ಜನವಿಶ್ವಾಸದ ನ್ಯಾಯ

ಜನವಿಶ್ವಾಸದ ನ್ಯಾಯ

ಕಾನೂನು ಎನ್ನುವುದು ದೇಶವನ್ನು, ಸಮಾಜವನ್ನು ನಿಯಂತ್ರಿಸುವ ನಿಯಮಾವಳಿಗಳ ವ್ಯವಸ್ಥೆ. ಒಂದು ಸಮಾಜವೆಂದ ಮೇಲೆ ಸಣ್ಣದು, ದೊಡ್ಡದು ಪ್ರಮಾದಗಳು ಸರ್ವೇಸಾಮಾನ್ಯ. ಎಲ್ಲ ರೀತಿಯ ಅಪರಾಧವನ್ನೂ ಜೈಲುಶಿಕ್ಷೆ ಕೇಂದ್ರಿತ ನ್ಯಾಯದ ತಕ್ಕಡಿಯಲ್ಲಿ ತೂಗಿ, ಅಂಥ ಅಪರಾಧಿಗಳನ್ನು ಜೈಲಿಗೆ ಕಳುಹಿಸತೊಡಗಿದರೆ, ಈ ದೇಶದಲ್ಲಿ ಎಷ್ಟು ಕಾರಾಗೃಹ ನಿರ್ಮಿಸಿದರೂ ಸಾಲದು. ಹೀಗಾಗಿ, ಸ್ವಾತಂತ್ರೋತ್ತರ ಭಾರತದ ನ್ಯಾಯವ್ಯವಸ್ಥೆಯಲ್ಲಿದ್ದ ಇಂಥ ತೊಡಕುಗಳ ಸರಮಾಲೆಯನ್ನು ಸರಿಪಡಿಸಲೆಂದೇ, ೨೦೨೩ರಲ್ಲಿ ಜನವಿಶ್ವಾಸ್ ಕಾಯಿದೆ ಜಾರಿಗೆ ಬಂದಿತ್ತು. ಪ್ರಸ್ತುತ, ಇದರಲ್ಲಿನ ಇನ್ನಷ್ಟು ಅಂಶಗಳನ್ನು ಸಡಿಲಗೊಳಿಸಿ, ಸುಗಮ ಜೀವನ ನಿರ್ವಹಣೆ ಮತ್ತು ವ್ಯವಹಾರ ಸುಗಮತೆಯನ್ನು ಹೆಚ್ಚಿಸುವ ದೃಷ್ಟಿಯಿಂದ 'ಜನವಿಶ್ವಾಸ್ (ತಿದ್ದುಪಡಿ) ವಿಧೇಯಕ- ೨೦೨೫' ಸಂಸತ್ತಿನಲ್ಲಿ ಮಂಡನೆಯಾಗಿದೆ.

ಸಣ್ಣ ತಪ್ಪುಗಳಿಗೂ ಜೈಲು ಶಿಕ್ಷೆಯನ್ನು ಶಿಫಾರಸು ಮಾಡುವ ಕೆಲವು ನಿಬಂಧನೆಗಳನ್ನು ಅಪರಾಧ ಪಟ್ಟಿಯಿಂದ ಹೊರಗಿಡುವ ಈ ವಿಧೇಯಕ ದೇಶದ ಕಾರಾಗೃಹಗಳಲ್ಲಿನ ಒತ್ತಡಗಳನ್ನು ತಗ್ಗಿಸುವುದಲ್ಲದೆ, ನಂಬಿಕೆ ಆಧಾರಿತ ಆಡಳಿತವನ್ನು ಉತ್ತೇಜಿಸಲು ಅನುಕೂಲಕಾರಿ. ಇತ್ತೀಚೆಗೆ ಸ್ವಾತಂತ್ಯೋತ್ಸವದ ಭಾಷಣದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನೇ ಪ್ರಸ್ತಾಪಿಸಿದ್ದರು. ಸಣ್ಣಪುಟ್ಟ ಅಪರಾಧವನ್ನೂ ಗಂಭೀರ ಎಂದು ಪರಿಗಣಿಸುವ ಅನಗತ್ಯ ಕಾನೂನುಗಳನ್ನು ರದ್ದುಗೊಳಿಸುವ ಬಗ್ಗೆ ತಿಳಿಸಿದ್ದರು.

ಹಾಗೆ ನೋಡಿದರೆ, ಈ ವಿಧೇಯಕದ ತಿದ್ದುಪಡಿಯಿಂದ ಸಾಕಷ್ಟು ಪ್ರಯೋಜನ ನಿರೀಕ್ಷಿಸ ಬಹುದು. ಎನ್‌ಸಿಆರ್‌ಬಿ ದತ್ತಾಂಶದ ಪ್ರಕಾರ, ಭಾರತದ ಜೈಲುಗಳು ಈಗಾಗಲೇ ಕಿಕ್ಕಿರಿದು ತುಂಬಿದ್ದು, ಸೆರೆವಾಸ ದರವು ಶೇ.೧೩೦ ಮೀರಿದೆ. ಇತ್ತೀಚಿನ ವರದಿಗಳ ಪ್ರಕಾರ, ಭಾರತದಲ್ಲಿ ೫,೭೩,೦೦೦ಕ್ಕೂ ಹೆಚ್ಚು ಕೈದಿಗಳಿದ್ದಾರೆ, ಆದರೆ, ಜೈಲುಗಳ ಅಧಿಕೃತ ಸಾಮರ್ಥ್ಯ ಸುಮಾರು ೪,೩೬,೦೦೦. ಇದರಲ್ಲಿ ಪ್ರಾಥಮಿಕ ವಿಚಾರಣಾಧೀನ ಕೈದಿಗಳೇ ಶೇ.೭೫ರಷ್ಟಿರುವುದು ಯೋಚಿಸಬೇಕಾದಂಥ ಸಂಗತಿ.

೨-೩ ವರ್ಷಗಳ ಜೈಲು ಶಿಕ್ಷೆಯ ಬದಲಿಗೆ, ಹೆಚ್ಚಿನ ದಂಡ ವಿಧಿಸುವ ಉಪಕ್ರಮಗಳೂ ಈ ವಿಧೇಯಕದಿಂದ ನಿರೀಕ್ಷಿಸಬಹುದಾಗಿದೆ. ಉದಾಹರಣೆಗೆ, ಈ ಹಿಂದೆ ರೈಲ್ವೆ ಪ್ಲಾಟ್ ಫಾರಂಗಳಲ್ಲಿ ಭಿಕ್ಷೆ ಬೇಡುವುದು ಕೂಡ ಅಪರಾಧವಾಗಿತ್ತು. ೬ ತಿಂಗಳವರೆಗೆ ಜೈಲು ಶಿಕ್ಷೆಯನ್ನೂ ವಿಧಿಸಬಹುದಾಗಿತ್ತು. ೨೦೨೩ರ ಕಾಯಿದೆಯಲ್ಲಿ ಆ ಶಿಕ್ಷೆಗೆ ಬದಲಿಗೆ ದಂಡ ವಿಧಿಸುವ ಬಗ್ಗೆಯೂ ನಿರ್ಣಯಿಸಲಾಯಿತು. ಈಗಿನ ವಿಧೇಯಕದಲ್ಲಿಯೂ ೩೫೦ಕ್ಕೂ ಹೆಚ್ಚು ನಿಬಂಧನೆಗಳಿಗೆ ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ. ಒಟ್ಟಿನಲ್ಲಿ ಅನೇಕ ಅಪರಾಧಗಳನ್ನು 'ಅಪರಾಧ ಮುಕ್ತ'ಗೊಳಿಸುವುದರಿಂದ ನ್ಯಾಯಾಲಯಗಳ ಮೇಲಿನ ಹೊರೆ ಕಡಿಮೆಯಾಗುವುದಲ್ಲದೆ, ಇತರೆ ಗಂಭೀರ ಪ್ರಕರಣಗಳ ವಿಚಾರಣೆಗೆ ಅನುಕೂಲಕರ ವಾತಾವರಣವೂ ಕೋರ್ಟ್ ರೂಮ್‌ಗಳಲ್ಲಿ ನಿರ್ಮಾಣಗೊಳ್ಳುತ್ತದೆ. ತ್ವರಿತ ನ್ಯಾಯ ವಿಲೇವಾರಿ ಈ ದಿನಮಾನಗಳ ಅನಿವಾರ್ಯತೆಯೂ ಹೌದಾಗಿರುವ ಕಾರಣ ವಿಧೇಯಕಕ್ಕೆ ಕಾನೂನಿನ ಬಲ ಸಿಗಲಿ. ಸಣ್ಣಪುಟ್ಟ ಅಪರಾಧಗಳಿಗೂ ಜೈಲು ಶಿಕ್ಷೆತಪ್ಪಲಿ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೯-೦೮-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ