ಜನಪ್ರಿಯ ಔಷಧಿಗಳೇ ಕಳಪೆ : ಆಘಾತಕಾರಿ ವರದಿ

ಜನಪ್ರಿಯ ಔಷಧಿಗಳೇ ಕಳಪೆ : ಆಘಾತಕಾರಿ ವರದಿ

ಜ್ವರಕ್ಕೆ ಬಳಸುವ ಪ್ಯಾರಸಿಟೆಮಾಲ್ ಸೇರಿದಂತೆ ದೇಶದಲ್ಲಿ ಮಾರಾಟವಾಗುತ್ತಿರುವ ೫೩ ಜನಪ್ರಿಯ ಔಷಧಗಳು ಕಳಪೆ ಗುಣಮಟ್ಟದ್ದಾಗಿವೆ ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ವರದಿ ಹೇಳಿರುವುದು ಆಘಾತಕಾರಿಯಾಗಿದೆ. ಕಳಪೆ ಔಷಧ ಪಟ್ಟಿಯಲ್ಲಿ ಮಧುಮೇಹ, ರಕ್ತದೊತ್ತಡ, ವಿಟಮಿನ್ ಮಾತ್ರೆಗಳು, ಕ್ಯಾಲ್ಸಿಯಂ, ಅಸಿಡಿಟಿ ಮಾತ್ರೆಗಳೂ ಸೇರಿವೆ. ದೇಶದಲ್ಲಿ ಮಾರಾಟವಾಗುತ್ತಿರುವ ಔಷಧಗಳನ್ನು ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು ಕಾಲಕಾಲಕ್ಕೆ ಪರೀಕ್ಷೆಗೆ ಒಳಪಡಿಸುತ್ತದೆ. ಹಾಗೆ ನಡೆಸಿದ ಪರೀಕ್ಷೆಯಲ್ಲಿ ಈ ಔಷಧಗಳು ಕಳಪೆ ಗುಣಮಟ್ಟದ್ದಾಗಿವೆ ಎಂಬ ಫಲಿತಾಂಶ ಬಂದಿದೆ. ಅಂದರೆ ಇವು ಕಲಬೆರಕೆಯಾಗಿರಬಹುದು ಅಥವಾ ಇವುಗಳನ್ನು ತಯಾರಿಸುವ ಫಾರ್ಮಾ ಕಂಪೆನಿಗಳು ಲಾಭದ ಆಸೆಯಿಂದ ಕಳಪೆ ಕಚ್ಚಾ ವಸ್ತುಗಳನ್ನು ಬಳಸಿರಬಹುದು. ಆದರೆ, ವರದಿಯಲ್ಲಿ ಹೇಳಲಾದ ಔಷಧಗಳನ್ನು ತಯಾರಿಸುವ ಬಹುತೇಕ ಅಷ್ಟೂ ಕಂಪೆನಿಗಳು ಈ ಔಷಧಗಳು ನಮ್ಮ ಬ್ರ್ಯಾಂಡ್ ನ ಹೆಸರು ಬಳಸಿಕೊಂಡು ತಯಾರಿಸಲಾದ ನಕಲಿ ಔಷಧಗಳು ಎಂದು ಹೇಳಿವೆ. ಅಂದರೆ ಲಾಭದಾಸೆಗೆ ನಕಲಿ ಔಷಧ ಉತ್ಪಾದಕರು ಇದನ್ನು ದಂಧೆ ಮಾಡಿಕೊಂಡು ಕಾಳಸಂತೆಯನ್ನು ಸೃಷ್ಟಿಸಿರುವ ಸಾಧ್ಯತೆಯಿದೆ.

ಔಷಧ ಅಥವಾ ಮಾತ್ರೆಗಳನ್ನು ಸೇವಿಸುವವರು ಅನಾರೋಗ್ಯಪೀಡಿತರು. ಅವರಲ್ಲಿ ಮೊದಲೇ ರೋಗನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಜೊತೆಗೆ, ಅನಾರೋಗ್ಯದಿಂದ ದೇಹದ ಸ್ಥಿತಿ ಹದಗೆಟ್ಟಿರುತ್ತದೆ. ಅಂತಹವರ ಆರೋಗ್ಯವನ್ನು ಕಾಪಾಡಬೇಕಾದ ಔಷಧಗಳೇ ಕಳಪೆಯಾಗಿದ್ದರೆ ಅವುಗಳಿಂದ ರೋಗಿಗಳ ಆರೋಗ್ಯ ಇನ್ನಷ್ಟು ಹದಗೆಡಬಹುದು ಅಥವಾ ಅಡ್ಡ ಪರಿಣಾಮಗಳು ಉಂಟಾಗಿ ಬೇರೆ ಬೇರೆ ಸಮಸ್ಯೆಗಳು ಎದುರಾಗಬಹುದು. ಪ್ರಾರಾಸಿಟಮಾಲ್ ನಂತಹ ಔಷಧಗಳನ್ನು ಮಕ್ಕಳಿಗೂ ವ್ಯಾಪಕವಾಗಿ ನೀಡಲಾಗುತ್ತದೆ. ಬೇರೆಲ್ಲಾ ಕಲಬೆರಕೆಗಳಿಗಿಂತ ಔಷಧಗಳ ಕಲಬೆರಕೆ ಅಥವಾ ಗುಣಮಟ್ಟದ ಜೊತೆಗೆ ರಾಜಿ ಮಾಡಿಕೊಳ್ಳುವುದು ಹೆಚ್ಚು ಅಪಾಯಕಾರಿ. ಗುಣಮಟ್ಟದಲ್ಲಿ ಕಳಪೆಯಾಗಿರುವ ಔಷಧಗಳು ವಿಷಪೂರಿತವಾಗಿವೆ ಎಂದೂ ವರದಿ ಹೇಳಿದೆ. ಇದು ಇನ್ನೂ ಆಘಾತಕಾರಿ.

ಔಷಧಗಳ ಸಂಶೋಧನೆ, ಪರೀಕ್ಷೆ, ಲೈಸನ್ಸಿಂಗ್, ಉತ್ಪಾದನೆ, ಗುಣಮಟ್ಟದ ನಿಯಂತ್ರಣ, ಮಾರಾಟ ಹಾಗೂ ಪ್ರಿಸ್ಕ್ರಿಪ್ಷನ್ ಈ ಎಲ್ಲಾ ಹಂತಗಳಲ್ಲೂ ಅತ್ಯಂತ ಗರಿಷ್ಟ ಮುನ್ನೆಚ್ಚರಿಕೆ ಅಗತ್ಯ. ಎಲ್ಲೇ ಲೋಪವಾದರೂ ಅದು ಜನರ ಜೀವನ್ಮರಣದ ಪ್ರಶ್ನೆಯಾಗುತ್ತದೆ. ಆದ್ದರಿಂದಲೇ ಸರ್ಕಾರಗಳು ಈ ವಿಷಯದಲ್ಲಿ ಸಾಕಷ್ಟು ಕಠಿಣ ನಿಯಂತ್ರಣ ಕ್ರಮಗಳನ್ನೇ ಹೊಂದಿದೆ. ಆದರೂ ನಿಯಮಗಳಲ್ಲಿರುವ ಕೊರತೆಗಳನ್ನು ಬಳಸಿಕೊಂಡು ಹೆಚ್ಚಿನ ಲಾಭದಾಸೆಗಾಗಿ ದಂಧೆ ನಡೆಸುವವರು ಇರುತ್ತಾರೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಹಾಗೂ ಕಳಪೆ ಔಷಧಗಳನ್ನು ಮಾರುಕಟ್ಟೆಯಿಂದ ತಕ್ಷಣ ಹಿಂಪಡೆಯುವ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದಷ್ಟೇ ಇದಕ್ಕೆ ಪರಿಹಾರ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೭-೦೯-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ