ಜನಪ್ರಿಯವಾಗುತ್ತಿರುವ ಉಪಕಸುಬು - ಗೌಜುಗನ ಹಕ್ಕಿ ಸಾಕಣೆ

ಜನಪ್ರಿಯವಾಗುತ್ತಿರುವ ಉಪಕಸುಬು - ಗೌಜುಗನ ಹಕ್ಕಿ ಸಾಕಣೆ

ನಾಟಿ ಕೋಳಿಗೆ ಇರುವ ಬೇಡಿಕೆ ಫಾರಂ ಕೋಳಿಗಿಲ್ಲ. ಸಾಕಿದ ಹಂದಿಯ ಮಾಂಸಕ್ಕಿಂತ ಕಾಡು ಹಂದಿಯ ಮಾಂಸವನ್ನು ಜನ ಹೆಚ್ಚು ಇಚ್ಚೆ ಪಡುತ್ತಾರೆ. ಜನರ ಅಭಿರುಚಿಗೆ ತಕ್ಕುದಾಗಿ ಪೂರೈಕೆ ಮಾಡುವ ವ್ಯವಸ್ಥೆ ಇದ್ದರೆ ಅದರಲ್ಲಿ ಲಾಭವಿದೆ. ಕೇರಳದ ಗುಡ್ದಗಾಡು ಪ್ರದೇಶಗಳಲ್ಲಿ (ಮಲಪ್ಪುರಂ, ವಯನಾಡು ಮುಂತಾದ ಕಡೆ) ಸಂಚರಿಸುವಾಗ ಹೆಚ್ಚಿನ ಅಂಗಡಿಗಳಲ್ಲಿ ಕೋಳಿ ಮೊಟ್ಟೆ ತರಹವೇ ಹಕ್ಕಿಯ ಮೊಟ್ಟೆಗಳು ಮಾರಲ್ಪಡುತ್ತದೆ. ಇದು ಆರೋಗ್ಯಕ್ಕೆ ಉತ್ತಮ, ಜ್ಞಾನ ಶಕ್ತಿ ಉತ್ತಮವಾಗುತ್ತದೆ ಎನ್ನುತ್ತಾರೆ. ಇದು ಬೇರೆ ಯಾವ ಹಕ್ಕಿಯ ಮೊಟ್ಟೆಯೂ  ಅಲ್ಲ. ಅದು ಗೌಜುಗನ ಹಕ್ಕಿಯ ಮೊಟ್ಟೆ. ಪಾರಿವಾಳ ಹಕ್ಕಿಯ ಮಾಂಸದ ರುಚಿಗೆ ಈ ಹಕ್ಕಿ ಮಾಂಸದ ರುಚಿ ಸಮ ಎನ್ನುತ್ತಾರೆ ಅವರು. ಅದೇ ರೀತಿ ಅದರ ಮಾಂಸ ಸಹ ಮಾರಾಟಕ್ಕೆ ಲಭ್ಯ. ಇತ್ತೀಚಿನ ದಿನಗಳಲ್ಲಿ ನಾಟಿ ಕೊಳಿ ಸಾಕಣಿಕೆಗೆ ಹೆಚ್ಚು ಮಹತ್ವ ಬಂದಂತೆ, ಪಕ್ಷಿ ಸಾಕಾಣಿಕೆಗೂ ಮಹತ್ವ ಬರಲಾರಂಭಿಸಿದೆ. ಪಕ್ಷಿ ಸಾಕಾಣೆಗೆ ಗೌಜುಗನ ಹಕ್ಕಿ ಉತ್ತಮವಾಗಿ ಹೊಂದುತ್ತದೆ. ಇದರ ಮೊಟ್ಟೆ ಮತ್ತು ಮಾಂಸಕ್ಕೆರಡಕ್ಕೂ ಬೇಡಿಕೆ ಇದ್ದು, ಸಣ್ಣ ಗಾತ್ರದ ಪಕ್ಷಿಯಾಗಿ ಅತೀ ಶೀಘ್ರ ಬೆಳವಣಿಗೆ ಹೊಂದುತ್ತದೆ. 

ಗೌಜುಗನ ಹಕ್ಕಿ (Quail Bird) ಗಳ ಸಾಕಣೆ ಈಗೀಗ ಕರ್ನಾಟಕದಲ್ಲೂ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಕೋಳಿ ಅಂಗಡಿಗಳಲ್ಲಿ ಇದು ಸಿಗುತ್ತಿದೆ. ಗೌಜುಗನ ಹಕ್ಕಿಯ ಮೊಟ್ಟೆಗಳು ಸೂಪರ್ ಮಾರ್ಕೆಟ್ ಗಳಲ್ಲೂ ಲಭ್ಯ. ಗಾತ್ರದಲ್ಲಿ ಪುಟ್ಟ ಪುಟ್ಟದಾಗಿದ್ದು ಬಹಳ ಪೌಷ್ಟಿಕಾಂಶವನ್ನು ಹೊಂದಿದೆ.

ಸ್ಥಳೀಯವಾಗಿ ನಮ್ಮಲ್ಲಿ ಕಾಡು ಗೌಜುಗ ಹಕ್ಕಿ ಎಂಬ ಪ್ರಭೇಧ ಇದೆ. ಇದನ್ನು ಲಾವಕ್ಕಿ, ಪುರಲಿ ಹಕ್ಕಿ, ಕಾಡು ಪುರಲಿ ಎಂದು ಕರೆಯುತ್ತಾರೆ. ಇದು ಕಾಡಿನಲ್ಲಿ ವಾಸವಾಗಿರುತ್ತದೆ. ಇದನ್ನು ಮಾಂಸ ಹಾಗೂ ಮಾರಾಟಕ್ಕಾಗಿ ಸಾಕುವುದು ವನ್ಯಜೀವಿ ಕಾಯಿದೆಯ ಪ್ರಕಾರ ನಿಷೇಧವಿದೆ. ಅದಕ್ಕಾಗಿ ಅದೇ ಪ್ರಭೇಧಕ್ಕೆ ಸೇರಿದ ಜಪಾನೀಸ್ ಗೌಜುಗ ಹಕ್ಕಿಯ ಸಾಕಣೆಗೆ ಒತ್ತು ಕೊಡಲಾಗಿದೆ. ಇದು ನಮ್ಮ ಕಾಡುಗಳಲ್ಲಿರುವ ಗೌಜುಗನ ಹಕ್ಕಿಗಿಂತ ಸ್ವಲ್ಪ ದೊಡ್ಡದಾಗಿದ್ದು, ಶೀಘ್ರ ಬೆಳವಣಿಗೆ ಮತ್ತು ಹೆಚ್ಚು ಮೊಟ್ಟೆ ಉತ್ಪಾದನಾ ಸಾಮಾರ್ಥ್ಯ ಹೊಂದಿದೆ. ಈ ಹಕ್ಕಿಯನ್ನು ಮಾಂಸ ಮತ್ತು ಮೊಟ್ಟೆ ಉದ್ದೇಶಕ್ಕಾಗಿ  ಪ್ರಪಂಚದಾದ್ಯಂತ ವಾಣಿಜ್ಯಿಕವಾಗಿ ಸಾಕಣೆ ಮಾಡಲಾಗುತ್ತದೆ. ಇದರ ಮೂಲ ಯುರೋಪ್ ಹಾಗೂ ಏಶಿಯಾ ಖಂಡ.

ವಿಶೇಷತೆಗಳು: ಭಾರತದ ಅದರಲ್ಲೂ ಕರ್ನಾಟಕ ರಾಜ್ಯದ ಹವಾಮಾನಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಸಾಕಾಣಿಕೆಗೆ ಕಡಿಮೆ ಬಂಡವಾಳ ಸಾಕಾಗುತ್ತದೆ. ೧ ಚದರ ಅಡಿಗೆ ೫-೬ ಹಕ್ಕಿ ಸಾಕಬಹುದು. ಕಡಿಮೆ ಆಹಾರ ಸಾಕು. ಹುಟ್ಟಿದ ೭ ವಾರದಲ್ಲಿ  ಮೊಟ್ಟೆ ಇಡುವಷ್ಟು ಬೆಳೆಯುತ್ತದೆ. ಒಟ್ಟು ೫೦೦-೬೦೦ ಗ್ರಾಂ. ಆಹಾರದ ಬಳಕೆಗೆ ೨೦೦-೨೫೦ ಗ್ರಾಂ ತೂಕ  ಮಾಂಸ ಬರುತ್ತದೆ. ವರ್ಷಕ್ಕೆ ೩-೪ ಸಂತತಿ ಆಗುತ್ತದೆ. ವರ್ಷಕ್ಕೆ ಹೆಣ್ಣು ಹಕ್ಕಿ ೨೫೦-೨೮೦ ತನಕ ಮೊಟ್ಟೆ ಇಡುತ್ತದೆ.

ಸಾಮಾನ್ಯ ಎಲ್ಲಾ ಪಕ್ಷಿ ರೋಗಗಳಿಗೆ ನಿರೋಧಕ ಶಕ್ತಿ ಹೊಂದಿದೆ. ನಿರ್ವಹಣೆಗೆ ಶ್ರಮ ಇಲ್ಲ. ಈ ಹಕ್ಕಿಯ ಮಾಂಸವು ಸಾಮಾನ್ಯ ನಾಟಿ ಕೋಳಿಯ ಮಾಂಸಕ್ಕೆ ರುಚಿಯಲ್ಲಿ ಸಮನಾಗಿದೆ. ಸಾಕಾಣಿಕೆಗೆ ಹೆಚ್ಚು ಬಂಡವಾಳ ಬೇಕಾಗಿಲ್ಲ.

ಗೌಜುಗನ ಹಕ್ಕಿ ತಳಿಗಳು: ನಮ್ಮ ದೇಶದ ಹಲವಾರು ಪಶು ವೈದ್ಯಕೀಯ ಮಹಾವಿದ್ಯಾಲಯಗಳು ಗೌಜುಗನ ಹಕ್ಕಿ ಸಾಕಣೆ ಬಗ್ಗೆ ಸಂಶೋಧನೆ ಕೈಗೊಂಡಿವೆ. ಉತ್ತರ ಪ್ರದೇಶದ ಸೆಂಟ್ರಲ್ ಏವಿಯನ್ ರೀಸರ್ಚ್ ಇನ್ಸ್ಟಿಟ್ಯೂಟ್  ಇವರು ೪ ಗೌಜುಗನ ಹಕ್ಕಿ ತಳಿಗಳನ್ನು ಅಭಿವೃದ್ದಿ ಪಡಿಸಿವೆ. ಇದೇ ರೀತಿ ತಮಿಳುನಾಡು ಮತ್ತು ಹೈದರಾಬಾದ್ ಪಶು ವೈದ್ಯಕೀಯ ವಿಶ್ವವಿದ್ಯಾನಿಲಯಗಳು  ಕೆಲವು ತಳಿಗಳನ್ನು ಅಭಿವೃದ್ದಿಪಡಿಸಿವೆ.

ಅವುಗಳಲ್ಲಿ

ಸಿ ಎ ಆರ್ ಐ - ಉತ್ತಮ್ (ಮಾಂಸಕ್ಕೆ ಉತ್ತಮ)

ಸಿ ಎ ಆರ್ ಐ - ಶ್ವೇತಾ (ಬಿಳಿ ತಳಿ)

ಸಿ ಎ ಆರ್ ಐ - ಉಜ್ವಲ್ (ಎದೆ ಭಾಗದಲ್ಲಿ ಬಿಳಿ ಬಣ್ಣ ಇದೆ.)

ಸಿ ಎ ಆರ್ ಐ - ಪರ್ಲ್ (ಬಿಳಿ ಬಣ್ಣದ ಮೊಟ್ಟೆ ತಳಿ)

ನಂದನಮ್ ಕ್ವೀಲ್ 2 (ತಮಿಳುನಾಡು ಪಶು ವೈದ್ಯಕೀಯ ಮಹಾವಿದ್ಯಾಲಯ)

ಜಪಾನೀಸ್ ಗೌಜುಗನ ಹಕ್ಕಿಯ ತೂಕ  ೪-೫ ವಾರಕ್ಕೆ ೧೨೫ ಗ್ರಾಂ ನಿಂದ ೧೯೦ ಗ್ರಾಂ ತನಕ ಬರುತ್ತದೆ. ದಿನಕ್ಕೆ ೨೫-೩೦ ಗ್ರಾಂ ಆಹಾರ ಬೇಕಾಗುತ್ತದೆ. ಗೌಜುಗನ ಹಕ್ಕಿ ಬೇಸಾಯ ಇಟೆಲಿ, ಫ್ರಾನ್ಸ್, ಸ್ಪೈನ್, ಜಪಾನ್, ಇಂಗ್ಲೆಂಡ್ ಮುಂತಾದ ಮುಂದುವರಿದ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಅಲ್ಲಿಗೆ ಹೋಲಿಸಿದರೆ ನಮ್ಮಲ್ಲಿ ವಾಣಿಜ್ಯ ಸಾಕಣೆ ತುಂಬಾ ಕಡಿಮೆ.  ಜಪಾನೀಸ್ ಗೌಜುಗನ ಹಕ್ಕಿಯ ವಾಣಿಜ್ಯ ಸಾಕಣೆಗೆ ಅನುಕೂಲವಾಗಲು ಭಾರತ ಸರಕಾರವು ಈ ಹಕ್ಕಿಯನ್ನು ವನ್ಯ ಜೀವಿ ಸಂರಕ್ಷಣಾ ಕಾಯಿದೆಯಿಂದ ಹೊರಗಿಟ್ಟು ಅನುಕೂಲಮಾಡಿಕೊಟ್ಟಿದೆ. ನೆರೆಯ ತಮಿಳುನಾಡು, ಆಂಧ್ರ, ಕೇರಳಗಳಲ್ಲಿ  ಇದರ ಸಾಕಣೆ ಇದ್ದಷ್ಟು ನಮ್ಮ ರಾಜ್ಯದಲ್ಲಿ ಇಲ್ಲ. ಇದನ್ನು  ರಾಜ್ಯದ ಎಲ್ಲಾ ಕಡೆ ಸಾಕಣೆ ಮಾಡಬಹುದು. ಇತ್ತೀಚೆಗೆ ಕೃಷಿ ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾ ಕೇಂದ್ರಗಳು ಈ ಹಕ್ಕಿ ಸಾಕಣೆಗೆ ಬೇಕಾದ ಮಾಹಿತಿಯನ್ನು  ಕೊಡುವ ಕಾರಣ ಕೆಲವರು ಈ ಕಸುಬಿಗೆ ಇಳಿದಿದ್ದಾರೆ.

ಸುಮಾರು ೧೦೦ ಅಡಿ ಉದ್ದ ೩೦ ಅಡಿ ಅಗಲದ ಮನೆಗಳಲ್ಲಿ ಸುಮಾರು ೧೫,೦೦೦ ಹಕ್ಕಿಗಳನ್ನು ಸಾಕಬಹುದು. ಈ ವಿಧಾನದಲ್ಲಿ ಭತ್ತದ ಹೊಟ್ಟು, ಮರದ ಪುಡಿ, ಮೆಕ್ಕೇ ಜೋಳದ ತೆನೆ ಪುಡಿಯನ್ನು ಹಾಕಿ ಸಾಕಬೇಕು. ಸಣ್ಣ ೧ ಇಂಚು ತೂತಿನ ಜಾಲರಿ ಪಂಜರದಲ್ಲಿ ಸಾಕಬಹುದು. ಬ್ರಾಯ್ಲರ್ ಕೋಳಿ ಸಾಕುವ ಬದಲಿಗೆ ೫-೬ ಗೌಜುಗನ ಹಕ್ಕಿಯನ್ನು  ಸಾಕಬಹುದು. ಮೊದಲ ೨ ವಾರ ತನಕ೩ X ೨ X ೧.೫ ಅಡಿ ವಿಸ್ತೀರ್ಣದ ಪಂಜರದಲ್ಲಿ ೧೦೦ ಹಕ್ಕಿಯನ್ನು, ೩-೬ ವಾರ ತನಕ ಅದೇ ಪಂಜರದಲ್ಲಿ ೫೦ ಹಕ್ಕಿಯನ್ನೂ ಸಾಕಬಹುದು. ಪಂಜರಗಳನ್ನು ಸಾಕಣೆಗೆ ಅನುಕೂಲವಾಗುವಂತೆ ಒಂದರ ಮೇಲೆ ಒಂದರಂತೆ ಐದು ಪಂಜರಗಳನ್ನು  ಇಡಬಹುದು. ಇದರಿಂದ ಪ್ರತೀ ದಿನ ಹಿಕ್ಕೆ ತೆಗೆದು ಸ್ವಚ್ಚ ಮಾಡಲು ಅನುಕೂಲವಾಗುತ್ತದೆ. ಇದಕ್ಕಾಗಿಯೇ ಕಿರಿದಾದ ಮೇವುಣಿಕೆ -ನೀರುಣಿಕೆ ಲಭ್ಯ ಇದೆ. 

ಕೋಳಿ ಸಾಕಣೆಯಷ್ಟು ಈ ಹಕ್ಕಿ ಸಾಕಣೆ ಪ್ರಚಲಿತವಾಗಿಲ್ಲದಿದ್ದರೂ ಇನ್ನು ಕೆಲವೇ ವರ್ಷಗಳಲ್ಲಿ ಇದು ಹೆಚ್ಚು ಪ್ರಚಲಿತಕ್ಕೆ ಬರಲಿದೆ. ಮಾಂಸಾಹಾರಿಗಳು ಈ ಪಕ್ಷಿಯ ಮಾಂಸಕ್ಕೆ ಬೇಡಿಕೆ ವ್ಯಕ್ತಪಡಿಸುವ ಕಾಲವೂ ದೂರವಿಲ್ಲ. ಗೌಜಗನ ಹಕ್ಕಿ ಮೊಟ್ಟೆ ಮರಿಗಳ ಮಾಹಿತಿಗಳು ಪಶು ವೈದ್ಯಕೀಯ ಮಹಾವಿದ್ಯಾಲಯ ಹೆಬ್ಬಾಳ, ಬೆಂಗಳೂರು. ಇಲ್ಲಿನ ಕುಕ್ಕುಟ ಶಾಸ್ತ್ರ ವಿಭಾಗದಲ್ಲಿ  ಲಭ್ಯ. 

ಯಾವುದೇ ಹೊಸ ಉದ್ದಿಮೆಯನ್ನು ಪ್ರಾರಂಭಿಸುವಾಗ ಅದರ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಬೆಲೆ ಇದೆಯೇ? ಅಥವಾ ಭವಿಷ್ಯದಲ್ಲಿ ಬೆಲೆ ಬರಬಹುದೇ? ಎಂಬುದನ್ನು ಗಮನದಲ್ಲಿಡಿ. ಗೌಜುಗ ಹಕ್ಕಿಯ ಸಾಕಣೆ ಪ್ರಾರಂಭ ಮಾಡುವಾಗ ಹಕ್ಕಿಗಳನ್ನು ಮಾರಾಟ ಮಾಡಿ ಅದನ್ನು ಬೆಳೆಸಿ ಮತ್ತೆ ಮರಳಿ ಅವರಿಗೇ ಕೊಡುವಂತಹ (buy back) ವ್ಯವಸ್ಥೆಯ ಮಾರಾಟಗಾರರನ್ನೇ ಹುಡುಕಿ. ಆಗ ನೀವು ಹಕ್ಕಿಯನ್ನು ಸಾಕಿ, ಬೆಳೆಸಿದ ನಂತರ ಮಾರುಕಟ್ಟೆ ಹುಡುಕಿಕೊಂಡು ಹೋಗುವ ಕೆಲಸ ಉಳಿಯುತ್ತದೆ. ಸ್ಥಳೀಯವಾಗಿ ಮಾರುಕಟ್ಟೆ ಕುದುರಿಸಲು ಪ್ರಯತ್ನಿಸಿ. ಏಕೆಂದರೆ ಇದರಿಂದ ನಿಮಗೆ ಸಾಗಾಟ ವೆಚ್ಚದ ಉಳಿತಾಯವಾಗುತ್ತದೆ. ಇದೇ ಉದ್ದಿಮೆಯಲ್ಲಿರುವ ವ್ಯಕ್ತಿಗಳನ್ನು ಅಥವಾ ಸಂಸ್ಥೆಗಳನ್ನು ಸಂಪರ್ಕಿಸಿ ಈ ವ್ಯವಹಾರದ ಒಳ ಮರ್ಮವನ್ನು ತಿಳಿದುಕೊಂಡಿರಿ. ವಿವಿಧ ವಿಶ್ವವಿದ್ಯಾನಿಲಯಗಳಲ್ಲಿರುವ ಕೃಷಿ, ಜಾನುವಾರು ಮತ್ತು ಪಕ್ಷಿ ವಿಜ್ಞಾನಿಗಳನ್ನು ಸಂಪರ್ಕಿಸಿ ರೋಗಬಾಧೆ, ಆಹಾರದ ಬಗ್ಗೆ ಮಾಹಿತಿಗಳನ್ನು ಪಡೆಯಿರಿ. ಒಂದೇ ಸಲಕ್ಕೆ ವಿಪರೀತ ಬಂಡವಾಳವನ್ನು ಹೂಡಬೇಡಿ. ಬುದ್ದಿವಂತಿಕೆಯಿಂದ ವ್ಯಾಪಾರದ ಒಳಸುರಿಗಳನ್ನು ತಿಳಿದುಕೊಂಡು ಮುಂದುವರಿಯಿರಿ.

(ಮಾಹಿತಿ: ರಾಧಾಕೃಷ್ಣ ಹೊಳ್ಳ)

ಚಿತ್ರ ವಿವರ: ೧. ಜಪಾನೀಸ್ ಕ್ವೀಲ್, ೨. ಗೌಜುಗದ ಮೊಟ್ಟೆಗಳು, ೩. ಕೊಟುರ್ನಿಕ್ಸ್ (Coturnix Quail) ಗೌಜುಗ 

ಚಿತ್ರ ಕೃಪೆ: ಅಂತರ್ಜಾಲ ತಾಣ