ಜನರ ನಿದ್ದೆಗೆಡಿಸಿದ ಸರಣಿ ಕೊಲೆಗಾರ - ಕಮಾರ್ಗೋ ಬಾರ್ಬೋಸಾ
ಪ್ರಪಂಚದಲ್ಲಿ ನಾನಾ ತರಹದ ಜನರಿರುತ್ತಾರೆ. ಒಳ್ಳೆಯ ಜರರಿರುವ ಹಾಗೆಯೇ ಕೆಟ್ಟ ಜನರೂ ಇರುತ್ತಾರೆ. ಕೊಲೆಗಾರರು, ಕಳ್ಳರು, ಹುಚ್ಚರು ಹೀಗೆ ನಾನಾ ರೀತಿಯ ಜನರು... ಆದರೆ ಅತ್ಯಂತ ಅಪಾಯಕಾರಿಗಳೆಂದರೆ ಸೈಕೋಪಾಥ್ ಗಳು. ಇವರೊಂದು ಬಗೆಯ ಮಾನಸಿಕ ಅಸ್ವಸ್ಥರು. ತಮ್ಮ ಜೀವನದಲ್ಲಿ ನಡೆದ ಯಾವುದಾದರೂ ಕೆಟ್ಟ ಘಟನೆಗಳ ಕಾರಣದಿಂದ ಮಾನಸಿಕ ಸಮತೋಲನವನ್ನು ಕಳೆದುಕೊಂಡು ಸೈಕೋಪಾಥ್ ಗಳಾಗುವ ಸಾಧ್ಯತೆಗಳಿರುತ್ತವೆ. ಇಲ್ಲಿ ಅಂತಹದೇ ಓರ್ವ ಸೈಕೋಪಾಥ್ ಕೊಲೆಗಾರನ ಬಗ್ಗೆ ವಿವರಣೆಗಳಿವೆ. ಇದು ದಕ್ಷಿಣ ಅಮೇರಿಕಾ ದೇಶದ ಕೊಲಂಬಿಯಾದ ಸೈಕೋಪಾಥ್ ಕಿಲ್ಲರ್, ಸರಣಿ ಹಂತಕ ಡೇನಿಯಲ್ ಕಮಾರ್ಗೊ ಬಾರ್ಬೋಸಾ (Daniel Camargo Barbosa) ಬಗೆಗಿನ ಕಥಾನಕ...
ದಕ್ಷಿಣ ಅಮೇರಿಕ ದೇಶವಾಗಿರುವ ಕೊಲಂಬಿಯಾದ ಸೈಕೋಪಾಥ್, ಸರಣಿ ಹಂತಕ ಡೇನಿಯಲ್ ಕಮಾರ್ಗೊ ಬಾರ್ಬೊಸಾ ಅಸಾಮಾನ್ಯ ಅಪರಾಧಿ ಅಂತ ಹೇಳಿದರೆ ಅವನ ಕ್ರೌರ್ಯ, ಪಾಶವೀತನದ ಪರಿಚಯ ನಿಮಗೆ ಆಗಲಾರದು. ಒಂದು ಮಾಹಿತಿಯ ಪ್ರಕಾರ ಅವನು ಕೊಲಂಬಿಯ ಮತ್ತು ಈಕ್ವೆಡಾರ್ ನಲ್ಲಿ ೧೫೦ ಕ್ಕೂ ಹೆಚ್ಚು ಬಾಲಕಿಯರ ಹತ್ಯೆಗೈದಿದ್ದ. ಬಾರ್ಬೊಸಾ ಬಾಲ್ಯದಲ್ಲೇ ಅಮ್ಮನನ್ನು ಕಳೆದುಕೊಂಡಿದ್ದ ಮತ್ತು ಅವನನ್ನು ಬೆಳೆಸಿದ್ದು ಕ್ರೂರ ಸ್ವಭಾವದವಳಾಗಿದ್ದ ಮಲತಾಯಿ. ಆಕೆ ಸುಖಾಸುಮ್ಮನೆ ಅವನಿಗೆ ಹೊಡೆಯುತ್ತಿದ್ದಳು ಮತ್ತು ಕೆಲವು ಸಲ ಹುಡುಗಿಯರಂತೆ ಡ್ರೆಸ್ ಮಾಡಿಸುತ್ತಿದ್ದಳು. ಈ ಕಾರಣದಿಂದ ಬಾರ್ಬೋಸಾನ ಮನಸ್ಥಿತಿ ಕೆಟ್ಟು ಹೋಗಿರಬಹುದು. ಬಾರ್ಬೊಸಾ ಅಪರಾಧ ಲೋಕಕ್ಕೆ ಕಾಲಿಟ್ಟಾಗ ಅವನೊಂದಿಗೆ ಎಸ್ಪರಾಂಜಾ ಹೆಸರಿನ ಒಬ್ಬ ಸಂಗಾತಿ ಇದ್ದಳು. ಅವಳು ಬಾಲಕಿಯರನ್ನು ಪುಸಲಾಯಿಸಿಕೊಂಡು ತನ್ನ ಫ್ಲಾಟ್ ಗೆ ಕರೆದೊಯ್ದು ಅವರಿಗೆ ಮಾದಕದ್ರವ್ಯ (ಡ್ರಗ್ಸ್) ನೀಡುತ್ತಿದ್ದಳು. ಅವರು ಪ್ರಜ್ಞಾಹೀನರಾದ ಮೇಲೆ ಬಾರ್ಬೋಸಾ ಅವರನ್ನು ಅತ್ಯಾಚಾರ ಮಾಡುತ್ತಿದ್ದ. ಈ ವಿಲಕ್ಷಣ ಜೋಡಿ ಪ್ರಾರಂಭದಲ್ಲಿ ಯಾರನ್ನೂ ಕೊಂದಿರಲಿಲ್ಲ. ಅತ್ಯಾಚಾರಕ್ಕೆ ಒಳಗಾದವರು ದೂರನ್ನೂ ನೀಡಿರಲಿಲ್ಲ. ಆದರೆ, ೧೯೬೪ರಲ್ಲಿ ಅವನು ಅತ್ಯಾಚಾರಗೈದ ಐದನೇ ಹುಡುಗಿ ಪೊಲೀಸರಿಗೆ ದೂರು ಸಲ್ಲಿಸಿದ ನಂತರ ಬಾರ್ಬೊಸಾ ಮತ್ತು ಎಸ್ಪರಾಂಜಾರನ್ನು ಬಂಧಿಸಿ ಜೈಲಿಗಟ್ಟಲಾಯಿತು. ಎಂಟು ವರ್ಷ ಸೆರೆವಾಸದ ನಂತರ ಹೊರಬಂದ ಬಾರ್ಬೊಸಾನಲ್ಲಿ ರಾಕ್ಷಸನೊಬ್ಬ ಅವತರಿಸಿ ಕೊಂಡುಬಿಟ್ಟಿದ್ದ.
ಕೊಲಂಬಿಯಾದಲ್ಲಿ ೮೦ ಅತ್ಯಾಚಾರ ಪ್ರಕರಣಗಳು: ಕೊಲಂಬಿಯಾದ ಪೊಲೀಸ್ ಮೂಲಗಳ ಪ್ರಕಾರ ಬಾರ್ಬೋಸಾ ಆ ದೇಶದಲ್ಲಿ ೮೦ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ ಕೊಂದಿದ್ದಾನೆ. ಅವನ ಮೊಟ್ಟಮೊದಲ ಬಲಿಯೆಂದರೆ, ಒಬ್ಬ ೯ ವರ್ಷದ ಬಾಲಕಿ. ಅವಳನ್ನು ಕೊಂದ ನಂತರ ಬಾರ್ಬೊಸಾ ಪುನಃ ಜೈಲು ಸೇರಿದ್ದ. ತನಗೆ ಪಿಶಾಚಿಗಳ ಜೊತೆ ಸ್ನೇಹವಿದೆ, ಅವರೊಂದಿಗೆ ನಾನು ಮಾತಾಡುತ್ತಿರುತ್ತೇನೆ ಅಂತ ಅವನು ಹೇಳುತ್ತಿದ್ದ ಕಾರಣ ಕಾರಾಗೃಹದಲ್ಲಿ ಜೊತೆ ಕೈದಿಗಳು ಅವನನ್ನು ಕಂಡು ಹೆದರುತ್ತಿದ್ದರಂತೆ. ೧೯೮೪ ರಲ್ಲಿ ಅವನು ಲಾ ಇಸ್ಲಾ ಡೆ ಲಾ ಗೊರ್ಗೊನಾ ಜೈಲಿನಿಂದ ತಪ್ಪಿಸಿಕೊಂಡಿದ್ದ. ಆಗ ಜೈಲಿನ ಅಧಿಕಾರಿಯೊಬ್ಬರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, 'ಈಜುತ್ತಿದ್ದಾಗ ಅವನು ಶಾರ್ಕ್ ಗಳಿಗೆ ಬಲಿಯಾದ,' ಎಂದಿದ್ದರು. ಅದರೆ ಅಸಲಿಗೆ ಬಾರ್ಬೊಸಾ ನೆರೆಯ ರಾಷ್ಟ್ರ ಈಕ್ವೆಡಾರ್ ಗೆ ನುಸುಳಿದ್ದ. ಅಲ್ಲೂ ಅವನು ಬಾಲಕಿಯರನ್ಮು ರೇಪ್ ಮಾಡಿ ಕೊಲ್ಲುವ ಹೀನ ಕ್ರೌರ್ಯವನ್ನು ಅವ್ಯಾಹತವಾಗಿ ಮುಂದುವರಿಸಿದ.
ಕ್ಯಾಂಡಿ ರ್‍ಯಾಪರ್ ನೀಡಿದ ಸುಳಿವು: ೧೯೮೮ ರಲ್ಲಿ ಈಕ್ವೆಡಾರ್ ನ ಕ್ವಿಟೊ ಎಂಬಲ್ಲಿ ಒಬ್ಬ ೧೨-ವರ್ಷದ ಗ್ಲೋರಿಯ ಅಂಡಿನೋ ಹೆಸರಿನ ಬಾಲಕಿಯ ಕೊಲೆ ಪ್ರಕರಣದಲ್ಲಿ ಅವನು ಬಂಧಿತನಾಗಿದ್ದ. ಕ್ಯಾಂಡಿ ರ್‍ಯಾಪರ್ (ಚಾಕಲೇಟ್ ನ ಹೊರ ಕವಚ) ಮೇಲೆ ಅವನ ಫಿಂಗರ್ ಪ್ರಿಂಟ್ ಪತ್ತೆಯಾದ ಬಳಿಕ ಪೊಲೀಸರು ಅವನನ್ನು ಬಂಧಿಸಿದ್ದರು.
ಕೊಲಂಬಿಯಾ ಕಾರಾಗೃಹದಿಂದ ತಪ್ಪಿಸಿಕೊಂಡು ಈಕ್ವೆಡಾರ್ ಗೆ ಹೋದ ಬಳಿಕ ೭೧ ಬಾಲಕಿಯರನ್ನು ಕೊಂದಿರುವುದಾಗಿ ಅವನು ಹೇಳಿದ್ದ. ತನ್ನಿಂದ ಅತ್ಯಾಚಾರಕ್ಕೆ ಒಳಗಾದವರ ಶವಗಳನ್ನು ಹೂತು ಹಾಕಿದ ಸ್ಥಳಗಳನ್ನೆಲ್ಲ ಅವನು ಪೊಲೀಸರಿಗೆ ತೋರಿಸಿದ್ದ. ಅವನ ಮುಖದಲ್ಲಿ ಪಶ್ಚಾತ್ತಾಪದ ಒಂದೇ ಒಂದು ಎಳೆ ತಮಗೆ ಕಾಣಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದರು. ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ಬಳಿಕ ಅವನು ಮಚ್ಚಿನಿಂದ ಅವರನ್ನು ಕೊಚ್ಚಿಹಾಕುತ್ತಿದ್ದನಂತೆ. ಅಪ್ರಾಪ್ತ ಬಾಲಕಿಯರು ಕಿರಿಚಾಡುವುದು ಬಹಳ ಇಷ್ಟವಾಗುತ್ತಿದ್ದ ಕಾರಣಕ್ಕೆ ಅಂಥವರನ್ನು ಆರಿಸಿಕೊಳ್ಳುತ್ತಿದೆ, ಅವರು ನೋವಿನಿಂದ ಕಿರುಚಿದರೆ ತನಗೆ ಹೆಚ್ಚಿನ ತೃಪ್ತಿ ಸಿಗುತಿತ್ತು ಎಂದು ಬಾರ್ಬೊಸಾ ಹೇಳಿದ್ದ.
ಮಹಿಳೆಯರು ನಂಬಿಕೆಗೆ ಅರ್ಹರಲ್ಲ: ಮಹಿಳೆಯರು ಮಾಡುವ ಮೋಸ, ಅವಿಶ್ವಾಸದ ಮೇಲೆ ಸೇಡು ತೀರಿಸಿಕೊಳ್ಳಲು ಮತ್ತು ತಾನಂದು ಕೊಳ್ಳುವ ಹಾಗೆ ಅವರಿಲ್ಲ ಎನ್ನುವ ಕಾರಣಕ್ಕೆ ಕೊಲ್ಲುತ್ತಿದ್ದೆ ಅಂತಲೂ ಬಾರ್ಬೋಸಾ ಹೇಳಿದ್ದ. ಅವನಿಗೆ ಬಲಿಯಾದವರೆಲ್ಲ ಅಪ್ರಾಪ್ತೆಯರಾಗಿದ್ದರು!
೧೯೮೯ ರಲ್ಲಿ ಬಾರ್ಬೊಸಾನನ್ನು ಈಕ್ವೆಡಾರ್ ನಲ್ಲಿ ಬಂಧಿಸಿ ೧೬-ವರ್ಷ ಸೆರೆವಾಸದ ಶಿಕ್ಷೆ ವಿಧಿಸಲಾಯಿತು. ಈಕ್ವೆಡಾರ್ ನಲ್ಲಿ ಅದೇ ಗರಿಷ್ಠ ಅವಧಿಯ ಶಿಕ್ಷೆ. ಪಿನಲ್ ಗಾರ್ಸಿಯ ಮೊರಿನೋ ಡೆ ಕ್ವಿಟೋ ಜೈಲಲ್ಲಿದ್ದಾಗ ಅವನು ಕ್ರೈಸ್ತ ಧರ್ಮವನ್ನು ಅಂಗೀಕರಿಸಿದನಂತೆ. ಪೆಡ್ರೊ ಅಲೊನ್ಸೊ ಲೋಪೆಜ್ ಹೆಸರಿನ ಇನ್ನೊಬ್ಬ ಶಿಶುಕಾಮಿ ಮತ್ತು ಸರಣಿ ಹಂತಕನ ಬಗ್ಗೆ ನಾವು ಈಗಾಗಲೇ ಹೇಳಿದ್ದೇವೆ. ಅವನು ಕೊಲಂಬಿಯ, ಈಕ್ವೆಡಾರ ಮತ್ತು ಪೆರು ದೇಶಗಳಲ್ಲಿ ೩೦೦ ಕ್ಕೂ ಹೆಚ್ಚು ಬಾಲಕಿಯರನ್ನು ಕೊಂದಿದ್ದ. ಪೆಡ್ರೊ ಮತ್ತು ಬಾರ್ಬೊಸಾನನ್ನು ಒಂದೇ ಜೈಲಲ್ಲಿ ಇರಿಸಲಾಗಿತ್ತು.
ಮಾಹಿತಿಯೊಂದರ ಪ್ರಕಾರ ಬಾರ್ಬೊಸಾಗೆ ಬಲಿಯಾದ ಬಾಲಕಿಯೊಬ್ಬಳ ಸಂಬಂಧಿ ಲೂಯಿಸ್ ಮಸಾಚೆ ನರ್ವೇಜ್ ಎನ್ನುವವನು ಜೈಲಲ್ಲೇ ಸರಣಿ ಹಂತಕ ಬಾರ್ಬೊಸಾನನ್ನು ಕೊಂದುಬಿಟ್ಟ. ಹೀಗೆ ಸರಣಿ ಸೈಕೋಪಾತ್ ಹಂತಕನೋರ್ವನ ಅಂತ್ಯವಾಯಿತು. ಆದರೆ ಇತಿಹಾಸದ ಪುಟಗಳಲ್ಲಿ ಈ ಕೊಲೆಗಳು ಅಚ್ಚಳಿಯದ ಕಪ್ಪುಚುಕ್ಕೆಯಾಗಿ ಉಳಿದು ಬಿಟ್ಟಿದೆ.
(ಆಂಗ್ಲ ಬರಹವೊಂದರ ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ