ಜನಪರ ಆಂದೋಲನಗಳಲ್ಲಿ ಗೇಯಪದಗಳು

ಜನಪರ ಆಂದೋಲನಗಳಲ್ಲಿ ಗೇಯಪದಗಳು

 

ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಮತ್ತು ಸ್ವಾತಂತ್ರ್ಯ ಗಳಿಸಿದ ನಂತರದ ದಿನಗಳಲ್ಲಿ ಸಾರ್ವಜನಿಕ ಸಭೆಗಳಲ್ಲಿ ಸಭೆ ಆರಂಭವಾಗುವ ಮೊದಲು ಜನರ ಗಮನ ಸೆಳೆಯಲಿಕ್ಕಾಗಿ ಗೇಯಪದಗಳನ್ನು ಹಾಡುತ್ತಿದ್ದೆವು.ಕಮ್ಯುನಿಸ್ಟ್ ಪಕ್ಷದ ಅನೇಕ ಸಭೆಗಳಲ್ಲಿ ಗೇಯಪದಗಳನ್ನು ಹಾಡುವ ಹೊಣೆಗಾರಿಕೆ ನನ್ನದಾಗಿತ್ತು. ಆಗ ಈಗಿನಂತೆ ಧ್ವನಿವರ್ಧಕಗಳು ಇರಲಿಲ್ಲ. ಹಾಗಾಗಿ ಧ್ವನಿಯೇರಿಸಿ ಹಾಡಬೇಕಾಗುತ್ತಿತ್ತು.

 

ಕಾರ್ಮಿಕ ಸಂಘಟನೆಗಳ ಪ್ರಾರಂಭದ ದಿನಗಳಲ್ಲಿ ನಾವು ಹಾಡುತ್ತಿದ್ದ ಇಂತಹ ಗೇಯಪದಗಳನ್ನು ನೆನೆದಾಗ ಇಂದಿಗೂ ರೋಮಾಂಚನವಾಗುತ್ತದೆ:

 

ಬನ್ನಿ ಬನ್ನಿ ಬನ್ನಿರೆಲ್ಲ ಸಂಘವನ್ನು ಸೇರುವಾ

ನಮ್ಮ ನಮ್ಮ ಹಕ್ಕಿಗಾಗಿ ಒಂದುಗೂಡಿ ಸಾಗುವಾ

 

ಕಾಸರಗೋಡಿನ ಕಯ್ಯೂರು ಗ್ರಾಮದ ಹುತಾತ್ಮರನ್ನು ಗಲ್ಲಿಗೇರಿಸಿದ ಸಮಯದಲ್ಲಿ ರೋಷದಿಂದ ನಮ್ಮ ರಕ್ತ ಕುದಿಯುತ್ತಿತ್ತು. “ಕಯ್ಯೂರ ಧೀರ ಸೋದರರಂತಿಮ….” ಎಂಬ ಹಾಡಿನ ಮೂಲಕ ನಾವು ಸಭೆಗಳಲ್ಲಿ ಅವರಿಗೆ ನಮನ ಸಲ್ಲಿಸುತ್ತಿದ್ದೆವು. ಬಂಗಾಲದ ಭೀಕರ ಬರಗಾಲಕ್ಕೆ ಸಾವಿರಾರು ಜನ ಬಲಿಯಾದರು. ಬಂಗಾಲದ ಜನತೆಗೆ ನೆರವು ನೀಡಲಿಕ್ಕಾಗಿ ಈ ಹಾಡಿನ ಮೂಲಕ ಜನರಿಗೆ ಕರೆ ನೀಡುತ್ತಿದ್ದೆವು:

 

ಬಂಗಾರ ಬಂಗಾಲ ಬಂದಿದೆ ಬರಗಾಲ

ತಂದಿದೆ ಬರಗಾಲ ಕಂಗಾಲ

 

ಮೈಸೂರಿನಲ್ಲಿ ಜವಾಬ್ದಾರಿ ಸರಕಾರಕ್ಕಾಗಿ ಹೋರಾಟ ನಡೆದಾಗ, ಅಲ್ಲಿನ ಹೋರಾಟಗಾರರ ಬೆಂಬಲಕ್ಕಾಗಿ ಮಂಗಳೂರಿನಿಂದ ಜಾಥಾ ಹೊರಟಾಗ, “ಮೈಸೂರು ಚಲೋ ಚಲೋ ಮೆರೆಯಲಿ ಘೋಷ” ಎಂಬ ಎಸ್. ಎನ್. ಹೊಳ್ಳರ ಗೇಯಪದದ ಘೋಷ ಮೊಳಗುತ್ತಿತ್ತು.

 

ಬಂದರ (ಪೋರ್ಟ್) ಕೆಲಸಗಾರರು ಸಂಘಟಿತರಾಗಿ ಹೋರಾಟಕ್ಕೆ ಇಳಿದಾಗ, ಅವರ ಮುಷ್ಕರಕ್ಕೆ ಬೆಂಬಲವಾಗಿ ಜರಗಿದ ಸಾರ್ವಜನಿಕ ಸಭೆಗಳಲ್ಲಿ ಕಾಂದಿಲ್ಕರ್ ವೆಂಕಟ್ರಾವ್ ಬರೆದ ಈ ಗೇಯಗೀತೆಯ ರಾಗಬದ್ಧ ಸೊಲ್ಲು ಮೈನವಿರೇಳಿಸುತ್ತಿತ್ತು:

 

“ದಂ ದಂ ದಂ ದಂ ದಂ ದಂ ದಂ ದಂ ದಮ್ಮು ಕಟ್ಟಿತ್ತ ತಮ್ಮ ದಮ್ಮು ಕಟ್ಟಿತ್ತ…..”

 

ಕಮ್ಯುನಿಸ್ಟ್ ಪಕ್ಷದಿಂದ ರೈತರ ಸಂಘಟನೆ ಆರಂಭವಾದಾಗ, ಹಳ್ಳಿಹಳ್ಳಿಗಳಲ್ಲಿ ರೈತ ಹೋರಾಟದ ಕಹಳೆ ಮೊಳಗಿಸಿದ ಎಸ್. ಎನ್. ಹೊಳ್ಳರ ಜನಪ್ರಿಯ ಗೇಯಪದ ಇಂದಿಗೂ ಪ್ರಸ್ತುತ.

 

ಹಂಡೆ ಹಂಡೆ ಮೈ ಬೆವರನು ಸುರಿಸಿ

ಖಂಡುಗ ಖಂಡುಗ ಧಾನ್ಯವ ಬೆಳೆಸಿ

ಹೊಲದ ಮಣ್ಣಿನೊಳು ಮೈಯಗೂಡಿಸುವ

ಒಲವಿಂ ಜನತೆಯ ತಣಿಯುಣ ಬಡಿಸುವ

ಬೋರೇಗೌಡಗೆ ಎಂಟೌಂಸು ನಾರು ಬೇರು ಎಲೆ ಪುಡಿಗೆಣಸು

ಲಾವಣಿ ತೆತ್ತು ಲೇವಿಯನ್ನಿತ್ತು

ಕಾವು ಕೊಟ್ಟು ಇಟ್ಟಟ್ಟದಿ ಬಿತ್ತು

ಕಣಜವ ಕಿತ್ತಿನ್ನಿಲ್ಲೆಂದತ್ತು

ಒಣಗುವ ಬಾಯಿಗೆ ಇಲ್ಲವೆ ತುತ್ತು

ಬೋರೇಗೌಡಗೆ ಕಂಟ್ರೋಲು ಯಾರು ಕೇಳ್ವರುಂಟೀ ಗೋಳು

ದುಡಿಯಲರಿತವನು ತಿನ್ನಲರಿಯನಾ

ಬಡವನೆ ರೈತನು ನಾಡಿನ ಹಿರಿಯ

ದುಡಿವನೆ ಒಡೆಯನೆನ್ನುತ ಸಾರಿ

ಒಡನೆಯೆ ರೈತನು ಸಂಘವ ಸೇರಿ

ಬೋರೇಗೌಡನೆ ಹೊಲದೊಡೆಯ

ಬೇರಿನ್ನಾವನು ನೆಲದೊಡೆಯ

 

ಮೊದಲನೆಯ ಮಹಾಚುನಾವಣೆಯ ಸಂದರ್ಭದಲ್ಲಿ ಕಮ್ಯುನಿಸ್ಟ್ ಪಕ್ಷದ ಪ್ರಚಾರದ ಗೇಯಪದವೊಂದು ಬಹಳ ಕಾಲ ಜನಸಾಮಾನ್ಯರ ನಾಲಿಗೆಯಲ್ಲಿ ಕುಣಿದಾಡುತ್ತಿತ್ತು:

 

ನಮ್ಮ ಬಾಗಿಲಿಗೆ ಬರುವವರು ಓಟುಗಳ ಕೇಳುವವರು ನೀವಲ್ಲವೇ

ನಿಮ್ಮ ಪಾಪಗಳ ಮುಚ್ಚಲಿಕೆ ಬಿಳಿ ಖಾದಿಯನು ತೊಟ್ಟು

ಬಾಗಿಲಿಗೆ ಬರುವವರು ನೀವಲ್ಲವೇ

 

ಕರ್ಪೂರ ವೆಂಕಟ್ರಾಯರು ರಚಿಸಿದ ಗೇಯಪದ ಇದು. ನಮ್ಮ ಸಭೆಗಳಲ್ಲಿ ಸಂಚಲನ ಚಿಮ್ಮಿಸಲಿಕ್ಕಾಗಿ ಅವರ ಅನೇಕ ಹಾಡುಗಳನ್ನು ನಾವು ಬಳಸುತ್ತಿದ್ದೆವು.

 

೧೯೪೨ರ ಚಳವಳಿಯ ಸಂದರ್ಭದ ಪ್ರಭಾತ್ ಪೇರಿಯಲ್ಲಿ ನಮ್ಮಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸುತ್ತಿದ್ದ ಗೇಯಗೀತೆ:

 

ಭಾರತಾಂಬೆ ನಮ್ಮ ಮಾತೆ ಜೀವಕಿಂತ ಮೇಲು

ಜೀವಕಿಂತ ಮೇಲು ನಮ್ಮ ಪ್ರಾಣಕಿಂತ ಮೇಲು

 

ದಿವಂಗತ ರಾಮರಾಜ ಕಿಣಿಯವರ ಇಂಪಾದ ಸ್ವರದಲ್ಲಿ ಮೂಡಿಬರುತ್ತಿದ್ದ ಆ ಹಾಡು ನೆನೆದರೆ ಈಗಲೂ ರೋಮಾಂಚನ.

 

ಗೇಯಪದಗಳನ್ನು ಹಾಡಿ ಸಭೆಸಮಾರಂಭಗಳನ್ನು ಆರಂಭಿಸುವ ವಾಡಿಕೆ ಈಗ ಕಡಿಮೆಯಾಗಿದೆ. ಆಯಾ ಸನ್ನಿವೇಶಕ್ಕೆ ಹೊಂದುವ ಗೇಯಪದಗಳು ರಚನೆಯಾದರೆ ಸಭೆಸಮಾರಂಭಗಳ ಆರಂಭದಲ್ಲಿ ಅವುಗಳ ಮಿಂಚಿನ ಸಂಚಾರಕ್ಕೆ ಮರುಜೀವ ಬಂದೀತು. ಜನರನ್ನು ಹುರಿದುಂಬಿಸಲು, ಪ್ರತಿಭಟನೆಗೆ ಅಣಿಗೊಳಿಸಲು ಗೇಯಪದಗಳು ಸಮರ್ಥ ಸಾಧನಗಳು.

Comments