ಜನಮಾನಸದ ಆದರ್ಶವ್ಯಕ್ತಿಯಾಗಿ ರಾಜ್ಕುಮಾರ್

ಜನಮಾನಸದ ಆದರ್ಶವ್ಯಕ್ತಿಯಾಗಿ ರಾಜ್ಕುಮಾರ್

ಬರಹ

ದಿವಂಗತ ರಾಜ್ಕುಮಾರ್ರವರ ಸಾಂಪ್ರದಾಯಿಕ ಶಿಕ್ಷಣ ಇವರಿಗೆ ಆಗಿಬರಲಿಲ್ಲವಾದ್ದರಿಂದ ಮೂರನೇ ತರಗತಿಗೇ ಓದು ಕುಂಠಿತವಾಯಿತು. ಆದರೆ ಜೀವನವೆಂಬ ವಿಶ್ವವಿದ್ಯಾಲಯದಲ್ಲಿ ಅವರು ಎಲ್ಲ ರೀತಿಯ ಶಿಕ್ಷಣ ಪಡೆದು ಸಾರ್ಥಕ ಜೀವಿಯಾದರು. ಜೀವನದ ಅನುಪಮ ಸಾಧನೆಗೆ ಮೈಸೂರು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ತನ್ನನ್ನೇ ಗೌರವಿಸಿಕೊಂಡಿದೆ.
ಕನ್ನಡದ ಆದಿಕವಿ ಪಂಪ ತನ್ನ ಮೇರುಕೃತಿಯಲ್ಲಿ ಹೀಗೆನ್ನುತ್ತಾನೆ:
ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರಮಾದ ಮಾನಸರೇ ಮಾನಸರ್ . . .
(ತ್ಯಾಗದ ಭೋಗದ ವಿದ್ಯೆಯ ಸಂಗೀತದ ವಿಚಾರದ ರಸಿಕತೆಯ ಸೊಗಸುಗಳಿಂದ ಕೂಡಿದ ಮಾನವನೇ ಸಾರ್ಥಕಜೀವಿ)

ಹೀಗೆ ತ್ಯಾಗ ಭೋಗಗಳಾದಿ ಎಲ್ಲದರಲ್ಲೂ ಮೇರುಮಟ್ಟದಲ್ಲೇ ಜೀವಿಸಿದ ರಾಜ್ರವರು ಪ್ರತಿದಿನ ಪ್ರತಿಕ್ಷಣ ಜೀವನವನ್ನು ಬಹುಚೆನ್ನಾಗಿ ಜೀವಿಸಿದರು.

ಮನೆಯೆ ಮೊದಲ ಪಾಠಶಾಲೆ ಎಂಬಂತೆ ರಾಜ್ರವರ ಜೀವನದ ಕಲಿಕೆ ಅವರ ತಂದೆ ಪುಟ್ಟಸ್ವಾಮಯ್ಯನವರಿಂದಲೇ ಆಯಿತು. ರಂಗಕರ್ಮಿಯಾಗಿದ್ದ ಅವರು ಇತರ ಎಲ್ಲ ರಂಗಕರ್ಮಿಗಳಂತೆ ಬದುಕಲು ತತ್ವಾರ ಪಡುತ್ತಿದ್ದರೂ ಜೀವನಮೌಲ್ಯಗಳಿಗೆ ಗೌರವ ನೀಡುತ್ತಾ ಸಾತ್ವಿಕರಾಗಿ ಬಾಳುತ್ತಿದ್ದರು. ಅವರ ಈ ನಡೆ ಹಾಗೂ ಅವರೆಲ್ಲರಿಗೂ ಅನ್ನ ನೀಡುತ್ತಿದ್ದ ಗುಬ್ಬಿಕಂಪೆನಿಯ ಎಲ್ಲ ಸಹಕಲಾವಿದರ ಆದರ್ಶಮಯ ಜೀವನವು ರಾಜ್ರವರ ದೀರ್ಘಕಾಲೀನ ಶಿಷ್ಟ ಜೀವನಕ್ಕೆ ಉತ್ತಮ ಕಲಿಕಾ ಗ್ರಾಸ ಒದಗಿಸಿತೆನ್ನಬಹುದು.

ಆ ಒಂದು ಸಜ್ಜನಿಕೆಯ ಪರಿಸರದಲ್ಲೇ ಇವರು ಬದುಕಿನ ಮೂಲಮಂತ್ರಗಳಾದ "ಸತ್ಯವಂತರನ್ನು ದೇವರು ಕಾಯುತ್ತಾನೆ", "ಅನ್ನವಿಟ್ಟವರನ್ನು ದೇವರೆಂದು ತಿಳಿಯಬೇಕು", "ಉಪವಾಸವಿದ್ದರೂ ಕೆಟ್ಟಹಾದಿ ತುಳಿಯಬಾರದು", "ವಿನಾಕಾರಣ ಮತ್ತೊಬ್ಬರನ್ನು ತೆಗಳಬಾರದು" ಎನ್ನುವಂತಹ ತತ್ವಗಳನ್ನು ರೂಢಿಸಿಕೊಂಡು ಬಂದರು.

ಗುಬ್ಬಿ ಕಂಪೆನಿಯಲ್ಲಿ ಅವರು ತಮ್ಮ ವೃತ್ತಿ ಜೀವನ ಪ್ರಾರಂಭಿಸಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುವುದರ ಜೊತೆಜೊತೆಗೇ ಯಾರಾದರೂ ನಟರು ಗೈರುಹಾಜರಾದರೆ ಅವರ ಪಾತ್ರವನ್ನು ಎಳ್ಳಷ್ಟೂ ಚ್ಯುತಿ ಬಾರದಂತೆ ನಿಭಾಯಿಸುತ್ತಿದ್ದರು. ಅಂದಿನ ದಿನಗಳಲ್ಲಿ ದೇವುಡು ನರಸಿಂಹಶಾಸ್ತ್ರಿಗಳು ಗುಬ್ಬಿ ಕಂಪೆನಿಯ ಸಾಹಿತ್ಯ ನಿಯಂತ್ರಕರಾಗಿದ್ದರು. ಸಂಭಾಷಣೆಗಳಲ್ಲಿ ಸಿರಿತನ ತುಂಬುತ್ತಾ ಪ್ರತಿಯೊಂದು ಅಕ್ಷರವನ್ನೂ ತೀಡಿ ತಿಕ್ಕಿ ಪ್ರತಿಯೊಂದು ಪದವನ್ನೂ ಅಪಾರ್ಥಕ್ಕೆಡೆಗೊಡದಂತೆ ಸುಸ್ಪಷ್ಟವಾಗಿ ಬಳಸುವಂತೆ ಮಾಡಲು ಕಠಿಣವಾಗಿ ಪ್ರವರ್ತಿಸುತ್ತಿದ್ದರು. ಈ ನಿಯಮವನ್ನು ಮೀರಿದವರು ಯಾರೇ ಆದರೂ ಅವರು ಕಂಪೆನಿಯಿಂದ ಹೊರದಬ್ಬಲ್ಪಡುತ್ತಿದ್ದರು. ಅಂಥ ಕಠಿಣ ಪರೀಕ್ಷೆಯನ್ನು ರಾಜ್ಕುಮಾರ್ರವರು ಲೀಲಾಜಾಲವಾಗಿ ದಾಟಿದರು. ಆದರೆ ಈ ತೇರ್ಗಡೆಯ ಹಮ್ಮು ಬಿಮ್ಮು ಎಂದೂ ಅವರ ತಲೆಗೇರಲಿಲ್ಲ ಎಂಬುದೇ ಅವರ ಪರಿಪೂರ್ಣ ವ್ಯಕ್ತಿತ್ವಕ್ಕೊಂದು ಸಾಕ್ಷಿ.

ಅವರು ಅನೇಕ ಯಶಸ್ವೀ ಚಿತ್ರಗಳ ನಂತರವೂ ನಟನೆಯನ್ನು ಗಂಭೀರವಾಗಿ ಅಭ್ಯಾಸ ಮಾಡುತ್ತಿದ್ದರು. ತಮ್ಮ ನಟನಾ ಸಾಮರ್ಥ್ಯವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳುವುದರತ್ತಲೇ ಅವರ ಮನ ತುಡಿಯುತ್ತಿತ್ತು ಎನ್ನುವುದಕ್ಕೆ ಒಂದು ಉದಾಹರಣೆ ನೋಡಬಹುದು. "ಭೂದಾನ" ಸಿನಿಮಾದಲ್ಲಿ ಕುಮಾರ್ ತ್ರಯರ ಮಿಲನವಾದುದನ್ನು ನಾವು ನೋಡುತ್ತೇವೆ. ರಾಜ್ಕುಮಾರ್, ಉದಯಕುಮಾರ್, ಕಲ್ಯಾಣ್ಕುಮಾರ್ ರವರೇ ಆ ಮೂವರು. ಮೂವರ ನಟನಾ ಸಾಮರ್ಥ್ಯವನ್ನು ಒರೆಗೆ ಹಚ್ಚಿದ ಚಿತ್ರವದು. ಆದರೆ ಮೂರೂ ಪರಿಣಿತರಲ್ಲಿ ಹೆಚ್ಚು ಸಾಮರ್ಥ್ಯ ತೋರಿ ಮೇರು ಮಟ್ಟಕ್ಕೇರಿದವರು ರಾಜ್ಕುಮಾರ್ರವರು ಮಾತ್ರವೇ.

ವಾಸ್ತವವಾಗಿ ಅವರು ಚಲನಚಿತ್ರ ಪ್ರಪಂಚಕ್ಕೆ ಧುಮುಕುವ ಮೊದಮೊದಲಲ್ಲಿ "ಬೇಡರಕಣ್ಣಪ್ಪ"ದ ನಿರ್ಮಾತೃ ಎ ವಿ ಮೆಯ್ಯಪ್ಪ ಚೆಟ್ಟಿಯಾರರು ಅವರ ಉದ್ದ ಮೂಗಿನ ನಿಮಿತ್ತ ನಟನಾ ಅವಕಾಶ ನಿರಾಕರಿಸಿದ್ದರು. ಆದರೆ ನಾಟಕರಂಗದಲ್ಲಿ ಅವರ ಪ್ರತಿಭೆಯನ್ನು ನೋಡಿದ್ದವರ ಬಲವಂತಕ್ಕೆ ಮಣಿದು ಒಪ್ಪಿಕೊಂಡರು. ಆ ಮೊದಲ ಸಿನಿಮಾವೇ ಒಂದು ಅತ್ಯುತ್ತಮ ಸಿನಿಮಾ ಆದುದಲ್ಲದೆ ಅವರ ಸಾಧನೆಗೆ ಪ್ರಶಸ್ತಿಗಳು ಸಂದವು. ಅದುವರೆಗೆ ಮುತ್ತುರಾಜ ಆಗಿದ್ದ ಅವರು ಕನ್ನಡಿಗರ ಪ್ರೀತಿಯ ರಾಜ್ಕುಮಾರ್ ಆದರು. ಹೀಗೆ ಅವರು ಎಲ್ಲ ದಿಕ್ಕುಗಳ ಎಲ್ಲ ವರ್ಗಗಳ ಜನರನ್ನು ಆಕರ್ಷಿಸುವ ವ್ಯಕ್ತಿತ್ವ ರೂಪಿಸಿಕೊಂಡರು.

ರಾಜ್ಕುಮಾರ್ರವರು ಅಭಿನಯಿಸಿದ ತರಾಸುರವರ ಕಾದಂಬರಿ ಆಧರಿಸಿದ "ಚಂದವಳ್ಳಿಯ ತೋಟ" ಚಲನಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರಕಿದ ನಂತರದ ಕೆಲದಿನಗಳಲ್ಲೇ ಅವರ ನೂರು ಚಿತ್ರಗಳ ಸಾಧನೆಯನ್ನು ಗಮನಿಸಿದ ಕನ್ನಡದ ಜನತೆ ಅವರನ್ನು "ನಟಸಾರ್ವಭೌಮ" ಎಂಬ ಬಿರುದಿನಿಂದ ಗೌರವಿಸಿತು. ಹೀಗೆ ಅವರು ಅಭಿಮಾನಿಗಳ ಹೃದಯ ಸಾರ್ವಭೌಮನೂ ಆದರು. ಅಸಂಖ್ಯಾತರಿಗೆ ಪ್ರೀತಿಯ "ಅಣ್ಣಾವ್ರು" ಆದರು. ಮತ್ತೂ ಹಲವರು ಅವರನ್ನು ರಸಿಕರ ರಾಜ, ಕನ್ನಡ ಕಣ್ಮಣಿ ಎಂದು ಕರೆಯತೊಡಗಿದರು.

ನಟನಾ ಲೋಕದ ಸಾರ್ವಭೌಮನಾಗಿದ್ದರೂ ರಾಜ್ಕುಮಾರ್ರವರು ತಮ್ಮ ಸಹನಟರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. ಕಾಮನಬಿಲ್ಲು ಮತ್ತು ಭಕ್ತಪ್ರಹ್ಲಾದದಲ್ಲಿ ಅವರ ಜೊತೆ ಅಭಿನಯಿಸಿದ ಅನಂತ್ನಾಗ್ರವರು ಹೇಳುವಂತೆ ರಾಜ್ರವರ ವೃತ್ತಿಪರ ಸಾಧನೆಯನ್ನು ಯಾರೂ ಮುಟ್ಟಲಾಗದು. ಅನಂತ್ರವರು ನಾರದ ಪಾತ್ರಕ್ಕೆ ಆರೇಳುಸಾರಿ ಅಭ್ಯಾಸ ನಡೆಸಿದ್ದಾಗ ಹತ್ತಿರ ಬಂದ ರಾಜ್ರವರು 'ನಾನು ಕೆಲ ಸಲಹೆ ಸೂಚನೆ ನೀಡಬಹುದೇ ?' ಎಂದು ವಿನಮ್ರವಾಗಿ ಕೇಳಿದರಂತೆ. ಅವರ ಸಲಹೆಗಳು ನನ್ನ ಅಭಿನಯದ ಕ್ಲಿಷ್ಟತೆಯನ್ನು ಹಗುರಾಗಿಸಿದವು ಎಂದು ಸ್ಮರಿಸುತ್ತಾರೆ ಅನಂತ್ನಾಗ್.

ನಟಜೀವನದಲ್ಲೂ ನಿಜಜೀವನದಲ್ಲೂ ಏಕರೂಪದ ವ್ಯಕ್ತಿಯಾಗಿದದ ರಾಜ್ರವರಿಗೆ ಬಂದ ಪ್ರಶಸ್ತಿಗಳಿಗೂ ಕೊರತೆಯೇನಿಲ್ಲ. ೧೯೮೩ರಲ್ಲಿ ಅಂದಿನ ರಾಷ್ಟ್ರಪತಿ ಗ್ಯಾನಿ ಜೇಲ್ಸಿಂಗ್ರಿಂದ ಪದ್ಮಭೂಷಣ ಪ್ರಶಸ್ತಿ, ೧೯೮೮ರಲ್ಲಿ ಕರ್ನಾಟಕ ಸರ್ಕಾರದ "ಕರ್ನಾಟಕರತ್ನ" ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ, ಕೆಂಟಕಿ ಕರ್ನಲ್ ಪ್ರಶಸ್ತಿ, ಚಲನಚಿತ್ರರಂಗದ ಅತ್ಯುನ್ನತ "ದಾದಾಸಾಹೇಬ್ ಫಾಲ್ಕೆ" ಪ್ರಶಸ್ತಿ ಮುಂತಾದವುಗಳು ಮುಖ್ಯವಾದವು.

ಕನ್ನಡ ಹೊರತುಪಡಿಸಿ ಬೇರೆ ಭಾಷೆಯ ಚಿತ್ರಗಳಲ್ಲಿ ಅವರು ಅಭಿನಯಿಸಲಿಲ್ಲ ಮಾತ್ರವಲ್ಲ ಅವರ ಎಂದೂ ರಿಮೇಕ್ ಮರೆ ಹೊಗಲಿಲ್ಲ, ಅವರ ಚಿತ್ರಗಳಲ್ಲಿ ಅಶ್ಲೀಲತೆ ಸುಳಿಯಲಿಲ್ಲ ಹಾಗೂ ಅವರ ಯಾವ ಚಿತ್ರವೂ ಕೆಟ್ಟ ಸಂದೇಶ ಸಾರಲಿಲ್ಲ ಎಂಬುದು ಸಾರ್ವಕಾಲಿಕ ಸತ್ಯ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಸದಾ ಬದ್ದರಾಗಿರಬೇಕೆಂಬ ಆಶಯ ಅವರ ಎಲ್ಲ ಚಿತ್ರಗಳಲ್ಲಿ ಗಾಯನಗಳಲ್ಲಿ ಮಾತ್ರವಲ್ಲ ನಿಜಜೀವನದಲ್ಲೂ ನಿಚ್ಚಳವಾಗಿ ತೋರುತ್ತಿತ್ತು. ಗೋಕಾಕ್ ಚಳವಳಿಯಲ್ಲಿನ ಅವರ ಪಾತ್ರವನ್ನು ಯಾರೂ ಮರೆಯಲಾಗದು.

ಹಿರಿಯರನ್ನು ಗೌರವಿಸಬೇಕು, ಅಬಲರಿಗೆ ಸಹಾಯವಾಗಬೇಕು ಎಂಬುದು ಅವರ ಜೀವನದ ಧ್ಯೇಯವಾಗಿತ್ತು. ಕಾರ್ಗಿಲ್ ಯುದ್ಧ, ಪ್ರಕೃತಿ ವಿಕೋಪ, ಬರಪರಿಹಾರ ಮುಂತಾದವುಗಳ ನಿಧಿ ಸಂಗ್ರಹ ಕಾರ್ಯಕ್ಕೆ ತಾವೇ ಮುಂಚೂಣಿಯಾಗಿ ನಿಲ್ಲುತ್ತಿದ್ದರು. ಮೊದಲಿಗೆ ತಮ್ಮ ದೇಣಿಗೆಯನ್ನು ಶಂಖಜಾಗಟೆಗಳಿಲ್ಲದೆ ನೀಡುತ್ತಿದ್ದರಲ್ಲದೆ ನಿಧಿಸಂಗ್ರಹಕ್ಕಾಗಿ ಪಾದಯಾತ್ರೆ ತೆರಳುತ್ತಿದ್ದರು. ಸದ್ಭಾವನೆಯ ಸಹಾಯಾರ್ಥ ಪ್ರದರ್ಶನಗಳಿಗೆ ಎಷ್ಟೇ ದೂರವಾದರೂ ಸರಿ ಎಷ್ಟೇ ಕಷ್ಟವಾದರೂ ಸರಿ ಧಾವಿಸಿ ಹೋಗುತ್ತಿದ್ದರು. ಅದೇ ರೀತಿ ರಾಜ್ಕುಮಾರ್ರವರ ಆಗಮನಕ್ಕಾಗಿ ಜನರೂ ಸಹ ದೂರದೂರುಗಳಿಂದ ಧಾವಿಸಿ ಬರುತ್ತಿದ್ದರು.

ರಾಜ್ಕುಮಾರ್ರವರು ಹೆಂಗಸರನ್ನು ಅಮ್ಮ ಎಂದೋ ತಂಗಿ ಎಂದೋ ಪರಿಭಾವಿಸಿ ಮಾತನಾಡಿಸುತ್ತಿದ್ದರು. ತಮ್ಮ ಈ ಸಜ್ಜನಿಕೆಯ ಕಾರಣದಿಂದಲೇ ಅವರು ಕನ್ನಡನಾಡಿನ ಎಲ್ಲ ತರದ ಎಲ್ಲ ಸ್ತರದ ಜನರ ಮನೆಮನಗಳಲ್ಲಿ ಸ್ಥಾನ ಪಡೆದಿದ್ದರು. ಈ ಒಂದು ಕಾರಣದಿಂದಲೇ ಕಾಡುಗಳ್ಳ ವೀರಪ್ಪನ್ ರಾಜ್ರವರನ್ನು ಅಪಹರಿಸಿ ಒತ್ತೆಯಾಗಿರಿಸಿಕೊಂಡದ್ದು. ರಾಜ್ರವರ ಅಪಹರಣ ಕನ್ನಡ ನಾಡಿನಲ್ಲಿ ಮಾತ್ರವಲ್ಲದೆ ಜಗತ್ತನ್ನೇ ಸಂಚಲನಗೊಳಿಸಿತು ಎಂಬುದನ್ನು ಯಾರೂ ಮರೆಯಲಾಗದು.

ಸರಳ ಸಜ್ಜನಿಕೆಯ ರಾಜ್ಕುಮಾರ್ರವರು ರಾಜಕೀಯವೆಂಬ ಹೊಲಸು ಗುಂಡಿಗೆ ಇಳಿಯಲಿಲ್ಲ, ರಾಜ್ಯ ಕಟ್ಟಿ ಆಳಲಿಲ್ಲ ಆದರೂ ಜನಮಾನಸದಲ್ಲಿ ಸದಾ ವಿರಾಜಮಾನರಾಗಿದ್ದಾರೆ, ಅದೇ ಅವರ ಅತ್ಯಪೂರ್ವ ಸಾಧನೆ.