ಜನವಾಣಿ

ಜನವಾಣಿ

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕರು: ಕೃಷ್ಣಮೂರ್ತಿ ಹೆಬ್ಬಾರ
ಪ್ರಕಾಶಕರು
ಅಭಿನವ, ವಿಜಯನಗರ, ಬೆಂಗಳೂರು-೫೬೦೦೪೦
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ: ೨೦೨೨

ಪತ್ರಕರ್ತ, ಲೇಖಕರಾದ ಕೃಷ್ಣಮೂರ್ತಿ ಹೆಬ್ಬಾರ ಇವರು ಸಂಪಾದಿಸಿದ ಕೃತಿಯೇ ‘ಜನವಾಣಿ' ಅವರ ಪ್ರಕಾರ ಸಾಕಷ್ಟು ದೇಶಗಳಲ್ಲಿ ಅಗ್ನಿಪಥದಂತಹ ಯೋಜನೆಗಳಿವೆ. ಅಮೇರಿಕಾ ಸಹಿತ ಕೆಲವು ದೇಶಗಳು ತನ್ನ ಎಲ್ಲಾ ಪ್ರಜೆಗಳಿಗೆ ಎರಡು ವರ್ಷ ಸೈನ್ಯದಲ್ಲಿ ಸೇವೆಯನ್ನು ಕಡ್ಡಾಯ ಮಾಡಿದೆ. ಆದರೆ ಭಾರತ ದೇಶದಲ್ಲಿ ಈ ರೀತಿಯ ಕಾನೂನು ಇಲ್ಲ. ಅವರ ‘ಜನವಾಣಿ’ ನುಡಿನೋಟಗಳ ಆಯ್ದಭಾಗ ನಿಮ್ಮ ಓದಿಗಾಗಿ...

ಮಾಧ್ಯಮಿಕ, ಪದವಿ ಶಿಕ್ಷಣ ಮುಗಿಸಿ ಖಾಲಿ ತಿರುಗುತ್ತಿರುವ ಯುವಕ, ಯುವತಿಯರಲ್ಲಿ ಅರ್ಹರನ್ನು ಆಯ್ದು ಅವರಿಗೆ ಶಿಸ್ತು, ದೇಶಭಕ್ತಿ ಕಲಿಸುತ್ತ ಕೈತುಂಬ ಸಂಬಳ ಕೊಡುವ ನಾಲ್ಕು ವರ್ಷಗಳ ನಂತರ ಒಂದಿಷ್ಟು ಹಣ ಕೈಗಿಟ್ಟು ಬೇರೆ ಉದ್ಯೋಗ ಮಾಡುವ ಅಥವಾ ಸೈನ್ಯದಲ್ಲೇ ಮುಂದುವರಿಯುವ ಅಪೂರ್ವ ಅಗ್ನಿಪಥ ಯೋಜನೆಯನ್ನು ಕಾಂಗ್ರೆಸ್ ವಿರೋಧಿಸುತ್ತಿರುವುದನ್ನು ಕಂಡಾಗ ವಿಷಯ ಯಾವುದೇ ಇರಲಿ ಬಿಜೆಪಿಯಿಂದ ಉಗಿಸಿಕೊಳ್ಳುವುದು ಕಾಂಗ್ರೆಸ್ಸಿಗೆ ಪ್ರೀತಿ ಎಂದು ಹೇಳಬೇಕಾಗಿದೆ.

ನಾವು ಪ್ರತಿಪಕ್ಷದವರು ವೈರಿಗಳಲ್ಲ ಎಂದು ಹೇಳುತ್ತಿರುವ ಕಾಂಗ್ರೆಸ್‌ನ ರಾಹುಲ್ ಗಾಂಧಿಗೆ ಮತ್ತು ಅವರ ಶಿಷ್ಯರಿಗೆ ಬಿಜೆಪಿ ಏನು ಮಾಡಿದರೂ, ಏನು ಹೇಳಿದರೂ ವೈರಿಗಳಂತೆ ವಿರೋಧಿಸುವುದೇ ಅಭ್ಯಾಸವಾಗಿದೆ. ಕಾಂಗ್ರೆಸ್ಸಿನ ಈ ದುರ್ಬಲತೆಯೂ ಬಿಜೆಪಿಗೆ ಬಲ ತಂದುಕೊಟ್ಟಿದೆ. ಹೆಚ್ಚುತ್ತಿರುವ ಜನಸಂಖ್ಯೆ, ನಿರುದ್ಯೋಗಿ ಯುವಕರು, ಕೋವಿಡ್ ಕಾಟ, ಉದ್ಯಮಗಳ ಕ್ಷೀಣಿಸುವಿಕೆಯಿಂದ ಉಂಟಾದ ಸಮಸ್ಯೆ ಬಗೆಹರಿಸುವುದರ ಜೊತೆ ಮಕ್ಕಳಿಗೆ ಒಂದಿಷ್ಟು ಶಿಸ್ತು, ಶಿಕ್ಷಣ ಕೊಡೋಣ ಎಂದು ವರ್ಷಗಟ್ಟಲೆ ಚಿಂತಿಸಿ ಪ್ರಕಟಿಸಿದ 'ಅಗ್ನಿಪಥ ಯೋಜನೆ'ಗೆ ಬೆಂಕಿ ಹಚ್ಚುವ ಕೆಲಸವನ್ನು ಮಾಡಲಾಗಿದೆ. ಮೊದಲು ಸೈನ್ಯ ಸೇರಿಸಲು ತರಬೇತಿ ನೀಡುವುದಾಗಿ ಹೇಳಿ ಗ್ರಾಮೀಣ ಯುವಕರನ್ನು ಸುಲಿಯುತ್ತಿರುವ ೧೨ ಟ್ಯೂಶನ್ ಸಂಸ್ಥೆಗಳು ಹಿಂದೆ ನಿಂತು ಉತ್ತರಭಾರತದಲ್ಲಿ ಅಗ್ನಿಪಥ ಯೋಜನೆ ವಿರೋಧಿಸಿ ಪ್ರತಿಭಟನೆಗೆ ಚಾಲನೆ ನೀಡಿದವು. ಸರಿ, ಇದೇ ಒಂದು ಅವಕಾಶ ಎಂದು ಕಾಂಗ್ರೆಸ್ ಗಾಳಿ ಊದಿತು. ದೇಶದ ಉತ್ತರಭಾಗ ಹೊತ್ತಿ ಉರಿಯಿತು. ಸಾರಾಸಾರ ಆಲೋಚನೆ ಮಾಡದೆ ಮುನ್ನುಗ್ಗುವ ಸ್ವಭಾವ ಸಹಜವಾಗಿರುವ ಯುವಕರು ಯೋಜನೆಯನ್ನೇ ವಿರೋಧಿಸಿದರು.

ಸರ್ಕಾರ ಇದಕ್ಕೆ ಪ್ರತಿಯಾಗಿ ಮನದಟ್ಟು ಮಾಡುವ ಸಕಲ ಪ್ರಯತ್ನ ಮಾಡಿತು. ಸಂಬಳ, ಪೆನ್ಶನ್, ವಯೋಮಿತಿ ಹೆಚ್ಚಿಸಿತು. ಆದರೆ ಬೆಂಕಿ ಹಚ್ಚಲು ತೊಡಗಿದ ಕಾರಣ ಪೊಲೀಸರು ಲಾಠಿ, ಬಂದೂಕು ಕೈಗೆತ್ತಿಕೊಳ್ಳಬೇಕಾಯಿತು. ಕಾಂಗ್ರೆಸ್ ಪಕ್ಷ ಇದನ್ನೇ ತನ್ನ ವಿಜಯ ಎಂದು ಸೂಚನೆಗಳನ್ನು ನೀಡಿದ್ದಾರೆ. ಎಲ್ಲವನ್ನೂ ಸರ್ಕಾರ ಒಪ್ಪಿಕೊಂಡಿದೆ. ಆದರೂ ಕಾಂಗ್ರೆಸ್‌ ತೃಪ್ತವಾಗಿಲ್ಲ. ನಿವೃತ್ತ ದಂಡನಾಯಕರುಗಳು ಸ್ವಾಗತಿಸುವುದರ ಜೊತೆ ಕೆಲವು ಸಲಹೆ, ಅಗ್ನಿಪಥ ಯೋಜನೆಯನ್ನು ಮೂರು ಸೈನ್ಯ ಪಡೆಯ ದಂಡನಾಯಕರುಗಳು ಪ್ರತಿಭಟನೆ ನಿಂತಿಲ್ಲ. ೧೭ ವರ್ಷ ವಯಸ್ಸಿನಿಂದ ೨೩ ವಯಸ್ಸಿನವರೆಗಿನ ಯುವಕ, ಯುವತಿಯರನ್ನು ಆಯ್ದು ಅವರಿಗೆ ಆರಂಭದ ವರ್ಷ ೪.೨ ಲಕ್ಷ ಸಂಬಳ ನೀಡಿ, ೪ನೇ ವರ್ಷ ೬.೯೬ ಲಕ್ಷ ಸಂಬಳ ನೀಡಿ, ಆಸಕ್ತಿಯಿದ್ದರೆ ಸೇನೆಯಲ್ಲಿ ಮುಂದುವರಿಯುವ ಅವಕಾಶ ನೀಡಲಾಗುವುದು. ಅವರು ಸ್ವತಂತ್ರರಾಗಲು  ಸ್ವಂತ ಉದ್ಯೋಗ ಮಾಡಬಯಸಿದರೆ ೧೧.೬೭ ಲಕ್ಷ ಕಳಿಸಲಾಗುವುದು. ಸರ್ಕಾರದ ಮತ್ತು ಖಾಸಗಿ ಕೆಲವು ಸಂಸ್ಥೆಗಳಲ್ಲಿ ಆದ್ಯತೆ ಮೇಲೆ ಉದ್ಯೋಗ ನೀಡಲಾಗುವುದು. ಅಕಸ್ಮಾತ್ ಸೇವೆಯಲ್ಲಿರುವಾಗ ಮೃತ ಪಟ್ಟರೆ 1 ಕೋಟಿ ರೂಪಾಯಿ ವಿಮಾ ಹಣ ನೀಡಲಾಗುವುದು ಎಂದು ಸರ್ಕಾರ ಪ್ರಕಟಿಸಿದ್ದು ಕಡಿಮೆಯಾಯಿತೇ? ಇಲ್ಲಿ ಖಾಲಿ ತಿರುಗುವ ಬದಲು ಬದುಕನ್ನು ಬದಲಾಯಿಸುವ ಅಗ್ನಿಪಥ ಯೋಜನೆಯಲ್ಲಿ ಯಾರಿಗೂ ಕಾಣದ ದೋಷ ಕಾಂಗ್ರೆಸ್ ಹಳದಿ ಕಣ್ಣಿಗೆ ಕಂಡಿತು.

ಅಗ್ನಿಪಥದವರನ್ನು ನೇರ ಯುದ್ಧಕ್ಕೆ ಕಳಿಸುವುದಿಲ್ಲ. ಸೈನ್ಯದಲ್ಲಿರುವವರ ಸರಾಸರಿ ವಯೋಮಾನವನ್ನು ಹೆಚ್ಚಿಸಬೇಕಾಗಿದೆ. ಇದೇ ವಯಸ್ಸಿನ ಯುವಕರಿಗೆ ಸರಿಯಾದ ಆಕಾರ ಕೊಡಬಹುದು ಎಂದು ಸರ್ಕಾರ ನಿರ್ಧರಿಸಿತು. ಇಷ್ಟವಿದ್ದರೆ ಹೋಗಬಹುದು, ಇಲ್ಲವಾದರೆ ಬಿಡಬಹುದು. ಯೋಜನೆಯನ್ನು ವಿರೋಧಿಸುವವರನ್ನು ಲೆಕ್ಕಿಸದೆ ಸೈನ್ಯ ಇಲಾಖೆ ಅಗ್ನಿವೀರರ ಅರ್ಜಿ ಕರೆದಿದ್ದು ನಾಲ್ವೇ ದಿನದಲ್ಲಿ ಲಕ್ಷ ಯುವಕರು ಅರ್ಜಿ ಸಲ್ಲಿಸಿದ್ದಾರೆ. ರಾಜಕಾರಣಿಗಳ ಮಾತು ಕೇಳಿ ಬೆಂಕಿ ಹಚ್ಚಿದ ಯುವಕರು ದೇಶಕ್ಕೆ ಬಹುಕೋಟಿ ರೂಪಾಯಿ ಹಾನಿ ಮಾಡಿದರು. ಇಂಥವರಿಗೆ ಅಗ್ನಿವೀರರಾಗುವ ಅವಕಾಶವನ್ನು ಸೈನ್ಯ ನಿರಾಕರಿಸಿದೆ. ಅರ್ಜಿ ತುಂಬುವಾಗ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ ಎಂದು ಬರೆದುಕೊಡಬೇಕು, ಇದಕ್ಕೆ ಪೊಲೀಸ್ ತನಿಖೆ ನಡೆಸಿ ಪ್ರವೇಶ ನೀಡಲಾಗುವುದು ಎಂದು ಸೈನ್ಯ ಹೇಳಿದೆ. ವಿಡಿಯೋ ಚಿತ್ರೀಕರಣದಲ್ಲಿ ಹಿಂಸೆಗಿಳಿದವರ ದಾಖಲೆ ಇದೆ. ಯಾರದೋ ಮಾತು ಕೇಳಿ ಹಿಂಸೆಗಿಳಿದವರು ಜೀವನಪೂರ್ತಿ ಪಶ್ಚಾತ್ತಾಪ ಪಡಬೇಕಾಗಿದೆ. ಇವರ ಬದುಕು ಹಾಳಾಗಲು ಕಾಂಗ್ರೆಸ್ಸೇ ಕಾರಣ.

ಭಾರತದಲ್ಲೂ ಕಡ್ಡಾಯವಾಗಿ ಸೇನೆಗೆ ಸೇರುವ ಕಾನೂನು ಬಂದಿದ್ದರೆ ಜನ ಶಿಸ್ತು ಎಂದರೆ ಏನು, ದೇಶ ಎಂದರೆ ಏನು ಎಂದು ತಿಳಿಯುತ್ತಿದ್ದರು. ಅಗ್ನಿಪಥ ವಿರೋಧಿಸಿ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ನಗೆಪಾಟಲಿಗೆ ಗುರಿಯಾಗಿದೆ. ಇದು ದೇಶಕ್ಕೆ ಕಾಂಗ್ರೆಸ್ ಮಾಡಿದ ದೊಡ್ಡ ಅನ್ಯಾಯ ಎಂದು ಇತಿಹಾಸದಲ್ಲಿ ದಾಖಲಾಯಿತು. ಸುಮಾರು ೧೮೦ ಪುಟಗಳ ಈ ಪುಸ್ತಕದಲ್ಲಿ ಮತ್ತಷ್ಟು ಅಗ್ನಿಪಥ ಯೋಜನೆಯ ಬಗ್ಗೆ ಮಾಹಿತಿ ನೀಡಲಾಗಿದೆ.