ಜನಪದ ರಮ್ಯ ಕಥಾನಕಗಳು

ಕನ್ನಡದ ಪ್ರಸಿದ್ಧ ಜನಪದ ಸಾಹಿತ್ಯ ಸಂಗ್ರಾಹಕರೂ ಕಾದಂಬರಿಕಾರರೂ ಆಗಿರುವ ಕೃಷ್ಣಮೂರ್ತಿ ಹನೂರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಸಂಗ್ರಹಿಸಿದ ಆರು ಜನಪದ ರಮ್ಯ ನೀಳ್ಗತೆಗಳು ಈ ಸಂಕಲನದಲ್ಲಿವೆ. ಇವು ಕನ್ನಡದ ಸಮೃದ್ಧ ಜನಪದ ಸಾಹಿತ್ಯದ ಸೂಚಿಯಾಗಿವೆ.
ಇದರಲ್ಲಿನ ಆರು ಕತೆಗಳನ್ನು ಮತ್ತು ಇದರಲ್ಲಿ ಪ್ರಕಟವಾಗದ ಇನ್ನು ನಾಲ್ಕು ಕತೆಗಳನ್ನು ಹೇಳಿದವರು ಕ್ಯಾತಗಾನಹಳ್ಳಿ ಗಿರಿಯಯ್ಯ. ಈ ಗೊಲ್ಲಗೌಡನನ್ನು ಹನೂರರ ಮಿತ್ರ ರಾಮಚಂದ್ರಪ್ಪ ಕರೆದುಕೊಂಡು ಬಂದಿದ್ದರು. ತನಗೆ ಯಾವುದೋ ಒಂದು “ಹೆಣ್ಣರಸಿಯರ ಪಟ್ಟಣದ ಕತೆ” ಬರುವುದೆಂದು ಹೇಳಲಿಕ್ಕೆ ಶುರು ಮಾಡಿದ ಗಿರಿಯಯ್ಯ ಹಗಲೆಲ್ಲ ಅದೊಂದೇ ಕತೆಯನ್ನು ಹೇಳುತ್ತಾ ಹೋದ! “ಕಥೆ ಹೇಳುವಾಗಿನ ಆತನ ಭಾಷಾಶೈಲಿ, ನಾಟಕೀಯವಾಗಿ ನಿರೂಪಿಸುವ ರೀತಿ ಇವು ಆ ಕಥೆಯನ್ನು ಕುತೂಹಲದಿಂದ ಕೇಳುವಂತೆ ತೊಡಗಿಸಿತು” ಎನ್ನುತ್ತಾರೆ ಹನೂರರು. ಅನಂತರ ತನಗೆ ತಿಳಿದಿರುವ ಕಥೆಗಳನೆಲ್ಲ ಹೇಳಿದ ಗಿರಿಯಯ್ಯ ಒಟ್ಟು ಹತ್ತು ಕಥೆಗಳನ್ನು ನಿರೂಪಿಸಿದರು. ಪುಸ್ತಕದ ಕೊನೆಯಲ್ಲಿ (ಅನುಬಂಧ) ಪ್ರಶ್ನೋತ್ತರ ರೂಪದಲ್ಲಿ ಗಿರಿಯಯ್ಯನ ಮಾತಿನಲ್ಲೇ ಅವನ ವಿವರವಾದ ಪರಿಚಯ ನೀಡಿದ್ದಾರೆ ಹನೂರರು.
ಈ ಸಂಕಲನಕ್ಕೆ ದೀರ್ಘವಾದ (18 ಪುಟ) ವಿದ್ವತ್-ಪೂರ್ಣ ಪ್ರಸ್ತಾವನೆಯನ್ನು ಬರೆದಿದ್ದಾರೆ ಕೃಷ್ಣಮೂರ್ತಿ ಹನೂರು. ಅದರ ಆರಂಭದಲ್ಲಿ ಅವರು ಬರೆದ ಮಾತುಗಳು: “ಭಾರತ ದೇಶ ಪ್ರಾಚೀನ ಕಾಲದಿಂದ ಕಥಾಪ್ರಿಯ ದೇಶವೆಂದು ಹೆಸರಾಗಿದೆ. ಅಲ್ಲದೆ ಕಥಾಸಾಹಿತ್ಯ ವಿಪುಲವಾಗಿ ನಿರ್ಮಾಣಗೊಂಡು ಅದನ್ನು ಓದುವ ಕೇಳುವ ವರ್ಗವೂ ಆ ಕಾಲದಿಂದಲೂ ಇದ್ದೇ ಇದೆ. ಜಗತ್ತಿನ ಯಾವುದೇ ಭಾಗದ ಜನಪದ ಅಧ್ಯಯನಕ್ಕೂ ಪ್ರಾಚೀನ ಭಾರತದ ಕಥಾಸಾಮಗ್ರಿಯ ಸಮಗ್ರ ಪರಿಚಯದ ಅಗತ್ಯವಿದೆ ಎಂಬುದು ವಿದ್ವಾಂಸರನೇಕರ ಅಭಿಪ್ರಾಯ. ಮಹಾಭಾರತದ ಕಥೆಗಳು, ಜಾತಕ ಕತೆಗಳು, ಕಥಾಸರಿತ್ಸಾಗರ, ಚೂರ್ಣಿಕೆಗಳು - ಇವೆಲ್ಲವೂ ಗ್ರೀಕ್ ದೇಶದ ಕಥೆಗಳಿಗಿಂತ ಬಹು ಪ್ರಮುಖವಾದ ಜನಪದ ಮೂಲಗಳು. ಜಾತಕ ಕಥೆಗಳು, ಕಥಾಕೋಶ, ಪಂಚತಂತ್ರ, ಕಥಾಸರಿತ್ಸಾಗರ, ಬೇತಾಳ ಕಥೆಗಳು ಇವು ಕಥಾಸಾಹಿತ್ಯ ಪ್ರಕಾರದ ಅದ್ಭುತ ನಿರ್ಮಾಣಗಳಾಗಿವೆ.”
ಭಾರತ ದೇಶದ ಆರಂಭದ ಮಹತ್ವದ ಕೃತಿ “ಬೃಹತ್ಕಥೆ” ಬಗ್ಗೆ ಬರೆಯುತ್ತಾ ಹನೂರರು ನೀಡುವ ಮಾಹಿತಿ: “ಕಥೆಯ ಬೆಳವಣಿಗೆಯ ಕ್ರಮದಲ್ಲಿ ಗುಣಾಢ್ಯನ ಬೃಹತ್ಕಥೆ ವಹಿಸಿದ ಪಾತ್ರ ಮಹತ್ವಪೂರ್ಣವಾದುದು. ನಮ್ಮಲ್ಲಿ ಬೃಹತ್ಕಥೆ ಮತ್ತು ಪಂಚತಂತ್ರ ಪ್ರಾಚೀನ ಕಾಲಕ್ಕೆ ಹುಟ್ಟಿಕೊಂಡು ಭಾರತದಾದ್ಯಂತ ಜನಪ್ರಿಯವಾದುದರಿಂದ ಈ ನಾಡು ಕಥೆಗಳ ತವರೂರು ಎನಿಸಿಕೊಂಡಿದೆ. ವೈವಿಧ್ಯಕ್ಕೆ ತಕ್ಕಂತೆ ಕಥೆಗಳು ಹುಟ್ಟಿಕೊಂಡಿವೆ…. ಧರ್ಮದ ಚೌಕಟ್ಟಿನಿಂದ ಕಥೆಯನ್ನು ಸ್ವತಂತ್ರಗೊಳಿಸಿದ ಗ್ರಂಥವೆಂದರೆ ಬೃಹತ್ಕಥೆಯೇ. ಈ ಕೃತಿ ಕಥೆಗಳನ್ನು ಪರಿಶುದ್ಧ ರೂಪದಲ್ಲಿ ನೀಡುತ್ತದೆ. … ಜನಪದ ಕಥೆಗಳ ಉಗಮ ಕೇಂದ್ರಗಳಲ್ಲಿ ಭಾರತವೂ ಒಂದು ಎಂಬುದು ನಿರ್ವಿವಾದ.”
ಪ್ರಸ್ತಾವನೆಯಲ್ಲಿ ಜನಪದ ಕಥೆಗಳ ಉದ್ದೇಶದ ಬಗ್ಗೆ ಹನೂರರು ಬರೆದಿರುವ ಮಾತುಗಳು: “ಅಂತೂ ಯಾವ ಕಾಲಕ್ಕೋ ಹುಟ್ಟಿ ಆರಂಭಗೊಂಡಿರುವ ಈ ಕಥೆಗಳ ಹೇಳುವಿಕೆ ಮತ್ತು ಕೇಳುವಿಕೆ ಇಂದು ಗ್ರಾಮಗಳಲ್ಲಿ ಜೀವಂತ ಕಲೆಯಾಗಿ ಉಳಿದುಕೊಂಡಿದೆ. ಅದ್ಭುತ ರಂಜನೆ ಅದರ ವೈಶಿಷ್ಟ್ಯ. ಒಳ್ಳೆಯ ಕತೆಗಾರನೊಬ್ಬ ಕಥೆ ಹೇಳುವಲ್ಲಿ ಗ್ರಾಮ್ಯತೆ, ನಾಟಕೀಯತೆ ಇವೆಲ್ಲ ಜೀವಂತವಾಗಿ ಎದ್ದು ಕಾಣಿಸುತ್ತವೆ. … ಈ ಕಥೆಗಳಲ್ಲಿ ಕೆಲವು ಕಾಲ್ಪನಿಕ, ಕೆಲವು ಚಾರಿತ್ರಿಕ, ಇನ್ನು ಕೆಲವು ಭ್ರಾಮಕ, ಉಳಿದದ್ದೊಂದಿಷ್ಟು ಸಾಮಾಜಿಕ. ಕಥೆಯ ಅಂತ್ಯ ಯಾವಾಗಲೂ ಸುಖಾಂತ್ಯ. ಕೇವಲ ಮನರಂಜನೆ ಅಥವಾ ಮಾಡುತ್ತಿರುವ ಕೆಲಸದ ಹೊರೆಯನ್ನು ಕಡಿಮೆ ಮಾಡಿಕೊಳ್ಳಲಿಕ್ಕಷ್ಟೆ ಜನಪದರು ಕಥೆಗಳನ್ನು ಕಟ್ಟಿಕೊಂಡಿಲ್ಲ. ಕಥೆಗಳು ಸಾಧಿಸಬಹುದಾದ್ದರಲ್ಲಿ ಇವು ಸೇರಿರಬಹುದಷ್ಟೇ. ಇದಕ್ಕಿಂತ ಕಥೆಗಳನ್ನು ಸೃಷ್ಟಿ ಮಾಡಿದ ಜನಪದ, ತನ್ನ ಸಮಾಜದಲ್ಲಿ ನಡೆಯುತ್ತಿದ್ದಿರಬಹುದಾದ ಅನ್ಯಾಯಗಳ ವಿರುದ್ಧ ಹೊರಕ್ಕೆ ತೋರದಂಥ ಪ್ರತಿಭಟನೆಯನ್ನು ಕುರಿತು ಹೇಳುತ್ತದೆ. …ಕಥೆಗಳ ಉದ್ದೇಶ ಅನ್ಯಾಯವನ್ನು ಪ್ರತಿಭಟಿಸಿ ನ್ಯಾಯಸಮರ್ಥನೆಯನ್ನು ಮಾಡುವುದಾಗಿರುವುದರಿಂದ ಕೇಳುವವರಿಗೆ ಒಂದಲ್ಲ ಒಂದು ರೀತಿಯಲ್ಲಿ ನೀತಿಭೋಧನೆ ಆಗಿಯೇ ಇರುತ್ತದೆ. ಅಂದರೆ ಜನಪದ ಕಥೆಗಳು ನೈತಿಕ ಪಠ್ಯಗಳೂ ಕೂಡ.”
ಕೃಷ್ಣಮೂರ್ತಿ ಹನೂರರು ಪ್ರಸ್ತಾವನೆಯಲ್ಲಿ ಜಗತ್ತಿನಲ್ಲಿ ಜನಪದ ಸಾಹಿತ್ಯದ ಸಂಗ್ರಹ ಮತ್ತು ದಾಖಲೀಕರಣದ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನೂ ನೀಡಿದ್ದಾರೆ. ಮುಂದುವರಿದು, ಇಲ್ಲಿನ ಆರು ಕಥೆಗಳ ಮುಖ್ಯಾಂಶಗಳನ್ನು ಮತ್ತು ಅವುಗಳಲ್ಲಿ ಕಂಡು ಬರುವ ಬದುಕಿನ ನೋಟ ಹಾಗೂ ಪಾಠಗಳ ಬಗ್ಗೆ ಬರೆದಿದ್ದಾರೆ.
ಲೀಲಾವತಿ ರಾಣಿಯ ವಿವಾಹ ಕಥೆ, ಪದ್ಮಾವತಿ ರಾಣಿಯ ವಿವಾಹ ಕಥೆ, ವಜ್ರಮುಕುಟರಾಯನ ಕಥೆ, ಗಣಪತಿರಾಯನ ಕಥೆ, ರತ್ನಾದೇವಿಯ ಕಥೆ, ಚೋರರ ಕಥೆ - ಇವು ಈ ಸಂಕಲನದ ಆರು ಕಥೆಗಳು. ಚೋರರ ಕಥೆಯ ಹೊರತಾಗಿ ಇತರ ಐದು ಮಹಿಳಾ ಪಾತ್ರ ಪ್ರಧಾನ ಕಥೆಗಳು. ಸರಾಗವಾಗಿ ಓದಿಸಿಕೊಂಡು ಹೋಗುವ ಈ ಕಥೆಗಳು ರಂಜಿಸುವುದರ ಜೊತೆಗೆ ಆಯಾ ಕಾಲದ ಸಾಮಾಜಿಕ ಕಟ್ಟುಪಾಡುಗಳ ಮತ್ತು ಜೀವನ ಮೌಲ್ಯಗಳ ಪಾಠವನ್ನೂ ಒದಗಿಸುತ್ತವೆ. ಒಳ್ಳೆಯ ಕತೆಗಾರನೊಬ್ಬ ತನ್ನ ಸಮೃದ್ಧ ಗ್ರಾಮ್ಯ ಭಾಷೆಯಲ್ಲಿ ನಾಟಕೀಯವಾಗಿ ಇವನ್ನು ಹೇಳುತ್ತಾ ಹೋದರೆ, ಕೇಳುಗರ ಆಸಕ್ತಿಯನ್ನು ಗಂಟೆಗಟ್ಟಲೆ ಹಿಡಿದಿಟ್ಟುಕೊಳ್ಳಬಲ್ಲ ಎಂಬುದು ಖಂಡಿತ. ಆ ಅನುಭವವನ್ನು ಈಗಿನ ತಲೆಮಾರಿನ ಮಕ್ಕಳಿಗೆ ಒದಗಿಸುವುದು ಎಲ್ಲ ಹೆತ್ತವರ ಕರ್ತವ್ಯ, ಅಲ್ಲವೇ?