭಾಗವಹಿಸಿದ್ದರು. ನಂತರ ಅವರು ಕಾಂಗ್ರೆಸ್ ಚಳುವಳಿಗಳಲ್ಲಿ ಸಕ್ರಿಯರಾಗಿ ತೊಡಗಿಕೊಂಡರು. ನನ್ನ ಅಜ್ಜಿ ಸಹ ಕಾಂಗ್ರೆಸ್ ಪಕ್ಷದಲ್ಲಿದ್ದರು. ನನ್ನ ತಂದೆ ಬನಾರಸ್ ಯೂನಿವರ್ಸಿಟಿಯಲ್ಲಿ ೩ ವಿಷಯಗಳಲ್ಲಿ ಎಂ.ಎ. ಪದವಿ ಪಡೆದಿದ್ದರು. ನಂತರ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದರು, ರಾಜಿನಾಮೆ ಕೊಟ್ಟರು, ಕಮ್ಯೂನಿಸ್ಟ್ ಪಾರ್ಟಿ ಸೇರಿದರು.  'ಟೆರರಿಸ್ಟ್ಸ್ ಆಫ್ ಆಂಧ್ರ' ಎಂಬ ಹೆಸರಿನ ಪುಸ್ತಕದ ಒಂದು ಅಧ್ಯಾಯ ನನ್ನ ತಂದೆಯ ಕುರಿತದ್ದಾಗಿದೆ. ಏಕೋ ಏನೋ ಅವರು ಸಂತೋಷವಾಗಿರಲಿಲ್ಲ. ಸೂಕ್ಷ್ಮ ಮನಸ್ಕರು ಅಸತ್ಯವನ್ನು ಸಹಿಸುವುದಿಲ್ಲ. ಇಬ್ಬಗೆ ನೀತಿಗಳು ಅವರಿಗೆ ಸರಿಕಾಣದೆ ಕಮ್ಯೂನಿಸ್ಟ್ ಪಾರ್ಟಿಯಿಂದ ದೂರ ಸರಿದರು. ಪೂರ್ಣ ಆಧ್ಯಾತ್ಮಿಕತೆ ಕಡೆಗೆ ವಾಲಿದರು. ಹೃಷಿಕೇಶದಲ್ಲಿ ಸ್ವಾಮಿ ಶಿವಾನಂದರ ಬಳಿಗೆ ಹೋದರು. ಹೃಷಿಕೇಶದಲ್ಲಿ ಸುಮಾರು ೧೫ ವರ್ಷ ಇದ್ದರು.

     ನನ್ನ ಮೇಲೆ ಪ್ರಭಾವ ಬೀರಿದ ಇನ್ನೊಬ್ಬರೆಂದರೆ ತೆಲುಗಿನ ಪ್ರಸಿದ್ಧ ಸಾಹಿತಿ ಚಲಂರವರು. ನಾನು ೧೦ನೆಯ ತರಗತಿಯಲ್ಲಿದ್ದಾಗಿನಿಂದಲೇ ಅವರಿಗೆ ಪತ್ರ ಬರೆಯುವ ಅಭ್ಯಾಸ ಇಟ್ಟುಕೊಂಡಿದ್ದೆ. ೫-೬ ವರ್ಷಗಳು ಅವರಿಗೆ ಪತ್ರಗಳನ್ನು ಬರೆಯುತ್ತಿದ್ದೆ. ಅವರೂ ಉತ್ತರಿಸುತ್ತಿದ್ದರು. ಮೊದಲು ಕಟ್ಟಾ ನಾಸ್ತಿಕರಾಗಿದ್ದ ಅವರು ರಮಣ ಮಹರ್ಷಿಗಳನ್ನು ಭೇಟಿ ಮಾಡಿದ ನಂತರ ಪೂರ್ಣ ಬದಲಾಗಿದ್ದರು. ಮೊದಲು ದೇವರು ಇಲ್ಲವೆನ್ನುತ್ತಿದ್ದವರು ದೇವರಿದ್ದಾನೆ ಎನ್ನಲು ಪ್ರಾರಂಭಿಸಿದರು. ಈ ಮೊದಲು ಅವರ ನಾಸ್ತಿಕವಾದದ ಪ್ರತಿಪಾದನೆಯಿಂದ ಪ್ರಭಾವಿತರಾಗಿದ್ದವರು ಈ ಬದಲಾವಣೆಂದ ಕ್ರುದ್ಧರಾಗಿದ್ದರು. ಚಲಂ ಅವರು, 'ನಾನು ಏನು ನಂಬಿದ್ದೇನೋ ಅದು ನನಗೆ ಸತ್ಯ. ನಿಮಗೋಸ್ಕರ ನಾನು ಸುಳ್ಳು ಹೇಳುವುದಕ್ಕೆ ಆಗುವುದಿಲ್ಲ. ಈಗ ನನ್ನ ಮನಸ್ಸಿಗೆ ಒಪ್ಪಿಗೆಯಾಗಿದೆ, ದೇವರಿದ್ದಾನೆ' ಎಂದು ಹೇಳುತ್ತಿದ್ದರು.  ಅಷ್ಟೊಂದು ಕಠಿಣವಾಗಿ ಸತ್ಯವನ್ನು ಹೇಳುವುದನ್ನು ನಾನು ಚಲಂರವರಿಂದ ಕಲಿತೆ. ನನ್ನನ್ನು ಗೋಪಿ ಎಂದು ಕರೆಯುತ್ತಿದ್ದ ಅವರು ಒಮ್ಮೆ ಉತ್ತರಿಸಿದ್ದರು,  "ಗೋಪಿ, ಇಷ್ಟು ಪ್ರಶ್ನೆಗಳನ್ನು ಕೇಳಿ ತಲೆ ಯಾಕೆ ತಿನ್ನುತ್ತೀರಿ? ನಿಜದ ಅರಿವಾಗಲು  ತಿರುವಣ್ಣಾಮಲೈಗೆ ಬಂದುಬಿಡಿ." ರಮಣಾಶ್ರಮಕ್ಕೆ ೧೯೭೪ರಲ್ಲಿ ನಾನು ಮೊದಲು ಹೋಗಿದ್ದು. ನಾನು ಅಲ್ಲಿಗೆ ಹೋಗುವಂತೆ ಮಾಡಿದ್ದು ಏನು ಎಂದು ನನಗೆ ಗೊತ್ತಿಲ್ಲ. ಬಿ.ಕಾಂ. ಎರಡನೆಯ ವರ್ಷದಲ್ಲಿ ಓದುತ್ತಿದ್ದ ಆ ಸಮಯದಲ್ಲಿ ನಾನು ಜೀವನದ ಬೇರೆಯೇ ಪಥದಲ್ಲಿದ್ದೆ. ನಕ್ಸಲ್ ಚಳುವಳಿಯಿಂದ ಪ್ರಭಾವಿತನಾಗಿದ್ದೆ. ಅದರಲ್ಲಿ ಸಕ್ರಿಯನೂ ಆಗಿದ್ದೆ. ನನ್ನ ಅರಿವಿಗೇ ಬಾರದಂತೆ ನಾನು ಅದರಿಂದ ಹೊರಬಂದೆ. ನನ್ನ ಯೋಚಿಸುವ ಧಾಟಿಯೇ ಬದಲಾಯಿತು. ಋಣಾತ್ಮಕದಿಂದ ಸಂಪೂರ್ಣ ಧನಾತ್ಮಕವಾಗಿ ಅದು ಬದಲಾಯಿತು. ಅದು ರಮಣ ಮಹರ್ಷಿಗಳ  ಆಶೀರ್ವಾದವೆಂದೇ ಭಾವಿಸಿದ್ದೇನೆ. ನಾನು ಅಲ್ಲಿಗೆ ಹೋಗಿರದಿದ್ದರೆ ಈಗ ನಾನೇನಾಗಿರುತ್ತಿದ್ದೆನೋ ಗೊತ್ತಿಲ್ಲ.     

    ನನ್ನ ತಾಯಿ ಕೆಲಸದಲ್ಲಿದ್ದರು. ಜೋಗಿಪೇಟೆ, ಸಿದ್ದಿಪೇಟ್, ಆಮೇಲೆ ಹೈದರಾಬಾದ್.  ಜೋಗಿಪೇಟೆ, ಸಿದ್ದಿಪೇಟೆಗಳಲ್ಲಿ ನಾನು  ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗೆ ಹೋಗುತ್ತಿದ್ದೆ. ಅಲ್ಲಿ ಆಟಗಳನ್ನು ಆಡಿಸುತ್ತಿದ್ದರು. ಹಿಂದುತ್ವದ ಬಗ್ಗೆ ಅವರು ಹೇಳುವ ವಿಶಾಲ ದೃಷ್ಟಿಕೋನದ ವಿಚಾರಗಳನ್ನು ಹೇಳುತ್ತಿದ್ದಾಗ ನನಗೆ ಸರಿಕಾಣುತ್ತಿತ್ತು. ಅದೇ ನನ್ನನ್ನು ರಮಣ  ಮಹರ್ಮಷಿಗಳಲ್ಲಿಗೆ ಹೋಗಲು ಪ್ರೇರಿಸಿರಬಹುದು. ನಮ್ಮ ಸಂಸ್ಕೃತಿ, ಪರಂಪರೆ ಬಗ್ಗೆ ಹೇಳುವುದು ನನ್ನ ಮೇಲೆ ಪ್ರಭಾವ ಬೀರಿದೆ. ಚಿಕ್ಕಂದಿನಲ್ಲಿ ಬಾಲಲ ಭಾಗವತಮು, ಬಾಲಲ ರಾಮಾಯಣಮು, ಇಂತಹವುಗಳನ್ನು ಓದಿದ್ದೆ. ಚಿಕ್ಕಂದಿನಲ್ಲಿನ ಇಂತಹ ಸಂಗತಿಗಳು ನಮಗೆ ಗೊತ್ತಿಲ್ಲದೆ ನಮ್ಮ ಮನಸ್ಸಿನಲ್ಲಿ ಅಚ್ಚು ಒತ್ತಿರುತ್ತವೆ. ಖಂಡಿತಾ ಅವು ಪ್ರಭಾವಿಯಾಗಿರುತ್ತವೆ. ನಮ್ಮ ಶಾಲೆಯಲ್ಲಿ ಕಡ್ಡಾಯವಾಗಿ ಭಗವದ್ಗೀತೆ ಹೇಳಿಸುತ್ತಿದ್ದರು. ಈಗ ಹಾಗೆ ಮಾಡಿ ಅಂದರೆ ಜಾತಿವಾದಿ, ಕಮ್ಯೂನಲ್ ಅನ್ನುತ್ತಾರೆ. ನಾನು ಓದಿದ್ದು ಸರ್ಕಾರಿ ಶಾಲೆಯಲ್ಲೇ, ಅಲ್ಲೇ ಇದನ್ನು ಹೇಳಿಕೊಡುತ್ತಿದ್ದರು. ೧೨ನೆಯ ತರಗತಿವರೆಗೆ ಸರ್ಕಾರಿ ಶಾಲೆಯಲ್ಲಿ ತೆಲುಗು ಮೀಡಿಯಮ್ಮಿನಲ್ಲೇ ಓದಿದ್ದು. ನಾವು ಕನಿಷ್ಠ ಎರಡು ಉಪನಿಷತ್ತುಗಳನ್ನು ಕಂಠಪಾಠ ಮಾಡಬೇಕಿತ್ತು. ಕೇನೋಪನಿಷತ್ ಮತ್ತು ಈಶಾವಾಸ್ಯೋಪನಿಷತ್ ಎರಡನ್ನೂ ನಾನು ಕಂಠಪಾಠ ಮಾಡಿದ್ದೆ. ಸುಮಾರು ೮ ವರ್ಷಗಳ ಕಾಲ ನಾನು ಜೆ. ಕೃಷ್ಣಮೂರ್ತಿಯವರ ವಿಚಾರಗಳನ್ನು ಅಭ್ಯಸಿಸಿದೆ. ಓಶೋರವರನ್ನು ಎರಡು ಸಲ ಭೇಟಿ ಮಾಡಿದ್ದೆ. ಪುಣೆ ಆಶ್ರಮಕ್ಕೆ ಹೋಗಿದ್ದೆ. ಹಲವಾರು ಉಪಾಧ್ಯಾಯರುಗಳು, ಲೆಕ್ಷರರುಗಳು, ಭಾಷಣಕಾರರು, ಸುತ್ತಮುತ್ತಲಿನವರು, ಗೊತ್ತಿರುವವರು, ಗೊತ್ತಿಲ್ಲದವರು, ಹೀಗೆ ಹಲವಾರು ವ್ಯಕ್ತಿಗಳ  ಪ್ರಭಾವ ನನ್ನ ಮೇಲೆ ಆಗಿದೆ. 

ಪ್ರಶ್ನೆ: ಇಂದಿನ ಪರಿಸ್ಥಿತಿಯಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳಿಗೆ ಕಾರ್ಯ ನಿರ್ವಹಿಸುವುದು ಅಷ್ಟು ಸುಲಭವಲ್ಲವೆನ್ನುವ ವಾತಾವರಣವಿದೆ. ನಿಮ್ಮ ಅಭಿಪ್ರಾಯ?

ಮ.ಗೋ: ನೋಡಿ, ಸತ್ಯಸಂಧತೆ, ದಕ್ಷತೆ ಇವೇ ಕೊನೆಯಲ್ಲ. ನಮ್ಮ ಕೆಲಸಗಳು ಜನಪರವಾಗಿರಬೇಕು, ಒಳ್ಳೆಯ ಗುಣಮಟ್ಟದ್ದಾಗಿರಬೇಕು. ನಾವು ಮಾಡುವ ಕೆಲಸ ಯಾರಿಗಾಗಿ? ಜನರಿಗಾಗಿ! ಜನರಿಗೆ ಮೂಲಭೂತ ಸೌಕರ್ಯಗಳು ಸರಿಯಾಗಿ ಸಿಗದಂತೆ ಭ್ರಷ್ಠಾಚಾರ ತಡೆಯುತ್ತಿದೆ. ಭ್ರಚ್ಠಾಚಾರ ಹೇಗೆ ಜನರ ಜೀವನವನ್ನು ಹೇಗೆ ಬಾಧಿಸುತ್ತಿದೆ ಎಂಬುದನ್ನು ಅರಿಯಬೇಕು. ಅದನ್ನು ಜನರಿಗೆ ತಿಳಿಯಹೇಳದಿದ್ದರೆ ಅವರಿಗೆ ಅರಿವು ಮೂಡುವುದಾದರೂ ಹೇಗೆ? ಅವರಿಗೆ ಅರಿವು ಬರದೆ ಎಷ್ಟು ಹೋರಾಟ ಮಾಡಿದರೂ ಪ್ರಯೋಜನ ಇಲ್ಲ. ತಮ್ಮ ದಕ್ಷತೆ, ಪ್ರಾಮಾಣಿಕತೆಗಳೊಂದಿಗೆ ಜನರಿಗೆ ಅರಿವು ಮೂಡಿಸುವ ಕೆಲಸವನ್ನೂ ಅಧಿಕಾರಿಗಳು ಮಾಡಬೇಕು.

ಪ್ರಶ್ನೆ: ದಕ್ಷ, ಪ್ರಾಮಾಣಿಕ ಸೇವೆಗೆ ಸರ್ಕಾರದಲ್ಲಿ ಮಾನ್ಯತೆ ಇದೆಯೇ?

ಮ.ಗೋ: ಜನರಿಂದ ಇದೆ. ಪಟ್ಟಭದ್ರ ಹಿತಾಸಕ್ತರೂ ಇರುತ್ತಾರೆ. ಅವರಿಗೆ ಇಷ್ಟವಾಗದಿದ್ದಾಗ ಸಹಜವಾಗಿ ಅವರು ಅಡ್ಡಿ ಮಾಡುತ್ತಾರೆ. ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ನನ್ನನ್ನು ನಕ್ಸಲೈಟ್ ಎಂದು ಹೆಸರಿಸಿ ಸಸ್ಪೆಂಡ್ ಮಾಡಿದ್ದರು. ಮೂರು ಕಾರಣಗಳನ್ನು ಕೊಟ್ಟಿದ್ದರು: ಒಂದು, ನಾನು ನನ್ನ ಕೆಲಸಗಳನ್ನು ನಿರ್ಲಕ್ಷಿಸಿ ಹಳ್ಳಿಗಳಲ್ಲಿ ಪರಿಶಿಷ್ಟ-ಜಾತಿ/ಪಂಗಡಗಳ ಕಾಲೋನಿಗಳಲ್ಲಿ ಪ್ರವಾಸ ಮಾಡುತ್ತೇನೆ ಅಂತ.  ಎರಡು, ನಾನು ಭ್ರಷ್ಟಾಚಾರದ ವಿರುದ್ಧ ಮಾತನಾಡಿ ಸರ್ಕಾರವನ್ನು ಟೀಕಿಸಿದ್ದೇನೆಂದು. ಮೂರು, ನಾನು ಪರ್ಯಾಯ ಮೌಲ್ಯಗಳ ಬಗ್ಗೆ ಮಾತನಾಡಿ ಜನರನ್ನು ಬೇರೆ ನಾಯಕತ್ವದ ಬಗ್ಗೆ ಪ್ರಚೋದಿಸಿದ್ದೇನೆ ಎಂದು. ಈ ಆರೋಪಗಳು ಏನು ಎಂದು ಅದನ್ನು ಮಾಡಿದವರಿಗೇ ಗೊತ್ತಿರಬಹುದು. ನಾನು ನ್ಯಾಯಾಲಯಕ್ಕೆ ಹೋಗಲಿಲ್ಲ. ಭಾರತ ಸರ್ಕಾರಕ್ಕೆ ಮೇಲುಮನವಿ ಸಲ್ಲಿಸಿದೆ. ಒಂದೂವರೆ ತಿಂಗಳಲ್ಲಿ ನನ್ನ ಮರುನೇಮಕ ಆಯಿತು. ನಾನು ಭರವಸೆ ಬಿಟ್ಟಿರಲಿಲ್ಲ. ನಾನು ನಿರಾಶಾವಾದಿ ಅಲ್ಲ. ನನ್ನನ್ನು ಯಾರು ಹತಾಶರನ್ನಾಗಿ ಮಾಡಬಯಸುತ್ತಾರೋ ಅವರೇ ಹತಾಶರಾಗಬೇಕು. 'ಏನಪ್ಪಾ, ಎಷ್ಟು ಮಾಡಿದರೂ ಇವನು ಹಾಗೆಯೇ ಇದ್ದಾನೆ' ಅಂತ ಅವರಿಗೆ ಅನ್ನಿಸಬೇಕು. ನನ್ನ ಸೇವಾಕಾಲದಲ್ಲಿ ಕೆಟ್ಟ ಅಧಿಕಾರಿಗಳು, ರಾಜಕಾರಣಿಗಳಂತೆ ಒಳ್ಳೆಯವರನ್ನೂ ಕಂಡಿದ್ದೇನೆ. ಒಟ್ಟಾರೆಯಾಗಿ ನಾವು ಒಳ್ಳೆಯವರಾಗಿದ್ದರೆ, ನೇರ ನಡೆ ನುಡಿಯವರಾಗಿದ್ದರೆ ಅವರು ಒಪ್ಪಿಕೊಳ್ಳುತ್ತಾರೆ. 

 

ಪ್ರಶ್ನೆ: ಕೆಳಹಂತದಲ್ಲಿನ ಭ್ರಷ್ಠಾಚಾರ ನಿಯಂತ್ರಣಕ್ಕೆ ಮಾತ್ರ ಗಮನ ಹರಿಸಲಾಗುತ್ತಿದೆ. ಕೆಳಹಂತದವರನ್ನು ಮಾತ್ರ ನಿಯಂತ್ರಿಸುವುದು, ಶಿಕ್ಷೆಗೊಳಪಡಿಸುವುದು ಆಗುತ್ತಿದೆ. ಮೇಲ್ಮಟ್ಟದಲ್ಲೂ ನಿಯಂತ್ರಣಕ್ಕೆ ಗಮನ ಹರಿಸಬೇಡವೇ?

ಮ.ಗೋ: ಮೇಲ್ಮಟ್ಟದ ಅಧಿಕಾರಿಗಳು ಶಿಸ್ತುಬದ್ಧರಾಗಿದ್ದರೆ ಅಧೀನ ಅಧಿಕಾರಿಗಳೂ ಶಿಸ್ತುಬದ್ಧರಾಗಿರುತ್ತಾರೆ. ಕಾನೂನುಗಳು ಸಮಸ್ಯೆ ಪರಿಹರಿಸಲಾರವು. ಜನರು ಮಾತ್ರ ಬಗೆಹರಿಸಬಲ್ಲರು. ಜನರ ಜೀವನ ಮಟ್ಟದ ಮೇಲೆ ಭ್ರಷ್ಠಾಚಾರ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಜನರಿಗೆ ಎಲ್ಲಿಯವರೆಗೆ ಅರಿವಾಗುವುದಿಲ್ಲವೋ ಅಲ್ಲಿಯವರೆಗೆ ಪರಿಹಾರ ಕಷ್ಟ. ಕಾನೂನು ಭ್ರಷ್ಠಾಚಾರಿಗಳನ್ನು ಬಂಧಿಸಬಹುದು, ಶಿಕ್ಷೆ ಮಾಡಬಹುದು, ಆದರೆ ಮನೋಭಾವ ಬದಲಿಸಲಾರದು. ಮನೋಭಾವ ಬದಲಾಗಬೇಕು ಅಂದರೆ ಬದಲಾವಣೆ ಮೇಲಿನಿಂದ ಬರಬೇಕು, ಜನರೂ ಜಾಗೃತರಾಗಬೇಕು. 

ಪ್ರಶ್ನೆ: ಕೆಳಮಟ್ಟದ ಅಧಿಕಾರಿಗಳು ಯೋಜನೆಗಳನ್ನು ವಾಸ್ತವಿಕವಾಗಿ ಜಾರಿ ಮಾಡುವವರು, ಅನುಷ್ಠಾನಕ್ಕೆ ತರುವವರು, ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇಂದು ನಿರ್ಭೀತವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಬಹುದಾದಂತಹ ವಾತಾವರಣ ಇಲ್ಲ ಎನ್ನುತ್ತಾರಲ್ಲ? 

ಮ.ಗೋ: ನನ್ನ ಅನುಭವದ ಪ್ರಕಾರ ಭ್ರಷ್ಠಾಚಾರ ಕೆಳಮಟ್ಟದಲ್ಲಿ ಕಡಿಮೆ. ಹೆಚ್ಚಿನ ಗುಮಾಸ್ತರುಗಳು, ಜವಾನರು, ಆರೋಗ್ಯ ನಿರೀಕ್ಷಕರು, ಇಂಜನಿಯರುಗಳು, ಶಿಕ್ಷಕರುಗಳು, ಡಾಕ್ಟರುಗಳು, ನರ್ಸುಗಳು, ಹೀಗೆ ಬಹಳ ನೌಕರರುಗಳು ಪ್ರಾಮಾಣಿಕರಾಗಿರುವುದನ್ನು ಕಂಡಿದ್ದೇನೆ. ಆದರೆ ಅವರಿಗೆ ನಿರಾಶೆ ಆಗ್ತಾ ಇದೆ. ಹಾಗೆ ಆಗಬಾರದು. ಅವರ ಸಂಖ್ಯೆ ಹೆಚ್ಚಾಗಬೇಕು, ಕಡಿಮೆಯಾಗಬಾರದು. ಆದರೆ ಅವರುಗಳಿಗೆ ಬಹಳ ಕಷ್ಟ ಇದೆ. ರಾಜಕಾರಣಿಗಳು, ಮೇಲಾಧಿಕಾರಿಗಳು, ಸಹೋದ್ಯೋಗಿಗಳ ಕಡೆಯಿಂದ ಸಾಕಷ್ಟು ತೊಂದರೆ ಇದೆ. ಅಂತಹ ಒಳ್ಳೆಯ ಕೆಲಸಗಾರರಿಗೆ ರಕ್ಷಣೆ ಕೊಡಬೇಕು. ಮೇಲಾಧಿಕಾರಿಯಾದವರು ಅವರ ತೊಂದರೆ ತಡೆಯಬೇಕು. 

     ನನಗೆ ಗೊತ್ತಿದ್ದ ಒಬ್ಬರು ಆಹಾರ ಉಪನಿರ್ದೇಶಕರು ಇದ್ದರು. ಅವರು ಸಾಕಷ್ಟು ಹಣ ಮಾಡಿದ ಬಗ್ಗೆ ನನಗೆ ಗೊತ್ತಿತ್ತು. ನಾನು ಅವರನ್ನು ಕರೆದು ಹೇಳಿದ್ದೆ, 'ನೋಡಿ, ನಾನು ನಿರ್ದೇಶಕನಾಗಿರುವವರೆಗೆ ನಿಮ್ಮ ವಿರುದ್ಧ ಯಾವುದೇ ದೂರು ಬರಬಾರದು. ನಿಮ್ಮ ಹಳೆಯ ಸಂಗತಿಗಳೆಲ್ಲಾ ನನಗೆ ಗೊತ್ತು. ಆಗಿದ್ದು ಆಯಿತು. ಮುಂದೆ ಸರಿಯಾಗಿರಬೇಕು' ಅಂತ. ನಂತರ ಅವರು ಹಗಲೂ ರಾತ್ರಿ ಕೆಲಸ ಮಾಡಿದರು, ಒಳ್ಳೆಯ ಕೆಲಸ ಮಾಡಿದರು. 'ಏನು ಮಂತ್ರ ಮಾಡಿದಿರಿ? ಅವರು ಅಷ್ಟೊಂದು ಬದಲಾಗಿದ್ದಾರೆ' ಅಂತ ಜನರೇ ನನ್ನನ್ನು ಕೇಳುತ್ತಿದ್ದರು. 

ಪ್ರಶ್ನೆ: ಒಳ್ಳೆಯ ಕೆಲಸಗಳಿಗೆ ಅಡ್ಡಿ-ಅಡಚಣೆಗಳು ಜಾಸ್ತಿ ಎನ್ನುತ್ತಾರೆ. ನಿಮ್ಮ ಅನುಭವ?

ಮ.ಗೋ: ನಾನು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕಮಿಷನರ್ ಆಗಿ ಕೆಲಸ ಮಾಡುತ್ತಿದ್ದಾಗ ೮ನೆಯ ತರಗತಿ ವಿದ್ಯಾರ್ಥಿನಿಯರಿಗೆ ಸೈಕಲ್ ಕೊಡುವ ಯೋಜನೆ ಜಾರಿಗೆ ಬಂತು. ಆಗ ಕಡಿಮೆ ದರದಲ್ಲಿ ಬ್ರಾಂಡ್ ಸೈಕಲ್ಲುಗಳನ್ನು ಕೊಡಿಸಲು ಪ್ರಾಮಾಣಿಕ ಕೆಲಸ ಮಾಡಿದೆ. ಆಗ ಮಧ್ಯಾಹ್ನದ ಊಟ, ಉಚಿತ ಪಠ್ಯಪುಸ್ತಕಗಳನ್ನು ಕೊಡುವ ಯೋಜನೆ ಪ್ರೌಢಶಾಲೆಗೂ ವಿಸ್ತರಿಸಲಾಯಿತು. ಎಲ್ಲಾ ಯೋಜನೆಗಳ ಸಮರ್ಥ, ಸಮರ್ಪಕ ಜಾರಿಗೆ ತುಂಬಾ ಶ್ರಮ ಹಾಕಿದ್ದೆ. ಇದ್ದಕ್ಕಿದ್ದಂತೆ ನನ್ನನ್ನು ಆ ಹುದ್ದೆಯಿಂದ ಯಾವ ಕಾರಣವೂ ಇಲ್ಲದೆ ವರ್ಗಾಯಿಸಲಾಯಿತು. ನನಗೆ ಅತ್ಯಂತ ಬೇಸರವಾಗಿ ನನ್ನ ಕೆಲಸಕ್ಕೆ ರಾಜಿನಾಮೆ ನೀಡಿ ತಿರುವಣ್ಣಾಮಲೈಗೆ ಹೊರಟೆ. ದಾರಿಯಲ್ಲಿದ್ದಾಗ ಒಬ್ಬ ಪ್ರಮುಖ ವ್ಯಕ್ತಿಯಿಂದ ದೂರವಾಣಿ ಕರೆ ಬಂತು, ಅವರ ಹೆಸರು ಹೇಳುವುದಿಲ್ಲ, ಅವರು "ನೀವು ಏಕೆ ರಾಜಿನಾಮೆ ಕೊಟ್ಟಿರಿ? ಜನ ನಮ್ಮನ್ನೇ ದೂಷಿಸುತ್ತಾರೆ. ದಯವಿಟ್ಟು ರಾಜಿನಾಮೆ ವಾಪಸ್ ತೆಗೆದುಕೊಳ್ಳಿ" ಎಂದು ಕೋರಿದರು. ನಾನು, "ನನ್ನ ವರ್ಗಾವಣೆಗೆ ಕಾರಣ ಏನು?" ಎಂದು ಕೇಳಿದೆ. "ನೀವು ದಯವಿಟ್ಟು ಮುಖ್ಯಮಂತ್ರಿಯವರನ್ನು ಕಾಣಿ" ಎಂದರು. ನಾನು ಮುಖ್ಯಮಂತ್ರಿಯವರನ್ನು ಕೇಳಿದೆ, "ಸ್ವಾಮಿ, ನೀವೇ ವೇದಿಕೆಯ ಮೇಲಿನಿಂದ ಯೋಜನೆಗಳು ಚೆನ್ನಾಗಿ ಜಾರಿಯಾಗುತ್ತಿರುವ ಬಗ್ಗೆ ನನ್ನನ್ನು ಒಳ್ಳೆಯ ಅಧಿಕಾರಿ ಎಂದು  ಹೊಗಳಿದ್ದಿರಿ. ಈಗ ಕಾರಣವಿಲ್ಲದೆ ವರ್ಗಾಯಿಸಿದ್ದಾದರೂ ಏಕೆ?" ಎಂದು ಕೇಳಿದೆ. 'ಕಾರಣ ಏನೂ ಇಲ್ಲ, ಯಾರೋ ಒಬ್ಬರು ಸಿಟ್ಟಾಗುತ್ತಾರೆ ಹಾಗೆ, ಹೀಗೆ' ಅಂತ ಹೇಳಿದರು. ಒತ್ತಾಯಿಸಿದಾಗ 'ನೀವು ಅವರ ಕೋರಿಕೆಯಂತೆ ವರ್ಗಾವಣೆಗಳನ್ನು ಮಾಡುವುದಿಲ್ಲ' ಅಂದರು. ನಾನು ಹೇಳಿದೆ, "ಉತ್ತರ ಕರ್ನಾಟಕದಲ್ಲಿ ೨೫% ಹುದ್ದೆಗಳು ಖಾಲಿ ಇದೆ. ಅಲ್ಲಿಂದ ವರ್ಗಾವಣೆ ಮಾಡಿದರೆ ಇನ್ನೂ ಹೆಚ್ಚು ಹುದ್ದೆಗಳು ಖಾಲಿ ಆಗುತ್ತದೆ. ಅಲ್ಲಿನ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗುತ್ತದೆ" ಎಂದೆ. 'ನೀವು ಹೇಳುವುದೇನೋ ಸರಿ. ಆದರೆ ರಾಜಕೀಯ ಕಾರಣಗಳೂ ಇರುತ್ತವೆ. ನೀವು ರಾಜಿನಾಮೆ ಮಾತ್ರ ಕೊಡಬೇಡಿ, ವಾಪಸ್ ತೆಗೆದುಕೊಳ್ಳಿ' ಎಂದರು. ಇಂತಹ ಕಾರಣಗಳು ನನಗೆ ಅರ್ಥವಾಗುವುದಿಲ್ಲ. ಅವರು ಅಲ್ಪಕಾಲಿಕ ಲಾಭಕ್ಕಾಗಿ ಹೀಗೆ ಮಾಡುತ್ತಾರೆ.

        ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಆಗುತ್ತಿತ್ತು, ಆಗುತ್ತಿದೆ. ಇದಕ್ಕಾಗಿ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೆ. ಹೀಗೆ ಮಾಡುತ್ತಿದ್ದಾಗ ಯಾವುದೇ ಶಿಷ್ಟಾಚಾರವಿಲ್ಲದೆ ನನ್ನನ್ನು ಅಲ್ಲಿಂದ ಎತ್ತಂಗಡಿ ಮಾಡಲಾಯಿತು. ಆಗ ನಾನು ೧೫ ದಿನ ರಜೆ ಹಾಕಿ ಕೈಲಾಸ ಮಾನಸ ಸರೋವರಕ್ಕೆ ಯಾತ್ರೆಯಲ್ಲಿದ್ದೆ. ಆಗ ನನಗೆ ನಿಜವಾಗಿಯೂ ಬಹಳ ಕೆಟ್ಟದೆನಿಸಿತು. ನಾನು ವರ್ಗಾವಣೆಗೆ ಅಂಜುವುದಿಲ್ಲ. ಆದರೆ ಒಳ್ಳೆಯ ಕೆಲಸಗಳಾಗುತ್ತಿದ್ದಾಗ ಯಾವುದೇ ಕಾರಣವಿಲ್ಲದೆ ವರ್ಗ ಮಾಡುವ ಹಿನ್ನೆಲೆಯ ಬಗ್ಗೆ ಬೇಸರವಾಗುತ್ತದೆ. 

          ಬಳ್ಳಾರಿ ಜಿಲ್ಲೆಯಲ್ಲಿ ಪ್ರೊಬೇಷನರ್ ಆಗಿದ್ದಾಗ ಜಿಲ್ಲಾಧಿಕಾರಿಯಾಗಿ ಶ್ರೀ ಸುಧೀರ್ ಕುಮಾರ್ ಇದ್ದರು. ಕಷ್ಟಪಟ್ಟು ಕೆಲಸ ಮಾಡುವ, ಪ್ರಾಮಾಣಿಕ, ದಕ್ಷ, ಧೈರ್ಯವಂತ, ಸರಳ ಅಧಿಕಾರಿ ಅವರು. ಲಕ್ಷ್ಮಣ್ ಗನ್ ಪ್ರಕರಣದಲ್ಲಿ ಅವರೇ ರೈಡ್ ಮಾಡಿ ಕೇಸು ಹಾಕಿದ್ದರು. ಅವರ ಜೀವಕ್ಕೆ ಬೆದರಿಕೆ ಇತ್ತು. ಅವರನ್ನು ಕೋರ್ಟಿಗೆ ಎಳೆಯಲಾಯಿತು. ಅವರನ್ನು ಅವರೇ ಸಮರ್ಥಿಸಿಕೊಳ್ಳಬೇಕಾಯಿತು. ಅವರ ಪರವಾಗಿ ಯಾರೂ ಇರಲಿಲ್ಲ, ಸರ್ಕಾರದ ಕಡೆಯಿಂದಲೂ ಸಹಾಯ ಸಿಗಲಿಲ್ಲ. ಅವರೇ ವಾದಿಸಿ ಸುಪ್ರೀಮ್ ಕೋರ್ಟಿನಲ್ಲೂ ಗೆದ್ದರು. ನಂತರ ಅವರು ಬೇಸರದಿಂದ ರಾಜಿನಾಮೆ ನೀಡಿ ಹೊರಬಂದರು. ಅವರು ಈಗ ಬಿಹಾರದಲ್ಲಿ ಸೆಂಟ್ರಲ್ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯೂನಲ್ ಮೆಂಬರ್ ಆಗಿದ್ದಾರೆ.