ಜನಸೇವಾಸಕ್ತೆ ಯಶೋಧರಾ ದಾಸಪ್ಪ

ಜನಸೇವಾಸಕ್ತೆ ಯಶೋಧರಾ ದಾಸಪ್ಪ

ಪುಸ್ತಕದ ಲೇಖಕ/ಕವಿಯ ಹೆಸರು
ಎಚ್ ಎಸ್ ಅನುಪಮಾ
ಪ್ರಕಾಶಕರು
ಲಡಾಯಿ ಪ್ರಕಾಶನ, ಗದಗ
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೩

ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ಯಶೋಧರಾ ದಾಸಪ್ಪ ಅವರು ರಾಜಕಾರಣಿಯಾಗಿ, ಶಾಸನ ಸಭೆಯ ಪ್ರತಿನಿಧಿಯಾಗಿ, ಸ್ವತಂತ್ರ ಭಾರತದಲ್ಲಿ ರಾಜ್ಯದ ಸರಕಾರದ ಮಂತ್ರಿಯಾಗಿ ಕೆಲಸ ನಿರ್ವಹಿಸಿ ಯಶಸ್ವಿಯಾದವರು. ದೇಶ ಕಂಡ ಈ ಅಪರೂಪದ ರಾಜಕಾರಣಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷರೂ ಆಗಿದ್ದರು. ಇವರು ನಮ್ಮ ರಾಜ್ಯದ ಪ್ರಥಮ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ. ಇವರ ನಂತರ ಈವರೆಗೂ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಹಿಳಾ ಅಧ್ಯಕ್ಷರ ನೇಮಕ ಆಗಿಲ್ಲ. ಇಂದಿನ ಕಾಂಗ್ರೆಸ್ ಮಂದಿಗೇ ಯಶೋಧರಾ ದಾಸಪ್ಪನವರ ಬಗ್ಗೆ ತಿಳಿದಿರೋದು ಸಂಶಯ. ಯಶೋಧರಾ ಬಗ್ಗೆ, ಅವರ ರಾಜಕೀಯ ಏಳು ಬೀಳುಗಳ ಬಗ್ಗೆ ಸೊಗಸಾಗಿ ಬರೆದಿದ್ದಾರೆ ಲೇಖಕಿ ಡಾ.ಎಚ್.ಎಸ್. ಅನುಪಮಾ. ಅವರು ತಾವು ನಿರೂಪಿಸಿದ ಯಶೋಧರಾ ದಾಸಪ್ಪ ಅವರ ಜೀವನ ಚರಿತ್ರೆ “ಜನಸೇವಾಸಕ್ತೆ ಯಶೋಧರಾ ದಾಸಪ್ಪ” ಕೃತಿಗೆ ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ...

“ಮನುಷ್ಯರ ಸಮಾಜ ಸಣ್ಣ ಗುಂಪಷ್ಟೇ ಆಗಿದ್ದಾಗ ಸಂವಹನ ನಡೆಸಲು, ಅಭಿಪ್ರಾಯ ವ್ಯಕ್ತಪಡಿಸಲು ಕಣ್ಣು, ಮುಖ, ಕೈಕಾಲು, ದೇಹದ ಚಲನೆಗಳೇ ಸಾಕಾಗುತ್ತಿದ್ದವು. ಅಷ್ಟರಲ್ಲೇ ಸಮ್ಮತಿ, ಅಸಮ್ಮತಿ, ಸಿಟ್ಟು, ಅಸಹನೆ, ಪ್ರೇಮ, ದುಃಖ ಎಲ್ಲವನ್ನೂ ತೋರಿಸಿಕೊಳ್ಳಬಹುದಿತ್ತು. ಮನುಷ್ಯರ ಸಂಖ್ಯೆ ಹೆಚ್ಚುತ್ತ, ಗುಂಪು ದೊಡ್ಡದಾಗುತ್ತ, ವ್ಯಕ್ತಿಗಳ ನಡುವಿನ ಅಂತರ ಹೆಚ್ಚುತ್ತ ಹೋದಹಾಗೆ ಸಂವಹನಕ್ಕೆ ಪೂರಕವಾಗಿ ಧ್ವನಿಪೆಟ್ಟಿಗೆ ಬಳಸಿಕೊಳ್ಳಲು ಆರಂಭಿಸಿದೆವು. ಬರಬರುತ್ತ ಆಯಾ ಗುಂಪು, ಪ್ರದೇಶಗಳಿಗೆ ತಕ್ಕಂತೆ ದನಿಯ ಏರಿಳಿತ, ಉಪಯೋಗಗಳು ನಿರ್ದಿಷ್ಟಗೊಳ್ಳುತ್ತ ಭಾಷೆಗಳು ಹುಟ್ಟಿದವು. ಭಾಷೆ ಹುಟ್ಟಿದ್ದೇ ಹೆಚ್ಚು ಜನರನ್ನು ಸಂಪರ್ಕಿಸುವ, ಹೆಚ್ಚು ಜನರಿಗೆ ಏಕಕಾಲಕ್ಕೆ ತಿಳಿಯಪಡಿಸುವ, ಒಂದೆಡೆಯಿಂದ ಇನ್ನೊಂದೆಡೆಗೆ ಸಂದೇಶವನ್ನು ಒಯ್ಯುವ ಸೌಲಭ್ಯ ದೊರೆತಂತೆ ಆಯಿತು. ಅದು ಮುಂದೆ ಲಿಪಿಯ ಉಗಮಕ್ಕೂ, ಸಾಹಿತ್ಯ, ಕಲೆಯ ಹುಟ್ಟಿಗೂ ಕಾರಣವಾಯಿತು. ದೇಶ ಎಂಬ, ಕುಲ ಎಂಬ, ಜಾತಿಮತ ಎಂಬ ಸಂಕೇತಗಳ ಜೊತೆಜೊತೆಗೆ ಭಾಷೆಯೂ ಬೆಳೆಯಿತು.

ಭಾರತದಲ್ಲಿ ಅಲ್ಲಿಲ್ಲಿ ಸಾವಿತ್ರಿ-ಜೋತಿಬಾ, ರುಖಿಯಾ ಶೆಖಾವತ್ ಹುಸೇನರಂತಹ ಅಕ್ಷರ ದಾಸೋಹಿಗಳ ಪ್ರಯತ್ನಗಳನ್ನು ಹೊರತುಪಡಿಸಿದರೆ ತೀರಾ ಇತ್ತೀಚಿನವರೆಗೂ ಪರಿಸ್ಥಿತಿ ಹೀಗೆಯೇ ಮುಂದುವರೆದಿತ್ತು. ಹುಡುಗಿಯರನ್ನು ಶಾಲೆಗೆ ಕಳಿಸುವುದು, ಓದುಬರಹ ಕಲಿಯುವುದು ಅನವಶ್ಯ ಎಂಬ ಭಾವನೆಯೇ ಇತ್ತು. ಹಾಗಿರುತ್ತ ಓದಿ, ಬರಹ ಕಲಿತು, ಕಲಿತದ್ದನ್ನು ಹೇಳಲು ಕಲಿತು, ಹೇಳುವುದರಲ್ಲಿ ಬೇಕು ಬೇಡ ಎನ್ನಲು ಕಲಿತು, ಜನರ ದನಿಯೇ ತಾನಾಗಿ ಬೆಳೆಯುವುದು ಅಂದೂ, ಇಂದೂ ಒಂದು ಹೆಣ್ಣಿಗೆ ಸುಲಭದ ಸಂಗತಿಯಾಗಿಲ್ಲ. ಹುಟ್ಟಿದ ಮನೆಯ, ಬಾಳಮನೆಯ ಬೆಂಬಲ ಗಳಿಸಿಕೊಂಡು, ತಾನು ಪಡೆದದ್ದನ್ನು ಜನರೊಡನೆ ಹಂಚಿಕೊಂಡು ನಾಯಕಿಯಾಗಿ ಬೆಳೆಯುವುದು ಅಸಾಮಾನ್ಯ ಸಂಗತಿಯೇ ಸರಿ. ಅಂತಹ ಕಷ್ಟಸಾಧ್ಯವಾದದ್ದನ್ನು ಸಾಧ್ಯ ಮಾಡಿಕೊಂಡ ಅಪರೂಪದ ಮಹಿಳೆ ಕರ್ನಾಟಕದ ಯಶೋಧರಾ ದಾಸಪ್ಪ ಆಗಿದ್ದಾರೆ.

ಮೊದಲಗಿತ್ತಿ: ಪರಕೀಯ ಆಳ್ವಿಕೆಯಲ್ಲಿದ್ದ ಭಾರತದಂತಹ ದೇಶಗಳು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುವಾಗಲೇ ದೇಶದ ಆಂತರಿಕ, ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಟವನ್ನೂ ಕಂಡವು. ಭಾರತದಲ್ಲಿ ರಾಷ್ಟ್ರೀಯ ಹೋರಾಟದ ಜೊತೆಜೊತೆಗೆ ವಿಧವಾ ಪದ್ಧತಿ, ಸತಿ ಸಹಗಮನ, ಬಾಲ್ಯವಿವಾಹ, ಜಾತಿ ತಾರತಮ್ಯ, ಅಸ್ಪೃಶ್ಯತೆಯೇ ಮೊದಲಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ಜಾಗೃತಿ, ಹೋರಾಟ ನಡೆದವು. ರಾಜಕಾರಣದಲ್ಲಿ, ಸಾಮಾಜಿಕ ಕ್ಷೇತ್ರದಲ್ಲಿ ಹೊಸ ನಾಯಕತ್ವ ಹುಟ್ಟಿಕೊಂಡಿತು. ಮಹಿಳೆಯರಿಗೆ ಉದ್ಯೋಗ, ಶಿಕ್ಷಣ, ರಾಜಕೀಯ ಪ್ರಾತಿನಿಧ್ಯವೇ ಮೊದಲಾಗಿ ಎಲ್ಲ ಕಡೆ ಅವಕಾಶ ಕಲ್ಪಿಸುವ ಅಗತ್ಯ ದೇಶ ಕಟ್ಟುವವರಿಗೆ ಹೊಳೆಯಿತು. ಮಹಿಳಾ ಭಾಗೀದಾರಿಕೆಗೆ ಸಿಕ್ಕ ಅವಕಾಶ, ಉತ್ತೇಜನಗಳಿಂದ ಕೆಲವು ಮುಂದಾಳ್ತಿಯರು ರೂಪುಗೊಂಡರು. ಅವರಲ್ಲಿ ಕರ್ನಾಟಕದ ಯಶೋಧರಾ ದಾಸಪ್ಪ ಮುಖ್ಯರಾದವರು.

ಹೀಗಿರುತ್ತ 100 ವರ್ಷಗಳ ಕೆಳಗೆ ಸಣ್ಣಮಕ್ಕಳನ್ನು ಕಟ್ಟಿಕೊಂಡೇ ಪೊಲೀಸರನ್ನೆದುರಿಸಿ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ, ಸತ್ಯಾಗ್ರಹಗಳಲ್ಲಿ ಪಾಲ್ಗೊಂಡ ಕೌಟುಂಬಿಕ ಮಹಿಳೆ ಯಶೋಧರಾ ಅಸಾಮಾನ್ಯರಾಗಿದ್ದರು. ಅವರು ಸ್ವಾತಂತ್ರ್ಯ ಹೋರಾಟ, ಸಮಾಜ ಸೇವೆಗಳಿಗೆ ಸಾಮಾನ್ಯ ಮಹಿಳೆಯರನ್ನು ಎಳೆತಂದು ಸಂಘಟನಾ ಶಕ್ತಿಗೆ ಮಾದರಿಯಾದರು. ನೊಂದವರ ಹೆಗಲಿಗೆ ಹೆಗಲಾಗಿ ನಿಂತು ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ನಿಧಿಯ ಕರ್ನಾಟಕ ಶಾಖೆಯನ್ನು ಕಟ್ಟಿ ಬೆಳೆಸಿದರು. ಅರಸೀಕೆರೆಯಲ್ಲಿ ಕಸ್ತೂರಬಾ ಗ್ರಾಮ ನಿರ್ಮಿಸಿದರು. ರಾಜಕಾರಣದಲ್ಲಿ ಸಕ್ರಿಯರಾಗಿ ಚುನಾವಣೆ ಎದುರಿಸಿದರು. ನಾಲ್ಕು ವರ್ಷ ಮೈಸೂರು ನ್ಯಾಯವಿಧಾಯಕ ಸಭೆಯ ಸದಸ್ಯೆಯಾಗಿದ್ದರು. ಸ್ವಾತಂತ್ರ್ಯಾನಂತರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು. ಸಮಾಜ ಕಲ್ಯಾಣ ಇಲಾಖೆಯ ಸಚಿವೆಯಾದರು. ಮೈಸೂರು ನ್ಯಾಯವಿಧಾಯಕ ಸಭೆಗೆ ಸ್ಪರ್ಧಿಸಿ ಗೆದ್ದ ಮೊದಲ ಮಹಿಳೆ (1938-42), ಸ್ವಾತಂತ್ರ್ಯಾನಂತರ ರೂಪುಗೊಂಡ ಎಂಪಿಸಿಸಿ (ಮೈಸೂರು ಪ್ರದೇಶ್ ಕಾಂಗ್ರೆಸ್ ಕಮಿಟಿ)ಯ ಮೊದಲ ಅಧ್ಯಕ್ಷೆ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಮೊದಲ ಮಹಿಳಾ ಅಧ್ಯಕ್ಷೆ, ಕರ್ನಾಟಕದ ಮೊದಲ ಸಂಪುಟ ದರ್ಜೆ ಸಚಿವೆ ಮುಂತಾಗಿ ಹಲವು ಮೊದಲುಗಳನ್ನು ತಮ್ಮ ಹೆಸರಿನೊಡನೆ ಹೊಂದಿದ ಮೊದಲಗಿತ್ತಿ ಅವರು. (ಕಾಂಗ್ರೆಸ್ ಪಕ್ಷದ ಕರ್ನಾಟಕ ಘಟಕದ ಮೊದಲ ಅಧ್ಯಕ್ಷೆಯಷ್ಟೇ ಅಲ್ಲ, ಏಕೈಕ ಮಹಿಳಾ ಅಧ್ಯಕ್ಷೆಯೂ ಹೌದು. ಯಾಕೆಂದರೆ ಇದುವರೆಗೆ ಮತ್ಯಾರೂ ಆ ಸ್ಥಾನಕ್ಕೆ ಬರಲು ಸಾಧ್ಯವಾಗಿಲ್ಲ.)

ಆಳುವವರ ದೃಷ್ಟಿಗೆ ಬೀಳಲು, ಅಧಿಕಾರದ ಆಸುಪಾಸಿನ ಜಾಗ ಕಾಯ್ದುಕೊಳ್ಳಲು ಬಹುತೇಕ ರಾಜಕಾರಣಿಗಳು ಲಾಗಪಲ್ಟಿ ಹೊಡೆಯುವುದನ್ನು ನೋಡುವಾಗ ಯಶೋಧರಾ ರಾಜರಿಗೆ, ಅಧಿಕಾರದ ಗದ್ದುಗೆಗೆ ಮಣಿಯದೇ ಜನಸೇವೆ ಮಾಡುತ್ತ ಉಳಿದರು. `ರಾಜಸೇವಾಸಕ್ತ’ರಾಗಲೊಲ್ಲದೆ ಜನಸೇವಾಸಕ್ತರಾದರು. ಅಧಿಕಾರಕ್ಕಿಂತ ತತ್ತ್ವವೇ ಮುಖ್ಯ ಎಂದು ಭಾವಿಸಿ ಸಚಿವೆ ಪದವಿಗೆ ಬೆನ್ನು ಹಾಕಿದರು. ಎಂದೇ ಹಂಚಿಕೊಳ್ಳುವ ಸಂಪನ್ಮೂಲವಾಗಿ ಅಧಿಕಾರ ಸ್ಥಾನದಲ್ಲಿ ಕುಳಿತ ಯಶೋಧರಾ ಅಪರೂಪದ ಮಹಿಳಾ ನಾಯಕತ್ವಕ್ಕೆ ಉದಾಹರಣೆಯಾಗಿದ್ದಾರೆ.

ತತ್ತ್ವಾದರ್ಶ ಮುಖ್ಯ: ಯಶೋಧರಾ ತಮ್ಮ ಜನಪ್ರಿಯತೆ, ಜನಬೆಂಬಲವನ್ನು ಮತಗಳಾಗಿ ಪರಿವರ್ತಿಸಿಕೊಂಡದ್ದು ಸ್ವಾರ್ಥ ಸಾಧನೆಗೋ, ಸ್ವಜನ ಹಿತ ಕಾಯಲೋ ಅಲ್ಲ; ಬದಲಾಗಿ ಸಾಂವಿಧಾನಿಕ ಅಧಿಕಾರದ ಮೂಲಕ ಜನಹಿತದ ಕೆಲಸಗಳನ್ನು ವಿಸ್ತೃತವಾಗಿ ಮಾಡಬಹುದು ಎಂದು ಮಂತ್ರಿಯಾದರು. ಯಾವ ಖಾತೆಯಾದರೂ ದೊರೆಯಬಹುದಾದಷ್ಟು ಸಮರ್ಥೆ, ಪ್ರಭಾವಿಯಾಗಿದ್ದರೂ ಸಮಾಜ ಕಲ್ಯಾಣ ಇಲಾಖೆಯನ್ನೇ ಕೇಳಿ ಪಡೆದರು. ವಂಶಪಾರಂಪರ್ಯ ರಾಜಕಾರಣದಿಂದ ಪ್ರಜಾಪ್ರಭುತ್ವವು ಇಂದಿಗೂ ಸೊರಗುತ್ತಿರುವಾಗ `ನಿಮ್ಮ ಮಗನನ್ನು ಮುಖ್ಯಮಂತ್ರಿ ಮಾಡೋಣವೇ’ ಎಂದು ಪ್ರಧಾನಿ ಇಂದಿರಾ ತಮ್ಮ ಮನೆಗೇ ಬಂದು ಕೇಳಿದರೂ, `ನನ್ನ ಮಗನಿಗೆ ಅನುಭವ ಸಾಲದು; ಆದರೆ ಆ ದೇವರಾಜ ಅರಸು ಇದ್ದಾನಲ್ಲ, ಆತನಿಗೆ ಭವಿಷ್ಯವಿದೆ, ಸಾಮರ್ಥ್ಯ ಮುನ್ನೋಟಗಳಿವೆ. ಅವನನ್ನು ಮಾಡು’ ಎಂದು ಸಲಹೆ ಕೊಟ್ಟ ಯಶೋಧರಾ ಉನ್ನತ ಮೌಲ್ಯಗಳ ಸಾಕಾರವಾಗಿ ಕಾಣುತ್ತಾರೆ. ಪಾನನಿರೋಧ ನೀತಿಯನ್ನು ತಮ್ಮದೇ ಪಕ್ಷದ ಸರ್ಕಾರ ಸಡಿಲಿಸಲು ಮುಂದಾದಾಗ ಅದು ಜನವಿರೋಧಿ ಮತ್ತು ಸಂವಿಧಾನದ, ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳಿಗೆ ವಿರುದ್ಧ ಎಂದು ಸಚಿವೆ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬಂದ ಯಶೋಧರಾ ತತ್ತ್ವಕ್ಕೆ ನಿಷ್ಠರಾಗಿ ಅಧಿಕಾರದ ಅಂಗಳಕ್ಕೆ ಬೆನ್ನು ಹಾಕಿ ನಿರ್ಗಮಿಸಿದರು. ಹಣ, ಭೂಮಿ, ಅಧಿಕಾರದೆಡೆಗೆ ಉದಾತ್ತ ನಿಸ್ಪೃಹತೆಯನ್ನು ತೋರಿಸಿದರು.

ಯಾವುದನ್ನೇ ಆದರೂ ಆರಂಭಿಸಲು ಬಹಳ ಉತ್ಸಾಹವಿರುತ್ತದೆ. ಕಾಲ ಕಳೆಯುತ್ತ ಹೋದಹಾಗೆ ಹುಮ್ಮಸ್ಸು ಕುಂದುತ್ತದೆ. ಸಣ್ಣ ಅಡೆತಡೆಗಳು ಬಂದರೂ ಆರಂಭಗೊಂಡಿದ್ದು ನಿಂತೇ ಹೋಗುತ್ತದೆ. ಅಸ್ಮಿತೆಗಳನ್ನು ಮೀರಿಕೊಂಡವರಿಗಷ್ಟೇ ಏನೇ ಎದುರಾದರೂ ಕೆಲಸ ಮಾಡಲು ಸಾಧ್ಯವಾಗುತ್ತದೆ. ಹಾಗೆ ಜಾತಿ, ವರ್ಗ ಅಸ್ಮಿತೆಗಳನ್ನು ನಿರಂತರ ಮೀರಿಕೊಳ್ಳಲು ಪ್ರಯತ್ನಿಸಿದವರು ಯಶೋಧರಾ. ಹಣಕ್ಕೆ ಕಷ್ಟವಾದರೂ, ಕೈ ಜೋಡಿಸುವವರ ಸಂಖ್ಯೆ ಕಡಿಮೆಯಾದರೂ, ಅಪವಾದದ ಮಾತು ಬಂದರೂ ಕುಗ್ಗದೆ ಒಂದೇ ಮನಸ್ಸಿನಿಂದ ಸಮಾಜದ ಕೆಲಸ ಮಾಡಿದರು. ಹೆಜ್ಜೆಹೆಜ್ಜೆಗೂ ತಾನು ಆಡುವುದಕ್ಕೂ, ಮಾಡುವುದಕ್ಕೂ ತಾಳೆಯಿದೆಯೇ ಎಂದು ಪ್ರಶ್ನಿಸಿಕೊಂಡು ಆತ್ಮಾವಲೋಕನ ಮಾಡಿಕೊಳ್ಳುವ, ನಿರಂತರ ಬದಲಾವಣೆಗೆ ಒಡ್ಡಿಕೊಳ್ಳುವ ವಿಶಿಷ್ಟ ಹೆಣ್ಣುಗುಣಗಳಿಂದ ಅಪರೂಪದ ಮಾದರಿಯಾಗಿ ಬೆಳೆದರು. ತನ್ನ ಗುರು, ಮಾರ್ಗದರ್ಶಿ ಗಾಂಧೀಜಿಯವರಂತೆ ಕೊನೆಯತನಕ ತನ್ನನ್ನು ಬದಲಿಸಿಕೊಳ್ಳುತ್ತಲೇ ಹೋದರು.

ಅವರ ಮತ್ತೊಂದು ಅಪರೂಪದ ಗುಣ ಓದುಬರಹದಲ್ಲಿ ತೊಡಗಿಕೊಳ್ಳುತ್ತಿದ್ದದ್ದು. ವೃತ್ತಪತ್ರಿಕೆಗಳನ್ನು ತಪ್ಪದೇ ಓದುತ್ತಿದ್ದರು. `ಹಿಂದ್ ಸ್ವರಾಜ್’ ಅನ್ನು ಪವಿತ್ರ ಗ್ರಂಥವೆಂಬಂತೆ ಪರಿಗಣಿಸುತ್ತಿದ್ದರು. ಕೈಚೀಲದಲ್ಲಿ ಸದಾ ಡಿವಿಜಿಯವರ ಮಂಕುತಿಮ್ಮನ ಕಗ್ಗ ಇರುತ್ತಿತ್ತು. ಭಾಷಣದ ನಡುವೆ ಕಗ್ಗದ ಒಂದೊಂದು ಪದ್ಯವನ್ನು ಉಲ್ಲೇಖಿಸುತ್ತಿದ್ದರು. ನೊಂದವರಿಗೆ ಸಮಾಧಾನ ಹೇಳುವಾಗಲೂ ಕಗ್ಗದ ಕವಿತೆಗಳನ್ನು ಉದ್ಧರಿಸಿ, ವಿಸ್ತರಿಸಿ ಹೇಳಿಬಿಡುತ್ತಿದ್ದರು. `ಬೈಗುಬೆಳಗು, ಸೂರ್ಯಚಂದ್ರನಕ್ಷತ್ರಗಳು, ಅರಳುವ ಹೂವು, ಸುರಿಯುವ ಇಬ್ಬನಿ ಹೇಗೆ ಉದ್ಘೋಷಿಸಿಕೊಳ್ಳದೇ ಸಹಜವಾಗಿ ಬಂದು ಬಾಳಿ ಹೋಗುತ್ತವೋ ಹಾಗೆ ಮನುಷ್ಯರೂ ಭೂಮಿ ಮೇಲೆ ಬಂದಬಳಿಕ ಉಪಯುಕ್ತ ಬದುಕು ನಡೆಸಿ ಹೋಗಬೇಕು’ ಎಂಬ ಕಗ್ಗದ ಕವಿತೆಯನ್ನು ಯಾವಾಗಲೂ ಧ್ಯಾನಿಸುತ್ತಿದ್ದರು. ಇಂಗ್ಲಿಷ್ ಹೊತ್ತಗೆಗಳೂ ಬಳಿಯಿರುತ್ತಿದ್ದವು. ಆಳ ಓದಿನ ಹವ್ಯಾಸವು ವಿಶಿಷ್ಟ ಚಿಂತನಾಶೀಲ ವ್ಯಕ್ತಿತ್ವ ರೂಪುಗೊಳ್ಳಲು ಕಾರಣವಾಯಿತು." ಸುಮಾರು ೧೮೮ ಪುಟಗಳ ಈ ಪುಸ್ತಕವನ್ನು ಓದಿದರೆ ಅಂದಿನ ರಾಜಕಾರಣಿಗಳ ಪ್ರಾಮಾಣಿಕತೆ, ಜನರ ಪರ ಅವರಿಗಿದ್ದ ಒಲವು ನಮಗೆ ತಿಳಿದು ಬರುತ್ತದೆ.