ಜನರ ಸಮಸ್ಯೆಗಳನ್ನೇ ಪ್ರಸ್ತಾಪಿಸದ ಜನಪ್ರತಿನಿಧಿಗಳು

ಜನರ ಸಮಸ್ಯೆಗಳನ್ನೇ ಪ್ರಸ್ತಾಪಿಸದ ಜನಪ್ರತಿನಿಧಿಗಳು

‘ಜನರ ಸಮಸ್ಯೆಗಳನ್ನು ನಿವಾರಿಸುತ್ತೇವೆ, ಜನರಿಗೆ ದನಿಯಾಗುತ್ತೇವೆ' ಎಂದೆಲ್ಲ ಭರವಸೆಯ ಸುರಿಮಳೆಯನ್ನು ಹರಿಸುವ ಜನಪ್ರತಿನಿಧಿಗಳು ಜನಹಿತಾಸಕ್ತಿಯ ವಿಷಯಗಳನ್ನು ಬದಿಗಿರಿಸಿ, ರಾಜಕೀಯ ಲಾಭವನ್ನೇ ಗಮನದಲ್ಲಿಟ್ಟುಕೊಂಡು ವ್ಯವಹರಿಸುತ್ತಿರುವುದು ದುರದೃಷ್ಟಕರ ಬೆಳವಣಿಗೆ. ಪ್ರತಿ ಬಾರಿಯೂ ವಿಧಾನ ಮಂಡಲದ ಕಲಾಪ ಆರಂಭವಾದಾಗ ತಮ್ಮ ಭಾಗದ ಸಮಸ್ಯೆಗಳು ಸದನದಲ್ಲಿ ಪ್ರತಿಧ್ವನಿಸಬಹುದು, ಆ ಮೂಲಕವಾದರೂ ಸರ್ಕಾರದಿಂದ ಅವುಗಳಿಗೆ ಪರಿಹಾರ ಸಿಗಬಹುದು ಎಂದು ಜನರು ನಿರೀಕ್ಷಿಸುತ್ತಾರೆ. ಆದರೆ, ನಿರೀಕ್ಷೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವಲ್ಲಿ ಆಡಳಿತ ಮತ್ತು ವಿರೋಧ ಪಕ್ಷ ಎರಡೂ ವಿಫಲವಾಗಿವೆ.

ಈ ಬಾರಿಯ ವಿಧಾನಸಭೆ ಅಧಿವೇಶನವು ಗದ್ದಲದಲ್ಲೇ ಮುಕ್ತಾಯಗೊಂಡಿದೆ. ಇಡೀ ಅಧಿವೇಶನದ ಕಲಾಪವನ್ನು ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣಗಳು ಅಪೋಶನ ತೆಗೆದುಕೊಂಡಿವೆ. ತೀವ್ರಸ್ವರೂಪದ ಮಳೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳ ಜನರು ತೊಂದರೆ ಅನುಭವಿಸುತ್ತಿರುವುದು, ಬೆಳೆ ನಷ್ಟ, ಆಸ್ತಿ ಪಾಸ್ತಿ ಹಾನಿಗೆ ಈಡಾಗಿರುವುದು ಮುಂತಾಗಿ ಯಾವ ವಿಷಯವೂ ಅಧಿವೇಶನಕ್ಕೆ ಚರ್ಚೆಗೆ ಬರದಿರುವುದು ದುರದೃಷ್ಟಕರ. ಇದರ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಅಧಿವೇಶನ ಮುಂದೂಡಿದ ಬಳಿಕ ಸಂಪ್ರದಾಯದಂತೆ ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸುದ್ದಿಗೋಷ್ಟಿ ನಡೆಸಿ, ಕಲಾಪದ ವಿವರಗಳನ್ನು ನೀಡಿದ್ದಾರೆ. ದುರದೃಷ್ಟವಶಾತ್ ಯಾವುದೇ ಚರ್ಚೆ, ಸಮಾಲೋಚನೆ ಇಲ್ಲದೆ ಗದ್ದಲದಲ್ಲೇ ಹಲವು ಮಹತ್ವದ ವಿಧೇಯಕಗಳು ಅಂಗೀಕಾರಗೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ. ‘ಜನರ ತೆರಿಗೆ ಹಣದಲ್ಲಿ ಹೀಗೆ ಗದ್ದಲ ನಡೆದರೆ ನಾವು ಜನರಿಗೆ ಏನು ಉತ್ತರ ಹೇಲಬೇಕು' ಎಂದೂ ಪ್ರಶ್ನಿಸಿದ್ದಾರೆ. ಹೊರಟ್ಟಿ ಅವರೇ ಹೇಳಿರುವ ಪ್ರಕಾರ, ಸದಸ್ಯರು ಅಧಿವೇಶನದಲ್ಲಿ ಕೇಳಿದ ಒಂದು ಪ್ರಶ್ನೆಗೆ ಉತ್ತರ ಕೊಡಿಸಲು ಸುಮಾರು ೯೨ ಸಾವಿರ ರೂ. ವೆಚ್ಚವಾಗುತ್ತದೆ. ಈ ವೆಚ್ಚ ಪ್ರತಿ ಪ್ರಶ್ನೆಗೂ ಅದರ ಸ್ವರೂಪದ ಆಧಾರದ ಮೇಲೆ ಬದಲಾಗುತ್ತದೆ ಎಂಬುದೇನೋ ನಿಜ. ಆದರೆ ಇದರ ನೇಪಥ್ಯದಲ್ಲಿ ಹಲವಾರು ನೌಕರರು,  ಅಧಿಕಾರಿಗಳು ಉತ್ತರ ಒದಗಿಸುವುದಕ್ಕಾಗಿ ಕೆಲಸ ಮಾಡಿರುತ್ತಾರೆ. ಸದನದಲ್ಲಿ ಬರುವ ಪ್ರಶ್ನೆಗಳು, ಗಮನ ಸೆಳೆಯುವ ಸೂಚನೆಗಳಿಂದಾಗಿ ಜನರ ಕೆಲಸಗಳೂ ತ್ವರಿತವಾಗಿ ಆಗುತ್ತವೆ. ಆದರೆ ಗದ್ದಲದಿಂದಾಗಿ ಪ್ರಶ್ನೆಗಳೇ ಪ್ರಸ್ತಾಪವಾಗದಿದ್ದರೆ, ಚರ್ಚೆಯಾಗದಿದ್ದರೆ ಜನರ ಸಮಸ್ಯೆ ಬಗೆಹರಿಯುದೆಂತು? ಅಧಿಕಾರಶಾಹಿ ಜಡತ್ವ ಕಳೆದುಕೊಂಡು ಚುರುಕಾಗುವುದು ಹೇಗೆ? ಶಾಸನಸಭೆಗಳು ಉತ್ತಮವಾಗಿ ನಡೆದರೆ ಜನರಿಗೆ ಸ್ವಲ್ಪವಾದರೂ ನ್ಯಾಯ ದೊರಕಿಸಲು ಸಾಧ್ಯ ಎಂಬುದನ್ನು ಎಲ್ಲ ಚುನಾಯಿತ ಜನಪ್ರತಿನಿಧಿಗಳೂ ಅರಿತುಕೊಳ್ಳಬೇಕು.

ಜನರ ತೆರಿಗೆ ಹಣದಲ್ಲಿಯೇ ಕಲಾಪ ನಡೆಯುತ್ತದೆ. ಜನಪ್ರತಿನಿಧಿಗಳಿಗೆ ಸಂಬಳ, ಸೌಲಭ್ಯ ದೊರೆಯುತ್ತದೆ. ಆದರೆ, ಅಧಿವೇಶನದ ಕಲಾಪಗಳು ಬರೀ ರಾಜಕೀಯ ಕೋಲಾಹಲದಲ್ಲೇ ಮುಗಿದುಹೋಗುತ್ತಿರುವುದು, ಆರೋಪ - ಪ್ರತ್ಯಾರೋಪದಲ್ಲೇ ಕಳೆದು ಹೋಗುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ಚರ್ಚೆಯೇ ನಡೆಯದೆ ವಿಧೇಯಕಗಳು ಅಂಗೀಕಾರಗೊಳ್ಳುವುದು ಯಾವ ಸಂದೇಶ ರವಾನಿಸುತ್ತದೆ? ಇನ್ನಾದರೂ ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನದನಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೭-೦೭-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ