ಜನಮೆಚ್ಚುಗೆ ಪಡೆದ ಸಂಕಲನ ಕಾರ್ಯಕ್ರಮ

ಜನಮೆಚ್ಚುಗೆ ಪಡೆದ ಸಂಕಲನ ಕಾರ್ಯಕ್ರಮ

ಜನಮೆಚ್ಚುಗೆ ಪಡೆದ ಸಂಕಲನ ಕಾರ್ಯಕ್ರಮ ಕಳೆದ ಹದಿನೆಂಟು ವರ್ಷಗಳಿಂದ ಸಾಗರ ತಾಲೂಕಿನ ಬಚ್ಚಗಾರಿನ ಸಂಕಲನ ಸಂಸ್ಥೆಯು ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು, ಈ ಸಾಲಿನ ಮೊದಲ ಕಾರ್ಯಕ್ರಮ ಮಾಲಿಕೆಯು ಸಾಗರದ ವಿನೋಭಾ ಶಾಲಾ ಆವರಣದಲ್ಲಿ ಕಳೆದ ಮಾರ್ಚ್ 27ರಿಂದ 31ರವರೆಗೆ ಯಶಸ್ವಿಯಾಗಿ ನಡೆದು ನೂರಾರು ಸಹೃದಯೀ ಕಲಾಸಕ್ತರ ಮನ ಮೆಚ್ಚುಗೆಗೆ ಪಾತ್ರವಾಯಿತು. ಆಧ್ಯಾತ್ಮಿಕ, ಸಾಂಸ್ಕøತಿಕ, ಶೈಕ್ಷಣಿಕ, ಕಲಾತ್ಮಕ ಕಾರ್ಯಕ್ರಮಗಳನ್ನು ಯಾವುದೇ ನಿರ್ದಿಷ್ಟ ಅನುದಾನಗಳಿಲ್ಲದೇ, ನಿರಂತರವಾಗಿ ನಡೆಸುತ್ತಿರುವುದಲ್ಲದೇ ನಾಡಿನ ಹೆಸರಾಂತ ಕಲಾಕಾರರು, ಉಪನ್ಯಾಸಕರೂ ಬಂದು ತಮ್ಮ ಸೇವೆಯನ್ನು ಇಲ್ಲಿ ಸಲ್ಲಿಸಿರುವುದು ಸಂಕಲನದ ರೂವಾರಿಗಳಾದ ಶುಂಠಿ ಸತ್ಯನಾರಾಯಣ ಭಟ್ಟರ ಸಾಧನೆಯೆನ್ನಬಹುದಾಗಿದೆ. ಪ್ರತೀ ವರ್ಷವು ವಿದ್ಯಾವಾಚಸ್ಪತಿ ಡಾ|| ಬನ್ನಂಜೆ ಗೋವಿಂದಾಚಾರ್ಯರು ಈ ವೇದಿಕೆಯ ಮೂಲಕ ಆಧ್ಯಾತ್ಮಿಕ ವಿಷಯಗಳ ಕುರಿತು ಉಪನ್ಯಾಸ ಮಾಡುತ್ತಿದ್ದರು. ಆದರೆ ಅನಾರೋಗ್ಯದ ಕಾರಣದಿಂದ ಈಗ ಎರಡು ವರ್ಷಗಳಿಂದ ಅವರ ಕಾರ್ಯಕ್ರಮ ನಡೆಸಲಾಗುತ್ತಿಲ್ಲ. ಈ ಬಾರಿ ಮಾರ್ಚ್ 27 ಮತ್ತು 28ರಂದು ಶಿವಮೊಗ್ಗದ ಕಸ್ತೂರ್ಬಾ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ಜಿ.ಎಸ್.ನಟೇಶರಿಂದ ಮಂಕುತಿಮ್ಮನ ಕಗ್ಗದ ಕುರಿತಾಗಿ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ತಮ್ಮ ನಿರರ್ಗಳ ವಾಗ್ಝರಿಯಿಂದ ಶ್ರೋತೃಗಳ ಮನಸ್ಸನ್ನು ಆಕರ್ಷಿಸಿದ ಶ್ರೀಯುತರು ಸ್ವಯಂ ಸುಶ್ರಾವ್ಯವಾಗಿ ಪದ್ಯಗಳನ್ನು ವಾಚಿಸುತ್ತಾ ನಿರೂಪಿಸುತ್ತಿದ್ದ ಕ್ರಮ ಚೆನ್ನಾಗಿತ್ತು. ಕಗ್ಗದಲ್ಲಡಗಿದ ಜೀವನ ಸಂದೇಶಗಳನ್ನು ಮಾರ್ಮಿಕವಾಗಿ ಉದಾಹರಣೆಗಳ ಮೂಲಕ ವಿವರಿಸಿದರು. ಮಾರ್ಚ್29ನೇ ಶನಿವಾರ ಸಂಜೆ 7ರಿಂದ ಗಮಕ ಸಂವಾದವೆಂಬ ವಿನೂತನ ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯ ಹೆಸರಾಂತ ಕಲಾವಿದರು ನಡೆಸಿಕೊಟ್ಟರು. ಕುಮಾರವ್ಯಾಸ ಭಾರತದ ಉದ್ಯೋಗಪರ್ವದಲ್ಲಿನ ಕರ್ಣಭೇದನ ಕಥಾಭಾಗವನ್ನು ನಾಲ್ಕುಜನ ಗಮಕಿಗಳು ಬೇರೆ ಬೇರೆ ಪಾತ್ರಗಳ ಪದ್ಯಗಳನ್ನು ವಾಚಿಸಿದರು. ಜೊತೆಗೂಡಿದ ವೇಣುವಾದನದಿಂದ ಕೇಳುಗರಿಗೆ ಹೊಸ ಅನುಭವವನ್ನು ನೀಡಿದ ಈ ಕಾರ್ಯಕ್ರಮವನ್ನು ಸಿದ್ಧಗೊಳಿಸಿದವರು ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕರಾದ ಶ್ರೀ ಹೆಚ್.ಶ್ರೀಧರ ಹಂದೆಯವರು. ಇವರೊಂದಿಗೆÀ ಮಗ ಶ್ರೀ ಸುಜಯೀಂದ್ರ ಹಂದೆ, ಶ್ರೀ ಚಂದ್ರಶೇಖರ ಕೆದ್ಲಾಯ ಮತ್ತು ಸ್ಥಳಿಯ ಗಮಕಿಗಳಾದ ಶ್ರೀಮತಿ ಸಮುದ್ಯತಾ ವೆಂಕಟರಾಮು ಶೆಡ್ತೀಕೆರೆ ಭಾಗವಹಿಸಿ ಗಮಕವಾಚನ ಮಾಡಿದರು. ಶ್ರೀ ನಾಗೇಂದ್ರ ಐತಾಳ ಕೋಟ ಕೊಳಲನ್ನು ನುಡಿಸಿದರು. ಕಥಾಭಾಗದ ಭಾವನೆಗಳಿಗೆ ತಕ್ಕಂತೆ ರಾಗ, ಭಾವಗಳನ್ನು ಬಳಸಿದ ವಿಶಿಷ್ಟ ಕ್ರಮದಿಂದ ಕಾರ್ಯಕ್ರಮವು ಮೆಚ್ಚುಗೆಗೆ ಪಾತ್ರವಾಯಿತು. ಮಾರ್ಚ್30ರಂದು ಅಷ್ಟಾವಧಾನ. ಉಡುಪಿಯ ಸಂಸ್ಕøತ ಕಾಲೇಜಿನ ಉಪನ್ಯಾಸಕರಾದ ವಿ|| ಮಹೇಶ ಭಟ್ ಹಾರ್ಯಾಡಿ ಇವರು ಅವಧಾನಿಗಳಾಗಿ ಎಂಟು ಮಂದಿ ಪ್ರಚ್ಛಕರು ನೀಡಿದ ಸವಾಲುಗಳಿಗೆ ಉತ್ತರ ನೀಡಿದರು. ನಿಷೇಧಾಕ್ಷರಿಯಾಗಿ ಶ್ರೀ ಸದಾನಂದ ಶರ್ಮ ಪ್ರತಿ ಅಕ್ಷರಗಳಿಗೂ ವ್ಯಂಜನವೊಂದನ್ನು ನಿಷೇಧ ಹೇಳುತ್ತಿದ್ದರೂ, ಅವಧಾನಿಗಳು ಗಣೇಶಸ್ತುತಿಯ ಪದ್ಯವನ್ನು ಕಂದಪದ್ಯದ ಛಂದಸ್ಸಿನಲ್ಲಿ ರಚಿಸಿದರು. ಸಮಸ್ಯಾ ವಿಭಾಗದಲ್ಲಿ ಹಿರಿಯ ಕವಿ ಶ್ರೀ ಅಂಬಾತನಯ ಮುದ್ರಾಡಿಯವರು ಒಡ್ಡಿದ ಸವಾಲನ್ನು ವಾರ್ಧಕ ಷಟ್ಪದಿಯೆಂದು ಗುರ್ತಿಸಿ ಅದಕ್ಕೆ ಪೂರಕವಾಗಿ ಸಾಲುಗಳನ್ನು ಸೇರಿಸಿ ಅರ್ಥವತ್ತಾದ ಪದ್ಯವನ್ನು ಮಾಡಿದರು. ದತ್ತಪದಿಯಾಗಿ ಶ್ರೀ ಸಿ.ಎಸ್.ಚಂದ್ರಶೇಖರ್‍ರವರು ಜಮಾಲ, ರೆಹಮಾನ್, ಹೈದರ್, ಖಲೀಲ ಪದಗಳನ್ನು ಬಳಸಿ ರಾಮಸ್ತುತಿಯನ್ನು ಮಾಡಿರೆಂದು ಕೊಟ್ಟ ಸವಾಲನ್ನು ಸಲೀಸಾಗಿ ಕಂದಪದ್ಯದಲ್ಲಿ ಬಿಡಿಸಿದರು. ನಿಟ್ಟೂರಿನ ಡಾ|| ಶಾಂತಾರಾಮ ಪ್ರಭುಗಳು ನ್ಯಸ್ತಾಕ್ಷರಿ ವಿಭಾಗದಲ್ಲಿ ಕೊಟ್ಟ ಅಕ್ಷರಗಳನ್ನು ಸುಲಭವಾಗಿಯೇ ಅವಧಾನಿಗಳು ಬಿಡಿಸಿದರು. ಶ್ರೀ ಐ.ಡಿ.ಗಣಪತಿಯವರು ಆಶು ಕವಿತ್ವದಲ್ಲಿ ಪ್ರತೀ ಸುತ್ತಿನಲ್ಲೂ ಕೇಳುತ್ತಿದ್ದ ಕೋರಿಕೆಯನ್ನು ಅದೇಕ್ಷಣದಲ್ಲಿ ಬಿಡಿಸುತ್ತಿದ್ದರು. ಖ್ಯಾತ ಗಮಕಿ ಶ್ರೀ ನರಹರಿ ಶರ್ಮಾ ಕೆರೆಕೊಪ್ಪ ವಾಚಿಸುತ್ತಿದ್ದ ಯಾವುದೇ ಪದ್ಯವನ್ನು, ಅದರ ಕಾವ್ಯ, ಸಂದರ್ಭ, ಅಲಂಕಾರಗಳನ್ನು ಕೂಡ ಹೇಳಿ ಸಭೆಯನ್ನು ದಂಗುಪಡಿಸಿದರು. ಈ ನಡುವೆ ವಿ|| ಗಜಾನನ ಭಟ್ಟರವರು ನೀಡಿದ 196 ಎಂಬ ಸಂಖ್ಯೆಯನ್ನು ಐದೈದರ ಸಂಖ್ಯಾಬಂಧದಲ್ಲಿ ಹೇಗೆ ಕೂಡಿದರೂ 196 ಬರುವಂತೆ ಬಿಡಿಸಿದರು. ಇವೆಲ್ಲವುಗಳ ಕಾರ್ಯವು ಭರದಿಂದ ಸಾಗುತ್ತಿರುವಾಗ ಅಪ್ರಸ್ತುತ ಪ್ರಸಂಗಿಯಾಗಿ ಕುಳಿತಿದ್ದ ಶ್ರೀ ಜಯರಾಮ ಭಟ್ ಗುಂಜಗೋಡು ಅನಗತ್ಯವಾದ, ಹಾಸ್ಯಾಸ್ಪದವೆನಿಸುವ ಪ್ರಶ್ನೆಗಳಿಂದ ಅವಧಾನಿಯ ಏಕಾಗ್ರತೆಯನ್ನು ಕೆಡಿಸುತ್ತಿದ್ದರು. ಆದರೂ ಹಸನ್ಮುಖಿಯಾಗಿದ್ದ ವಿ|| ಮಹೇಶ ಭಟ್ಟರು ಉದ್ವೇಗವಿಲ್ಲದೆ ಅವರ ಪ್ರಶ್ನೆಗೂ ಪ್ರತಿಕ್ರಿಯಿಸಿ ಕಾವ್ಯಗಳನ್ನು ರಚಿಸಿ ವಾಚಿಸಿ ಯಶಸ್ವಿಯಾದರು. ಮಾರ್ಚ್31ರ ಶ್ರೀಜಯನಾಮ ಸಂವತ್ಸರದ ಯುಗಾದಿಯಂದು ಏರ್ಪಡಿಸಿದ್ದ ಕಾವ್ಯ ಚಿತ್ರ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ ಡಾ|| ಬಿ.ಕೆ.ಎಸ್.ವರ್ಮಾರವರು ಪ್ರಚ್ಚಕರು ಕೇಳಿದ ವಿಷಯದ ಚಿತ್ರವನ್ನು ಕ್ಷಣಮಾತ್ರದಲ್ಲಿ ಬಿಡಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಪ್ರಚ್ಛಕರಾಗಿ ಅಂಬಾತನಯ ಮುದ್ರಾಡಿ ಮತ್ತು ಸದಾನಂದ ಶರ್ಮಾರವರುಗಳು ವಿಭಿನ್ನ ಸಂಗತಿಗಳಿಗೆ ಸಂಬಂಧಿಸಿದ ಕೋರಿಕೆಗಳನ್ನು ಮುಂದಿಟ್ಟಾಗ ಅವಧಾನಿಗಳಾದ ವಿ|| ಮಹೇಶ ಭಟ್ಟರವರು ವಿಷಯದ ಮೇಲೆ ಕವಿತೆಯನ್ನು ರಚಿಸಿದರೆ ಡಾ|| ಬಿ.ಕೆ.ಎಸ್.ವರ್ಮಾ ಆಕರ್ಷಕ ಚಿತ್ರವನ್ನು ಬಿಡಿಸುತ್ತಿದ್ದರು. ಈ ಕ್ರಿಯೆ ನಡೆಯುವಾಗ ಪಂ|| ಪ್ರಕಾಶ ಹೆಗಡೆ ಕಲ್ಲಾರೆಮನೆ ಕೊಳಲು ಮತ್ತು ಪಂ|| ಲಕ್ಷ್ಮೀಶ ಕಲ್ಗುಂಡಿಕೊಪ್ಪ ತಬಲಗಳ ಮೂಲಕ ಜನರನ್ನು ನಾದದಿಂದ ಮೈಮರೆಯುವಂತೆ ಮೋಡಿ ಮಾಡಿದರು. ನೃತ್ಯ ಗಣೇಶ, ಮಳೆಗಾಲದ ದಿನ, ಕುಂತಿ ತನ್ನ ಮಗನನ್ನು ನೀರಿಗೆ ಬಿಡುತ್ತಿರುವುದು, ಕ್ರೌಂಚವಧಾ ಪ್ರಕರಣ, ಭವಿಷ್ಯದ ಭಾರತ, ಮಲೆನಾಡಿನ ಹಸಿರು, ಪಕೃತಿ ಪುರುಷರ ಮಿಲನ, ಮಾವಿನ ಗೊಂಚಲು ಹಿಡಿದು ಬರುತ್ತಿರುವ ಗಣೇಶ, ನಂದಗೋಕುಲದ ಕೃಷ್ಣ ಮುಂತಾದ ಚಿತ್ರಗಳನ್ನು ಕೇವಲ ಗೆರೆಗಳಿಂದ, ವರ್ಣಗಳಿಂದ ರಚಿಸಿ ಸಹೃದಯೀ ಕಲಾಸಕತರ ಮನಸೂರೆಗೊಂಡರು. ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗಡೆ ಮತ್ತು ಗೋಪಾಲಕೃಷ್ಣ ರಾವ್ ಚಿಪ್ಲಿ ಕೊನೆಯಲ್ಲಿ ಕಲಾವಿದರನ್ನು ಶಾಲುಹೊದೆಸಿ ಸಂಮಾನಿಸಿದರು. ಐದು ದಿನಗಳ ಕಾರ್ಯಕ್ರಮವನ್ನು ಸದಾನಂದ ಶರ್ಮಾ ನಿರೂಪಿಸಿದರು. ನಿತ್ಯವೂ ನೂರಾರು ಪ್ರೇಕ್ಷಕರು ಶ್ರದ್ಧೆಯಿಂದ ಕಾರ್ಯಕ್ರಮವನ್ನು ವೀಕ್ಷಿಸಿ ಆನಂದಿಸಿದರು. “ದಿನದಿಂದ ದಿನಕ್ಕೆ ಬದುಕಿನಲ್ಲಿ ವ್ಯವಕಲನವೇ ಹಿರಿದೆನಿಸುತ್ತಿರುವ ಕಾಲದಲ್ಲಿ ಸಂಕಲನದ ಮಹತ್ವ ತಿಳಿದವರೇ ಬಲ್ಲರು” ಎಂಬ ನಿರೂಪಕರ ಮಾತು ನಿಜವೆನಿಸುವಂತೆ ಕಾರ್ಯಕ್ರಮ ವಿಶಿಷ್ಟವಾಗಿತ್ತು.

Comments