ಜನರಿಗೆ ಮರಳಿ ಕೊಡುವ ಸಮಯ ಬಂದಿದೆ...

ಜನರಿಗೆ ಮರಳಿ ಕೊಡುವ ಸಮಯ ಬಂದಿದೆ...

ಜನರನ್ನು ಉಪಯೋಗಿಸಿಕೊಂಡು ಎಲ್ಲವನ್ನೂ ಪಡೆದಿರಿ. ಈಗ ಕೊಡುವ ಸಮಯ. ಮತದಾರರನ್ನು ಉಪಯೋಗಿಸಿಕೊಂಡು ಎಂಎಲ್ಎ, ಮಂತ್ರಿಗಳಾದಿರಿ, ದಯವಿಟ್ಟು ಜನರ ಕಷ್ಟಕ್ಕೆ ಹೃದಯಪೂರ್ವಕವಾಗಿ ಸಹಾಯ ಮಾಡಿ. ಸ್ಟಂಟ್ ಮಾಡಬೇಡಿ.

ಭಕ್ತಾದಿಗಳನ್ನು ಉಪಯೋಗಿಸಿಕೊಂಡು ಮಠಾಧೀಶರಾದಿರಿ, ದಯವಿಟ್ಟು, ಹಣ, ಜಾತಿ, ವೈಭೋಗದ ಹಿಂದೆ ಹೋಗದೆ ತ್ಯಾಗ ಮನೋಭಾವದಿಂದ,‌ಜನರ  ಸೇವೆ ಮಾಡಿ, ರಾಜಕೀಯ ಮಾಡಬೇಡಿ. 

ಓದುಗನನ್ನು ಉಪಯೋಗಿಸಿಕೊಂಡು ದೊಡ್ಡ ಸಾಹಿತಿ, ಲೇಖಕರಾದಿರಿ,‌ ಬಡತನ, ಶೊಷಣೆ, ಅಜ್ಞಾನವನ್ನು ವರ್ಣಿಸಿದಿರಿ, ದಯವಿಟ್ಟು  ಈಗ ಅವರಿಗಾಗಿ  ನಿಜದ ಧ್ವನಿ ಎತ್ತಿ, ಸ್ವಾರ್ಥಿಗಳಾಗಬೇಡಿ.

ಅಭಿಮಾನಿಗಳನ್ನು ಉಪಯೋಗಿಸಿಕೊಂಡು ಪ್ರಖ್ಯಾತ, ಶ್ರೀಮಂತ ನಟರಾದಿರಿ, ದಯವಿಟ್ಟು ಅವರ ಕಷ್ಟ ಕಾರ್ಪಣ್ಯಗಳಿಗೆ ನೆರವಾಗಿ, ಕಪಟ ನಾಟಕ ಮಾಡಬೇಡಿ.

ಕೃಷಿ ಭೂಮಿಯನ್ನು ಉಪಯೋಗಿಸಿಕೊಂಡು ಕೋಟ್ಯಾಧಿಪತಿ ಮಾರಾಟಗಾರರಾದಿರಿ. ದಯವಿಟ್ಟು ಈಗ ಅನ್ನಕ್ಕಾಗಿ ಪರಿತಪ್ಪಿಸುತ್ತಿರುವ ಮಕ್ಕಳಿಗೆ ಆಶ್ರಯದಾತರಾಗಿ, ದುರಹಂಕಾರಿಗಳಾಗಬೇಡಿ.

ವೀಕ್ಷಕರನ್ನು ಉಪಯೋಗಿಸಿಕೊಂಡು ಟಿಆರ್ಪಿ ಹೆಚ್ಚಿಸಿಕೊಂಡು ಅಧಿಕ ಜಾಹೀರಾತು ಗಳಿಸಿ ದುಡ್ಡು ಮಾಡಿಕೊಂಡಿರಿ. ದಯವಿಟ್ಟು ವಿಕೃತ ಕಾರ್ಯಕ್ರಮ ಮಾಡದೆ ಒಳ್ಳೆಯ ವಾಸ್ತವಿಕ ಸುದ್ದಿ ಪ್ರಸಾರ ಮಾಡಿ.

ಕಾರ್ಮಿಕರ ಶ್ರಮ ಉಪಯೋಗಿಸಿಕೊಂಡು ಬೃಹತ್ ಉದ್ಯಮಿಗಳಾದಿರಿ. ದಯವಿಟ್ಟು ಮದುವೆ, ಪಾರ್ಟಿಯಲ್ಲಿ ಶ್ರೀಮಂತಿಕೆ ಪ್ರದರ್ಶಿಸದೆ ಇಲ್ಲದವರಿಗೆ ದಾನಮಾಡಿ.ಕ್ರೂರಿಗಳಾಗಬೇಡಿ.

ಸಾರ್ವಜನಿಕರ ತೆರಿಗೆ ಹಣದಿಂದಲೇ ಸಂಬಳ ಪಡೆಯುವ ಅಧಿಕಾರಿಗಳಾದಿರಿ. ದಯವಿಟ್ಟು ಅವರಿಗಾಗಿ ಬದುಕನ್ನು ಮುಡುಪಿಡಿ. ಜನರನ್ನು ಗೋಳಾಡಿಸುವ ಭ್ರಷ್ಟರಾಗಬೇಡಿ.

ರೈತರು, ಕಾರ್ಮಿಕರು, ಮಹಿಳೆಯರು, ದಲಿತರನ್ನು, ಉಪಯೋಗಿಸಿಕೊಂಡು ನಾಯಕರಾದಿರಿ. ದಯವಿಟ್ಟು,

ಈಗ ಅವರ ಕಣ್ಣೀರೊರೆಸುವ ಕೈಗಳಾಗಿ, ಅಮಾನವೀಯರಾಗಬೇಡಿ. ಕೋಟ್ಯಾಂತರ ಜನ ಒಟ್ಟಿಗೇ ಬದಲಾಗುವುದು ಕಷ್ಟಸಾಧ್ಯ. ಆದರೆ...

ನಾಯಕರುಗಳು ಬದಲಾದರೆ, ಈ ಸಮಾಜದ ಬದಲಾವಣೆ ಸುಲಭವಾಗುತ್ತದೆ. ಜನರ ಆಕ್ರೋಶ, ಅಸಮಾಧಾನ ಭುಗಿಲೇಳುವ ಮೊದಲು ಎಚ್ಚೆತ್ತುಕೊಳ್ಳಿ, ಸರಳ, ಸುಂದರ, ಸಮ ಸಮಾಜ ನಮ್ಮದಾಗಿಸಿಕೊಳ್ಳೋಣ.

***

ಮೌನದ ವೈರುದ್ಯ ಬಲೆಯೊಳಗೊಂದು ಮೌನ...

 

ಮೌನವೆಂಬುದೊಂದು ಧ್ಯಾನ,

ಮೌನವೆಂಬುದೊಂದು ನರಕ.

 

ಮೌನ ಒಂದು ಅಗಾಧ ಶಕ್ತಿ,

ಮೌನವೆಂಬುದೊಂದು ದೌರ್ಬಲ್ಯ.

 

ಮೌನ ನಿನ್ನೊಳಗಿನ ಆತ್ಮ,

ಮೌನ ನಿನ್ನ ಸಾವು ಕೂಡ.

 

ಮೌನಕ್ಕಿದೆ ಸಾವಿರ ಭಾಷೆಗಳ ಅರ್ಥ,

ಮೌನ ಒಂದು ನಿರ್ಲಿಪ್ತ ಭಾವ.

 

ಮೌನವೊಂದು ದಿವ್ಯಶಕ್ತಿ,

ಮೌನವೊಂದು ಅಸಹಾಯಕ ಸ್ಥಿತಿ.

 

ಮೌನ ಸಹಿಷ್ಣುತೆ,

ಮೌನ ಅಸಹನೀಯತೆ.

 

ಮೌನ ಜೀವನೋತ್ಸಾಹದ ಕುರುಹು,

ಮೌನ ಅವಸಾನದ ಮುನ್ಸೂಚನೆ.

 

ಮೌನಿಯ ಮನಸ್ಸು ಕರುಣಾಮಯಿ,

ಮೌನಿಯ ಕಣ್ಣುಗಳು ಕ್ರೌರ್ಯದ ಪ್ರತಿಫಲನ.

 

ಮೌನಿಗೆ ಶತೃಗಳೇ ಇಲ್ಲ,

ಮೌನಿಗೆ ಮಿತ್ರರೂ ಇಲ್ಲ.

 

ಮೌನಕ್ಕೂ ಒಂದು ಭಾಷೆ ಇದೆ,

ಮೌನವು ನಿರ್ಜೀವ ನಿರ್ವಿಕಾರ  ಮನಸ್ಥಿತಿ.

 

ಮೌನದ ನಗು ತುಟಿ ಅಂಚಿನ ಪಳಪಳ ಹೊಳೆಯುವ ಆಕರ್ಷಣೆ,

ಮೌನದ ಅಳು ಅಂತರಾಳದ ಮೂಕ ರೋದನೆ.

 

ಮೌನಿ ಒಬ್ಬ ದಾರ್ಶನಿಕ,

ಮೌನಿ ಒಬ್ಬ ಹುಚ್ಚ.

 

ಮೌನ ಕುತೂಹಲ ಕೆರಳಿಸುತ್ತದೆ,

ಮೌನ ನಿರ್ಲಕ್ಷ್ಯಕ್ಕೊಳಗಾಗುತ್ತದೆ.

 

ಮೌನ ಪ್ರಬುದ್ದತೆಯ ಲಕ್ಷಣ,

ಮೌನ ದಡ್ಡತನದ ಸಂಕೇತ.

 

ಮೌನ ಪ್ರೀತಿಯನ್ನು ಗೆಲ್ಲುತ್ತದೆ,

ಮೌನ ಪ್ರೀತಿಯನ್ನು ಕೊಲ್ಲುತ್ತದೆ.

 

ಮೌನದಿಂದ ಅನೇಕ ಸಮಸ್ಯೆಗಳು ತನ್ನಿಂದ ತಾನೇ ಬಗೆಹರಿಯುತ್ತದೆ,

ಮೌನದಿಂದ ಇಲ್ಲದ ಸಮಸ್ಯೆಗಳು ಸೃಷ್ಟಿಯಾಗುತ್ತವೆ.

ನಾನೊಬ್ಬ ಮೌನಿ..

  • 283 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಹೋಬಳಿಯಿಂದ ಸುಮಾರು ‌12 ( ಒಟ್ಟು ಪ್ರಯಾಣ 20 ಕಿಲೋಮೀಟರ್ ) ಕಿಲೋಮೀಟರ್ ದೂರದ ಪುತ್ತೂರು ತಾಲ್ಲೂಕು ತಲುಪಿತು.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ