ಜನರು ಮಾತ್ರ ನತದೃಷ್ಟ ಕುರಿಗಳು…!

ಜನರು ಮಾತ್ರ ನತದೃಷ್ಟ ಕುರಿಗಳು…!

ಇಷ್ಟೊಂದು ತೀವ್ರ ಸೆಣಸಾಟ ಮತ್ತು ಮಾಧ್ಯಮಗಳ ಅತಿರೇಕದ ಪ್ರಚಾರದ ಅವಶ್ಯಕತೆ ಚುನಾವಣೆಗೆ ಇದೆಯೇ? ನಮ್ಮ ನಡುವೆಯೇ ಭಾರಿ ಕಂದಕ ಏರ್ಪಡಿಸುವಷ್ಟು ಕುತೂಹಲ, ಸ್ಪರ್ಧೆ ಅನಿವಾರ್ಯವೇ? ಚುನಾವಣೆಯ ಹೊಸ್ತಿಲಿನಲ್ಲಿ ಯಾಕಿಷ್ಟು ಅಸಹ್ಯಕರ ಪ್ರದರ್ಶನ. ರಾಜ್ಯವೇನು ನಿಮ್ಮ ಸ್ವಂತ ಆಸ್ತಿಯೇ? ಒಂದು ವೇಳೆ ನೀವು ಚುನಾವಣೆ ಗೆದ್ದು ಅಧಿಕಾರ ಹಿಡಿದ ತಕ್ಷಣ ರಾಜ್ಯವೇನು ನಿಮ್ಮ ಹೆಸರಿಗೆ ವರ್ಗಾವಣೆ ಆಗುತ್ತದೆಯೇ? ಯಾರೇ ಗೆದ್ದರೂ ಸಂವಿಧಾನಾತ್ಮಕವಾಗಿ ಅಧಿಕಾರ ನಡೆಸಬೇಕಲ್ಲವೇ? ಒಂದು ವೇಳೆ ಸೋತರು ಮತ್ತೆ ಬದುಕು ಮುಂದುವರಿಯಲೇ ಬೇಕಲ್ಲವೇ ಮತ್ತು ಯಾರಾದರು ಒಬ್ಬರು ಸೋಲಲೇ ಬೇಕಲ್ಲವೇ, ಇಷ್ಟು ಮಾತ್ರದ ಸಾಮಾನ್ಯ ಜ್ಞಾನವೂ ಇಲ್ಲದಾಯಿತೇ? 

ಸ್ಪರ್ಧೆ ಇರಬೇಕು ನಿಜ. ಆದರೆ ಇಷ್ಟೊಂದು ದ್ವೇಷ ಅಸೂಯೆ ಅಸಭ್ಯ ಅಸಹ್ಯ ಹಿಂಸೆ ಬೇಕೆ, ಬದುಕು ಎಷ್ಟೊಂದು ವಿಶಾಲ ಎಂಬುದು ನಿಮಗೆ ಅರ್ಥವಾಗಿಲ್ಲವೇ, ಜೀವನ ಶಾಶ್ವತವೇ? ಯಾಕೆ ಯುದ್ದವನ್ನೇ ಮಾಡುತ್ತೀರಿ ಅಧಿಕಾರಕ್ಕಾಗಿ...

ಹಣ ಮಾಡಲು, 

ಸೀಟು ಪಡೆಯಲು,

ಚುನಾವಣೆ ಗೆಲ್ಲಲು,

ಮಂತ್ರಿಯಾಗಲು,

ಒಳ್ಳೆಯ ಖಾತೆ ಪಡೆಯಲು...

ಹೊಡೆದಾಡುತ್ತೀರಿ,

ಬಡಿದಾಡುತ್ತೀರಿ,

ಗುದ್ದಾಡುತ್ತೀರಿ,

ಕಾಲು ಎಳೆಯುತ್ತೀರಿ,

ತಲೆ ಹಿಡಿಯುತ್ತೀರಿ,

ನಾವು ಸನ್ಯಾಸಿಗಳಲ್ಲ, ನಮಗೂ ಅಧಿಕಾರದ ಮೋಹವಿದೆ  ಎಂದು ಬಹಿರಂಗವಾಗಿ ಪದೇ ಪದೇ ಹೇಳುತ್ತೀರಿ. ಹೌದು, ನಮಗೂ ತಿಳಿದಿದೆ, ನೀವು ಸನ್ಯಾಸಿಗಳೂ ಅಲ್ಲ, ಸೇವಕರೂ ಅಲ್ಲ, ಅಸಲಿಗೆ ಮನುಷ್ಯರೇ ಅಲ್ಲ… " ಭ್ರಷ್ಟ ರಾಕ್ಷಸರು” ಜನರು ಮಾತ್ರ ನತದೃಷ್ಟ ಕುರಿಗಳು…!

ಪ್ರಜಾಪ್ರಭುತ್ವ ಎಂಬುದು ಅಂಕಿ ಸಂಖ್ಯೆಗಳ ಆಟವಂತೆ, ಮಕ್ಕಳಿಗೆ ಪರೀಕ್ಷೆಯ ಭಯ, ರೋಗಿಗಳಿಗೆ ಚಳಿಯ ಆತಂಕ, ನಿರೋದ್ಯೋಗಿಗಳಿಗೆ ಖಿನ್ನತೆ, ರೈತರಿಗೆ ಬೆಲೆಯ ನೋವು, ಮಹಿಳೆಯರಿಗೆ ಸುರಕ್ಷತೆಯ ಚಿಂತೆ, ಹಸಿದವರಿಗೆ ಊಟದ ಯೋಚನೆ...

ನಿಮಗೆ ಮಾತ್ರ ಇರುವ ಅಧಿಕಾರಕ್ಕಿಂತ ಮತ್ತಷ್ಟು ಅಧಿಕಾರಬೇಕೆಂಬ ದುರಾಸೆ. ನೋಡಿ ಅಲ್ಲಿ.. ನಿಮ್ಮನ್ನು ನಂಬಿ ನಮ್ಮ ಪ್ರತಿನಿಧಿಯಾಗಿ  ಚುನಾಯಿಸಿದ ಪಾಪಕ್ಕೆ ಜನ ತತ್ತರಿಸಿದ್ದಾರೆ. ಬೆಲೆ ಏರಿಕೆ, ಅನಾರೋಗ್ಯ, ಅಪಘಾತ, ಅಜ್ಞಾನ, ಬಡತನ, ನಿರುದ್ಯೋಗ ಎಷ್ಟೊಂದು ಇದೆ ಗೊತ್ತೆ? ಎಷ್ಟೋ ಜನ ಕನಿಷ್ಠ ತಾವು ಬಯಸಿದ ಊಟ ಬಟ್ಟೆ ವಾಸ ಕೆಲಸವನ್ನು ಸಹ ಮಾಡಲು ಸಾಧ್ಯವಾಗದ ಲಕ್ಷಾಂತರ ಜನರಿದ್ದಾರೆ. ಇನ್ನೂ ರಾಜಧಾನಿ ಬೆಂಗಳೂರನ್ನೂ ನೋಡದ ಅಪಾರ ಜನರು ನಮ್ಮ ನಡುವೆಯೇ ಇದ್ದಾರೆ. ಪೈವ್ ಸ್ಟಾರ್ ಹೋಟೆಲ್ ಎಂದರೆ ಸ್ವರ್ಗವೇ ಇರಬೇಕೇನೋ ಎಂದು ಭಾವಿಸಿರುವ ಅಸಂಖ್ಯಾತ ಜನರಿದ್ದಾರೆ. ವಿಮಾನ ಪ್ರಯಾಣ, ವಿದೇಶ ಪ್ರವಾಸ ಎಂದರೆ ನಮ್ಮ ಈ ಜನ್ಮದಲ್ಲಿ ಸಾಧ್ಯವಿಲ್ಲದ ಆಸೆಗಳು ಎಂದೇ ತಿಳಿದಿರುವ ಬಹುಸಂಖ್ಯೆಯ ಜನರಿದ್ದಾರೆ.

ಆದರೆ, ಶಾಸಕರಾಗಿ ಅಪಾರ ಅಧಿಕಾರ ಅಂತಸ್ತು ಹಣ ಸೌಕರ್ಯಗಳನ್ನು ಪಡೆದೂ, ಜನರ ಸೇವೆ ಮಾಡುವುದನ್ನು ಬಿಟ್ಟು ಅಧಿಕಾರಕ್ಕಾಗಿ ಹೀಗೆ ಬಹಿರಂಗವಾಗಿ ವ್ಯಾಪಾರಕ್ಕೆ ಇಳಿದಿದ್ದೀರಲ್ಲಾ, ಸ್ವಲ್ಪವಾದರೂ ಆತ್ಮಸಾಕ್ಷಿ ಉಳಿದಿದೆಯೇ ? ನಿಮ್ಮನ್ನು ಹುಟ್ಟಿಸಿದ ತಂದೆ ತಾಯಿಗೆ, ನೀವೇ ಹುಟ್ಟಿಸಿದ ಮಕ್ಕಳಿಗೆ ನಿಮ್ಮ ಸಂದೇಶವಾದರೂ ಏನು ?  ಅರೆ, ಮಕ್ಕಳ ಫೀಸಿಗೆ, ಆಸ್ಪತ್ರೆಯ ಖರ್ಚಿಗೆ, ಮದುವೆಯ ಅನಿವಾರ್ಯತೆಗೆ, ಹಬ್ಬದ ಸಂಭ್ರಮಕ್ಕೂ ಹಣ ಹೊಂದಿಸಲು ಸಾಧ್ಯವಾಗದೆ ಕೋಟ್ಯಂತರ ಜನರಿರುವಾಗ ಎಂಎಲ್ಎ ಯಂತ ಅತ್ಯುನ್ನತ ಸ್ಥಾನದಲ್ಲಿರುವ ನೀವು  ವಾಮ ಮಾರ್ಗದಿಂದ ಇನ್ನೂ ಹೆಚ್ಚಿನ ಅಧಿಕಾರಕ್ಕಾಗಿ ದುರಾಸೆ ಪಡುವುದನ್ನು ಏನೆಂದು ವರ್ಣಿಸುವುದು?

ಮನಗಳಲ್ಲಿ,

ಮನೆಗಳಲ್ಲಿ,

ಮತಗಳಲ್ಲಿ ‌....

ಒಂದು ದೊಡ್ಡ ಕ್ರಾಂತಿಯಾಗಿ ಇಡೀ‌ ಸಮೂಹ ಬದಲಾವಣೆ ಬಯಸಿದಲ್ಲಿ ಒಂದು ದಿನ ಉತ್ತಮ ನಾಗರಿಕ ಸರ್ಕಾರ ಬರಬಹುದು. ಅಲ್ಲಿಯವರೆಗೂ ನಮ್ಮ ಪ್ರಯತ್ನ ಸಾಗುತ್ತಲೇ ಇರಲಿ.......(ಅಧಿಕಾರಕ್ಕಾಗಿ ಹಪಹಪಿಸುವ ಎಲ್ಲಾ ಪಕ್ಷದ ಎಲ್ಲಾ ಜನ ಪ್ರತಿನಿಧಿಗಳಿಗೂ ಅನ್ವಯ)

-ವಿವೇಕಾನಂದ ಹೆಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ