ಜನಾರ್ದನ ದುರ್ಗಾ ಅವರ ಎರಡು ಕವನಗಳು

ಜನಾರ್ದನ ದುರ್ಗಾ ಅವರ ಎರಡು ಕವನಗಳು

ಕವನ

ನಿಜ ಬದುಕು.. 

ಕೊರೋನಾ ಬಂದಿತು ನಿಜವನು ಅರುಹಿತು

ನಿನ್ನವರಾರಿಹರಿಲ್ಲೆಂದು...

ಸುತ್ತಲು ಇರುವರು ನಿನ್ನವರೆಲ್ಲರು

ಹಲ್ಲನು ಗಿಂಜುತ ಬಳಿ ಬಂದು||

 

ಗೆಲ್ಲುತ ದಿಟದಲಿ ನಡೆಯಲು ನೀನು

ವಿಶ್ವವ ಕಾಣುವೆ ನಿನ್ನದೆಂದು...

ಸೋಲಲಿ ಬಿದ್ದು ನರಳುತಲಿದ್ದರೆ

ಬೀದಿಗೆ ಬೀಳುವೆ ಮನನೊಂದು||

 

ಶಕ್ತಿ ಇದ್ದರೆ ಭಕ್ತಿಯು ನಿನ್ನಲಿ

ಯುಕ್ತಿಯು ಜಗದಲಿ ದಿನವೊಂದು...

ಕಷ್ಟವೆನುತಲಿ ಮರುಗುವೆಯಾದರೆ

ಯಾರು ಹೇಳರು ನನ್ನವನೆಂದು||

 

ಜಗದ ನಿಯಮವದು ಏನಿಹುದೆಂದು

ವೈರಸ್ ತೋರಿತು ನಮಗಿಂದು...

ರೋಗವು ಕಾಡಲು ಬಳಿಯಾರಿಲ್ಲ

ಬಂಧು ಬಳಗವು ಬರಿ ಬಿಂದು|| 

*************************

ಅವಿಭಕ್ತ ಕುಟುಂಬ

ಅಜ್ಜ ಅಜ್ಜಿ ಕೂಡಿ ಇರಲು

ಇತ್ತು ಪ್ರೀತಿ ಭಕ್ತಿಯು|

ಅಪ್ಪ ಅಮ್ಮ ಜೊತೆಯಲಿತ್ತು

ಸಹಜ ಭಯ ಭಕ್ತಿಯು||

 

ಹಣದ ಸ್ವಾರ್ಥ ಮೀರಿ ನಿಂತು

ಪ್ರೀತಿ ಪ್ರೇಮ ತೂಗಿತು|

ಅಣ್ಣ ತಮ್ಮ ಹಿರಿಯರನ್ನು

ದೂರ ಸರಿದು ಬೀಗಿತು||

 

ಹಿರಿಯ ಕಿರಿಯ ಭೇದ ಭಾವ

ಅರಿವು ದೂರ ಸರಿಯಿತು|

ಪರಂಪರೆಯ ಭವ್ಯ ಕನಸು

ನುಚ್ಚು ನೂರಾಯಿತು||

 

ವಿದ್ಯೆ ಎಂಬ ಹುಚ್ಚು ಭ್ರಮೆಯು

ಜ್ಞಾನವನ್ನು ಅಳಿಸಿತು|

ಅನುಭವದ ಗರಿಮೆಯನ್ನು

ಅಂಧಕಾರ ನುಂಗಿತು||

 

ಅರಿಯ ಬೇಕು ಪ್ರೀತಿ ಹೃದಯ

ಮಗುವ ಬೆಳೆಸೊ ಶಕ್ತಿಯು|

ಉಳಿಯ ಬೇಕು ಹಿರಿಯರಿತ್ತ

ಬದುಕ ರೀತಿ ನೀತಿಯು|।

 

ಒಂಟಿ ಬಾಳ ಗೆಲುವಿನಲ್ಲು

ಸುಖದ ಹಾದಿ ಎಲ್ಲಿದೆ?!|

ಕನಸ ಹಂಚೊ ಬದುಕಿನಲ್ಲೆ

ಅಮರ ವಿಜಯವಡಗಿದೆ||

✍️ *ಜನಾರ್ದನ ದುರ್ಗ*

ಚಿತ್ರ: ಅಂತರ್ಜಾಲ ತಾಣದ ಕೃಪೆ

ಚಿತ್ರ್