ಜನರ ಪ್ರಾಣ ರಕ್ಷಿಸಿ
ಬೆಂಗಳೂರಿನ ರಸ್ತೆಗುಂಡಿಗಳು ಮೃತ್ಯುಕೂಪವಾಗಿ ಕಾಡುತ್ತಿದ್ದರೂ, ಪ್ರಭುತ್ವ ಮತ್ತು ಅಧಿಕಾರಶಾಹಿ ಎಚ್ಚೆತ್ತುಕೊಳ್ಳದಿರುವುದು ಖಂಡನಾರ್ಹ. ಜನರು ಪ್ರತಿಭಟಿಸಿದ್ದಾಯ್ತು. ಹೈಕೋರ್ಟ್ ಛೀಮಾರಿ ಹಾಕಿದ್ದೂ ಆಯ್ತು; ಆದರೂ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಿಲ್ಲ. ಬೆಂಗಳೂರಿನ ಯಾವುದೇ ಮುಖ್ಯ ಪ್ರದೇಶಕ್ಕೆ ಹೋದರೂ, ಸಣ್ಣ ಬಡಾವಣೆಗಳಿಗೆ ಹೋದರೂ ಗುಂಡಿಗಳು ವಾಹನಸವಾರರನ್ನು ಆತಂಕಗೊಳಿಸುತ್ತಿವೆ. ಭಾನುವಾರ ರಸ್ತೆಗುಂಡಿ ತಪ್ಪಿಸಲು ಹೋಗಿ ಬೈಕ್ ರಸ್ತೆಗೆ ಬಿದ್ದ ಬೆನ್ನಲ್ಲೇ ಬೊಲೆರೋ ವಾಹನ ಹರಿದ ಪರಿಣಾಮ ಬೆಂಗಳೂರು ಪಟ್ಟೆಗಾರ ಪಾಳ್ಯದ ನಿವಾಸಿ ಶರ್ಮಿಳಾ ಮೃತಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂಥ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಕೆಲದಿನಗಳ ಹಿಂದೆಯಷ್ಟೇ ಪತ್ರಕರ್ತರೊಬ್ಬರು ಇದೇ ಬಗೆಯ ಅಪಘಾತದಲ್ಲಿ ಮೃತಪಟ್ಟರೆ, ಅದಕ್ಕೂ ಮುನ್ನ ಆರು ವರ್ಷದ ಬಾಲಕಿ ಬಲಿಯಾಗಿದ್ದಳು. ತಮ್ಮದಲ್ಲದ ತಪ್ಪಿಗೆ ಜನಸಾಮಾನ್ಯರು ಯಾಕೆ ಇಂಥ ಘೋರ ಶಿಕ್ಷೆ ಅನುಭವಿಸಬೇಕು? ಜನರ ಜೀವಕ್ಕೆ ಬೆಲೆಯೇ ಇಲ್ಲವೇ? ಬಿಬಿಎಂಪಿ ಹೀಗೆ ಸಂವೇದನೆಯನ್ನೇ ಕಳೆದುಕೊಂಡರೆ ಗತಿ ಏನು?
ಮಾಹಿತಿ -ತಂತ್ರಜ್ಞಾನ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ನಗರ ರಸ್ತೆಗುಂಡಿಗಳಿಂದ ಸಂಪೂರ್ಣ ಮುಕ್ತಿ ಪಡೆಯಲು ಸಾಧ್ಯವಾಗದಿರುವುದು ವಿಪರ್ಯಾಸ. ‘ರಸ್ತೆ ಗುಂಡಿ' ಮುಚ್ಚಲು ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಮಾರಣಾಂತಿಕ ರಸ್ತೆಗುಂಡಿಗಳ ಬಳಿ ಬ್ಯಾರಿಕೇಡ್ ಹಾಗೂ ಲೈಟಿಂಗ್ ವ್ಯವಸ್ಥೆ ಮಾಡಬೇಕು ಎಂಬ ಮುಖ್ಯಮಂತ್ರಿಗಳ ಸೂಚನೆಗೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಬಿಬಿಎಂಪಿ ರಸ್ತೆಗಳಿಗೆ ಡಾಂಬರೀಕರಣ ಮಾಡಿ ಮೂರ್ನಾಲ್ಕು ವರ್ಷಗಳೇ ಕಳೆದಿವೆ. ಆದರೂ ರಸ್ತೆ ಕಾಮಗಾರಿಗೆ ಮೂರು ವರ್ಷಗಳಲ್ಲಿ ೩,೫೪೭ ಕೋಟಿ ರೂ, ವ್ಯಯಿಸಲಾಗಿದೆ ಎಂದು ಸರಕಾರ ಹೇಳುತ್ತಿದೆ. ಇಷ್ಟೊಂದು ಹಣ ವ್ಯಯಿಸಿದ್ದರೂ ನಗರದ ರಸ್ತೆಗಳು ಗುಂಡಿ ಮುಕ್ತವಾಗಿಲ್ಲ ಏಕೆ? ಪಾಲಿಕೆ ಮುಚ್ಚುವ ರಸ್ತೆ ಗುಂಡಿಗಳು, ದುರಸ್ತಿ ಮಾಡಿದ ರಸ್ತೆಗಳು ದೀರ್ಘಕಾಲದವರೆಗೆ ಬಾಳಿಕೆ ಬರುವುದಿಲ್ಲವೇಕೆ? ಎಂದು ಹೈಕೋರ್ಟ್ ಕೂಡ ಪ್ರಶ್ನಿಸಿತ್ತು.
ಕೆಲವೆಡೆ ಎಷ್ಟು ಕಳಪೆ ಮಟ್ಟದ ಕಾಮಗಾರಿ ನಡೆಸಲಾಗಿದೆ ಎಂದರೆ ತೇಪೆ ಹಾಕಿದ ಕೆಲವೇ ದಿನಗಳಲ್ಲಿ ಮತ್ತೆ ಗುಂಡಿಗಳು ತೆರೆದುಕೊಂಡಿವೆ. ನಗರದಲ್ಲಿ ಶೇಕಡ ೪೦ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಕಳಪೆ ಕಾಮಗಾರಿಗಳ ಕುರಿತಂತೆ ಹಲವು ದೂರುಗಳು ದಾಖಲಾಗಿದ್ದರೂ, ಅದಕ್ಕೆ ಸ್ಪಂದಿಸುವವರು ಯಾರೂ ಇಲ್ಲ. ಗುತ್ತಿಗೆದಾರರು ಕೂಡ ರಸ್ತೆ ನಿರ್ವಹಣೆಯ ನಿಯಮವನ್ನು ಪಾಲಿಸದಿರುವುದು ಸ್ಪಷ್ಟವಾಗಿದೆ. ಇಲಾಖೆಗಳ ನಡುವೆ ಸಮನ್ವಯದ ಕೊರತೆಯೂ ಇದೆ. ಬಿಬಿಎಂಪಿ ಬೆಸ್ಕಾಂ, ಜಲಮಂಡಳಿಗಳನ್ನು ದೂರಿದರೆ, ಇತರ ಇಲಾಖೆಗಳು ಬಿಬಿಎಂಪಿಯತ್ತ ಬೊಟ್ಟು ಮಾಡುತ್ತವೆ. ಕಾಳಜಿಯನ್ನೇ ಮರೆತರೆ ಇಂಥ ಅಧ್ವಾನಗಳಾಗುತ್ತವೆ. ಯಾವ ಸಬೂಬುಗಳನ್ನು ಹೇಳದೆ, ರಸ್ತೆಗುಂಡಿಗಳನ್ನು ಮುಚ್ಚುವ, ಅಮೂಲ್ಯ ಜೀವಗಳನ್ನು ಕಾಪಾಡುವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಲೇ ಬೇಕು.
ಕೃಪೆ: ವಿಜಯವಾಣಿ ಪತ್ರಿಕೆ, ಸಂಪಾದಕೀಯ, ದಿ.೩೧-೦೧-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ
ಪೂರಕ ಮಾಹಿತಿ: ಈ ಸಂಪಾದಕೀಯದಲ್ಲಿ ಬೆಂಗಳೂರು ರಸ್ತೆಗಳ ಬಗ್ಗೆ ಮಾತ್ರ ಹೇಳಿದ್ದರೂ, ರಾಜ್ಯದ ಇತರ ಊರುಗಳ ರಸ್ತೆಗಳ ಸ್ಥಿತಿಯೂ ಭಿನ್ನವಾಗಿಲ್ಲ. ಒಂದು ಮಳೆ ಬಂದರೆ ರಸ್ತೆಯಲ್ಲಿನ ಡಾಮರು ಕೊಚ್ಚಿಹೋಗಿ ಗುಂಡಿಗಳು ಮಾತ್ರ ಉಳಿಯುತ್ತವೆ. ಒಂದು ಗುಂಡಿ ತಪ್ಪಿಸಲು ಹೋದರೆ ಎರಡು ಗುಂಡಿಗಳಿಗೆ ಬೀಳಲೇ ಬೇಕಾಗುತ್ತದೆ. ಸುಗಮ ರಸ್ತೆಗಳಿಲ್ಲದೇ ಯಾವುದೇ ರಾಜ್ಯ ಉದ್ಧಾರವಾಗುವುದಾದರೂ ಹೇಗೆ? ಯಾವುದೇ ಐಷಾರಾಮಿ ವಾಹನವಾಗಿರಲಿ, ತಲೆಗೆ ಐ ಎಸ್ ಐ ಗುರುತಿನ ಹೆಲ್ಮೆಟ್ಟೇ ಹಾಕಿರಲಿ ರಸ್ತೆಗಳು ಸರಿಯಾಗಿಲ್ಲದೇ ಹೋದರೆ ಚಲಿಸುವುದಾದರೂ ಎಲ್ಲಿ? ಸಂಬಂಧಿಸಿದ ಅಧಿಕಾರ ವರ್ಗ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.