ಜನಪದ ಕಥೆ
ಒಂದು ಜಾನಪದ ಕತೆ
ಒಂದುರಾಗ ಒಬ್ಬ ರಾಜಯಿದ್ದ, ಅವನಿಗೆ ಕತ್ತೆ ಕಿವಿಯಿದ್ವು. ರಾಜಾ ಯಾವಗಲೂ ಕಿವಿ ಮುಚ್ಚುಹಂಗ ದೊಡ್ಡ ಪಟಗಾ ಸುತ್ಕೋತಿದ್ದಾ. ಹಿಂಗಾಗಿ ಆ ಕತ್ತೆಕಿವಿ ಬಗ್ಗೆ ಯಾರ್ಗೂ ಗೊತ್ತೇಯಿರ್ಲಿಲ್ಲ. ಅದ ಅರಮನಿಯೊಳಗ ಒಬ್ಬ ಹಜಾಮ (ನಾಪಿತ) ಇದ್ದ, ವಯಸ್ಸಾಗಿತ್ತು, ತುಂಬಾ ವರ್ಷಗಳಿಂದಾ ರಾಜಾರ ಸೇವಾದಾಗ ಇದ್ದ. ಅವಂಗ ಮಾತ್ರಾ ಈ ವಿಷಯ ಗೊತ್ತಿತ್ತು ಯಾಕಂದ್ರ ರಾಜಾಗ ತಿಂಗಳಿಗೊಂದಸರ್ತಿ ಕಷ್ಟಾ (Cutting) ಮಾಡತಿದ್ದಾ. ರಾಜಾನೂ ಈ ಕೆಲಸೇರಾವನ್ನ(ನಾಪಿತನ್ನ) ಸಲ್ಪ ಹೆದ್ರಿಸಿ, ಸಲ್ಪ ಹಣದಾಸೆ ತೊರ್ಸಿ ಬಾಯ್ ಮುಚ್ಚುವಂಗ ಮಾಡಿದ್ದಾ.
ಆದರ ಈ ಕೆಲಸೇರಾವಂಗ ವಯಸ್ಸಾಗಿತ್ತು, ಮಗನಿಗೆ ಜವಾಬ್ದಾರಿ ವಹಿಸೋ ಕಾಲಾನೂ ಬಂತು. ಸಾಯೂ ಕಾಲಕ್ಕ ಮಗನ್ನ ಹತ್ರಾ ಕರ್ದು ಹೇಳಿದಾ
" ನೋಡಪಾ ನಾವು ರಾಜನ ಕಷ್ಟಾ ಮಾಡುವವರು, ಆಂದ ಮ್ಯಾಲೆ ಅರಮನಿಯೊಳಗಿನ ಎಷ್ಟೊಂದು ಗುಟ್ಟಿನ ವಿಚಾರಗಳು ನಮಗ ತಿಳಿತಾವು, ಆದರ ನಾವು ಅವನ್ನೆಲ್ಲಾ ಹೊರಗ ಬಂದು ಬಯಲು ಮಾಡಬಾರದು. ಹಂಗೇನಾರು ಆದ್ರ ನಮ ಜೀವಾ ಮತ್ತು ಕುಟುಂಬಕ್ಕ ಕುತ್ತು ಬರ್ತೈತಿ, ತುಂಬಾ ಹುಷಾರಾಗಿರ್ಬೇಕು".
ಇದನ್ನ ಕೇಳಿದ ಮಗಾ ಎಲ್ಲದಕ್ಕೂ ಹೂಂ ಅಂದಾ.
ಕೆಲಸೇರಾವಾ ಸತ್ತ ಮ್ಯಾಲೆ ಮಗ ಅರಮನಿಗೆ ರಾಜಾಗ ಕಷ್ಟಾ ಮಾಡಾಕ ಹೊಗೋ ಹೊತ್ತು ಬಂತು.
ಮಗನಿಗೆ ಘನ ಕುಶಿ ಆತು, ರಾಜನ ತಲೆಮ್ಯಾಲೆ ಕೈಯಾಡ್ಸೂ ಕೆಲಸಂದ್ರೇನ್ ಸಾಮಾನ್ಯನ ?
ಕೆಲಸಾ ಶುರು ಮಾಡಾಕಿಂತ ಮುಂಚೆ ರಾಜಾ ಈ ಯುವಕೆಲಸೇರಾವನ್ನ ಕೇಳಿದಾ
"ಯಾಕಪಾ ನಿಮ್ಮಪ್ಪ ನಿಂಗ ನಮ್ಮಬಗ್ಗೆ ಯೆಲ್ಲಾ ಹೇಳಿರ ಬೇಕಲ್ಲಾ ?".
ಇವಾ "ಹೌದ್ರಿ ಎಲ್ಲಾ ಹೇಳ್ಯಾನ" ಅಂದ.
ಸರಿ ರಾಜಾ ಮೆಲ್ಲಕ ಪಟಗಾ ಬಿಚ್ಚಿದ. ಚಂಗಂತ ಉದ್ದನ ಕತ್ತೆಕಿವಿ ಹೊರಗ ಬಿದ್ವು. ಈದನ್ನೋಡಿ ಮಗನಿಗೆ ದಂಗಬಡಿದೊಯ್ತು. ಅವಾ ಈ ರೀತಿಯಂತಾ ನಿರಿಕ್ಷಿಸಿರಲಿಲ್ಲಾ. ಇವನ ಮಕದಾಗಿನ ಗಾಬರಿ ನೋಡಿ ರಾಜಾಗೂ ಗೊತ್ತಾತು, ಈ ಆಸಾಮಿನ್ನ ಹೇಂಗ ವಶ ಮಾಡ್ಕೋಬೇಕಂತ.
" ನೋಡಪಾ ಈ ರಹಸ್ಯ ನಿಮಪ್ಪ ಮಾತ್ರಾ ಗೊತ್ತಿತ್ತು, ಈಗ ನಿನಗ ಗೊತ್ತಾತು, ನಿಮ್ಮಪ್ಪ ಹೇಂಗ ಸಾಯುತನಕ ಬಾಯ್ಮುಚ್ಕೊಂಡಿದ್ನೋ ನೀನೂ ಹಂಗ ಇರ್ಬೇಕು, ಇಲಾ ಅಂದ್ರ ನಿನ್ನ ರುಂಡಾ ಕಚಕ್"
ಇಂವಾ ಅದೆಂಗ ಕಷ್ಟಾ ಮಾಡಿದ್ನೋ ಮಾಡಿ, ಸಣ್ಣಗ ನಡುಗುತ್ತಾ ಮನೆಗ ಬಂದು ಕಂಬಳಿ ಹೊಚ್ಕೋಂಡು ಮಲಗಿ ಬಿಟ್ಟಾ. ಹೆಂಡತಿ ಜಳಕಕ್ಕೆ ಕರದ್ಲು... ಊಹೂಂ..... ಹೆಂಡತಿ ಊಟಕ್ಕೆ ಕರದ್ಲು....ಊಹೂಂ....
ಇವಂಗ ಒಳಗ ಸಣ್ಣಗ ಚಳಿ ಜ್ವರಾ ಬಂದಂಗಾತು.. ಮಾತಿಲ್ಲಾ ಕತಿಯಿಲ್ಲಾ ಸುಮ್ಮನ ಮಳ್ಳರಂಗ ಮಲಗಿಬಿಟ್ಟಾ. ಒಂದಿನಾ ಆತು ಎರಡ ದಿನಾ ಆತು... ಊಟನೂಯಿಲ್ಲಾ.. ಯಾರ ಜೊತಿಗೂ ಮಾತುನು ಇಲ್ಲಾ. ಹೆಂಡತಿಗೆ ಭಯಾ ಆತು, ಹೋಗಿ ವೈದ್ಯರನ್ನ ಕರಕೊಂಡು ಬಂದ್ಲು, ಅವರು ಕಣ್ಣು ಬಾಯಿ ಎಲ್ಲಾ ಪರಿಕ್ಷೆ ಮಾಡಿ
"ನೋಡವಾ ಇದು ಮೈಯ್ಯನ ಕಾಯಿಲೆ ಅಲ್ಲಾ, ನಿನ್ನ ಗಂಡನ ಮನಸಿನ್ಯಾಗ ಏನೋ ಒಂದು ಗುಟ್ಟ ಐತಿ, ಅದನ ಅಂವಾ ಯಾರ ಹಂತೇಕಾದ್ರೂ ಹೇಳಬೇಕು, ಇಲ್ಲಿಕಂದ್ರ ಅಂವಾ ಆರಾಮ ಆಗೂದು ಕಠೀಣ ಐತಿ. ಸರಿ... ಅವನ ಹೇಣ್ತಿ ಬಗೆಬಗೆಯಾಗಿ ಕೇಳಿದ್ಲು
" ಏನ್ರಿ ಅದು ಗುಟ್ಟಿನ ಮಾತು, ನನಗರ ಹೇಳ್ರಲ್ಲಾ".
ಇಂವಂಗ ಗೊತ್ತಿತ್ತು ಹೆಣ್ಣಿನ ಹತ್ರ ಯಾ ಮಾತೂ ಗುಟ್ಟಾಗಿರಲ್ಲಾ ಅಂತ, ಅದಕ ಆಕಿ ಎಷ್ಟೇ ಪರಿಪರಿಯಾಗಿ ಕೇಳಿದ್ರೂ, ಇವಾ ಬಾಯ್ ಬಿಡಲಿಲ್ಲಾ.
ಆಗ ವಯಸ್ಸಾದವರೊಬ್ಬರು ಒಂದು ಪರಿಹಾರ ಹೇಳಿದ್ರು " ನೋಡಪಾ ಯಾರೂ ಇರದ ಜಾಗಕ ಹೋಗಿ ನಿನ್ನ ಮನಸ್ಸಿನ ಮಾತೆಲ್ಲಾ ಜೋರಾಗಿ ಅರಚಿಬಿಟ್ಟು ಬಾ ".
ಸರಿ ಇಂವಾ ಎದ್ದು ಕಾಡಿಗೆ ಹೋದ, ಯಾರೂ ಇಲ್ಲದ ಒಂದು ಜಾಗ ನೋಡಿ ಇನ್ನೇನು ಕೂಗಿ ಹೇಳ ಬೇಕೆಂದ, ಆದರೆ ಯಾರಾದರೂ ಕೇಳಿದರೆ ಅಂತಾ ಭಯವಾಯಿತು. ಸರಿ ಅಲ್ಲೆ ಒಂದು ತೆಗ್ಗು (ಗುಂಡಿ) ತಗೆದು ವಳಗಡೆ ತಲೆಯಿಟ್ಟು ಜೋರಾಗಿ ಕೂಗಿದಾ "ರಾಜನ ಕಿವಿ.....ಕತ್ತೆ ಕಿವಿ,......ರಾಜನ ಕಿವಿ.....ಕತ್ತೆಕಿವಿ" ಮನಸ್ಸಿಗೆ ಸಮಾದಾನ ವಾಗುವವರೆಗೂ ಕೂಗಿ ಆಮೇಲೆ ತಗ್ಗನ್ನು ಅಲ್ಲೆಯಿದ್ದ ಮಣ್ಣಿನಿಂದ ಮುಚ್ಚಿದ, ಸಮಾದಾನದಿಂದ ಮನೆಗೆ ಮರಳಿದ.
ಇತ್ತ ಕಾಡಿನಲ್ಲಿ ಮಳೆ ಬಂದು, ಅಂವ ಕೂಗಿದ ತೆಗ್ಗಿನ ಮೇಲೆ ಒಂದು ಬೀಜ ಮೊಳಕೆಯೊಡೆದು ಸಸಿಯಾಗಿ, ಮರವಾಗಿ ಬೆಳೆಯಿತು, ಅದರ ರೆಂಬೆಗಳೆಲ್ಲಾ ವಿಶಾಲವಾಗಿ ಹರಡಿದವು. ಕಾಡಿನಲ್ಲಿ ಜೋರಾಗಿ ಗಾಳಿ ಬೀಸಿದಾಗ ಈ ಮರವೂ ಅದರ ರೆಂಬೆಗಳೂ ಅಲುಗಾಡಿ ಭಯಂಕರ ಸದ್ದು ಮಾಡುತ್ತಿದ್ದವು, ಸರಿಯಾಗಿ ಆಲಿಸಿದರೆ " ರಾಜನ ಕಿವಿ.....ಕತ್ತೆ ಕಿವಿ......ರಾಜನ ಕಿವಿ....ಕತ್ತೆ ಕಿವಿ... ಎಂದು ಕೇಳುತ್ತಿತ್ತು.
ಜನರೆಲ್ಲಾ ಭಯಬೀತರಾಗಿ ಆ ಕಾಡಿಗೆ ಹೋಗುವದನ್ನೇ ಬಿಟ್ಟರು, ಇದರಿಂದ ಕಳ್ಳರಿವೆ ಒಳ್ಳೆಯ ವಾಸಸ್ತಾನವಾಯಿತು. ಕಳ್ಳರ ಸಂಗತಿ ರಾಜನವರೆಗೂ ಹೋಯಿತು, ರಾಜ ಕಳ್ಳರನ್ನು ಹಿಡಿಯಲು ತಾನೇ ಮಾರುವೇಷದಲ್ಲಿ ಕಾಡಿಗೆ ತೆರಳಿದ. ಅಲ್ಲಿ ಆ ಮರದ ಪಿಸುಗುಟ್ಟುವಿಕೆ ಕೇಳಿ ಜಾಗ್ರತನಾದ ರಾಜ ಆ ಮರವನ್ನು ಕಡಿದುರುಳಿಸಲು ಸೇವಕರಿಗೆ ಹೇಳಿದ.
ತುಂಬಾ ದಿನದವರೆಗೂ ಆ ಮರದ ಬಡ್ಡೆ (ಕಾಂಡ) ಅಲ್ಲಿಯೆ ಬಿದ್ದಿತ್ತು, ಅದನ್ನು ನೋಡಿದ ಒಬ್ಬ ಆಗಂತುಕ ಊರಿಗೆ ಸಾಗಿಸಿದ, ಊರಿನಲ್ಲಿ ಈ ಪಿಸುಗುಡುವ ದೆವ್ವದ ಮರದ ಕಥೆ ಕೇಳಿ ಅದನ್ನು ಬಳಸಲು ಹಿಂಜರಿದು ದೇವಸ್ತಾನಕ್ಕೆ ದಾನ ನೀಡಿದ.
ದೇವಸ್ತಾನದವರು ಅದರಿಂದ ಒಂದು ದೊಡ್ಡ ನಗಾರಿ ಮಾಡಿಸಿದರು.
ಜಾತ್ರೆಯದಿನ ರಾಜ ಆ ದೇವಸ್ತಾನಕ್ಕೆ ಪೂಜೆಗೆಂದು ಬಂದಾಗ, ದೇವಸ್ತಾನದವರು ರಾಜನಿಗೆ ಆ ವಿಷೇಷ ನಗಾರಿಯನ್ನು ಬಾರಿಸಿ ದೇವರಿಗೆ ಅರ್ಪಿಸಲು ಕೇಳಿಕೊಂಡರು.
ರಾಜ ಒಪ್ಪಿ ಒಂದು ಸಾರಿ ನಗಾರಿಯನ್ನು ಜೋರಾಗಿ ಬಾರಿಸಿದ್ದೇ ತಡ ನಗಾರಿಯಿಂದ "ರಾಜನ ಕಿವಿ....ಕತ್ತೆ ಕಿವಿ....ರಾಜನ ಕಿವಿ....ಕತ್ತೆ ಕಿವಿ...." ಎಂದು ಶಬ್ದ ಬರತೊಡಗಿತು. ರಾಜನಿಗೆ ತುಂಬಾ ಅವಮಾನವಾಯಿತು,ಇನ್ನೂ ತಡಮಾಡಿದರೆ ಕೆಲಸ ಕೇಡುತ್ತದೆ ಎಂದು ರಾಜಾ ತಾನೆ ಸ್ವಯಿಚ್ಛೆಯಿಂದ ತನ್ನ ಪಟಗಾ ತೆಗೆದಾ, ಛಂಗಂತ ಬಿದ್ದ ಉದ್ದ ಕಿವಿಗಳನ್ನು ತೋರಿಸಿ ರಾಜ ಎಲ್ಲರಿಗೂ ಹೇಳಿದಾ " ಪ್ರಜೆಗಳೇ ಇಲ್ಲಿಯವರೆಗೂ ಈ ವಿಷಯವನ್ನು ನಿಮ್ಮಿಂದ ಮುಚ್ಚಿಟ್ಟಿದ್ದೆ ಅದಕ್ಕಾಗಿ ಕ್ಷಮಿಸಿ"
ರಾಜನು ತುಂಬಾ ಜನಾನುರಾಗಿ ಆಗಿದ್ದರಿಂದ ಪ್ರಜೆಗಳೂ ಈ ವಿಷಯವನ್ನು ದೊಡ್ಡದು ಮಾಡಲಿಲ್ಲ.
ಈಗ ನಮ್ಮ ಕೇಲಸೇರಾಂವಾ ಪೂರ್ತಿ ಅರಾಮ ಅಗಿ, ತನ್ನ ಹೇಣ್ತಿ ಕೂಡ ಸುಖವಾಗಿದ್ದಾ. ಇತ್ತ ರಾಜಾಗೂ ತನ್ನ ಕೀವಿ ಬಚ್ಚಿಡು ಪ್ರಸಂಗಾನೂ ಬರ್ಲಿಲ್ಲಾ