ಜನ ಆಡಿಬಿಡುತ್ತಾರೆ

ಜನ ಆಡಿಬಿಡುತ್ತಾರೆ

ಪುಸ್ತಕದ ಲೇಖಕ/ಕವಿಯ ಹೆಸರು
ನೈಷಧಂ ಎಸ್ಸೆ
ಪ್ರಕಾಶಕರು
ಮಣಿ ಪ್ರಕಾಶನ, ಪ್ಯಾಲೇಸ್ ಗುಟ್ಟಹಳ್ಳಿ, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೨೦.೦೦ ಮುದ್ರಣ: ೨೦೨೨

“ಜನ ಆಡಿಬಿಡುತ್ತಾರೆ” ಎಂಬ ಶೀರ್ಷಿಕೆಯ ಈ ಕವನ ಸಂಕಲನದ ವಸ್ತು ಚೈನಾ ದೇಶದ ಒಂದು ಕಾಲ ಮಾನದಲ್ಲಿ ಸಂದುಹೋದ ಸಾಮಾನ್ಯಜನರ ಬದುಕು-ಬವಣೆಗಳ ಹೋರಾಟ-ಬಿಡುಗಡೆಗಳ ಹೃದಯವಿದ್ರಾವಕ ಪರಿಣಾಮದಿಂದಾಗಿ ವಿಶೇಷವಾಗಿ ತೋರುವಂಥದು. ಬರೆದ ಕವಿ ಅಜ್ಞಾತನಿರಲಿ, ಜ್ಞಾತನೇ ಇರಲಿ, ಬರೆದದ್ದು ಕಪ್ಪು ಮಸಿಯಿಂದಲ್ಲ, ಎದೆಯಿಂದ ಬಸಿದ ಕೆನ್ನೆತ್ತರ ಗಸಿಯಿಂದ ಎನ್ನುವಂತೆ ಸಾಲುಗಳು ಮನಸ್ಸನ್ನು ಕಲಕುತ್ತವೆ ಎನ್ನುತ್ತಾರೆ ಸಂಶೋಧಕ, ಪ್ರಾಧ್ಯಾಪಕ ಟಿ.ವಿ. ವೆಂಕಟಾಚಲ ಶಾಸ್ತ್ರೀ. ಅವರು ಲೇಖಕ ನೈಷಧಂ ಎಸ್ಸೆ ಅವರ 'ಜನ ಆಡಿಬಿಡುತ್ತಾರೆ' ಕೃತಿಗೆ ಬರೆದ ನಲ್ನುಡಿ ನಿಮ್ಮ ಓದಿಗಾಗಿ ಇಲ್ಲಿದೆ...

“ಮಿತ್ರರಾದ ನೈಷಧಂ ಅವರು (ಎನ್.ಎಸ್. ಅಶ್ವತ್ಥ ನಾರಾಯಣ ಶಾಸ್ತ್ರಿಗಳು) ಸಿದ್ಧಪಡಿಸಿರುವ ಚೀನೀ ಕಾವ್ಯ ಸಂಕಲನವೊಂದರ ಇಂಗ್ಲಿಷ್ ಮೂಲದ ಕನ್ನಡ ಭಾಷಾಂತರವಿದು. 'ಜನ ಆಡಿಬಿಡುತ್ತಾರೆ' ಎಂಬ ಶೀರ್ಷಿಕೆಯ ಈ ಕವನ ಸಂಕಲನದ ವಸ್ತು ಚೈನಾದೇಶದ ಒಂದು ಕಾಲ ಮಾನದಲ್ಲಿ ಸಂದುಹೋದ ಸಾಮಾನ್ಯ ಜನರ ಬದುಕು-ಬವಣೆಗಳ ಹೋರಾಟ-ಬಿಡುಗಡೆಗಳ ಹೃದಯವಿದ್ರಾವಕ ಪರಿಣಾಮದಿಂದಾಗಿ ವಿಶೇಷವಾಗಿ ತೋರುವಂಥದು. ಎರಡು ಸೀಳುನೋಟಗಳ ಚಿತ್ರಣ ಇಲ್ಲಿಯದು. ಬರೆದ ಕವಿ ಅಜ್ಞಾತನಿರಲಿ, ಜ್ಞಾತನೇ ಇರಲಿ, ಬರೆದದ್ದು ಕಪ್ಪು ಮಸಿಯಿಂದಲ್ಲ, ಎದೆಯಿಂದ ಬಸಿದ ಕೆನ್ನೆತ್ತರ ಗಸಿಯಿಂದ ಎನ್ನುವಂತೆ ಸಾಲುಗಳು ಮನಸ್ಸನ್ನು ಕಲಕುತ್ತವೆ.

ಅರಸೊತ್ತಿಗೆಯ ಕಾಲದ ಆಳರಸು ವಿಭೇದದ ನೀತಿಗಿಂತಲೂ ನಿಷ್ಠುರವಾಗಿ, ಊಳಿಗಮಾನ್ಯ ಪದ್ಧತಿಯ ಬರ್ಬರ ವರ್ತನೆಗಿಂತಲೂ ಕಠೋರವಾಗಿ, ದಾಸ್ಯ ಕ್ರೌರ್ಯ ದೌರ್ಜನ್ಯಗಳು ಇಲ್ಲಿ ವಿಕೃತವಾಗಿ ವಿಜೃಂಭಿಸುತ್ತವೆ. ನೀಚ ಮಾನವನು ಸಹಜೀವರನ್ನು ಹೇಗೆ, ಎಷ್ಟು ವಿಧಗಳಲ್ಲಿ ಬಡಜನವನ್ನು ಕಾಡುತ್ತಾನೆ, ಕೆಣಕುತ್ತಾನೆ, ನುಡಿಸುತ್ತಾನೆ, ದುಡಿಸುತ್ತಾನೆ ಎನ್ನುವುದನ್ನು ತಿಳಿಯಬೇಕಾದರೆ ಇಲ್ಲಿಯ ಗದ್ಯಚಿತ್ರಗಳಂತೆ ಸಾಗುವ ಪದ್ಯಪಂಕ್ತಿಗಳನ್ನು ಓದಿಯೇ ತಿಳಿಯಬೇಕಾಗುವುದು.

ಇಂಥ ಸ್ಥಿತಿಗತಿಗಳಿಗೆ ದೇಶಕಾಲಗಳ ಇತಿಮಿತಿಗಳಿಲ್ಲ. ಎಲ್ಲ ದೇಶಗಳ ಎಲ್ಲ ಕಾಲಗಳಲ್ಲಿಯೂ ಇತಿಹಾಸದ ಪುಟಗಳಲ್ಲಿ ನಿದರ್ಶನಗಳಿವೆ; ಹೋರಾಟ ವಿಮೋಚನೆಗಳ ದಾರುಣ ಚಿತ್ರಗಳ ಮೆರವಣಿಗೆಗಳು ಸಾಗುತ್ತಲೇ ಇರುವ ಕಾವ್ಯ ಕಥನಗಳಿವೆ. ನಾಗರಿಕತೆಯ ಪ್ರಜ್ಞೆ ಹೆಚ್ಚುತ್ತಿರುವ ನಮ್ಮ ಕಾಲದಲ್ಲಿ ಪ್ರಜೆಯ ಪೀಡನೆಗೆ ಕಾನೂನು ಕಟ್ಟಳೆಗಳು ಅವಕಾಶ ಕೊಡದಿರುವುದು, ಅಷ್ಟಾಗಿ ಅವಕಾಶ ಕೊಡದಿರುವುದು, ನಮ್ಮ ಪುಣ್ಯ.

ಮಿತ್ರರಾದ ಅಶ್ವತ್ಥನಾರಾಯಣ ಶಾಸ್ತ್ರಿಗಳು ಒಳ್ಳೆಯ ಅಧ್ಯಾಪಕರು, ಒಳ್ಳೆಯ ಲೇಖಕರೆಂದು ಖ್ಯಾತರು. ಕವಿಗಳಾಗಿ, ಅನುವಾದಕರಾಗಿ, ನಾಟಕಕಾರರಾಗಿ ಹೆಚ್ಚು ಪರಿಚಿತರು. ಸುಮಾರು 65 ವರ್ಷಗಳಿಗೂ ಹಿಂದೆ ನಾನು ಭಾಗವಹಿಸಿದ ಒಂದು ಪ್ರಬಂಧಸ್ಪರ್ಧೆಯಲ್ಲಿ ನನಗೆ ಬಹುಮಾನವಾಗಿ ಬಂದ ಈ ಇಂಗ್ಲಿಷ್ ಕಾವ್ಯ ಸಂಕಲನ ನನ್ನ ಸಂಗ್ರಹದಲ್ಲಿ ಹೇಗೋ ಉಳಿದುಕೊಂಡು ಬಂದಿತ್ತು. ಶಾಸ್ತ್ರಿಗಳ ಆಸಕ್ತಿಗಳನ್ನು ಬಲ್ಲವನಾಗಿ, ಅವರ ಪರಿಚಯವಾದ ಮೇಲೆ, ಅವರಿಗೆ ಇದನ್ನು ಓದಲೆಂದು ಕೊಟ್ಟೆ. ಅವರು ಇದನ್ನು ಭಾಷಾಂತರಿಸಿದ್ದಾರೆ. ಚೀನೀ ಭಾಷೆಯ ಮೂಲದಿಂದ ಇಂಗ್ಲಿಷಿಗೆ, ಅಲ್ಲಿಂದ ಕನ್ನಡ ಭಾಷೆಗೆ ಪುಸ್ತಕ ಭಾಷಾಂತರವಾಗಿ ಬಂದಿದೆ. ಮೂಲದ ಅರ್ಥ ಆಶಯಗಳ ಹಸಿಬಿಸಿಗಳು ಹಾಗೆಯೇ ಉಳಿದು ಬರುತ್ತವೆ, ರಸಭಾವಗಳ ಪರಿಣಾಮಗಳನ್ನು ತರುತ್ತವೆ ಎನ್ನುವುದನ್ನು ನಿರೀಕ್ಷಿಸುವುದು ಕಷ್ಟವೇ, ಹೀಗಿದ್ದೂ, ಭಾಷಾಂತರಕರ್ತವಾಗಿ ಶಾಸ್ತ್ರಿಗಳು ತಮ್ಮ ಪ್ರಯತ್ನದಲ್ಲಿ ಬಲುಮಟ್ಟಿಗೆ ಯಶಸ್ವಿಯಾಗಿದ್ದಾರೆಂದೇ ನಾನು ತಿಳಿಯುತ್ತೇನೆ.”

ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ರಿವಿ ಅಲಿ ಇವರ ಪ್ರಕಾರ “ ಬಹಳ ಕಾಲದಿಂದಲೂ ಚೀನಾದಲ್ಲಿ ತುಳಿತ ಮತ್ತು ಸಾಮಾಜಿಕ ಅನ್ಯಾಯವನ್ನು ಪ್ರತಿಭಟಿಸಲು ಹಾಡುಗಳು ಮತ್ತು ಕಾವ್ಯ ಮಾಧ್ಯಮವಾಗಿ ಕೆಲಸಮಾಡಿವೆ. ಇತಿಹಾಸ ಪ್ರಾರಂಭದ ಕಾಲದಿಂದ, ವಿಮೋಚನೆಯ ಕಾಲದವರೆಗೂ ಅದರ ಆಚೆಗೂ ಕವನಗಳೂ ಹಾಗೂ ಹಾಡುಗಳು ರಚಿತವಾಗುತ್ತಾ ಬಂದಿವೆ.

ಇವು ಸರ್ವಾಧಿಕಾರಿ ಮತ್ತು ಆಕ್ರಮಣಕಾರಿ ಧೋರಣೆಯನ್ನು ವಿರೋಧಿಸುವ ಪದ್ಯಗಳು, ಹಾಡುಗಳು. ಅಷ್ಟೇ ಅಲ್ಲ, ಇವು ಹೊಸ ದಿವಸಕ್ಕೆ ಕಾಲಿಡುವ ಸಂತೋಷದ ಹಾಡುಗಳು; ಮಾತ್ರವಲ್ಲ, ಶಾಂತಿ ಯುತವಾಗಿ ಹೊಸ ನಿರ್ಮಾಣದ ಆಸೆಯನ್ನು ಖಚಿತ ಪಡಿಸುವ ಹಾಡುಗಳೂ ಹೌದು, ರಾಷ್ಟ್ರೀಯ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ಕರೆಕೊಡುವವೂ ಹೌದು. ವಿಶ್ವಶಾಂತಿ ಕಾಪಾಡುವ ಮತ್ತು ಜಪಾನಿನ ಸಶಸ್ತ್ರೀ ಕರಣವನ್ನು ವಿರೋಧಿಸುವ ಅಭಿವ್ಯಕ್ತಿಯೂ ಇಲ್ಲಿದೆ.

ಚೀನಿ ಜನತೆ ತಮ್ಮ ದೀರ್ಘ ಇತಿಹಾಸದಲ್ಲಿ ಸಂಕಷ್ಟಕ್ಕೆ ಸಿಲುಕಿದವರೇ ಆಗಿದ್ದಾರೆ. ಇಲ್ಲಿ ಯಾವಾಗಲೂ ಸಂಘರ್ಷವಿದೆ. ಟೀಕೆ ಟಿಪ್ಪಣಿಗಳಿವೆ. ಅನೇಕ ವೇಳೆ ತಮ್ಮ ತುಳಿತ ವಿರೋಧಿಸಿ ಸಂಘರ್ಷಗಳು ನಡೆದಿವೆ. ಅಂತಹ ಸಂದರ್ಭಗಳಲ್ಲಿ ಹೆಚ್ಚು ಲಿಖಿತ ಸಾಹಿತ್ಯ ಸುಡಲ್ಪಟ್ಟಿದೆ ಮತ್ತು ಕಳೆದು ಹೋಗಿದೆ. ಆದರೂ ಗಮನಾರ್ಹವಾದ ಲಿಖಿತ ಸಾಮಗ್ರಿಯ ಕಣಜವೇ ಇಲ್ಲಿದೆ.

ಈ ಸಣ್ಣ ಸಂಕಲನದಲ್ಲಿ ಐತಿಹಾಸಿಕ ಅಂಶಗಳನ್ನು ಒಳಗೊಂಡ ವಿಷಯಗಳಿವೆ. ಕೆಲವು ಹಿಂದಿನ ಇತಿಹಾಸಕ್ಕೆ ಸಂದವು ಮತ್ತು ಇನ್ನು ಕೆಲವು ವಿಮೋಚನಾಪೂರ್ವ ಮತ್ತು ವಿಮೋಚನೆಯ ನಂತರದ ಕಾಲಕ್ಕೆ ಸೇರಿದವುಗಳಾಗಿವೆ. ಇವು ಹೊಸ ಚೀನ ಹೇಗೆ ಉಗಮಿಸಿತು ಮತ್ತು ಹೇಗೆ ಪ್ರಪಂಚದಲ್ಲಿ ಪ್ರಬಲಶಕ್ತಿಯಾಗಿ ರೂಪುಗೊಳ್ಳುತ್ತಿದೆ ಎಂಬುದನ್ನು ಮನಗಾಣಿಸುತ್ತವೆ.

ಈ ಭಾಷಾಂತರದ ಮುಖ್ಯ ಉದ್ದೇಶವೆಂದರೆ ಸಾಮಾನ್ಯರೂ ಕವಿಯ ಆಶಯವನ್ನು ಅರ್ಥಮಾಡಿಕೊಳ್ಳ ಬಹುದಾದ ಒಂದು ರೀತಿಯ ಸರಳಭಾಷೆಯಲ್ಲಿ ಈ ಸಂಕಲನವನ್ನು ರೂಪಿಸುವುದು. ಓದುವ ಅಭ್ಯಾಸ ಇಲ್ಲದವನಿಗೂ ದಕ್ಕುವಂತಿರಬೇಕು; ಚೀನಾದ ಇತಿಹಾಸ ಗೊತ್ತಿಲ್ಲದವನಿಗೂ ಗೊತ್ತಾಗುವಂತಿರಬೇಕು ಎಂಬುದು ಇದರ ಆಶಯ. ಕಾವ್ಯವನ್ನು ಉದ್ದೀಪನಗೊಳಿಸುವ ತಂತ್ರಗಾರಿಕೆಯಾದ ಪ್ರಾಸ ಮತ್ತು ಲಯಗಳ ಪ್ರಯೋಗವನ್ನು ಓದಿನ ಸರಳತೆ ಮತ್ತು ಸ್ಪಷ್ಟತೆಗೋಸ್ಕರ ಕೈಬಿಟ್ಟಿದೆ.” ಎಂಬ ಭಾವವನ್ನು ವ್ಯಕ್ತ ಪಡಿಸಿದ್ದಾರೆ.