ಜನಜಾಗೃತಿಯೇ ಭ್ರಷ್ಟಾಚಾರಕ್ಕೆ ಮದ್ದು! [ಶ್ರೀ ಮದನಗೋಪಾಲರೊಂದಿಗೆ ನಡೆಸಿದ ಸಂದರ್ಶನ] - 2

ಜನಜಾಗೃತಿಯೇ ಭ್ರಷ್ಟಾಚಾರಕ್ಕೆ ಮದ್ದು! [ಶ್ರೀ ಮದನಗೋಪಾಲರೊಂದಿಗೆ ನಡೆಸಿದ ಸಂದರ್ಶನ] - 2

 

 

 

   ಜನಪರ ಕಾಳಜಿಯನ್ನೂ, ಪ್ರಾಮಾಣಿಕತೆಯನ್ನೂ ಹೊಂದಿರುವ ರಾಜ್ಯದ ಸರಕಾರಿ ಅಧಿಕಾರಿಗಳ ಸಾಲಿನಲ್ಲಿ ಎದ್ದು ನಿಲ್ಲುವ ಹೆಸರು - ಮದನಗೋಪಾಲ್. ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ರು ರಾಜಕಾರಣದ ಆಗುಹೋಗುಗಳಿಗೆ ತಲೆ ಕೆಡಿಸಿಕೊಳ್ಳದೆ, ಪದೇ ಪದೇ ಬಂದೆರಗುವ ಸ್ವಾರ್ಥಕೇಂದ್ರಿತ ಒತ್ತಡಗಳಿಗೆ ಮಣಿಯದೆ, ನಿಜವಾದ ಅರ್ಥದಲ್ಲಿ 'ಸರಕಾರದ ಕೆಲಸ ದೇವರ ಕೆಲಸ' ಎಂದು ನಂಬಿ ನಡೆಯುತ್ತಿರುವವರು. ಇಂದು ಬಹುತೇಕ ಖಾಸಗಿ-ಸಾರ್ವಜನಿಕ ಎಂಬ ಭೇದವಿಲ್ಲದೆ, ಎಲ್ಲೆಡೆಗೂ ವ್ಯಾಪಿಸಿರುವ ಆಡಳಿತಶಾಹಿ ದುರಹಂಕಾರದ ಕಬಂಧಬಾಹುಗಳಿಗೆ ಪಕ್ಕಾಗದೆ, ಸಾಮಾನ್ಯ ವ್ಯಕ್ತಿಯನ್ನೂ ಆತ್ಮೀಯವಾಗಿ ಮಾತನಾಡಿಸುವ, ಆತನ ಕಷ್ಟ ಸುಖಗಳನ್ನು ಕೇಳಿಸಿಕೊಳ್ಳುವ ಸೌಜನ್ಯ ಉಳ್ಳವರು, ಮದನಗೋಪಾಲ್.

     'ಭ್ರಷ್ಟಾಚಾರದ ಬೇರು-ಬಿಳಿಲುಗಳು ಹೇಗೆಲ್ಲ ಹರಡಿವೆ ಮತ್ತು ಅದಕ್ಕೆ ಪರಿಹಾರವೇನು?' ಎಂಬ ಕುರಿತಾಗಿ ಅವರೊಂದಿಗೆ ನಾನು ನಡೆಸಿದ ಸಂದರ್ಶನದ ಮುಂದುವರೆದ ಭಾಗ ಇಲ್ಲಿದೆ:

-ಕ.ವೆಂ.ನಾಗರಾಜ್.

 

 

ಪ್ರಶ್ನೆ: ನೀವು ನೆನಪಿಸಿಕೊಳ್ಳುವಂತಹ ಸಂಗತಿಗಳು, ಘಟನೆಗಳ ಬಗ್ಗೆ ಹೇಳುವಿರಾ?

ಮ.ಗೋ: ನಾನಾಗ ಶಿಕ್ಷಣ ಇಲಾಖೆಯಲ್ಲಿದ್ದೆ. ಶ್ರೀ ಅರವಿಂದ ಲಿಂಬಾವಳಿಯವರು ಮಂತ್ರಿಗಳಾಗಿದ್ದರು. ಸಿಇಟಿ ಯಲ್ಲಿ ನಾನು ವೈಸ್ ಛೇರ್‌ಮನ್, ಅವರು ಛೇರ್ ಮನ್. ಒಬ್ಬ ಪ್ರೌಢ ಮಹಿಳೆ ಬಂದರು, "ನನ್ನ ಮಗನಿಗೆ  ಡಿಸ್‌ಫ್ಲೆಕ್ಸಿಯ, ನೀವು 'ತಾರೆ ಜಮೀನ್ ಪರ್' ನೋಡಿದ್ದೀರಾ? ನನ್ನ ಮಗನಿಗೆ ಅದೇ ಸಮಸ್ಯೆ ಇದೆ. ಇಂಜನಿಯರಿಂಗ್, ಮೆಡಿಕಲ್ ಸೀಟುಗಳಲ್ಲಿ ೩% ಅಂಗವಿಕಲರಿಗೆ ಮೀಸಲಿಟ್ಟಿದ್ದೀರಿ. ಅದರ ಸೀಟುಗಳು ಬೇರೆ ರೀತಿಯ ಅಂಗವಿಕಲರ ಪಾಲಾಗುತ್ತದೆ. ನನ್ನ ಮಗನಂತಹವರಿಗೆ ಒಂದು ಸೀಟೂ ಸಿಕ್ಕುವುದಿಲ್ಲ. ದಯವಿಟ್ಟು ಸಹಾಯ ಮಾಡಿ" ಎಂದು ಕೇಳಿದರು. ಲಿಂಬಾವಳಿಯವರಿಗೆ ವಿಷಯ ತಿಳಿಸಿದೆ. ಅವರು 'ಅದಕ್ಕೆ ಏನು ಮಾಡಬಹುದೋ ಮಾಡಿ, ನನ್ನ ಒಪ್ಪಿಗೆಯಿದೆ' ಅಂದರು. ನಾವು ಪ್ರವೇಶಾತಿ ನಿಯಮಕ್ಕೆ ವಿಶೇಷ ತಿದ್ದುಪಡಿ ಮಾಡಿ, ೧% ಅಥವ ೧/೨% ಇರಬಹುದು, ಅಷ್ಟು ಸೀಟುಗಳನ್ನು ವೈದ್ಯಕೀಯವಾಗಿ ಮಾನಸಿಕ ಕಾಯಿಲೆ ಕಾರಣದ ದೌರ್ಬಲ್ಯದವರಿಗೆ ಮೀಸಲಿಡಬೇಕು ಎಂದು ಪ್ರಸ್ತಾಪಿಸಿ, ಒಂದು ವಾರದಲ್ಲಿ ಆ ತಿದ್ದುಪಡಿಗೆ ಅಂಗೀಕಾರ ಪಡೆಯಲಾಯಿತು. ಮೊದಲು ವಿಶೇಷ ವರ್ಗದವರ ಕೌನ್ಸೆಲಿಂಗ್ ಆಗುತ್ತದೆ. ಆ ಸಂದರ್ಭದಲ್ಲಿ ನಮ್ಮನ್ನು ಭೇಟಿ ಮಾಡಿದ್ದ ಮಹಿಳೆ ಸಹ ಬಂದಿದ್ದರು. ಆಕೆಯ ಮಗನಿಗೆ ಸೀಟು ಸಿಕ್ಕಿತು. ಆಕೆ ಸಂತೋಷದಿಂದ ಅತ್ತುಬಿಟ್ಟಳು. ದೇಶದಲ್ಲಿ ಅದೇ ಮೊದಲು ಡಿಸ್‌ಫ್ಲೆಕ್ಸಿಯದಿಂದ ನರಳುತ್ತಿದ್ದವರಿಗೆ ಸೀಟು ಸಿಕ್ಕಿದ್ದು. ಆಕೆಗೆ ನಂಬಿಕೆಯೇ ಇರಲಿಲ್ಲ. ಅಂತಹವರೇ ನಮ್ಮ ಸರ್ಕಾರದ ರಾಯಭಾರಿಗಳು. ಯಾವುದೇ ಟಿವಿ ಜಾಹಿರಾತಿನ ಅಗತ್ಯವಿಲ್ಲ. ರಾಜಕಾರಣಿಗಳ ಬಗ್ಗೆ ಏನಾದರೂ ಹೇಳಬಹುದು. ಅವರಿಗೆ ಮನವರಿಕೆ ಮಾಡಿದರೆ ಇಂತಹ ಕೆಲಸಗಳು ಸಾಧ್ಯ. ಅವರಿಗೂ ಪ್ರಚಾರ ಬೇಕು.

     ನಂಜನಗೂಡಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿದ್ದಾಗ ಒಮ್ಮೆ ಗೋವುಗಳ ಸಾಗಾಣಿಕೆ ಆಗುತ್ತಿದ್ದುದನ್ನು ನಿಲ್ಲಿಸಿದ್ದೆ. ಕೇರಳ ಮಾರ್ಗದಿಂದ ಅವುಗಳ ಕಳ್ಳಸಾಗಣೆ ಮಾಡುತ್ತಿದ್ದರು. ಹಸು ಮಾತ್ರ ಅಲ್ಲ, ಕರುಗಳೂ ಇದ್ದವು. ಆ ಜಾನುವಾರುಗಳ ಕಿವಿಯಲ್ಲಿ ತೂತುಗಳಿದ್ದವು. ಐ.ಆರ್.ಡಿ.ಪಿ. ಯೋಜನೆಯಲ್ಲಿ ಕೊಟ್ಟ ಹಸುಗಳಿಗೆ ಆ ರೀತಿ ಗುರುತು ಮಾಡುತ್ತಿದ್ದರು. ಐ.ಆರ್.ಡಿ.ಪಿ. ಹಸುಗಳು ಇಲ್ಲಿ ಹೇಗೆ ಬಂದವು ಅಂತ ವಿಚಾರಿಸುತಿದ್ದಾಗ ಡ್ರೈವರ್ ಓಡಿಹೋದ. ಕೆಲವು ಪ್ರಭಾವಿ ವ್ಯಕ್ತಿಗಳು ಅದರ ಹಿಂದೆ ಇರುವುದು ನನಗೆ ಗೊತ್ತಾಯಿತು, ಅವರ ಹೆಸರುಗಳು ಬೇಡ. ವಾಹನ ಜಪ್ತು ಮಾಡಿದೆವು, ವಿವಿಧ ಸೆಕ್ಷನ್‌ಗಳ ಪ್ರಕಾರ ಮೊಕದ್ದಮೆಗಳನ್ನು ದಾಖಲು ಮಾಡಿದೆವು. ನಾನು ಹಸುಗಳನ್ನು ಸಾಗಿಸುವುದನ್ನು ನಿಲ್ಲಿಸಿದ್ದೇನೆ, ನಾನು  ಆರೆಸ್ಸೆಸ್ಸಿನವನು ಅಂತ ಪ್ರಚಾರ ಮಾಡಿದರು. ಪತ್ರಿಕೆಗಳಲ್ಲೆಲ್ಲಾ ಈ ಬಗ್ಗೆ ಸುದ್ದಿಗಳು ಬಂದವು. ಹಸು ನಿಲ್ಲಿಸಿದ್ದಕ್ಕೂ ಅದಕ್ಕೂ ಏನು ಸಂಬಂಧವಿದೆ? ಅದು ಅಮಾನವೀಯ ಕೆಲಸವಾಗಿತ್ತು, ನಿಲ್ಲಿಸಿದೆ, ಅಷ್ಟೆ. ನಾನು ಮಾಡಿದ ಕೆಲಸಕ್ಕೂ ಆರೆಸ್ಸೆಸ್ಸಿಗೂ ಸಂಬಂಧವಿಲ್ಲ. ನನಗೆ ಹಸುಗಳನ್ನು ಕಂಡರೆ ಭಾವನಾತ್ಮಕವಾಗಿ ಪೂಜ್ಯ ಭಾವನೆಯಿದೆ, ಏಕೆಂದು ಗೊತ್ತಿಲ್ಲ. ನಾವು ಏನಾದರೂ ಒಳ್ಳೆಯ ಕೆಲಸ ಮಾಡಿದರೆ ಅದರ ಹಿಂದೆ ಥಿಯರಿ ಇರಬೇಕಿಲ್ಲ. ಕೆಟ್ಟದನ್ನು ಮಾಡಬೇಕಾದರೆ ಥಿಯರಿ ಬೇಕು. ಆಗ ನನ್ನನ್ನು ಆರೆಸ್ಸೆಸ್ಸಿನವನು ಎಂದು ದೂರಿದ್ದರು, ರಾಯಚೂರಿನಲ್ಲಿದ್ದಾಗ ನಕ್ಸಲೈಟ್ ಎಂದು ಹಣೆಪಟ್ಟಿ ಹಚ್ಚಿದ್ದರು.

 

ಪ್ರಶ್ನೆ: ಸುಮಾರು ೧೦ ವರ್ಷಗಳ ಹಿಂದೆ 'ಕೂಲಿಗಾಗಿ ಕಾಳು' ಯೋಜನೆಗೆ ಸಂಬಂಧಿಸಿದ ಕೋಟ್ಯಾಂತರ ರೂ. ಮೌಲ್ಯದ ಆಹಾರ ಸಾಮಗ್ರಿಗಳು ಮಂಗಳೂರು ಬಂದರಿನಲ್ಲಿ ವಿದೇಶಕ್ಕೆ ಸಾಗಿಸಲು ಸಿದ್ಧವಾಗಿದ್ದುದನ್ನು ಜಪ್ತಿ ಮಾಡಲಾಗಿತ್ತು. ಹಲವಾರು ಜಿಲ್ಲೆಗಳ ಹಲವಾರು ಅಧಿಕಾರಿಗಳು ಅದರಲ್ಲಿ ಭಾಗಿಯಾಗಿದ್ದರು. ಹೆಚ್ಚಿನ ಸಂಖ್ಯೆಯ ಅಧಿಕಾರಿಗಳನ್ನು ಬಂಧಿಸಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿತ್ತು. ಅದೇ ಅದಿಕಾರಿಗಳು ಇಂದೂ ಸೇವೆಯಲ್ಲಿ ಮುಂದುವರೆದಿದ್ದಾರೆ, ಅಷ್ಟೇ ಅಲ್ಲ ಉನ್ನತ ಹುದ್ದೆಗಳಲ್ಲೂ ಇದ್ದಾರೆ. ಇಂತಹ ಪರಿಸ್ಥಿತಿಗೆ ಏನು ಕಾರಣ?

ಮ.ಗೋ: ನಾನು ನಂಜನಗೂಡಿನಲ್ಲಿ ಎ.ಸಿ. ಆಗಿದ್ದಾಗ ನಡೆದ ಪ್ರಕರಣ ಇದು. ಬಿಳಗಿರಿರಂಗನಬೆಟ್ಟದಲ್ಲಿ ಕಾದಿಟ್ಟ ಅರಣ್ಯ ಪ್ರದೇಶದಲ್ಲಿ ೫೦ ಎಕರೆ ಜಾಗವನ್ನು ೫ ಜನರಿಗೆ ಭೂರಹಿತ ಕೃಷಿ ಕಾರ್ಮಿಕರು ಅಂತ ಮಂಜೂರು ಮಾಡಿದ್ದರು. ಅವರ ಪೈಕಿ ಸುಬ್ಬರಾವ್, ರಜನೀಕಾಂತ್, ಕೃಷ್ಣಮೂರ್ತಿ ಅವರೂ ಸೇರಿದ್ದರು.  ಅವರೆಲ್ಲಾ ಬೆಂಗಳೂರಿನ ಸದಾಶಿವನಗರದಲಿದ್ದವರು. ಇದರಲ್ಲಿ ರಹಸ್ಯ ಏನೂ ಇಲ್ಲ. ಎಲ್ಲಾ ದಾಖಲೆಗಳಿವೆ. ಸುಬ್ಬರಾವ್ ಅನ್ನುವವರು ಅಖಿಲ ಭಾರತ ಮಟ್ಟದ ಕೈಗಾರಿಕಾ ಸಂಸ್ಥೆಯೊಂದರ ಅಧ್ಯಕ್ಷರು. ರಜನೀಕಾಂತ್ ಬಗ್ಗೆ ಗೊತ್ತೇ ಇದೆ. ಎಲ್ಲರೂ ಕೋಟ್ಯಾಧೀಶ್ವರರೇ. ನಾನು ಈ ಬಗ್ಗೆ ವರದಿ ಕೊಟ್ಟಾಗ ನನ್ನ ಮೇಲಾಧಿಕಾರಿ ಸಂಬಂಧಿಸಿದವರಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿ ಒಂದು ಆದೇಶ ಮಾಡಿದರು. ಆ ಆದೇಶದಲ್ಲಿ ಮಂಜೂರಿದಾರರು ಬಹು ದೊಡ್ಡ ಮೊತ್ತವನ್ನು ಆ ಭೂಮಿಯನ್ನು ಸಾಗುವಳಿಗೆ ತರುವುದಕ್ಕೆ ಖರ್ಚು ಮಾಡಿದ್ದಾರೆ, ಆದ್ದರಿಂದ ಆ ಭೂಮಿಯನ್ನು ಸರ್ಕಾರಕ್ಕೆ ಮರಳಿ ತೆಗೆದುಕೊಳ್ಳುವುದು ನ್ಯಾಯವಲ್ಲ ಅಂತ ಹೇಳಿದ್ದರು. ಮೂರ್ಖನಿಗೂ ಗೊತ್ತಾಗುತ್ತದೆ, ಮಂಜೂರಿದಾರರು ಭೂರಹಿತ ಕೃಷಿಕಾರ್ಮಿಕರಲ್ಲ ಅಂತ. ಕೋಟ್ಯಾಧೀಶ್ವರನೊಬ್ಬ ತಾನು ಭೂರಹಿತ ಕೃಷಿ ಕಾರ್ಮಿಕ ಅಂತ ಧೃಢೀಕರಣ ಪತ್ರ ತೆಗೆದುಕೊಂಡಿದ್ದರೆ ಅದು ತಪ್ಪು ಎಂದು ತಿಳಿಯುವುದಕ್ಕೆ ದೊಡ್ಡ ಕಾನೂನಿನ ಅಗತ್ಯ ಇದೆಯೇ? ನಾನು ಛೀಫ್ ಸೆಕ್ರೆಟರಿಯವರಿಗೆ ದೂರು ಕೊಟ್ಟೆ. ಅದು ಲೋಕಾಯುಕ್ತಕ್ಕೆ ಹೋಯಿತು. ನಾನು ಸಾಕ್ಷಿ ಹೇಳಿದೆ. ನಾನು ಪ್ರಕರಣದ ಎಲ್ಲಾ ದಾಖಲೆಗಳ ಪ್ರತಿ ಇಟ್ಟುಕೊಂಡಿದ್ದೇನೆ, ಆ ಸಮಯದಲ್ಲಿ ತಹಸೀಲ್ದಾರ್, ರೆವಿನ್ಯೂ ಇನ್ಸ್ ಪೆಕ್ಟರ್, ಸರ್ವೆಯರ್, ಗ್ರಾಮಲೆಕ್ಕಿಗರು ಎಲ್ಲರನ್ನೂ ಅಮಾನತ್ತು ಮಾಡಿದ್ದರು. ನಂತರದಲ್ಲಿ ಅವರದು ಯಾರದೂ ತಪ್ಪಿಲ್ಲವೆಂದು ಸಿದ್ಧವಾಯಿತು. ಪ್ರಕರಣ ಮುಚ್ಚಿಹೋಯಿತು. ಅವರುಗಳಿಗೆ ಬಡ್ತಿಯೂ ಸಿಕ್ಕಿತು. 

     ಇನ್ನೊಂದು ಪ್ರಕರಣ ಹೇಳ್ತೀನಿ. ನಾನು ಬಿಜಾಪುರದ ಡಿ.ಸಿ. ಆಗಿದ್ದಾಗ ನಡೆದ ಸಂಗತಿ. ಆಹಾರ ಇಲಾಖೆಯ ಉಪನಿರ್ದೇಶಕರೊಬ್ಬರು ಪ್ರತಿ ತಿಂಗಳು ೩೦೦ ನ್ಯಾಯಬೆಲೆ ಅಂಗಡಿಗಳ ಪೈಕಿ ೫೦ ನ್ಯಾಯಬೆಲೆ ಅಂಗಡಿಗಳಿಗೆ ಅಕ್ಕಿ, ೫೦ ಅಂಗಡಿಗಳಿಗೆ ಗೋದಿಯನ್ನು ಬಿಡುಗಡೆ ಮಾಡುತ್ತಿರಲಿಲ್ಲ. ಅದರ ಮುಂದಿನ ತಿಂಗಳು ಬೇರೆ ಬೇರೆ ೫೦ ಅಂಗಡಿಗಳಿಗೆ ಕೊಡುತ್ತಿರಲಿಲ್ಲ, ಉಳಿದ ೨೫೦ ಅಂಗಡಿಗಳಿಗೆ ಬಿಡುಗಡೆ ಆಗುತ್ತಿತ್ತು. ಹೀಗೆ ರೊಟೇಶನ್ನಿನಂತೆ ಮಾಡುತ್ತಿದ್ದರು. ಆ ೫೦ ಅಂಗಡಿಗಳ ಅಕ್ಕಿ ಮತ್ತು ಗೋಧಿ ಸೋಲಾಪುರಕ್ಕೆ ಹೋಗುತ್ತಿತ್ತು. ಅಲ್ಲಿ ಅದನ್ನು ಹಿಟ್ಟು, ರವೆ ಮಾಡಿ ಮಾರಲಾಗುತ್ತಿತ್ತು. ಆಗ ನಾನು ಮತ್ತು ಎ.ಸಿ. ಅದನ್ನು ರೆಡ್ ಹ್ಯಾಂಡ್ ಆಗಿ ಹಿಡಿದೆವು. ಸಗಟು ಗೋಡೌನಿಗೆ ಹೋಗಿ ೫ ದಿನಗಳ ಕಾಲ ತಪಾಸಣೆ ಮಾಡಿದೆವು. ವ್ಯತ್ಯಾಸ ಇರುವುದು, ಅವ್ಯವಹಾರ ನಡೆದಿರುವುದು ಖಚಿತವಾಯಿತು. ವರದಿ ಸಿದ್ಧ ಮಾಡಿಕೊಂಡು, ಗೃಹ ಇಲಾಖೆಯ ಕಮಿಷನರ್ ಅವರನ್ನು ಸ್ವತಃ ಭೇಟಿ ಮಾಡಿ, ವಿಶೇಷ ಅನುಮತಿ ಪಡೆದು ಪ್ರಕರಣ ದಾಖಲಿಸಿದೆ. ಮನೋರಮಾ ಮಧ್ವರಾಜ್ ಆಹಾರ ಮಂತ್ರಿ ಆಗಿದ್ದರು. ಅವರ ಮನೆಗೇ ಹೋಗಿ ವಿಷಯ ತಿಳಿಸಿದೆ. ಜನರ ಆಹಾರ ಕದ್ದಿದ್ದಾರೆ, ಅವರಿಗೆ ಶಿಕ್ಷೆ ಆಗಬೇಕು ಅಂದೆ. ಅವರು ಒಪ್ಪಿದರು. ಸಿ.ಒ.ಡಿ. ತನಿಖೆಗೂ ಆದೇಶ ಮಾಡಿದರು. ಉಪನಿರ್ದೇಶಕರು, ಫುಡ್ ಇನ್ಸ್‌ಪೆಕ್ಟರರನ್ನು ಬಂಧಿಸಲಾಯಿತು. ಎರಡು ದಿನಗಳು ಅವರು ಜೈಲಿನಲ್ಲಿದ್ದು, ನಂತರ ಜಾಮೀನಿನ ಮೇಲೆ ಹೊರಬಂದರು. ೧೯೯೪ರಲ್ಲಿ ನಡೆದ ಕೇಸು ಇದು. ೨೦೦೮ರವರೆಗೂ ನಡೆಯಿತು. ನಾನೂ ಹೇಳಿಕೆಗಳನ್ನು ನೀಡಿದೆ. ಇಷ್ಟೆಲ್ಲಾ ಆದಮೇಲೂ ೧೪ ವರ್ಷಗಳ ನಂತರ ಅವರುಗಳು ನಿರ್ದೋಷಿ ಎಂದು ತೀರ್ಮಾನವಾಯಿತು. ಸಿ.ಓ.ಡಿ.ಯವರು ಆರೋಪಗಳು ಸಾಬೀತಾಗಿದೆಯೆಂದು ಹೇಳಿದ್ದರು. ಅವರು ಶಿಕ್ಷೆ ಕೊಡಲು ಬರುವುದಿಲ್ಲ. ಕೇವಲ ತನಿಖೆ ನಡೆಸಿ ವರದಿ ಕೊಡುತ್ತಾರೆ. ನಂತರ ಇಲಾಖಾ ವಿಚಾರಣೆ ನಡೆಯಿತು. ಅಲ್ಲೂ ನಾನು ಹೇಳಬೇಕಾದ್ದನ್ನೆಲ್ಲಾ ಹೇಳಿದೆ. ಏನಾಯಿತೋ ಗೊತ್ತಿಲ್ಲ, ಆರೋಪಗಳು ಸಾಬೀತಾಗಲಿಲ್ಲವೆಂದು ತೀರ್ಮಾನವಾಯಿತು. ಅಧಿಕಾರಿಗಳು ನನ್ನ ಹತ್ತಿರವೂ ಬಂದಿದ್ದರು, 'ಏನೋ ತಪ್ಪು ಮಾಡಿಬಿಟ್ಟಿದ್ದೇವೆ, ಕ್ಷಮಿಸಿ ಬಿಟ್ಟುಬಿಡಿ, ಸಾಕ್ಷಿ ಹೇಳಿಕೆ ಕೊಡಬೇಡಿ' ಅಂತ ಕೇಳಿದ್ದರು. ಆದರೆ ನನ್ನ ಕರ್ತವ್ಯ ನಾನು ಮಾಡಿದೆ. ಈ ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪ ಏನೂ ಇರಲಿಲ್ಲ. ಆದರೂ ಅಧಿಕಾರಿಗಳು ಪಾರಾದರು.  ಕಾನೂನನ್ನು ಹೇಗೆ ತಿರುಚಬಹುದು ಎಂಬುದಕ್ಕೆ ಉದಾಹರಣೆ ಇದು. ವ್ಯವಸ್ಥೆಯಲ್ಲೇ ಹಾಗಾಗಿದೆ, ಏಕೋ ಗೊತ್ತಿಲ್ಲ.

ಪ್ರಶ್ನೆ: ತಾವೇ ಹೇಳಿದಂತೆ ತಾವೇ ಮುತುವರ್ಜಿ ವಹಿಸಿ ಕ್ರಮ ತೆಗೆದುಕೊಂಡ ಪ್ರಕರಣ ೧೪ ವರ್ಷಗಳ ನಂತರದಲ್ಲಿ ಏನೂ ಕ್ರಮ ಆಗದೆ ಬಿದ್ದುಹೋಯಿತು. ಇಂತಹ ಸ್ಥಿತಿಯ ಸುಧಾರಣೆಗೆ ಏನು ಕ್ರಮ ತೆಗೆದುಕೊಳ್ಳಬಹುದು?

ಮ.ಗೋ: ಇದು ಕಳೆದ ವರ್ಷದ ಪ್ರಕರಣ, ಬಹುಷಃ ಮಾರ್ಚಿ ತಿಂಗಳ ಕೊನೆಯಲ್ಲಿರಬೇಕು. ಇಂಜನಿಯರಿಂಗ್ ಕಾಲೇಜು ಮತ್ತು ಪಾಲಿಟೆಕ್ನಿಕ್ ಲೆಕ್ಚರರ್ಸ್‌ಗಳ ವೇತನಕ್ಕೆ ಸಂಬಂಧಿಸಿದ್ದು. ಫೈಲನ್ನು ಒಪ್ಪಿ ಮಂಜೂರಾತಿ ನೀಡಿ ೧೦ ದಿನ ಆಗಿತ್ತು. ಆಫೀಸಿನಲ್ಲಿ ಪೆಂಡಿಂಗ್ ಇತ್ತು. ಈ ಕೇಸಿನಲ್ಲಿ ನಾನು ಒಂದು ಪೈಸೆ ಲಂಚ ತೆಗೆದುಕೊಂಡಿರಲಿಲ್ಲ. ಆಗ ಕೆಲವರು ಲೆಕ್ಚರರ್ಸ್ ಅಸೋಸಿಯೇಷನ್ ಕಡೆಯಿಂದ ನನ್ನನ್ನು ಭೇಟಿ ಮಾಡಲು ಬಂದಿದ್ದರು. 'ಸರ್, ಈ ಫೈಲ್ ತಮ್ಮಲ್ಲಿ ಪೆಂಡಿಂಗ್ ಇದೆ. ನಾವು ಎಲ್ಲರೂ ಸೇರಿ ೪-೫ ಕೋಟಿ ಹಣ ಸಂಗ್ರಹಿಸಿ ಕೊಡ್ತೀವಿ. ಅದರ ಮೇಲೂ ಸಹ ಕೊಡ್ತೀವಿ. ದಯವಿಟ್ಟು ಮಂಜೂರಾತಿ ಕೊಡಿ' ಅಂದರು. ನಾನು ಅವರನ್ನು ನನ್ನ ಎದುರೇ ಕುಳಿತುಕೊಳ್ಳಲು ತಿಳಿಸಿದೆ. ಸಂಬಂಧಿಸಿದವರನ್ನು ಕರೆಸಿ, ಅವರಿಗೆ ನನ್ನ ಎದುರೇ ಆದೇಶವನ್ನು ಟೈಪ್ ಮಾಡಿಸಿದೆ. ಬಂದವರ ಎದುರಿಗೇ ಸಹಿ ಮಾಡಿ ಅವರಿಗೆ ಪ್ರತಿ ಕೊಟ್ಟೆ. ಅವರುಗಳ ವೇತನದಲ್ಲಿ ಗಣನೀಯವಾಗಿ ಹೆಚ್ಚಳವಾಗಿತ್ತು. ಯಾರಿಂದಲೂ ಒಂದು ರೂ. ಹಣ ಪಡೆಯಲಿಲ್ಲ. ಅಪರಾಧ ಆಗುವ ಮುನ್ನವೇ ಹಾಗೆ ಆಗದಂತೆ ನೋಡಿಕೊಳ್ಳುವುದು ಅಗತ್ಯ. 

 

ಪ್ರಶ್ನೆ: ಭ್ರಷ್ಠಾಚಾರ ಎಲ್ಲಾ ಸಮಸ್ಯೆಗಳಿಗೆ ಮೂಲ ಅಂತೀವಿ. ಅಧಿಕಾರ ಕೇಂದ್ರಿತ, ಜಾತಿ ಕೇಂದ್ರಿತ, ವಂಶ ಕೇಂದ್ರಿತ ರಾಜಕೀಯ ವ್ಯವಸ್ಥೆ ಸಹ ಭ್ರಷ್ಠಾಚಾರಕ್ಕೆ ಕಾರಣ ಅಲ್ಲವೇ?

ಮ.ಗೋ: ಇದಕ್ಕೆ ಅವರನ್ನು ದೂಷಿಸಿ ಪ್ರಯೋಜನ ಇಲ್ಲ. ಜನರು ಸರಿಯಾಗಬೇಕು. ರಾಜಕಾರಣಿಗಳಿಗೆ ಈಗ ಏನು ಭಾವನೆ ಬಂದಿದೆ ಅಂದರೆ ಖರ್ಚು ಮಾಡದಿದ್ದರೆ ಗೆಲ್ಲುವುದಿಲ್ಲ ಅಂತ. ಪ್ರಾಮಾಣಿಕರಾಗಿರುವ ರಾಜಕಾರಣಿಗಳು ಎಷ್ಟಿಲ್ಲ,. ಅವರೇ ಹೇಳ್ತಾರೆ, 'ಚೆನ್ನಾಗಿ ಕೆಲಸ ಮಾಡಿದರಷ್ಟೆ ಜನ ಓಟು ಕೊಡುವುದಿಲ್ಲ, ಹಣ ಹಂಚಲೇಬೇಕು' ಅಂತ. ಆ ಮನೋಭಾವ ಹೋಗಬೇಕು. ಭ್ರಷ್ಠಾಚಾರ ಅನ್ನುವುದು ಸಮಾಜದ ಕ್ಯಾನ್ಸರ್ ಇದ್ದ ಹಾಗೆ. ಅದು ಭಯೋತ್ಪಾದಕತೆಗಿಂತ ಹೆಚ್ಚು ಅಪಾಯಕಾರಿ. ರಾಜಕೀಯ ಪಕ್ಷಗಳಲ್ಲೂ ಜಾಗೃತಿ ಮೂಡಬೇಕು. ಒಂದು ಕಾಲ ಬರುತ್ತದೆ, ಬರಬೇಕು. ರಾಜಕೀಯ ಪಕ್ಷಗಳವರು, 'ನಾವು ದುಡ್ಡು ಕೊಡುವುದಿಲ್ಲ, ಚುನಾಯಿಸದಿದ್ದರೆ ಪರವಾಗಿಲ್ಲ' ಅನ್ನುವ ಕಾಲ ಬರಬೇಕು. ಇಲ್ಲದಿದ್ದರೆ ಮಾಫಿಯಾದವರು, ಮಧ್ಯವರ್ತಿಗಳು, ಅಪರಾಧಿಗಳು ಇವರುಗಳೆಲ್ಲಾ ರಾಜಕೀಯಕ್ಕೆ ಪ್ರವೇಶಿಸುತ್ತಾರೆ, ಹಣ ಖರ್ಚು ಮಾಡುತ್ತಾರೆ, ಗೆಲ್ಲುತ್ತಾರೆ. ಹಣ ಇದ್ದರೆ ರಾಜಕೀಯ ಮಾಡಬಹುದು ಅನ್ನುವ ಸ್ಥಿತಿ ಇದೆಯಲ್ಲಾ ಅದು ಬಹಳ ಕೆಟ್ಟದ್ದು.  

 

ಪ್ರಶ್ನೆ: ಇಂತಹ ರಾಜಕೀಯ ವ್ಯವಸ್ಥೆಯಿಂದ ನಿಷ್ಠಾವಂತ ಅಧಿಕಾರಿ ಫುಟ್ ಬಾಲ್ ಆಗುತ್ತಾನಲ್ಲವೇ? 

ಮ.ಗೋ: ಇರುವ ಕಡೆ ಕೆಲಸ ಮಾಡಿಕೊಂಡು ಹೋಗಬೇಕು. ನಾನು ಹೇಳುತ್ತಿರುತ್ತೇನೆ. ಪ್ರಭಾವಿ ವಲಯ ಮತ್ತು ಕಳಕಳಿಯ ವಲಯ ಇರುತ್ತದೆ. ನಮ್ಮ ಕೆಲಸವನ್ನು ನಾವು ಸರಿಯಾಗಿ ಮಾಡಿದರೆ, ಅಂದರೆ ಸಮಯಕ್ಕೆ ಸರಿಯಾಗಿ ಕಛೇರಿಗೆ ಹೋಗುವುದು, ನೀತಿ ನಿಯಮಗಳನ್ನು ಪಾಲಿಸುವುದು, ನನ್ನ ವ್ಯಾಪ್ತಿಯಲ್ಲಿ ವ್ಯವಸ್ಥಿತವಾಗಿ ಕೆಲಸವಾಗುವಂತೆ ನೋಡಿಕೊಳ್ಳುವುದು, ಇತ್ಯಾದಿ. ಇದರಿಂದ ಖಂಡಿತ ಪ್ರಭಾವ ಆಗುತ್ತದೆ. ಇತರ ಸಮಸ್ಯೆಗಳಿಗೆ ಮಹತ್ವ ಕೊಡಬೇಡಿ. ಜನರು ಏನು ಮಾಡುತ್ತಾರೆ ಅಂದರೆ ಇತರರನ್ನು ಟೀಕಿಸುತ್ತಾರೆ, ತಾವು ಮಾತ್ರ ಬದಲಾಗಿರುವುದಿಲ್ಲ. ಬದಲಾವಣೆ ಮೊದಲು ನನ್ನಿಂದ  ಬರಬೇಕು. ನನ್ನ ಹತ್ತಿರ ೨೪ ಗಂಟೆಗಳಿಗಿಂತಲೂ ಹೆಚ್ಚು ಕಾಲ ಕಡತಗಳನ್ನು ಇಟ್ಟುಕೊಳ್ಳದಿದ್ದರೆ ನಾನು ನನ್ನ ಅಧೀನ ಅಧಿಕಾರಿಗಳನ್ನು ಕೇಳುವ ನೈತಿಕತೆ ನನಗೆ ಇರುತ್ತದೆ. ನನ್ನ ಹತ್ತಿರ ಬಾಕಿ ಇಲ್ಲ, ನೀವು ಏಕೆ ಇಟ್ಟುಕೊಂಡಿದ್ದೀರಿ ಅಂತ ಕೇಳಬಹುದು. ನಾನು ಸಮಸ್ಯೆಗಳನ್ನು ಪರಿಹರಿಸದಿರಬಹುದು. ಆದರೆ ಇಂತಹ ಮನೋಭಾವ ಖಂಡಿತಾ ಸುಧಾರಣೆ ತರುತ್ತದೆ, ಪ್ರಭಾವ ಬೀರುತ್ತದೆ. 

ಪ್ರಶ್ನೆ:  ಜನಪರ ಯೋಜನೆಗಳು ಎಷ್ಟು ಜನಪರವಾಗಿವೆ? ಹೇಗಿರಬೇಕು?

ಮ.ಗೋ: ಗುಜರಾತಿನಲ್ಲಿ ಜಾರಿಯಲ್ಲಿರುವ 'ಚಿರಂಜೀವಿ' ಯೋಜನೆ ಬಗ್ಗೆ ಅಭ್ಯಸಿಸಲು ಗುಜರಾತಿಗೆ ಹೋಗಿದ್ದೆ. ಹಳ್ಳಿಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿರುತ್ತವೆ. ಅಗತ್ಯ ಸಿಬ್ಬಂದಿ, ತಜ್ಞರ ಕೊರತೆ ಇರುತ್ತದೆ. ಅದಕ್ಕಾಗಿ ಈ ಯೋಜನೆ ಜಾರಿಗೆ ತಂದರು. ೧೦೦ ಹೆರಿಗೆಗಳನ್ನು ಮಾಡಿದರೆ ೨ ಲಕ್ಷ ರೂ.ಗಳು, ಒಂದು ಹೆರಿಗೆಗೆ ೨೦೦೦ ರೂ.ಗಳು. ಯಾವುದೇ ಖಾಸಗಿ ತಜ್ಞ ವೈದ್ಯರು ಬಂದು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಶೇ. ೩೦ ಅನ್ನು ಮುಂಗಡವಾಗಿ ಸಂಭಾವನೆ ಕೊಡುತ್ತಾರೆ. ಉಳಿದ ಮೊಬಲಗನ್ನು ೧೦೦ ಹೆರಿಗೆ ಮಾಡಿದ ನಂತರ ಕೊಡುತ್ತಾರೆ. ಯಾವುದೇ ಮಧ್ಯವರ್ತಿಗಳಿಲ್ಲ, ನಿಗದಿತ ಕಾರ್ಯಪದ್ಧತಿ ಇಲ್ಲ. ಗುಜರಾತಿನಲ್ಲಿ ಮಾಡಿರುವ ಈ ಯೋಜನೆ ಪ್ರಪಂಚದಲ್ಲಿ ಮಾಡಿರುವ  ಅತ್ಯುತ್ತಮ ಯೋಜನೆಗಳಲ್ಲಿ ಒಂದು ಎಂದು ಹೇಳಬಲ್ಲೆ. ಇದನ್ನು ನಾವೂ ಅಳವಡಿಸಿಕೊಂಡಿದ್ದೇವೆ. ಭಾರತದಲ್ಲಿನ ಮೂರು ಅತ್ಯುತ್ತಮ ಕಾರ್ಯಕ್ರಮಗಳನ್ನು ಸರ್ಕಾರದ ಪ್ಲಾನಿಂಗ್ ಕಮಿಷನ್ ಗುರ್ತಿಸಿದೆ. ಗುಜರಾತಿನ 'ಚಿರಂಜೀವಿ' ಯೋಜನೆ, ಮಧ್ಯಪ್ರದೇಶದ 'ಬಾಲಶಕ್ತಿ' (ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವುದು) ಮತ್ತು ಛತ್ತೀಸಘಡದ ಪಡಿತರ ಸಾಮಗ್ರಿಗಳ ಸಾಗಾಣಿಕೆ ಪದ್ಧತಿ. ಈ ಮೂರೂ ರಾಜ್ಯಗಳು ಬಿಜೆಪಿ ಆಡಳಿತಕ್ಕೆ ಸೇರಿದ್ದು ಅನ್ನುವುದು ಬೇರೆ ವಿಷಯ. ಇದನ್ನು ಬೇರೆ ಯಾರೋ ಹೇಳಿರುವುದಲ್ಲ, ಪ್ಲಾನಿಂಗ್ ಕಮಿಷನ್ನಿನವರು ಹೇಳಿರುವುದು. ಜನಪರವಾಗಿ ಹೇಗೆ ಕಾರ್ಯ ಮಾಡಬಹುದು ಎಂಬುದಕ್ಕೆ ಇವು ಉದಾಹರಣೆಯಷ್ಟೆ. ಅವರುಗಳು ಚುನಾವಣೆಯಲ್ಲಿ ಗೆಲ್ಲುತ್ತಾರೋ, ಇಲ್ಲವೋ ಅದು ಮುಖ್ಯವಲ್ಲ. ಆದರೆ ಜನರ ಹೃದಯ ಮುಟ್ಟುವ ಕೆಲಸಗಳು ಇಂತಹವೇ.

     ಒಳ್ಳೆಯ ಯೋಜನೆಯ ಅನುಷ್ಠಾನಕ್ಕೆ ರಾಜಕೀಯ ಹಿನ್ನೆಲೆ ಬೇಕಿಲ್ಲ, ದೊಡ್ಡ ಮೆದುಳಿನ ಅವಶ್ಯಕತೆಯಿಲ್ಲ, ಮನಸ್ಸಿನ ಶಕ್ತಿ ಬೇಕು ಅಷ್ಟೆ. ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಿದರೆ ವ್ಯವಸ್ಥೆ ಕುರಿತು ಜನರಿಗೆ ನಂಬಿಕೆ ಬರುತ್ತದೆ. ಕಳ್ಳತನ ಕಾನೂನು ಪ್ರಕಾರ ಮಾಡಬಹುದು ಅಂತ ನಿಯಮ ಮಾಡಿದೆವು ಅಂತ ಇಟ್ಕೊಳ್ಳಿ. ನಾನೂ ಕೂಡಾ ಆ ಕಾನೂನಿನ ಬಲಿಪಶು ಆಗಬಹುದು. ಭ್ರಷ್ಠಾಚಾರವನ್ನು ಅಧಿಕೃತಗೊಳಿಸಿದೆವು ಅಂತ ಇಟ್ಕೊಳ್ಳಿ. ಆಗ ನನ್ನಿಂದ ಕೂಡಾ ಬೇರೆಯವರು ಹಣ ಮಾಡಬಹುದು. ಜನರು ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳಬಾರದು. ವ್ಯವಸ್ಥಿತ ಹಿಂಸಾಚಾರವಿದೆ, ಅದು ಬೇರೆ ತರಹ. ಅಸಂಘಟಿತ ಹಿಂಸಾಚಾರ ಇದೆ. ವಿನಾಕಾರಣ ಕೊಲೆಗಳಾಗುತ್ತವೆ. ಒಬ್ಬ ವೃದ್ಧೆ ಮನೆಯಲ್ಲಿದ್ದಾಗ ಹೋಗುತ್ತಾರೆ, ಸ್ವಲ್ಪ ಹಣಕ್ಕಾಗಿ ಅವಳನ್ನು ಕೊಲೆ ಮಾಡುತ್ತಾರೆ. ವ್ಯವಸ್ಥೆ ಮೇಲೆ ನಂಬಿಕೆ ಹೋದಾಗ ಹೀಗೆ ಆಗುತ್ತದೆ. ಇದನ್ನು ರಾಜಕಾರಣಿಗಳು, ಅಧಿಕಾರಿಗಳು ತಿಳಿದುಕೊಳ್ಳಬೇಕು. ಇಂದು ನನಗೆ ಗನ್ ಮ್ಯಾನ್ ಇದ್ದಾರೆ, ನಾಳೆ? ನಾನೂ ಕೂಡ ರಕ್ಷಿತನಲ್ಲ. 

 

ಪ್ರಶ್ನೆ: ಈ ವ್ಯವಸ್ಥೆಯ ಸುಧಾರಣೆ ಸಾಧ್ಯವೇ?

ಮ.ಗೋ: ಜನರ ಜೀವನಮಟ್ಟದ ಸುಧಾರಣೆ ಆಗಬೇಕು, ಅವರಲ್ಲಿ ತಿಳುವಳಿಕೆ ಮೂಡಿಸಬೇಕು. ಭ್ರಷ್ಠಾಚಾರದ ವಿಷಯವನ್ನೇ ಮೂಲಭೂತವಾಗಿ ತೆಗೆದುಕೊಂಡರೆ ಜನರ ಬೆಂಬಲ ಸಿಗುವುದು ಕಡಿಮೆ. ಏಕೆಂದರೆ ಅದು ಅಷ್ಟೊಂದು ಹಾಸುಹೊಕ್ಕಾಗಿದೆ. ಮೇಲಿನ ಹಂತದ ಜನರು ಮಾತ್ರ ಭ್ರಷ್ಠಾಚಾರಿಗಳೆಂದು ಹೇಳಲಾಗುವುದಿಲ್ಲ. ಆಫೀಸಿನ ಒಳಗೆ ಹೋಗಬೇಕೆಂದರೆ ೫ ರೂ. ಕೊಡಬೇಕು. ಬಡವರು ಬಡವರನ್ನೇ ಶೋಷಿಸುವುದಿದೆ. ಭ್ರಷ್ಠಾಚಾರದಿಂದ ನಿಮ್ಮ ಜೀವನದ ಮೇಲೆ ಯಾವ ಪರಿಣಾಮ ಆಗುತ್ತಿದೆ ಎಂಬ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಜನರ ಆಂದೋಲನ ಆಗದೆ ಬದಲಾವಣೆ ಕಷ್ಟ. ಜನ ಕೇಳಬೇಕು. ನಮ್ಮೂರಿನಲ್ಲಿ ಶಾಲೆ ಇಲ್ಲ, ಆಸ್ಪತ್ರೆ ಇಲ್ಲ, ಆಸ್ಪತ್ರೆ ಇದ್ದರೂ ಔಷಧಿ ಇಲ್ಲ, ರಸ್ತೆ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಸೌಕರ್ಯ ಇಲ್ಲ, ಏಕೆ ಕೊಡುವುದಿಲ್ಲ ಅಂತ ಕೇಳಬೇಕು. ಮಾಹಿತಿ ಹಕ್ಕು ಕಾಯದೆ ಇದೆ. ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಇ-ಆಡಳಿತ ಅತ್ಯಂತ ಪರಿಣಾಮಕಾರಿ ವ್ಯವಸ್ಥೆ. ಸಮರ್ಪಕವಾಗಿ ಜಾರಿ ಆಗಬೇಕು. ಅತ್ಯಂತ ಭಯಂಕರವೆಂದರೆ ಮಾನಸಿಕ ಭ್ರಷ್ಠಾಚಾರ. ಜನ ಟೀಕಿಸುತ್ತಾರೆ, ಆದರೆ ಅವರ ಜೀವನವೇ ಸರಿ ಇರುವುದಿಲ್ಲ. ಸಮರ್ಥನೆ ಮಾಡಿಕೊಳ್ಳುವುದರಿಂದ ಪ್ರಯೋಜನ ಇಲ್ಲ. ಒಳ್ಳೆಯ ಸಂಗತಿಗಳನ್ನು ಅಭ್ಯಾಸ ಮಾಡಿದರೆ ಕೆಟ್ಟ ಸಂಗತಿಗಳು ಓಡಿ ಹೋಗುವುವು. ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಜನರು ಅದನ್ನು ಟೀಕಿಸಿ ಪ್ರಯೋಜನ ಇಲ್ಲ. ಭ್ರಷ್ಠಾಚಾರ ವಿರೋಧಕ್ಕಿಂತ ಅಂದರೆ ಒಳ್ಳೆಯ ಆಡಳಿತದ ಪರ ಇರಬೇಕು. ಯುದ್ಧ ವಿರೋಧಕ್ಕಿಂತ ಶಾಂತಿಪರವಾಗಿರುವುದು ಮೇಲು. ನೆಗೆಟಿವ್ ವಿಷಯಗಳನ್ನು ಟೀಕಿಸುವುದಕ್ಕಿಂತ ಪಾಸಿಟಿವ್ ವಿಷಯಗಳನ್ನು ಪ್ರೋತ್ಸಾಹಿಸಬೇಕು.  

 

ಪ್ರಶ್ನೆ: ಒಳ್ಳೆಯ ಆಡಳಿತಕ್ಕಾಗಿ ಏನು ಮಾಡಬಹುದು?

ಮ.ಗೋ: ಸಾಕಷ್ಟು ಒಳ್ಳೆಯ ಕಾರ್ಯಕ್ರಮಗಳಿವೆ. ಅದನ್ನು ಕಾಂಗ್ರೆಸ್ ಕಾರ್ಯಕ್ರಮ, ಬಿಜೆಪಿ ಕಾರ್ಯಕ್ರಮ, ಕಮ್ಯುನಿಸ್ಟ್ ಕಾರ್ಯಕ್ರಮ, ಇತ್ಯಾದಿ ಹೇಳದೆ ಅದನ್ನು ಜನರ ಕಾರ್ಯಕ್ರಮ ಅಂತ ಜಾರಿಗೆ ತರಬೇಕು. ಒಳ್ಳೆಯ ಆಡಳಿತಕ್ಕಾಗಿ ಒಂದು ರಾಷ್ಟ್ರೀಯ ಚಾರ್ಟರ್ ಏಕೆ ತರಬಾರದು? ಅದಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರ ಸಹಿ ಪಡೆಯಬೇಕು. ಚುನಾವಣಾ ಕಮಿಷನ್ ಅದನ್ನು ಕಡ್ಡಾಯ ಮಾಡಲಿ. ಆರೋಗ್ಯ ಸುಧಾರಣೆ, ಸಾಕ್ಷರತೆ, ಶಿಕ್ಷಣ, ಮೂಲಭೂತ ಸೌಕರ್ಯಗಳು, ಇತ್ಯಾದಿ ಹಲವಾರು ಅಂಶಗಳನ್ನು ಇಟ್ಟುಕೊಂಡು ಒಂದು ಸಾಮಾನ್ಯ ಕಾರ್ಯಕ್ರಮ ರೂಪಿಸಬೇಕು. ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರು ಅದಕ್ಕೆ ಸಹಿ ಮಾಡಬೇಕು. ಯಾವ ಪಕ್ಷ ಅಧಿಕಾರಕ್ಕೆ ಬರಲಿ, ಹೋಗಲಿ ಈ ಮೂಲಭೂತ ಅಂಶಗಳನ್ನು ಜಾರಿ ಮಾಡಲು ಬದ್ಧರಿರಬೇಕು. ಇದನ್ನು ಏಕೆ ಮಾಡಬಾರದು? ಹಳ್ಳಿಯಲ್ಲಿ ಒಬ್ಬ ತಾಯಿ ಸಾಯುತ್ತಿದ್ದಾಳೆ ಅಂತ ಇಟ್ಕೊಳ್ಳಿ. ಆಕೆ ಕಾಂಗ್ರೆಸ್ ತಾಯಿ, ಬಿಜೆಪಿ ತಾಯಿ, ಕಮ್ಯುನಿಸ್ಟ್ ತಾಯಿ ಅಂತ ನೋಡಬೇಕೇನು? ಆಕೆಯ ಜೀವ ರಕ್ಷಿಸಬೇಕಲ್ಲವೇ? ಒಂದು ಮಗು ಹುಟ್ಟಿದ ೬ ತಿಂಗಳ ಒಳಗೇ ಸತ್ತರೆ ನಮ್ಮ ಜವಾಬ್ದಾರಿ ಇಲ್ಲವೇ? ಶಾಲೆಗೆ ಹೋಗಬೇಕಾದ ಮಗು ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದರೆ ನಮ್ಮ ಹೊಣೆಯಿಲ್ಲವೇ? ಹೆಚ್ಚಿನ ಕಾಯಿಲೆಗಳು ಒಳ್ಳೆಯ ಕುಡಿಯುವ ನೀರು ಸಿಗದೇ ಬರುವಂತಹವು. ಒಳ್ಳೆಯ ಕುಡಿಯುವ ನೀರು ಕೊಡುವುದು ನಮ್ಮ ಕರ್ತವ್ಯವಲ್ಲವೇ? ನೈರ್ಮಲ್ಯದ ಸಮಸ್ಯೆ, ಇದನ್ನು ಜಾರಿ ಮಾಡಲು ದೊಡ್ಡ ಕ್ರಾಂತಿ ಬೇಕೇ? ಒಂದು ರಾಷ್ಟ್ರೀಯ ಕಾರ್ಯಕ್ರಮ ರೂಪಿಸಬೇಕು. 

     ದೇಶದಲ್ಲಿ ದುಡ್ಡಿಲ್ಲ ಅಂತ ಏನೂ ಇಲ್ಲ. ಈಗ ಏನಾಗಿದೆ ಅಂದರೆ ಈಗ ದ್ವಂದ್ವರೀತಿಯಲ್ಲಿ ವಿಚಾರ ಮಾಡುವುದನ್ನು ಕಾಣುತ್ತಿದ್ದೇವೆ. ಒಂದು ಕಡೆ ಹೇಳ್ತಾರೆ, ನಮ್ಮ ಹತ್ತಿರ ದುಡ್ಡು ಇಲ್ಲ, ಸರ್ಕಾರ ನಡೆಸುವುದಕ್ಕೆ ಆಗುವುದಿಲ್ಲ, ಆದ್ದರಿಂದ ಖಾಸಗೀಕರಣ ಮಾಡಬೇಕು ಅಂತ. ಇನ್ನೊಂದು ಕಡೆ ಸರ್ಕಾರ ಸರಿಯಿಲ್ಲ, ಅದರ ವಿರುದ್ಧ ಬಂದೂಕು ಮುಖಾಂತರ ಹೋರಾಟ ಮಾಡಬೇಕು ಅನ್ನುವವರೂ ಇದ್ದಾರೆ. ಉದಾರವಾದದ ಪರ, ಉಗ್ರಗಾಮಿಗಳ ಪರ ಮಾತನಾಡುವವರಿಗೆ ಅವಕಾಶವಾಗಿರುವುದೇ ಭ್ರಷ್ಠಾಚಾರದ ಕಾರಣದಿಂದ. ಜನರಿಗೆ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಅದನ್ನು ನಕ್ಸಲೀಯರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನಿಯಮಗಳು, ಕಾನೂನುಗಳ ತೊಡಕಿದ್ದರೆ ನಿವಾರಿಸಿ ಎಲ್ಲಾ ಕೊನೆಯ ಮೂಲೆಗಳಲ್ಲಿರುವ ಜನರಿಗೂ ಮೂಲಭೂತ ಸೌಕರ್ಯಗಳು ದೊರೆಯುವಂತೆ ಮಾಡಿದರೆ ಈ ಸಮಸ್ಯೆ ತಾನಾಗಿ ಪರಿಹಾರವಾಗುತ್ತದೆ. ಆಗ ಜನರಿಗೆ ಅರ್ಥವಾಗುತ್ತದೆ, ಇವರೇ ನಮ್ಮ ರಕ್ಷಕರು ಅಂತ. ತಪ್ಪು ಮಾರ್ಗದರ್ಶನ ಪಡೆದ ಯುವಕರಿಗೆ ತಿಳಿವಳಿಕೆ ಕೊಡುವ ಕೆಲಸ ಆಗಬೇಕು. ಸರ್ಕಾರ ಇದೆ ಜನರಿಗೆ ನಂಬಿಕೆ ಬರುವಂತೆ ಮಾಡಬೇಕು. ಜನರಿಗೆ ಆ ನಂಬಿಕೆ ಹೋಗುತ್ತಿದೆ, ಅದು ಒಳ್ಳೆಯದಲ್ಲ. ಜನರಿಗೆ ನಂಬಿಕೆ ಹೋದರೆ ಪರಿಸ್ಥಿತಿ ನಿಭಾಯಿಸುವುದು ಕಷ್ಟ. ಖಾಸಗೀಕರಣ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ. ಅವು ಕೆಲವನ್ನು ಬಗೆಹರಿಸಬಹುದು. ಅದೇ ಸಮಯದಲ್ಲಿ ಹಿಂಸಾಚಾರ ಸಹ ಸಮಸ್ಯೆ ಬಗೆಹರಿಸುವುದಿಲ್ಲ. ಒಳ್ಳೆಯ ಆಡಳಿತ ಮಾತ್ರ ಸಮಸ್ಯೆ ಪರಿಹರಿಸಬಲ್ಲದು. ಒಳ್ಳೆಯ ಆಡಳಿತ, ಪ್ರಾಮಾಣಿಕತೆಯೇ ಪರಿಹಾರ. ಇದು ಆಗಬೇಕೆಂದರೆ ನಾನು ಪದೇ ಪದೇ ಒತ್ತಿ ಹೇಳುತ್ತಿರುವಂತೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಎಲ್ಲಾ ಪ್ರಜ್ಞಾವಂತರಿಂದ, ಅಧಿಕಾರಿಗಳಿಂದ, ರಾಜಕಾರಣಿಗಳಿಂದ ಆಗಬೇಕು.

     ಜಲಸಂವರ್ಧಿನಿ ಯೋಜನೆ ಕರ್ನಾಟಕದಲ್ಲಿ ಉದ್ಘಾಟನೆ ಮಾಡಿದ್ದವರು ಅಣ್ಣಾ ಹಜಾರೆ. ಎಸ್.ಎಮ್.ಕೃಷ್ಣರವರು ಆಗ ಮುಖ್ಯಮಂತ್ರಿ. ಅಣ್ಣಾ ಹಜಾರೆಯವರು ಮಾತನಾಡುತ್ತಾ "ಆಡಳಿತದಲ್ಲಿ ಜನರು ಪಾಲ್ಗೊಳ್ಳುವುದು ಅಂದರೆ ಏನು?" ಎಂದು ಪ್ರಶ್ನಿಸಿ ಅವರೇ ಉತ್ತರಿಸಿದ್ದರು, "ಆಡಳಿತದಲ್ಲಿ ಜನರು ಪಾಲ್ಗೊಳ್ಳುವುದು ಅಲ್ಲ, ಜನರ ಕಾರ್ಯಕ್ರಮದಲ್ಲಿ ಸರ್ಕಾರ ಪಾಲ್ಗೊಳ್ಳುವುದು ಅನ್ನಬೇಕು." ಇದು ದಾರ್ಶನಿಕರ ಚಿಂತನಾಧಾಟಿ. 

     ನಾವು ಜನರನ್ನು ನಂಬಬೇಕು. ವ್ಯವಸ್ಥೆಯನ್ನು ನಂಬುತ್ತೇವೆ. ಜನರನ್ನು ಅನುಮಾನಿಸುತ್ತೇವೆ. ಇದು ಬ್ರಿಟಿಷರ ಕಾಲೊನಿಯಲ್ ಮನೋಭಾವ. ಈ ಸಂಸ್ಕೃತಿ ಅವರ ಆಡಳಿತದ ಹ್ಯಾಂಗೋವರ್! ನಾವು ಜನರನ್ನು ನಂಬಬೇಕು. ವ್ಯವಸ್ಥೆಯನ್ನು ಅನುಮಾನಿಸಬೇಕು. ಕೆಲಸಗಳು ಸರಿಯಾಗಿ ಆಗುತ್ತೋ ಇಲ್ಲವೋ ಅಂತ ನೋಡಿಕೊಳ್ಳಬೇಕು. ಆಗದಿದ್ದಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಶ್ರೀರಂಗಪಟ್ಟಣ ತಾಲ್ಲೂಕಿನ ಹಳ್ಳಿಯೊಂದರಲ್ಲಿ ನಮ್ಮ ಕೆಲಸದ ಕುರಿತು ಹೇಳುತ್ತಿದ್ದಾಗ ಪ್ರೌಢ ಮಹಿಳೆಯೊಬರು, "ನೀವೇನೂ ದೊಡ್ಡ ಕೆಲಸ ಮಾಡುತ್ತಿಲ್ಲ. ಸಮಾಜದಿಂದ ನೀವು ಸಾಲ ತೆಗೆದುಕೊಂಡಿದ್ದೀರಿ. ಸಮಾಜದ ಸಹಾಯದಿಂದಲೇ ನೀವು ಈ ಹುದ್ದೆಗೆ ಬಂದಿದ್ದೀರಿ. ಈಗ ನೀವು ಬಡ್ಡಿ ಕಟ್ಟುತ್ತಿದ್ದೀರಿ, ಅಷ್ಟೆ. ಇನ್ನೂ ಅಸಲು ತೀರಿಸಬೇಕಿದೆ" ಎಂದಿದ್ದರು. ಎಷ್ಟು ಸತ್ಯ!! ಈ ಮಾತು ಸಮಾಜದ ಎಲ್ಲರಿಗೂ ಅನ್ವಯವಾಗುತ್ತದೆ, ಎಲ್ಲರೂ ಅನ್ವಯಿಸಿಕೊಳ್ಳಬೇಕು. ಭ್ರಷ್ಠಾಚಾರವನ್ನು ಒಳ್ಳೆಯ ಆಡಳಿತ ಮಾತ್ರ ಹಿಂದಿಕ್ಕಬಹುದು. ಒಳ್ಳೆಯ ಆಡಳಿತ ಬೇಕೆಂದರೆ ಜನರು ಜಾಗೃತರಾಗಿ ಸರಿಯಾಗಿ ಸರ್ಕಾರದ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುತ್ತಿವೆಯೇ ಎಂದು ಗಮನಿಸುತ್ತಿರಬೇಕು.

 

Comments

Submitted by partha1059 Mon, 01/07/2013 - 20:51

ಕವಿನಾಗಗಾಜರೆ ಮೊದಲಿಗೆ ಇಂತಹ ಸಂದರ್ಶನ ಹಾಕಿದ್ದಕ್ಕೆ ಅಭಿನಂದನೆಗಳು, ಬಹುಷಃ ಇದು ಸಂಪದದಲ್ಲಿ ಮೊದಲ ಸಲ ಅನ್ನಿಸುತ್ತೆ ಈ ರೀತಿ ನೇರ ಸಂದರ್ಶನ ಬರುತ್ತಿರುವುದು. ಆದರೆ ಮದನಗೋಪಲರಂತ ಹಿರಿಯ ಅಧಿಕಾರಿಗಳೆ, ದೇಶದ ಕಾನೂನೆ ಆ ರೀತಿ ಇದೆ ನಿಜವಾದ ಅಪರಾದಿಗಳು ಪಾರಾಗಿಬಿಡುವರು ಎಂದು ನಿಸ್ಸಹಾಯಕತೆಯಿಂದ ಕೈಚಲ್ಲುವದನ್ನು ಕಾಣುವಾಗ ದೇಶದ ಭವಿಷ್ಯದ ಬಗ್ಗೆ ಭಯವಾಗುತ್ತೆ. ಇದೆಂತ ದೇಶ ಯಾವ ದಿಕ್ಕಿಗೆ ನಡೆದಿದಿ, ಗೊತ್ತಿಪ್ಪ ಪ್ರಪಾತದ ಅಂಚಿಗೆ ಬಂದು ನಿಂತಿದ್ದೇವೆ, ಎಂದು ಸರ್ವನಾಶವೊ ಗೊತ್ತಿಲ್ಲ :(( ಪಾರ್ಥಸಾರಥಿ
Submitted by sathishnasa Tue, 01/08/2013 - 13:17

ಪ್ರಾಮಾಣಿಕ ಹಿರಿಯ ಅಧಿಕಾರಿಗಳಿಗೆ ಈ ರೀತಿ ಆದರೆ ಇನ್ನು ಕೆಳಹಂತದಲ್ಲಿ ಪ್ರಮಾಣಿಕವಾಗಿರುವ ನೌಕರರು ಏನು ಮಾಡಬೇಕು. ಇಂದಿನ ವ್ಯವಸ್ಥೆಯಲ್ಲಿ ಪ್ರಾಮಾಣಿಕರು ಹಲ್ಲಿನ ಮದ್ಯೆ ಇರುವ ನಾಲಿಗೆಯಂತೆ ಬದುಕಬೇಕಿದೆ. ಒಳ್ಳೆಯ ಸಂದರ್ಶನ ಪ್ರಕಟಿಸಿದ್ದಕ್ಕೆ ಧನ್ಯವಾದಗಳು ನಾಗರಾಜ್ ರವರೇ ....ಸತೀಶ್
Submitted by RAMAMOHANA Tue, 01/08/2013 - 17:01

ಮತ್ತೊ0ದು ಸಮಾಜ‌ ಮುಖಿ ಲೇಖನ‌ ನೀಡಿದ‌ ತಮಗೆ ಧನ್ಯವಾದಗಳು ನಾಗರಾಜ್ ಸಾರ್. ಪ್ರತಿಯೊಬ್ಬನೂ ತನ್ನ ತನ್ನ ಸ್ಥಾನದ‌ ಜವಾಬ್ದಾರಿಯರಿತು ನುಡಿದು, ಅದರ0ತೆ ನಡೆದರೆ ನಿಜವಾಗಿಯೂ ನಮ್ಮ ಭಾರತ‌ ದೇಶವನ್ನು ಅಲ್ಲಾಡಿಸಲಿಕ್ಕೆ ಯಾರಿ0ದಲೂ ಸಾಧ್ಯವಿಲ್ಲ. ಆದರೆ....... ಆದರೆ....... ???? ತಮಗೆ ವ0ದನೆಗಳು... ರಾಮೋ
Submitted by venkatb83 Tue, 01/08/2013 - 19:49

""ಆಡಳಿತದಲ್ಲಿ ಜನರು ಪಾಲ್ಗೊಳ್ಳುವುದು ಅಲ್ಲ, ಜನರ ಕಾರ್ಯಕ್ರಮದಲ್ಲಿ ಸರ್ಕಾರ ಪಾಲ್ಗೊಳ್ಳುವುದು ಅನ್ನಬೇಕು." ಇದು ದಾರ್ಶನಿಕರ ಚಿಂತನಾಧಾಟಿ. " ಈ ತರಹದ ಬರಹಗಳ- ವ್ಯಕ್ತಿಗಳ ಬಗ್ಗೆ ಇಲ್ಲಿ ದಾಖಲಿಸುವ ತನ್ಮೂಲಕ ಹಲವು ಜನರಿಗೆ ಆ ಬಗ್ಗೆ ತಿಳ್ಸಿ ಇಂಥವರೂ ಇರುವರು-ಇರುತ್ತಾರೆ ಎಂದು ತೋರಿಸುವ ತಿಳಿಸುವ ಅವಶ್ಯಕತೆ ಇದೆ.,... ಹಿರಿಯರೇ ಸಕಾಲಿಕ ಬರಹ... ಬಹು ಇಷ್ಟ ಆಯ್ತು.. ಹಲವು ವ್ಯಕ್ತಿಗಳ- ಸನ್ನಿವೇಶಗಳ ಪರಿಚಯ ಆಯ್ತು... (ಅರವಿಂದ್ ಲಿಂಬಾವಳಿ ಅವರ ಬಗ್ಗೆ ಮತ್ತು ಮದನ್ ಗೋಪಾಲ್ ಅವರ ಬಗ್ಗೆ (ಹಿಂದೊಮ್ಮೆ ಜಿಲ್ಲಾಧಿಕಾರಿ ಆಗಿದ್ದರು ಅಲ್ಲವೇ?) ನನಗಿದ್ದ ಪೂರ್ವಗ್ರಹ ಅಭಿಪ್ರಾಯಗಳೇ ಬೇರೆ.!!) ಶುಭವಾಗಲಿ.. \|